ಶುಕ್ರವಾರ, ಜೂನ್ 18, 2021
23 °C

ಮೇಯರ್ ಚುನಾವಣೆ: ಆಕಾಂಕ್ಷಿಗಳ ಪಾಲಿಗೆ ಕಹಿಯಾಗಲಿದೆ ಯುಗಾದಿ ಹೋಳಿಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಬೆಂಗಳೂರು ಕೇಂದ್ರವಾಗಿಟ್ಟುಕೊಂಡು ರಾಜ್ಯ ಬಿಜೆಪಿಯಲ್ಲಿ ನಡೆದಿರುವ ಕ್ಷಿಪ್ರ ಬೆಳವಣಿಗೆ ನಗರದಲ್ಲಿ ಆ ಪಕ್ಷದ ಚಟುವಟಿಕೆಗಳಿಗೂ ಗ್ರಹಣ ಹಿಡಿಯುವಂತೆ ಮಾಡಿದ್ದು, ಮೇಯರ್, ಉಪ ಮೇಯರ್ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ. ಭಾನುವಾರ ಮಧ್ಯಾಹ್ನದಿಂದ ಸಚಿವ ಜಗದೀಶ ಶೆಟ್ಟರ್ ಅವರ ಮೊಬೈಲ್ `ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದು~, ಆಕಾಂಕ್ಷಿಗಳು ತಮ್ಮ ಅಹವಾಲು ಮುಟ್ಟಿಸಲಾಗದೆ ಚಡಪಡಿಸುತ್ತಿದ್ದಾರೆ.ಧಾರವಾಡದ ಹಿರಿಯ ಶಾಸಕ ಚಂದ್ರಕಾಂತ ಬೆಲ್ಲದ ಸೇರಿದಂತೆ ಮೇಯರ್ ಚುನಾವಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಬೇಕಾದ  ಎಲ್ಲ ಶಾಸಕರು ಬೆಂಗಳೂರಿ ನಲ್ಲೇ ಬೀಡುಬಿಟ್ಟಿದ್ದು, ಮೇಯರ್ ಸ್ಥಾನವನ್ನು ಖಚಿತಪಡಿಸಿಕೊಂಡು ಯುಗಾದಿ ಹೋಳಿಗೆ ಮೆಲ್ಲ ಬೇಕೆಂಬ ಆಕಾಂಕ್ಷಿಗಳ ಪಾಲಿಗೆ ಮಂಕು ಕವಿದಂತಾಗಿದೆ.ಸಂಸದ ಪ್ರಹ್ಲಾದ ಜೋಶಿ ಸಹ ಅಧಿವೇಶನದಲ್ಲಿ ಪಾಲ್ಗೊಳ್ಳಲು ನವದೆಹಲಿಗೆ ತೆರಳಿದ್ದರಿಂದ, ಮೇಲ್ನೋಟಕ್ಕೆ ಯಾವ ಚಟುವಟಿಕೆ ಗಳೂ ಕಾಣುತ್ತಿಲ್ಲ. ಆದರೆ, ಗುಪ್ತಗಾಮಿನಿಯಾಗಿ ಕೆಲಸಗಳು ನಡೆದಿದ್ದು, ಅಸಮಾಧಾನದ ಹೊಗೆಯೂ ಕಾಣಿಸಿಕೊಂಡಿದೆ.