ಶನಿವಾರ, ಮೇ 15, 2021
22 °C

`ಮೊದಲ ಸೋಲೇ ದೊಡ್ಡ ಎಡವಟ್ಟು'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಕ್ಷಿಣದ `ಚಿರುತ' ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ಹಾಟ್ ಬೆಡಗಿ ನೇಹಾ ಶರ್ಮ, `ಕ್ರೂಕ್' ಚಿತ್ರದ ಸೋಲು ತಮ್ಮ ವೃತ್ತಿಜೀವನಕ್ಕೆ ಮಾರಕವಾಯಿತು ಎಂದುಕೊಂಡಿದ್ದಾರೆ.`ಸತ್ಯ ಹೇಳುತ್ತಿದ್ದೇನೆ, ದಕ್ಷಿಣದ ನನ್ನ ಮೊದಲ ಚಿತ್ರ ಹಿಟ್ ಆಗಿದ್ದೂ ಅಲ್ಲದೆ ನನಗೆ ಸಾಕಷ್ಟು ಹೆಸರು ತಂದುಕೊಟ್ಟಿತು. ಆದರೆ ಬಾಲಿವುಡ್‌ನ ನನ್ನ ಮೊದಲ ಚಿತ್ರ ಈ ರೀತಿ ನೆಲ ಕಚ್ಚುತ್ತದೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಜೀವನದಲ್ಲಿ ಕೇವಲ ಯಶಸ್ಸನ್ನೇ ಕಂಡಿದ್ದ ನನಗೆ ಸೋಲೆಂಬುದೂ ಇರುತ್ತದೆ ಎಂಬುದರ ಕಲ್ಪನೆ ಇರಲಿಲ್ಲ'

- ಇದು ನೇಹಾ ಬೇಸರದ ನುಡಿ.`ಉತ್ತಮವಾದ ಕೆಲಸವನ್ನೇ ಸದಾ ಮಾಡಬೇಕು ಎಂಬುದು ನನ್ನ ಮನಸ್ಸು. ಆದರೆ ನನ್ನ ಮೊದಲ ಸೋಲು ಉತ್ಸಾಹವನ್ನು ತಗ್ಗಿಸಿದೆ. ಅದಕ್ಕಾಗಿಯೇ ನಾನು `ಕ್ಯಾ ಸೂಪರ್ ಕೂಲ್ ಹೈ ಹಮ್' ಚಿತ್ರದಲ್ಲಿ ನಟಿಸಿದೆ. ಅದು ಅಡಲ್ಟ್ ಕಾಮಿಡಿ. ಹಿಂದಿಯಲ್ಲಿ ಅದು ಚೊಚ್ಚಲ ಚಿತ್ರ ಎಂದು ಹೇಳಿಕೊಳ್ಳಲು ಮುಜುಗರವಾಗುತ್ತದೆ. ನನ್ನ ಮಡಿಯ ಮಿತಿ ಮೀರಿದ ಕ್ಷೇತ್ರವದು. ಆದರೆ ವೃತ್ತಿಯೇ ಇದು ಎಂದಾದ ಮೇಲೆ ಮಡಿವಂತಿಕೆ ಸಲ್ಲದು ಎಂದು ನಿರ್ಧರಿಸಿದೆ. ಸಿನಿಮಾ ಕ್ಷೇತ್ರದಲ್ಲಿ ಗಾಡ್‌ಫಾದರ್‌ಗಳು ಇಲ್ಲದಿರುವವರಿಗೆ ಗೆಲುವು ತಂದುಕೊಡುವ ಒಂದು ಚಿತ್ರವಾದರೂ ಸಿಗಬೇಕಾದದ್ದು ಅನಿವಾರ್ಯ. ಬಾಲಿವುಡ್‌ನಲ್ಲಿ ಅಭಿನಯ, ಸಾಮರ್ಥ್ಯಕ್ಕಿಂತ ಮಿಗಿಲಾಗಿ ಜನ ಮೆಚ್ಚುವ ಸಿನಿಮಾದಲ್ಲಿ ನಟಿಸುವುದು ನನ್ನ ಬಯಕೆ' ಎಂಬುದು ಅವರ ಅಭಿಪ್ರಾಯ. ಗೆಲುವು, ಸೋಲನ್ನು ಗಂಭೀರವಾಗಿ ಪರಿಗಣಿಸದ ನೇಹಾ, ಈವರೆಗೂ ನಾಲ್ಕು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.`ಯಮ್ಲಾ ಪಗ್ಲಾ ದೀವಾನಾ 2' ಚಿತ್ರದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಅವರು ಫ್ಯಾಷನ್ ವಿನ್ಯಾಸಕಿಯಾಗಬೇಕೆಂದು ಕನಸು ಕಂಡಿದ್ದರಂತೆ. ಜೀವನ ಅವರನ್ನು ಚಿತ್ರರಂಗಕ್ಕೆ ಕರೆತಂದು ನಿಲ್ಲಿಸಿತು.`ತೆಲುಗು ಚಿತ್ರದಲ್ಲಿ ನಟಿಸಿದಾಗ ನನಗೆ ಸ್ವರ್ಗದಲ್ಲಿ ತೇಲಿದಂಥ ಅನುಭವ. ಆಗ ಸಿನಿಮಾ ರಂಗದ ವಾಸ್ತವದ ದರ್ಶನವಾಗಿರಲಿಲ್ಲ. ಕೇವಲ ಅಭಿನಯದ ಪಯಣವನ್ನು ಆಸ್ವಾದಿಸಿದ್ದೆ. ಈಗ ಅದರ ಕೆಲವು ಮಜಲುಗಳ ಅರಿವಾಗಿದೆ. ವೃತ್ತಿ ಜೀವನದ ಏಳುಬೀಳುಗಳು ಪಾಠ ಕಲಿಸಿವೆ' ಎಂಬುದು ನೇಹಾ ಅನುಭವದ ಮಾತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.