ಸೋಮವಾರ, ಜೂಲೈ 13, 2020
25 °C

ಮೇ ಒಳಗೆ ಆಸರೆ ಮನೆ ಹಸ್ತಾಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೇ ಒಳಗೆ ಆಸರೆ ಮನೆ ಹಸ್ತಾಂತರ

ಬೆಂಗಳೂರು: ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಮೇ ತಿಂಗಳ ಒಳಗೆ ಆಸರೆ ಮನೆಗಳನ್ನು ಹಸ್ತಾಂತರ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ವಿಧಾನಸಭೆಗೆ ತಿಳಿಸಿದರು.ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ವಸಂತ ಬಂಗೇರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಒಟ್ಟು 59 ಸಾವಿರ ಮನೆಗಳ ಪೈಕಿ ಈ ತಿಂಗಳ ಒಳಗೆ ಶೇ 70ರಷ್ಟು ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಗುವುದು. ಉಳಿದ ಮನೆಗಳನ್ನು ಮೇ ತಿಂಗಳ ಒಳಗೆ ನೀಡಲಾಗುವುದು. ಇದರಲ್ಲಿ ಅನುಮಾನವೇ ಬೇಡ ಎಂದು ಅವರು ಹೇಳಿದರು.‘ಮಳೆ ಬಂದಾಗ ಗ್ರಾಮಗಳು ಜಲಾವೃತವಾಗುವುದು ಉತ್ತರ ಕರ್ನಾಟಕದಲ್ಲಿ ಸಾಮಾನ್ಯವಾಗಿತ್ತು. ಇದು 25-30 ವರ್ಷಗಳ ಸಮಸ್ಯೆ. ಈ ಬಗ್ಗೆ ಇದುವರೆಗೂ ಯಾರೊಬ್ಬರೂ ಗಮನ ನೀಡಿರಲಿಲ್ಲ. ಆದರೆ ನಮ್ಮ ಸರ್ಕಾರ ಶಾಶ್ವತವಾದ ಪರಿಹಾರ ಕಲ್ಪಿಸಲು ನವ ಗ್ರಾಮಗಳ ನಿರ್ಮಾಣಕ್ಕೆ ಕೈಹಾಕಿತು. ಇದರಲ್ಲಿ ಸ್ವಲ್ಪ ವಿಳಂಬವಾಗಿರಬಹುದು. ಆದರೆ, ಶಾಶ್ವತವಾದ ಪರಿಹಾರ ಮಾತ್ರ ಸಿಕ್ಕೇ ಸಿಗುತ್ತದೆ’ ಎಂದರು.ಬಂಗೇರ ಅವರ ಪ್ರಶ್ನೆಗೆ ವಸತಿ ಸಚಿವ ವಿ.ಸೋಮಣ್ಣ ಉತ್ತರಿಸಿ, ಗೃಹ ಮಂಡಳಿಗೆ ವಹಿಸಿದ್ದ ಒಟ್ಟು 4,782 ಆಸರೆ ಮನೆಗಳ ಪೈಕಿ 2267 ಮನೆಗಳನ್ನು ನಿರ್ಮಾಣ ಮಾಡಿದ್ದು, ಉಳಿದ ಮನೆಗಳನ್ನೂ ಈ ತಿಂಗಳ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.ಜೆಡಿಎಸ್‌ನ ಎಚ್.ಸಿ.ಬಾಲಕೃಷ್ಣ ಅವರ ಪ್ರಶ್ನೆಗೆ ಉತ್ತರಿಸಿದ ಸೋಮಣ್ಣ, ದಾಬಸ್‌ಪೇಟೆ ಬಳಿ ಕೆಎಚ್‌ಬಿ ಬಡಾವಣೆ ನಿರ್ಮಿಸುತ್ತಿದ್ದು ಇದಕ್ಕಾಗಿ 100 ಎಕರೆ ಜಾಗ ಗುರುತಿಸಲಾಗಿದೆ. ದರ ನಿಗದಿ ನಂತರ ಅದನ್ನು ಸ್ವಾಧೀನಪಡಿಸಿಕೊಂಡು, ಬಡಾವಣೆ ನಿರ್ಮಿಸಲಾಗುವುದು. ಒಟ್ಟು 8,645 ಮಂದಿ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದು, ಇನ್ನೂ ಹೆಚ್ಚುವರಿಯಾಗಿ 300 ಎಕರೆ ಜಾಗವನ್ನು ಸ್ವಾಧೀನ ಮಾಡಿಕೊಳ್ಳಲಾಗುವುದು ಎಂದರು.ಜೆಡಿಎಸ್‌ನ ಕಲ್ಪನಾ ಸಿದ್ಧರಾಜು ಅವರ ಪ್ರಶ್ನೆಗೆ ಉತ್ತರಿಸಿದ ವಸತಿ ಸಚಿವರು, ಮದ್ದೂರು ಪಟ್ಟಣದ ಶಿವಪುರ ಬಳಿ 262 ಆಶ್ರಯ ಮನೆಗಳ ನಿರ್ಮಾಣಕ್ಕೆ 2002-03ರಲ್ಲಿ ಅನುಮತಿ ನೀಡಿದ್ದು, ಅದರಲ್ಲಿ 115 ಮನೆಗಳನ್ನು ಪೂರ್ಣಗೊಳಿಸಲಾಗಿದೆ. 