ಬುಧವಾರ, ಜನವರಿ 29, 2020
25 °C

ಮೇಘನಾ ಹಿಪ್ ಹಾಪ್

ರಮೇಶ ಕೆ. Updated:

ಅಕ್ಷರ ಗಾತ್ರ : | |

ಚಾರ್‌ಮಿನಾರ್‌ ಸಿನಿಮಾ ಮೂಲಕ ಗಮನಸೆಳೆದ ಗ್ಲಾಮರಸ್ ಬೆಡಗಿ ಮೇಘನಾ ಗಾಂವ್ಕರ್ ತಮ್ಮ ದೇಹ ಸೌಂದರ್ಯ ಕಾಪಾಡಿಕೊಳ್ಳಲು ಅಮೆರಿಕದ ಬೀಚ್‌ ಬಾಡಿ ವರ್ಕೌಟ್‌ ಮಾಡುತ್ತಾರಂತೆ.‘ನಮ್ ಏರಿಯಾದಲ್ಲಿ ಒಂದಿನ’, ‘ವಿನಾಯಕ ಗೆಳೆಯರ ಬಳಗ’, ‘ತುಗ್ಲಕ್’ ಹಾಗೂ ‘ಚಾರ್‌ಮಿನಾರ್‌’ ಚಿತ್ರಗಳ ಮೂಲಕ ಚಿತ್ರರಂಗ ಗುರುತಿಸುವ ನಾಯಕಿಯಾಗಿ ಬೆಳೆದವರು ಮೇಘನಾ. ಚಿಕ್ಕವರಿರುವಾಗಲೇ ಭರತನಾಟ್ಯ, ಕಥಕ್‌, ಪಾಶ್ಚಾತ್ಯ ನೃತ್ಯಗಳನ್ನು ಕಲಿತ ಇವರು ಈಗಲೂ ವಾರಕ್ಕೆ ಎರಡು ದಿನ ನೃತ್ಯಾಭ್ಯಾಸ ಮಾಡುತ್ತಾರಂತೆ.ಪ್ರಾಥಮಿಕ ಶಾಲೆಯನ್ನು ಗುಲ್ಬರ್ಗದಲ್ಲಿ, ಉನ್ನತ ಶಿಕ್ಷಣ ಹಾಗೂ ನಟನಾ ತರಬೇತಿಯನ್ನು   ಬೆಂಗಳೂರಿನಲ್ಲಿ ಪಡೆದಿದ್ದಾರೆ. ಕಾಯದ ಸೌಂದರ್ಯಕ್ಕಾಗಿ ಜಿಮ್‌ ಮತ್ತು ಯೋಗದ ಮೊರೆಹೋಗುತ್ತಿದ್ದ ಮೇಘನಾ, ಇತ್ತೀಚೆಗೆ ಯೋಗ ಮತ್ತು ಮನೆಯಲ್ಲೇ ವ್ಯಾಯಾಮ ಮಾಡುತ್ತಿದ್ದಾರೆ.ಮೇಘನಾ ತಮ್ಮ ಫಿಟ್‌ನೆಸ್‌ ಬಗ್ಗೆ ‘ಮೆಟ್ರೊ’ದೊಂದಿಗೆ ಮಾತನಾಡಿದ್ದಾರೆ.‘ಮನೆಯಲ್ಲಿಯೇ ಬೀಚ್‌ ಬಾಡಿ ಎಂಬ ಅಮೆರಿಕದ ವರ್ಕೌಟ್‌ ಮಾಡುತ್ತೇನೆ. ಸೀಡಿ ಹಾಕಿ ಟೀವಿ ನೋಡಿ ಮಾಡುವ ಕಸರತ್ತು ಇದು. ಪ್ರತಿದಿನ ಬೆಳಿಗ್ಗೆ 8ರಿಂದ 8.45ರವರೆಗೆ ಇದನ್ನು ಮಾಡುತ್ತೇನೆ. ಸಂಜೆ 5ರಿಂದ 6ರವರೆಗೆ ಯೋಗ ಮಾಡುತ್ತೇನೆ. ನಾನು ಪಕ್ಕಾ ಸಸ್ಯಾಹಾರಿ. ಹಾಗಾಗಿ ನಮಗೆ ಆಹಾರದಲ್ಲಿ ಆಯ್ಕೆಗಳು ಕಡಿಮೆ. ಅನ್ನ, ಸಿಹಿ ತಿನಿಸುಗಳನ್ನು ತಿನ್ನುವುದಿಲ್ಲ. ನನಗೆ ಕಪ್‌ ಕೇಕ್‌ ತುಂಬಾ ಇಷ್ಟ, ಫಿಟ್‌ನೆಸ್‌ಗಾಗಿ ಅದನ್ನೂ ಬಿಟ್ಟಿದ್ದೇನೆ. ಬೆಳಿಗ್ಗೆ ಬೆಣ್ಣೆಹಣ್ಣಿನ ಸ್ಯಾಂಡ್‌ವಿಚ್‌ ಅಥವಾ ಜ್ಯೂಸ್‌ ಕುಡಿಯುತ್ತೇನೆ. ಮಧ್ಯಾಹ್ನ ಗೋಧಿ ಅನ್ನಕ್ಕೆ ಪಲ್ಯ ಅಥವಾ ಮೊಸರು ಹಾಕಿಕೊಂಡು ತಿನ್ನುತ್ತೇನೆ. ಸಂಜೆ ಗ್ರೀನ್ ಟೀ ಬೇಕು. ರಾತ್ರಿ ಊಟಕ್ಕೆ ಎರಡು ಚಪಾತಿ ಮತ್ತು ಪಲ್ಯ ಸಾಕು’ ಎಂದು ತಮ್ಮ ನಿತ್ಯಾಹಾರದ ಪಟ್ಟಿ ಹೇಳುತ್ತಾರೆ ಮೇಘನಾ.