ಬುಧವಾರ, ಜೂನ್ 23, 2021
22 °C

ಮೊದಮೊದಲ ಅನುಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊದಮೊದಲ ಅನುಭವ

ಇದೇ ಮೊದಲ ಬಾರಿಗೆ ಹಿರಿಯ ನಟ ಲೋಕನಾಥ್ ಪೂರ್ಣಪ್ರಮಾಣದ ಖಳನಟರಾಗಿ ಬಣ್ಣ ಹಚ್ಚಿದ್ದಾರೆ. ತಮ್ಮ ಎಂಬತ್ತರ ಹರೆಯದಲ್ಲಿ ಇಮೇಜ್ ಬದಲಾವಣೆ ಮಾಡಿಕೊಂಡಿರುವ ಲೋಕನಾಥ್ ಇದುವರೆಗೂ ವಾತ್ಸಲ್ಯ ತೋರುವ ತಂದೆಯಾಗಿ, ಗಂಭೀರ ವ್ಯಕ್ತಿತ್ವದ ಮಾವನಾಗಿ, ನಗಿಸುವ ಸೋದರಮಾವನಾಗಿ ಕನ್ನಡಿಗರಿಗೆ ಕಂಡವರು. ಅಂಥ ಮಾತೃಮನಸ್ಸಿನ ನಟನಿಂದ ಖಳನ ಪಾತ್ರ ಮಾಡಿಸಬೇಕೆಂದು ಹಠ ತೊಟ್ಟ ನಿರ್ದೇಶಕ ಓಂಪ್ರಕಾಶ್ ರಾವ್. ಅದು `ಭೀಮಾ ತೀರದಲ್ಲಿ..~ ಚಿತ್ರಕ್ಕಾಗಿ.`ಭೀಮಾ ತೀರದಲ್ಲಿ..~ ಚಿತ್ರದಲ್ಲಿ ಲೋಕನಾಥ್ ಅವರಿಗೆ ಗುಡುಗುವ ಖಳನಾಯಕನ ಪಾತ್ರ ದೊರಕಿದೆ. ಅದರ ಬಗ್ಗೆ ವಿವರಿಸುತ್ತಲೇ ಈ ಮೊದಲು `ಕೂಡಿ ಬಾಳೋಣ~ ಚಿತ್ರದಲ್ಲಿ ಖಳನಾಗಿ ನಟಿಸಿದ್ದ ನೆನಪಿಗೆ ಜಾರುವ ಲೋಕನಾಥ್ ಅದು `ಭೀಮಾ ತೀರದಲ್ಲಿ..~ ಚಿತ್ರದ ಖಳನಷ್ಟು ಕ್ರೂರವಾದ ಪಾತ್ರವಲ್ಲ ಎನ್ನುತ್ತಾರೆ.`ಅದರಲ್ಲಿ ಊರ ಗೌಡನಾಗಿ ಜನರಿಗೆ ಹಿಂಸೆ ಕೊಡುವ ಪಾತ್ರದಲ್ಲಿ ನಟಿಸಿದ್ದೆ ಅಷ್ಟೇ. ಫೈಟಿಂಗ್ ಇರಲಿಲ್ಲ. ಕೊನೆಯಲ್ಲಿ ನಾಯಕ ತೂಗುದೀಪ ಶ್ರೀನಿವಾಸ್ ನನ್ನನ್ನು ಅಟ್ಟಿಸಿಕೊಂಡು ಬರುವುದು ಇತ್ತು. ಆದರೆ `ಭೀಮಾ ತೀರದಲ್ಲಿ..~ ಚಿತ್ರದ ಖಳನ ಪಾತ್ರ ತುಂಬಾ ಕ್ರೂರವಾಗಿದೆ. ಇದರಲ್ಲಿಯೂ ಫೈಟಿಂಗ್ ಇಲ್ಲ. ಆದರೆ ಭಯಂಕರವಾಗಿದೆ~ ಎಂದು ನಗುತ್ತಾರೆ.ಇನ್ನು `ಮಿಂಚಿನ ಓಟ~ ಚಿತ್ರದಲ್ಲಿ ಕಾರುಗಳ್ಳನಾಗಿ ನಟಿಸಿರುವುದು ಖಳನ ಪಾತ್ರ ಅಲ್ಲವೇ ಅಲ್ಲ ಎಂಬುದು ಅವರ ಅಭಿಪ್ರಾಯ. `ಮಿಂಚಿನ ಓಟದ ಪಾತ್ರ ಹಾಸ್ಯಮಯವಾದುದು. ವಿಮಾ ಏಜೆಂಟ್ ಆಗಿದ್ದ ನಾನು ಕಾರು ಕಳ್ಳರ ಜೊತೆ ಸೇರಿಕೊಂಡು ಹೊಟ್ಟೆಪಾಡಿಗಾಗಿ ಕಳ್ಳತನ ಮಾಡುತ್ತೇನೆ. ಅದರಲ್ಲಿ ನಾನು ರಾಘವೇಂದ್ರನ ಭಕ್ತ ಕೂಡ~ ಎನ್ನುವ ಅವರಿಗೆ `ಭೀಮಾ ತೀರದಲ್ಲಿ..