73 ಮನೆಗಳ ನಿರ್ಮಾಣ ಪ್ರಗತಿಯಲ್ಲಿದೆ. ಉಳಿದ 74 ಮನೆಗಳನ್ನು ವಾಜಪೇಯಿ ನಗರ ವಸತಿ ಯೋಜನೆಯಡಿಯಲ್ಲಿ ಕೈಗೆತ್ತಿಕೊಳ್ಳಲಾಗುವುದು. ಪ್ರತಿ ಮನೆಯ ನಿರ್ಮಾಣಕ್ಕೆ 32.500 ರೂಪಾಯಿ ನಿಗದಿ ಮಾಡಿದ್ದರಿಂದ ಮನೆಗಳ ನಿರ್ಮಾಣ ವಿಳಂಬವಾಯಿತು ಎಂದರು.ಜೆಡಿಎಸ್‌ನ ಕೆ.ಪಿ.ಬಚ್ಚೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸೋಮಣ್ಣ, ಚಿಕ್ಕಬಳ್ಳಾಪುರ ನಗರ ಸಮೀಪದಲ್ಲೇ 179 ಎಕರೆ ಜಾಗವನ್ನು ಗುರುತಿಸಿದ್ದು, ಅಲ್ಲಿ ಹೊಸದಾಗಿ ಬಡಾವಣೆ ನಿರ್ಮಿಸಿ ಅರ್ಜಿ ಸಲ್ಲಿಸಿರುವ ಎಲ್ಲ 891 ಮಂದಿಗೆ ನಿವೇಶನ ನೀಡಲಾಗುವುದು. ನೋಂದಣಿ ಶುಲ್ಕವಾಗಿ ರೂ.15.81 ಲಕ್ಷ ಸಂಗ್ರಹಿಸಿದ್ದು, ಜಿಲ್ಲಾಧಿಕಾರಿಗಳು ದರ ನಿಗದಿ ಮಾಡಿದ ನಂತರ ಜಮೀನು ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಕಾಂಗ್ರೆಸ್‌ನ ಅಮರೇಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೋಮಣ್ಣ ಅವರು ‘ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮದ ವತಿಯಿಂದ 2000-01ರಿಂದ ಇಲ್ಲಿಯವರೆಗೆ ಒಟ್ಟು 17.35 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ ಎಂದು ವಿವರಿಸಿದರು. 20.36 ಲಕ್ಷ ಮನೆಗಳ ನಿರ್ಮಾಣಕ್ಕೆ ಅಂದಾಜು ಮಾಡಿದ್ದು, ಇದರಲ್ಲಿ ಇನ್ನೂ 2.12 ಲಕ್ಷ ಮನೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನೂ 88,292 ಮನೆಗಳ ನಿರ್ಮಾಣ ಕೆಲಸ ಪ್ರಾರಂಭವಾಗಿಲ್ಲ ಎಂದರು.ಈ ಮನೆಗಳನ್ನು ಆಶ್ರಯ, ಅಂಬೇಡ್ಕರ್, ಇಂದಿರಾ ಆವಾಸ್ ಯೋಜನೆಯಡಿ ನಿರ್ಮಿಸುತ್ತಿದ್ದು, ಆಶ್ರಯ ಯೋಜನೆಯಡಿ ಬಾಕಿ ಇರುವ 20 ಸಾವಿರ ಮನೆಗಳನ್ನು ಈ ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ವಿವರಿಸಿದರು.ಕಾಂಗ್ರೆಸ್‌ನ ಟಿ.ಬಿ.ಜಯಚಂದ್ರ ಮಾತನಾಡಿ, ಶಿಥಿಲಾವಸ್ಥೆಯಲ್ಲಿರುವ ಮನೆಗಳಿಗೆ ಪರ್ಯಾಯವಾಗಿ ಹೊಸ ಮನೆ ನಿರ್ಮಿಸಿಕೊಡುವ ಯೋಜನೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಸೋಮಣ್ಣ ಪ್ರತಿಕ್ರಯಿಸಿ, ಗುಡಿಸಲು ಮುಕ್ತ ಯೋಜನೆಯಡಿ ಶಿಥಿಲಾವಸ್ಥೆಯ ಮನೆಗಳನ್ನು ಹೊಂದಿರುವವರಿಗೂ ಹೊಸ ಮನೆಗಳನ್ನು ನಿರ್ಮಿಸಿಕೊಳ್ಳಲು ಪರಿಹಾರ ನೀಡಲಾಗುವುದು. ಈ ಬಗ್ಗೆ ಸದ್ಯದಲ್ಲೇ ತೀರ್ಮಾನಿಸಲಾಗುವುದು ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.