ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರಿನ ಗುಜರಿ ಅಂಗಡಿಯಲ್ಲಿ ಅಗ್ನಿ ದುರಂತ

Last Updated 26 ಡಿಸೆಂಬರ್ 2010, 10:35 IST
ಅಕ್ಷರ ಗಾತ್ರ

ನಾಲ್ವರು ಸಜೀವ ದಹನ: 7 ಮಂದಿಗೆ ಗಾಯ
ಮೈಸೂರು:
ಏರ್‌ಫ್ರೆಶ್‌ನರ್ ಖಾಲಿ ಬಾಟಲಿಗಳನ್ನು ಜಖಂಗೊಳಿಸಿ ವಿಲೇವಾರಿ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ನಾಲ್ವರು ಸಜೀವ ದಹನಗೊಂಡು, 7 ಮಂದಿಗೆ ಸುಟ್ಟ ಗಾಯಗಳಾಗಿರುವ ಘಟನೆ ನಗರದ ಬಿ.ಟಿ.ಮಿಲ್ ರಸ್ತೆಯಲ್ಲಿರುವ ಎರಡನೇ ಈದ್ಗಾ ಬಳಿಯ ಗುಜರಿ ಅಂಗಡಿಯೊಂದರಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ಬಿ.ಟಿ.ಮಿಲ್ ರಸ್ತೆಯ 2ನೇ ಈದ್ಗಾ ನಿವಾಸಿ ಸಯ್ಯದ್ ಅಬ್ದುಲ್ ವಾಜಿದ್ (50), ಬನ್ನಿಮಂಟಪ ಸುನ್ನಿ ಚೌಕದ ನಿವಾಸಿ ಅಬ್ದುಲ್ ಸತ್ತಾರ್ ಮಗ ಬಾಬು ಅಲಿಯಾಸ್ ಇಕ್ಬಾಲ್ (50), ಶಾಂತಿನಗರ ನಿವಾಸಿ ಆಟೋ ಚಾಲಕ ಸಲೀಂ (24) ಘಟನೆಯಲ್ಲಿ ಸಜೀವವಾಗಿ ದಹನಗೊಂಡಿದ್ದಾರೆ. ಮತ್ತೊಂದು ಶವದ ಗುರುತು ಇನ್ನೂ ಪತ್ತೆಯಾಗಿಲ್ಲ.

ರಾಜೇಂದ್ರನಗರದ ಚಾಂದ್ ಪಾಷಾ (25),  ಗೌಸಿಯಾ ನಗರದ ನಯಾಜ್ (39), ರಾಜೀವ್‌ನಗರದ ಅಸ್ವಾಸ್ ಅವರ ಮಗ ವಸೀಂ (13), ಮಂಡಿ ಮೊಹಲ್ಲಾ ಸುನ್ನಿ ಚೌಕದ ಅಬ್ದುಲ್ ಗಫಾರ್ ಮಗ ತನ್ವೀರ್ (22), ಪುಲಿಕೇಶಿ ರಸ್ತೆಯ ಅಬ್ದುಲ್ ರಹೀಂ ಮಗ ಅಕ್ರಂ ಪಾಷಾ (28), ಸಿ.ವಿ.ರಸ್ತೆ 2ನೇ ಈದ್ಗಾ ನಿವಾಸಿ ಏಜಾಜ್ ಪಾಷಾ ಅವರ ಮಗ ಶಹಾಬುದ್ದೀನ್ (18) ಎಂಬವರಿಗೆ ಗಾಯಗಳಾಗಿದ್ದು, ಅವರನ್ನು ಕೆ.ಆರ್.ಆಸ್ಪತ್ರೆ ಮತ್ತು ಮಿಷನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗುಜರಿ ಅಂಗಡಿ ಮಾಲೀಕ ಜಹೀರ್ ಸಹ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ.