ಹಲವು ಆಕಾಂಕ್ಷಿಗಳು ಪ್ರತಿಯೊಬ್ಬ ಸದಸ್ಯರನ್ನು ವೈಯಕ್ತಿಕವಾಗಿ ಸಂಪರ್ಕಿಸಿ ತಮ್ಮನ್ನು ಬೆಂಬಲಿಸುವಂತೆ ಕೋರುತ್ತಿರುವ ನಡುವೆಯೇ ಪಕ್ಷದ ವಲಯದಲ್ಲಿ `ಅನುಭವ ವರ್ಸಸ್ ಯುವಶಕ್ತಿ ಜಗ್ಗಾಟ~ ಜೋರಾಗಿ ನಡೆದಿದೆ. ಅನುಭವಕ್ಕೆ ಮನ್ನಣೆಯನ್ನು ನೀಡುವುದಾ ದರೆ ಡಾ. ಪಾಂಡುರಂಗ ಪಾಟೀಲ ಇಲ್ಲವೆ ಭಾರತಿ ಪಾಟೀಲ ಅವರಿಗೆ ಅವಕಾಶ ಹೆಚ್ಚು ಎಂಬುದು ಪಾಲಿಕೆ ಯ ಪ್ರಭಾವಿ ಸದಸ್ಯರೊಬ್ಬರ ಸ್ಪಷ್ಟ ಅಭಿಪ್ರಾಯ ವಾಗಿದೆ.`ಜನತಾ ಪರಿವಾರದ ಹಿನ್ನೆಲೆಯನ್ನೇ ಕೆದಕುತ್ತಾ ಕೂಡುವಲ್ಲಿ ಯಾವುದೇ ಅರ್ಥವಿಲ್ಲ. ಅವರೀಗ ಬಿಜೆಪಿ ಸದಸ್ಯರು. ಪಾಲಿಕೆ ಹಿರಿಯ ಸದಸ್ಯರಾಗಿರುವ ಅವರು, ಆಡಳಿತದ ಅನುಭವವನ್ನೂ ಹೊಂದಿದ್ದಾರೆ. ಚುನಾ ವಣಾ ವರ್ಷ ಇದಾಗಿದ್ದರಿಂದ ಪಕ್ಷದ ಪಾಲಿಗೆ ಅವರೇ ಸೂಕ್ತ ಅಭ್ಯರ್ಥಿ ಎನಿಸಿದ್ದಾರೆ~ ಎಂದು ಅವರು ವಿವರಿಸುತ್ತಾರೆ.`ಧಾರವಾಡಕ್ಕೆ ಮೇಯರ್ ಸ್ಥಾನವನ್ನು ಬಿಟ್ಟು ಕೊಡುವುದೇ ಅಂತಿಮವಾದಲ್ಲಿ ಭಾರತಿ ಪಾಟೀಲ ಅವರ ಹೆಸರು ಪ್ರಧಾನವಾಗಿ ಚರ್ಚೆಗೆ ಬರಲಿದೆ. ಮೂರು ಸಲ ಸದಸ್ಯೆಯಾಗಿರುವ ಅವರನ್ನು ಕಡೆಗಣಿಸಿ ಬಹಳ ವರ್ಷಗಳಿಂದ ಪಕ್ಷದಲ್ಲಿದ್ದಾರೆ ಎಂಬ ಕಾರಣದಿಂದ ಮೊದಲ ಸಲ ಸದಸ್ಯರಾದ ವ್ಯಕ್ತಿಗಳಿಗೆ ಆ ಹುದ್ದೆ ಕೊಡಲಾಗುವುದಿಲ್ಲ~ ಎಂದು ಅವರು ಹೇಳುತ್ತಾರೆ.ಧಾರವಾಡಕ್ಕೇ ಮೇಯರ್ ಪಟ್ಟವನ್ನು ಬಿಟ್ಟು ಕೊಡಬೇಕು ಎಂಬ ಬೇಡಿಕೆ ದಿನದಿಂದ ದಿನಕ್ಕೆ ಬಲವಾ ಗುತ್ತಿದ್ದು, ಭಾರತಿ ಅವರಲ್ಲದೆ ಪ್ರಕಾಶ ಗೋಡಬೋಲೆ ಹಾಗೂ ಶಿವು ಹಿರೇಮಠ ಅವರ ಪ್ರಯತ್ನವೂ ಜೋರಾಗಿದೆ ಎಂದು ಹೇಳಲಾಗಿದೆ. ಇನ್ನೂ ಕೆಲವು ಸದಸ್ಯರು `ನಾವೊಂದು ಕೈ ಏಕೆ ನೋಡಬಾರದು~ ಎಂದು ನಾಯಕರ ಬಾಗಿಲು ಬಡಿಯಲಾರಂಭಿಸಿದ್ದಾರೆ.