ಸೋಮವಾರ, ಜನವರಿ 20, 2020
19 °C

ಮೆಮೊಗೇಟ್: ರಹಸ್ಯ ಬಯಲು ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್/ ನವದೆಹಲಿ (ಪಿಟಿಐ, ಐಎಎನ್‌ಎಸ್): ಮೆಮೊಗೇಟ್ ಹಗರಣದಲ್ಲಿ ಸಾಕ್ಷಿ ಹೇಳಲು ಇಸ್ಲಾಮಾಬಾದ್‌ಗೆ ಹೊರಟಿರುವ ತಮಗೆ ಸಾಕಷ್ಟು ಬೆದರಿಕೆ ಇದ್ದರೂ, ಇದ್ಯಾವುದಕ್ಕೂ ಹೆದರದೆ ಸತ್ಯವನ್ನು ಬಹಿರಂಗಪಡಿಸುವುದಾಗಿ ಪಾಕಿಸ್ತಾನ ಮೂಲದ ಅಮೆರಿಕದ ಉದ್ಯಮಿ ಮನ್ಸೂರ್ ಇಜಾಜ್ ಹೇಳಿದ್ದಾರೆ.`ನನ್ನ ಪಾಕಿಸ್ತಾನ ಭೇಟಿಯನ್ನು ಬೆಂಬಲಿಸುವುದಾಗಿ ಅಮೆರಿಕ ಭರವಸೆ ನೀಡಿದೆ, ಬೆದರಿಕೆಗಳ ಹಿಂದೆ ಯಾರಿದ್ದಾರೋ ತಿಳಿಯದು, ಆದರೆ ಅವರ‌್ಯಾರಿಗೂ ನಾನು ಪಾಕಿಸ್ತಾನಕ್ಕೆ ಬರುವುದನ್ನು ತಡೆಯಲು ಸಾಧ್ಯವಿಲ್ಲ~ ಎಂದು ಅವರು ಲಂಡನ್‌ನಲ್ಲಿ ಶನಿವಾರ ಜಿಯೊ ಟಿ.ವಿಗೆ ಹಾಗೂ ಭಾರತದ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.ಲಂಡನ್‌ನಲ್ಲಿನ ಪಾಕಿಸ್ತಾನದ ಹೈ ಕಮಿಷನ್ ಕಚೇರಿಯಿಂದ 1 ವರ್ಷದ ಅವಧಿಗೆ ವೀಸಾ ಪಡೆದುಕೊಂಡಿರುವ ಇಜಾಜ್,  ಇಸ್ಲಾಮಾಬಾದ್‌ಗೆ ಎಂದು ತೆರಳುವರು ಎಂಬುದನ್ನು ತಿಳಿಸಿಲ್ಲ.ಸುಪ್ರೀಂಕೋರ್ಟ್ ನೇಮಿಸಿರುವ ತನಿಖಾ ಆಯೋಗದ ಎದುರು ಜನವರಿ 16ರಂದು ಹಾಜರಾಗಬೇಕಾಗಿದ್ದ ಅವರು ಭದ್ರತಾ ಕಾರಣಗಳಿಂದಾಗಿ ಬರಲಾಗಿರಲಿಲ್ಲ. ಆದರೆ ಮುಂದಿನ ವಾರ ಹಾಜರಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.ಮಲಿಕ್ ಭರವಸೆ: ಈ ನಡುವೆ ಇಜಾಜ್ ಅವರಿಗೆ ಸಂಪೂರ್ಣ ಭದ್ರತೆ ಒದಗಿಸುವುದರ ಜೊತೆಗೆ, ಅಗತ್ಯ ಬಂದರೆ ಸೇನೆಯ ನೆರವನ್ನೂ ಪಡೆಯುವುದಾಗಿ ಒಳಾಡಳಿತ ಸಚಿವ ರೆಹಮಾನ್ ಮಲಿಕ್ ಭರವಸೆ ನೀಡಿದ್ದಾರೆ.ಇಜಾಜ್ ಅವರ ಭದ್ರತೆಗೆ ಸರ್ಕಾರ  ಕ್ರಮ ಕೈಗೊಳ್ಳದಿದ್ದರೆ ಉದ್ದೇಶಿತ ಪಾಕಿಸ್ತಾನ ಭೇಟಿಯನ್ನು ಪುನರ್‌ಪರಿಶೀಲಿಸುವಂತೆ ತಮ್ಮ ಕಕ್ಷಿದಾರರಿಗೆ ತಿಳಿಸುವುದಾಗಿ ಇಜಾಜ್ ಅವರ ವಕೀಲರು ಹೇಳಿದ್ದ ಹಿನ್ನೆಲೆಯಲ್ಲಿ ಮಲಿಕ್ ಈ ಹೇಳಿಕೆ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)