ಡ್ರೀಮ್ ಫೈನ್, ಜಾಸ್ಮಿನ್ ಸೇರಿದಂತೆ ವಿವಿಧ ಕಂಪೆನಿಗಳಿಗೆ ಸೇರಿದ ಏರ್‌ಫ್ರೆಶ್‌ನರ್ ಖಾಲಿ ಬಾಟಲಿಗಳನ್ನು ಗುಜರಿಗೆ ತಂದು ಅವುಗಳನ್ನು ಜಖಂಗೊಳಿಸಿ ವಿಲೇವಾರಿ ಮಾಡಲಾಗುತ್ತಿತ್ತು. ಸುಮಾರು 10ಕ್ಕೂ ಹೆಚ್ಚು ಕಾರ್ಮಿಕರು ಈ ಕೆಲಸದಲ್ಲಿ ನಿರತರಾಗಿದ್ದರು. ಖಾಲಿ ಬಾಟಲಿಗಳಲ್ಲಿ ಅಲ್ಪಸ್ವಲ್ಪ ಗ್ಯಾಸ್ ಉಳಿದಿತ್ತು. ಈ ಸಂದರ್ಭ ಮಧ್ಯಾಹ್ನ 1.15ರ ಸುಮಾರಿನಲ್ಲಿ ಇದ್ದಕಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದೆ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.

ಬೆಂಕಿಗೆ ಸಿಲುಕಿದ ಖಾಲಿ ಬಾಟಲಿಗಳು ಸಿಡಿದಿದ್ದರಿಂದ ಗುಜರಿಯ ಸುತ್ತ ಅವು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಗುಜರಿಯ ಸುತ್ತಲೂ ಜಂಕ್‌ಶೀಟ್‌ಗಳಿಂದ ತಡೆಗೋಡೆ ನಿರ್ಮಿಸಿದ್ದರಿಂದ ಅಕ್ಕಪಕ್ಕ ಇದ್ದ ಮನೆಗಳು ಮತ್ತು ರಸ್ತೆಯಲ್ಲಿ ಓಡಾಡುತ್ತಿದ್ದ ದಾರಿಹೋಕರಿಗೆ ಯಾವುದೇ ತೊಂದರೆ ಆಗಿಲ್ಲ. ಘಟನೆಯಿಂದ ಗುಜರಿ ಅಂಗಡಿ ಪಕ್ಕದಲ್ಲಿದ್ದ ಗೂಡ್ಸ್ ಆಟೋ ಸೇರಿದಂತೆ ಎಲ್ಲ ವಸ್ತುಗಳು ಸುಟ್ಟು ಕರಕಲಾಗಿವೆ.

ಘಟನೆ ನಡೆದು 45 ನಿಮಿಷ ಆದರೂ ಅಗ್ನಿಶಾಮಕ ವಾಹನ ಮತ್ತು ಆಂಬುಲೆನ್ಸ್ ಸ್ಥಳಕ್ಕೆ ಬರಲಿಲ್ಲ ಎಂದು ಸ್ಥಳೀಯ ನಿವಾಸಿಗಳು ಸಿಟ್ಟಿಗೆದ್ದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. ಅತ್ತ ಕ್ರಿಸ್‌ಮಸ್ ಹಬ್ಬದ ಸಂಭ್ರಮದಲ್ಲಿ ಜನತೆ ತೊಡಗಿದ್ದರೆ, ಇತ್ತ ದುರಂತ ನಡೆದು ನಾಲ್ವರು ಸಜೀವ ದಹನಗೊಂಡ ವಿಷಯ ಎಲ್ಲೆಡೆ ಹರಡಿ ಘಟನಾ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದರು.ನಗರ ಪೊಲೀಸ್ ಆಯುಕ್ತ ಸುನಿಲ್ ಅಗರವಾಲ್, ಡಿಸಿಪಿಗಳಾದ ಬಸವರಾಜ ಮಾಲಗತ್ತಿ, ಪಿ.ರಾಜೇಂದ್ರ ಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT