ಗುರುವಾರ , ಆಗಸ್ಟ್ 6, 2020
27 °C

ಮೇವಿಗಾಗಿ ಪರದಾಡುತ್ತಿರುವ ಜಾನುವಾರು...!

ಪ್ರಜಾವಾಣಿ ವಾರ್ತೆ / ನಾಗರಾಜ ಹಣಗಿ Updated:

ಅಕ್ಷರ ಗಾತ್ರ : | |

ಮೇವಿಗಾಗಿ ಪರದಾಡುತ್ತಿರುವ ಜಾನುವಾರು...!

ಲಕ್ಷ್ಮೇಶ್ವರ: ಮುಂಗಾರು ಮಳೆ ಕೈಕೊಟ್ಟಿದ್ದು ಹೊಲದಲ್ಲಿ ಬೆಳೆ ಇಲ್ಲ. ಹುಲ್ಲು ಕೂಡ ಹುಟ್ಟಿಲ್ಲ. ಹೀಗಾಗಿ ತಮ್ಮ ಜಾನುವಾರುಗಳಿಗೆ ಆಹಾರ ಹೊಂದಿಸುವುದರಲ್ಲಿ ರೈತರು ಹೈರಾಣಾಗುತ್ತಿದ್ದಾರೆ.ತಾಲ್ಲೂಕಿನಲ್ಲಿ ಬಹಳಷ್ಟು ರೈತರು ಒಕ್ಕಲುತನದೊಂದಿಗೆ ಹೈನುಗಾರಿಕೆ ನೆಚ್ಚಿದ್ದಾರೆ. ಪ್ರತಿಯೊಬ್ಬ ರೈತನ ಮನೆಯಲ್ಲಿ ಹಸು ಎಮ್ಮೆಗಳು ಇವೆ. ಆದರೆ ಅವುಗಳಿಗೆ ಹೊಟ್ಟೆಗೆ ಹಾಕಲು ಅವನಲ್ಲಿ ಹೊಟ್ಟು-ಸೊಪ್ಪಿ ಇಲ್ಲ. ಮೇವಿನ ದಾಸ್ತಾನು ಇಲ್ಲ. ಕಾರಣ ಹೊಟ್ಟೆ ತುಂಬ ಆಹಾರ ದೊರೆಯದೆ ದನಕರುಗಳು ಸೊರಗುತ್ತಿವೆ.ಪ್ರೀತಿಯಿಂದ ಸಾಕಿದ ಎತ್ತು ಆಕಳುಗಳ ಹೊಟ್ಟೆಗೆ ಹಾಕಲು ಏನೂ ದೊರೆಯದೆ ರೈತರು ಮರಗುತ್ತಿದ್ದಾರೆ.

