ಗುರುವಾರ , ಮೇ 13, 2021
39 °C

ಮೇಯರ್ ಆಯ್ಕೆ: ಮೂವರಿಗೆ ಅಧಿಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಮೇಯರ್ ಮತ್ತು ಉಪ ಮೇಯರ್ ಆಯ್ಕೆ ಕುರಿತು ಆಕಾಂಕ್ಷಿಗಳ ಜತೆ ಚರ್ಚಿಸಿ, ಅಂತಿಮ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ ಮತ್ತು ಪಕ್ಷದ ಇಬ್ಬರು ಜಿಲ್ಲಾಧ್ಯಕ್ಷರಿಗೆ ನೀಡಲಾಗಿದೆ.ಈ ಕುರಿತು ಚರ್ಚಿಸಲು ಪಕ್ಷದ ಕಚೇರಿಯಲ್ಲಿ ಮಂಗಳವಾರ ಕರೆದಿದ್ದ ಸಭೆಯಲ್ಲಿ ಶಾಸಕರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಮೇಯರ್ ಸ್ಥಾನಕ್ಕೆ ವೆಂಕಟೇಶಮೂರ್ತಿ ಮತ್ತು ಸೋಮಶೇಖರ್ ಅವರು ಪ್ರಬಲ ಆಕಾಂಕ್ಷಿಗಳಿದ್ದು, ಅವರಲ್ಲಿ ಒಬ್ಬರನ್ನು ಮನವೊಲಿಸಿ, ಮತ್ತೊಬ್ಬರನ್ನು ಮೇಯರ್ ಮಾಡಿ ಎಂದು ಶಾಸಕರು ಸಲಹೆ ಮಾಡಿದ್ದಾರೆ ಎನ್ನಲಾಗಿದೆ.ಆ ಪ್ರಕಾರ ಸಚಿವ ಅಶೋಕ, ಬಿಜೆಪಿ ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷ ಸುಬ್ಬಣ್ಣ, ಬಿಜೆಪಿ ಬೆಂಗಳೂರು ನಗರ ಘಟಕದ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಬುಧವಾರ ಈ ಇಬ್ಬರೂ ಆಕಾಂಕ್ಷಿಗಳನ್ನು ಕರೆದು ಮಾತುಕತೆ ನಡೆಸಲಿದ್ದಾರೆ. ಈ ಸಭೆಗೆ ಉಪ ಮೇಯರ್ ಸ್ಥಾನದ ಮೇಲೆ ಕಣ್ಣಿಟ್ಟಿರುವ ಪ್ರಬಲ ಆಕಾಂಕ್ಷಿಗಳನ್ನೂ ಕರೆಯಲಿದ್ದಾರೆ.`ಈ ಹಿಂದೆ ಯಾವ ರೀತಿಯಲ್ಲಿ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ನಡೆದಿತ್ತೊ ಅದೇ ರೀತಿ ಈ ಸಲವೂ ಮಾಡಿ. ಪಕ್ಷ ಮತ್ತು ಸರ್ಕಾರಕ್ಕೆ ಒಳ್ಳೆಯ ಹೆಸರು ತರುವ ವ್ಯಕ್ತಿ ಮೇಯರ್ ಆದರೆ ಉತ್ತಮ~ ಎನ್ನುವ ಅಭಿಪ್ರಾಯವನ್ನು ಬಹುತೇಕ ಶಾಸಕರು ಸಭೆಯಲ್ಲಿ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ.ಸಚಿವರಾದ ವಿ.ಸೋಮಣ್ಣ, ಎಸ್.ಸುರೇಶಕುಮಾರ್ ಸೇರಿದಂತೆ ನಗರದ ಬಹುತೇಕ ಎಲ್ಲ ಶಾಸಕರೂ ಸಭೆಯಲ್ಲಿ ಭಾಗವಹಿಸಿದ್ದರು. ಶಾಸಕ ಮುನಿರಾಜು ಮಾತ್ರ ಸಭೆಗೆ ಗೈರುಹಾಜರಾಗಿದ್ದರು.ಹಲವು ಶಾಸಕರು ತಮ್ಮ ಕ್ಷೇತ್ರಗಳ ವ್ಯಾಪ್ತಿಯ ಪಾಲಿಕೆ ಸದಸ್ಯರನ್ನೇ ಮೇಯರ್ ಅಥವಾ ಉಪ ಮೇಯರ್ ಸ್ಥಾನಕ್ಕೆ ಆಯ್ಕೆ ಮಾಡುವಂತೆ ಮನವಿ ಮಾಡಿದರು ಎನ್ನಲಾಗಿದೆ. ನಂತರ ಆಯ್ಕೆ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಅಶೋಕ ಅವರಿಗೆ ನೀಡಿದರು ಎನ್ನಲಾಗಿದೆ. ಸುಮಾರು ಎರಡು ಗಂಟೆ ಕಾಲ ಸಭೆ ನಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.