‘ವಾರಕ್ಕೆ ಎರಡು ಬಾರಿ ನೃತ್ಯಾಭ್ಯಾಸ ಮಾಡುತ್ತೇನೆ. ಅದರಲ್ಲೂ ಹಿಪ್‌ ಹಾಪ್‌ ಹೆಚ್ಚು ಅಭ್ಯಾಸ ಮಾಡುತ್ತಿದ್ದೇನೆ. ನೃತ್ಯ ಕಲಿತಿದ್ದು ಸಿನಿಮಾದಲ್ಲಿ ಅಭಿನಯಿಸಲು ಸಹಕಾರಿಯಾಯಿತು. ನೃತ್ಯಗುರು ಒಮ್ಮೆ ಹೇಳಿಕೊಟ್ಟ ಸ್ಟೆಪ್‌ಗಳನ್ನು ಒಂದೇ ಟೇಕ್‌ಗೆ ಮಾಡುವಷ್ಟು ಪರಿಣತಿ ಹೊಂದಿದ್ದೇನೆ. ಖ್ಯಾತ ನೃತ್ಯ ಸಂಯೋಜಕ ಶ್ಯಾಮಕ್ ಡಾವರ್ ಅವರ ಶಾಲೆಯಲ್ಲಿ ನೃತ್ಯದ ವರಸೆಗಳನ್ನು ಕಲಿತಿದ್ದೇನೆ’ ಎನ್ನುತ್ತಾರೆ.‘ಫೇಸ್‌ಬುಕ್‌, ಟ್ವಿಟ್ಟರ್‌ನಿಂದ ದೂರ ಉಳಿದಿದ್ದೆ. ‘ತುಗ್ಲಕ್‌’ ಸಿನಿಮಾ ಸಂದರ್ಭದಲ್ಲಿ ಸ್ನೇಹಿತ ರಕ್ಷಿತ್‌ ಶೆಟ್ಟಿ ‘ಫೇಸ್‌ಬುಕ್‌ಗೆ ಸೇರಿಕೊಳ್ಳುವಂತೆ ಅಭಿಮಾನಿಗಳು ಕೇಳುತ್ತಿದ್ದಾರೆ’ ಎಂದಾಗ, ಸಿನಿಮಾ ಪ್ರಚಾರಕ್ಕಾಗಿ ಎರಡು ವರ್ಷದ ಹಿಂದೆ ಫೇಸ್‌ಬುಕ್‌ನಲ್ಲಿ ಕಾಣಿಸಿಕೊಂಡೆ. ಈಗ ಒಂದಿಷ್ಟು ಬಳಕೆ ಮಾಡುತ್ತಿದ್ದೇನೆ. ಫೇಸ್‌ಬುಕ್‌ಗಿಂತ ಟ್ವಿಟ್ಟರ್‌ ಹೆಚ್ಚು ಬಳಸುತ್ತೇನೆ’ ಎನ್ನುತ್ತಾರೆ.ಬಿಡುವಿನ ವೇಳೆಯಲ್ಲಿ ದಿನಕ್ಕೆ ಎರಡು ಸಿನಿಮಾ ವೀಕ್ಷಿಸುವ ಮೇಘನಾ, ಇರಾನ್‌ ಹಾಗೂ ಇಟಲಿಯ ಚಿತ್ರಗಳನ್ನು ಹೆಚ್ಚಾಗಿ ನೋಡುತ್ತಾರೆ. ಪುಸ್ತಕ ಓದುವುದು ಅವರ ಇನ್ನೊಂದು ಹವ್ಯಾಸ. ಹೆಚ್ಚಾಗಿ ಆನ್‌ಲೈನ್‌ನಲ್ಲೇ ಶಾಪಿಂಗ್‌ ಮಾಡುತ್ತಾರೆ. ಮನೆ ಬಾಗಿಲಿಗೆ ತಂದುಕೊಡುತ್ತಾರೆ ಎಂಬ ಉದ್ದೇಶದಿಂದ ಆನ್‌ಲೈನ್‌ ಶಾಪಿಂಗ್‌ ಇಷ್ಟಪಡುತ್ತಾರೆ.  ಮುಂದಿನ ಸಿನಿಮಾ ಬಗ್ಗೆ ಈಗಲೇ ಏನನ್ನೂ ಹೇಳುವುದಿಲ್ಲ ಎನ್ನುವ ಮೇಘನಾ ಗಾಂವ್ಕರ್‌ ಕೈಯಲ್ಲಿ ಒಂದು ಚಿತ್ರವಿದೆಯಂತೆ. ಅಂದಹಾಗೆ, ಇವರು ಮೆಲ್ಬರ್ನ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟದ ಸಮಾರೋಪದಲ್ಲಿ ನೃತ್ಯ ಪ್ರದರ್ಶನ ಮಾಡಿ ಗಮನ ಸೆಳೆದಿದ್ದರು.  

 

ಪ್ರತಿಕ್ರಿಯಿಸಿ (+)