 ಮುಂಗಾರು ಮಳೆ ಆಗಿದ್ದರೆ ಈ ಹೊತ್ತಿಗೆ ಹೊಲದಲ್ಲಿ ಬೆಳೆಯ ಜೊತೆಗೆ ಹುಲ್ಲೂ ಸಹ ಹುಟ್ಟುತ್ತಿತ್ತು. ಆಗ ಜಾನುವಾರುಗಳು ಹೊಟ್ಟೆ ತುಂಬ ಮೇಯುತ್ತಿದ್ದವು. ಆದರೆ ಈ ಬಾರಿ ಮುಂಗಾರು ಮಳೆ ಆಗಿಲ್ಲ. ಹೀಗಾಗಿ ಅಡವಿಯಲ್ಲಾಗಲಿ ಅಥವಾ ಹೊಲದಲ್ಲಾಗಲಿ ಹಿಡಿ ಹುಲ್ಲು ಹುಟ್ಟಿಲ್ಲ.  ಜೂನ್ ಅಂತ್ಯದ ವೇಳೆಗೆ ಸರಾಸರಿ ತಾಲ್ಲೂಕಿನಲ್ಲಿ 750 ಮಿಮೀ ಮಳೆ ಆಗಬೇಕಿತ್ತು. ಆದರೆ ಆಗಿದ್ದು ಕೇವಲ 124 ಮಿಮೀ ಮಾತ್ರ. ಮಳೆ ಆಗದೆ ಇರುವುದರಿಂದ ಹೊಲಗಳೆಲ್ಲ ಬಿತ್ತನೆಯಾಗದೆ ಖಾಲಿ ಉಳಿದಿವೆ.ರೈತರು ಬೆಳೆಯೊಂದಿಗೆ ತಮ್ಮ ಜಾನುವಾರುಗಳಿಗಾಗಿ ಜೋಳ, ಗೋವಿನಜೋಳ, ಹೆಸರು, ಮಡಿಕಿ, ಹುಳ್ಳಿ ಬೆಳೆಯುತ್ತಾರೆ. ಆದರೆ ಮಳೆ ಇಲ್ಲದ್ದರಿಂದ ಏನೂ ಬೆಳೆದಿಲ್ಲ. ಈಗ ಎಲ್ಲ ಹೊಲಗಳು ಖಾಲಿ ಬಿದ್ದಿರುವುದರಿಂದ ರೈತರು ಎತ್ತು, ಆಕಳು, ಎಮ್ಮೆಗಳ ಹಿಂದೆ ಹೋಗದೆ ಅವುಗಳನ್ನು ಮೇಯಲು ಬಿಡುತ್ತಿದ್ದಾರೆ. ಆದರೆ ಎಲ್ಲಿ ನೋಡಿದರೂ ಹಸಿರೆಂಬುದೇ ಕಾಣುತ್ತಿಲ್ಲ. ಹೀಗಾಗಿ ಜಾನುವಾರುಗಳು ಹಸಿರು ಹುಡುಕಿಕೊಂಡು ಎಲ್ಲಿ ಬೇಕೆಂದರಲ್ಲಿ ಗೊತ್ತು ಗುರಿ ಇಲ್ಲದೆ ತಿರುಗಾಡುತ್ತಿರುವ ದೃಶ್ಯ ಎಂಥವರಲ್ಲಿಯೂ ಕನಿಕರ ಹುಟ್ಟಿಸುವಂತಿದೆ.`ಏನ್ ಮಾಡಬೇಕ್ರೀ ಹ್ವಾದ ವರ್ಷ ಮಳಿ ಹೋತು. ಈ ವರ್ಷ ಬಂದೀತು ಅಂದ್ರ ಮಳಿರಾಯ ಬರವಲ್ಲ. ಹಿಂಗಾಗಿ ನಮ್ಮ ದನಕರಕ್ಕ ಹೊಟ್ಟುಸೊಪ್ಪಿ ಎಲ್ಲಿಂದ ತರೂದಂತ ಚಿಂತಿ ಆಗೈತಿ~ ಎತ್ತಿನಹಳ್ಳಿ ಗ್ರಾಮದ ಪ್ರಭುಗೌಡ ಸೂರಣಗಿ ನೋವಿನಿಂದ ಹೇಳುತ್ತಾರೆ.ಆಗಾಗ ಸುರಿಯುವ ತುಂತುರು ಮಳೆಗೆ ಡಾಂಬರ ರಸ್ತೆಯಲ್ಲಿನ ನೀರು ರಸ್ತೆ ಬದಿಗೆ ಹೋಗುವುದರಿಂದ ಅಲ್ಲಿ ಹುಲ್ಲು ಸಣ್ಣಗೆ ಹುಟ್ಟಿದೆ. ಆದರೆ ನೆಲಬಿಟ್ಟು ಮೇಲೆದ್ದಿಲ್ಲ. ಆದರೂ ಕೂಡ ದನ ಕರುಗಳು ನೆಲಕ್ಕೆ ಅಂಟಿರುವ ಹುಲ್ಲನ್ನು ಮೇಯಲು ಹರಸಾಹಸ ಪಡುತ್ತಿರುವ ದೃಶ್ಯ ಕಾಣುತ್ತದೆ. ಅದರಂತೆ ಅಡವಿಯಲ್ಲಿ ಜಿಂಕೆ ಹಾಗೂ ಸಾರಂಗ, ಮೊಲಗಳಿಗೆ ಮೇಯಲು ಒಂಚೂರು ಹುಲ್ಲು ಸಿಗುತ್ತಿಲ್ಲ. ಕುಡಿಯುಲು ನೀರೂ ದೊರೆಯುತ್ತಿಲ್ಲ. ಹೀಗಾಗಿ ಜಿಂಕೆಗಳು ಕಂಗೆಟ್ಟು ಹಿಂಡು ಹಿಂಡಾಗಿ ಏದುಸಿರು ಬಿಡುತ್ತ ಆಹಾರ ಹಾಗೂ ನೀರಿಗಾಗಿ ಓಡಾಡುತ್ತಿರುವುದು ಮನಕಲಕುವಂತಿದೆ. ಮುಂದಿನ ದಿನಗಳಲ್ಲಿ ಮಳೆ ಬಾರದೆ ಇದ್ದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.