~ ವಿಶಿಷ್ಟ ಅನುಭವ ನೀಡಿದೆ.ಓಂಪ್ರಕಾಶ್ ರಾವ್ ತಮ್ಮಿಂದ ಇಂಥ ಪಾತ್ರವನ್ನು ಮಾಡಿಸಲೇಬೇಕೆಂದು ಹಠ ತೊಟ್ಟು ಈ ಪಾತ್ರ ಮಾಡಿಸಿದ್ದಾರೆ. ಆದರೆ ಮರ್ಯಾದೆ ತೆಗೆಯುವ ಪಾತ್ರ ಮಾಡಿಸಬೇಡಿ ಎಂಬ ಶರತ್ತನ್ನು ಒಡ್ಡಿ ಈ ಪಾತ್ರವನ್ನು ಒಪ್ಪಿಕೊಂಡಿದ್ದಾಗಿ ಹೇಳುತ್ತಾರೆ. ಜೊತೆಗೆ ಕೆಲವು ಪಾತ್ರಗಳನ್ನು ಮುಲಾಜಿಲ್ಲದೇ ನಿರಾಕರಿಸಿದ ವಿಚಾರವನ್ನು ಬಿಚ್ಚಿಡುತ್ತಾರೆ.`ನನಗೆ ನಾಲ್ಕು ಜನ ಹೆಣ್ಣುಮಕ್ಕಳು. ಅದರಿಂದ ಹೆಣ್ಣುಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ನೋಡುವ ಪಾತ್ರವೊಂದನ್ನು ಮಾತ್ರ ಮಾಡಲಾರೆ. ಅದೊಂದು ಬಿಟ್ಟು ಯಾವುದೇ ಪಾತ್ರವಾದರೂ ಸಿದ್ಧ. ಕಲಾವಿದ ಎಂದ ಮೇಲೆ ಎಂಥ ಪಾತ್ರಕ್ಕೂ ತಯಾರಾಗಿರಬೇಕು ಎಂಬುದು ನಿಜ. ಆದರೆ ನಾನು ಹೆಣ್ಣುಮಕ್ಕಳ ಮಧ್ಯದಲ್ಲಿ ಬೆಳೆದು, ಅವರ ತಂದೆಯಾಗಿ ಅಂಥ ಪಾತ್ರ ಮಾಡಲು ಮಾತ್ರ ನನಗೆ ಸಾಧ್ಯವಿಲ್ಲ. ಎಷ್ಟೋ ಬಾರಿ ಚಿತ್ರೀಕರಣದ ಮಧ್ಯದಲ್ಲಿ ಪಾತ್ರ ಇಷ್ಟವಾಗದೇ ಅಡ್ವಾನ್ಸ್ ವಾಪಸ್ ನೀಡಿದ ಉದಾಹರಣೆಗಳೂ ಇವೆ.

ನನ್ನ ಮಕ್ಕಳನ್ನು ನಾನು ಯಾವತ್ತೂ `ಹೋಗೇ, ಬಾರೇ~ ಎಂದು ಕೂಡ ಕೂಗಿದವನೂ ಅಲ್ಲ. ಅಂಥಾದ್ದರಲ್ಲಿ ತೆರೆಯ ಮೇಲೆ ಅಂಥ ಪಾತ್ರ ಮಾಡಲು ಮನಸ್ಸು ಒಲ್ಲದು~ ಎನ್ನುತ್ತಾರೆ ಲೋಕನಾಥ್. ಇಂಥ ದೊಡ್ಡ ಮಾತನಾಡುವ ದೊಡ್ಡ ಕಲಾವಿದ ಒಡ್ಡಿಕೊಂಡ ಸವಾಲನ್ನು ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ `ಭೀಮಾ ತೀರದಲ್ಲಿ..~ ಚಿತ್ರದಲ್ಲಿ ನೋಡಬಹುದು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.