ಇತ್ತ ಹುಬ್ಬಳ್ಳಿಯಲ್ಲಿ ಡಾ. ಪಾಟೀಲ ತುಟಿ ಬಿಚ್ಚದೆ ಮೌನಕ್ಕೆ ಶರಣಾಗಿದ್ದು, ಅವರ ಪರವಾದ ಕೆಲಸಗಳು ಚುರುಕಿನಿಂದ ನಡೆದಿವೆ ಎಂದು ತಿಳಿದುಬಂದಿದೆ. ಈಗಾಗಲೇ ವಿಜಯಲಕ್ಷ್ಮಿ ಹೊಸಕೋಟಿ ಉಪ ಮೇಯರ್ ಆಗುವುದು ಖಚಿತವಾಗಿದ್ದರಿಂದ, ಡಾ. ಪಾಟೀಲ ಮೇಯರ್ ಸ್ಥಾನ ಅಲಂಕರಿಸಿದರೆ ಬಸವರಾಜ ಬೊಮ್ಮಾಯಿ ಅವರ ಬಲ ಹೆಚ್ಚಲಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.ಸುಧೀರ್ ಸರಾಫ್ ಸಹ ತಮ್ಮ ಪ್ರಯತ್ನವನ್ನು ತೀವ್ರಗೊಳಿಸಿದ್ದು, ಯುವಕರ ಮನವಿಯನ್ನೂ ಪರಿಗಣಿಸಬೇಕು ಎಂದು ಪಕ್ಷದ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ. ಮಿಕ್ಕ ಕೆಲವರು ತಮ್ಮ ಸಾಮರ್ಥ್ಯಕ್ಕೆ ತಕ್ಕ `ಹೋರಾಟ~ದಲ್ಲಿ ತೊಡಗಿದ್ದಾರೆ. ಆದರೆ, ಬೆಂಗಳೂರಿನಲ್ಲಿ ನಡೆದ ಬೆಳವಣಿಗೆಗಳು ಆಕಾಂಕ್ಷಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿವೆ.ಈ ಗೊಂದಲ ಹೀಗೆ ಮುಂದುವರಿದರೆ ತಮ್ಮ ನಾಯಕರಿಗೆ ಅಹವಾಲು ಸಲ್ಲಿಸಲು ಸೂಕ್ತ ಕಾಲಾವಕಾಶ ಸಿಗದೆ, ಕೊನೆಗಳಿಗೆಯಲ್ಲಿ ಹಿರಿಯರು ಸೂಚಿಸುವ ಅಭ್ಯರ್ಥಿಯನ್ನು ಒಪ್ಪಿಕೊಳ್ಳಬೇಕಾದ ಪ್ರಸಂಗ ಬರಬಹುದು ಎಂಬ ಭೀತಿ ಅವರಲ್ಲಿದೆ.ಸ್ಥಳೀಯ ನಾಯಕರೊಬ್ಬರು ಈಗಾಗಲೇ ಮೇಯರ್ ಹುದ್ದೆಗೆ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಹೇಳುತ್ತಿದ್ದು, ಉಳಿದ ಆಕಾಂಕ್ಷಿಗಳನ್ನು ಈ ನಡೆ ಕೆರಳಿಸಿದೆ ಎನ್ನಲಾಗಿದೆ. ಹೀಗಾಗಿ ಕಮಲದ ಅಡಿಯಲ್ಲಿ ಸದ್ದಿಲ್ಲದೆ ಬೇಗುದಿ ಹೆಚ್ಚಾಗುತ್ತಿದ್ದು, ನಾಯಕರಿಗೆ ಹೆಚ್ಚಿನ ಚಿಂತೆ ತರಲಿದೆ ಎಂದು ಹೇಳಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.