ಗುರುವಾರ , ಏಪ್ರಿಲ್ 22, 2021
27 °C

ಮೊಬೈಲ್ ಅತಿ ಬಳಕೆಯಿಂದ ಯುವಜನತೆಗೆ ತೊಂದರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಮಟಾ:  ಮೊಬೈಲ್ ದೂರವಾಣಿಯ ಅತಿಯಾದ ಬಳಕೆ ನಮ್ಮ ಯುವಜನತೆಯನ್ನು ಹಾಳು ಮಾಡುವ ಮೊದಲು ನಾವು ಎಚ್ಚೆತ್ತುಕೊಳ್ಳಬೇಕಾಗಿದೆ. ಅದು ಯುವಜನ ಮೇಳದಂಥ ಕಾರ್ಯಕ್ರಮದತ್ತ ಅವರನ್ನು ಸೆಳೆಯುವುದರಿಂದ ಸಾಧ್ಯವಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.ಕುಮಟಾ ತಾಲ್ಲೂಕಿನ ಧಾರೇಶ್ವರದಲ್ಲಿ ಭಾನುವಾರ ನಡೆದ ತಾಲ್ಲೂಕು ಮಟ್ಟದ ಯುವಜನ ಮೇಳ ಉದ್ಘಾಟಿಸಿದ ಅವರು, ಅತ್ಯಂತ ಬಡತನದಲ್ಲಿರುವ ಯುವಕ-ಯುವತಿಯರೂ ಇಂದು ಇಡೀ ದಿನ ಕಿವಿಗೆ ಮೊಬೈಲ್ ಇಟ್ಟು ಓಡಾಡುವುದು ಆತಂಕದ ಸಂಗತಿಯಾಗಿದೆ. ಕೇವಲ ಕಲಾ ಪ್ರದರ್ಶನ, ಯುವಜನ ಮೇಳದಲ್ಲಿ ಪಾಲ್ಗೊಳ್ಳುವುದಕ್ಕಷ್ಟೇ ಯುವಕರ ಕ್ರಿಯಾಶೀಲತೆ ಸೀಮಿತವಾಗಿರಬಾರದು. ಅದರಾಚೆಯ ಸಾಧನೆಯತ್ತ ಚಿಂತನೆ ನಡೆಸಬೇಕಾಗಿದೆ ಎಂದರು.ಪ್ರಾಸ್ತಾವಿಕ ಮಾತನಾಡಿದ ಯುವ ಸಂಯುಕ್ತ ಸಂಘ ಅಧ್ಯಕ್ಷ ಸೂರಜ್ ನಾಯ್ಕ ಸೋನಿ, ಹಿಂದೆಲ್ಲ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಕಷ್ಟಪಟ್ಟು ಯುವಜನ ಮೇಳ ನಡೆಸುವಾಗ ಇರುತ್ತಿದ್ದ ಸಂಭ್ರಮ ಇಂದು ಇಲ್ಲವಾಗಿದೆ. ಈಗ ಯುವಜನ ಮೇಳ ಕೇವಲ ಕಾಟಾಚಾರದ ಸರಕಾರಿ ಕಾರ್ಯಕ್ರಮವಾಗಿ ಉಳಿದಿದೆ. ಯುವಕರು ಪಾಲ್ಗೊಳ್ಳುವ ಪ್ರತಿಯೊಂದು ಸರಕಾರಿ ಕಾರ್ಯಕ್ರಮದಲ್ಲೂ ಪ್ರೋತ್ಸಾಹಧನ ನೀಡುವಂತಾದರೆ ಕಳೆದು ಹೋದ ಉತ್ಸಾಹ, ಸಂಭ್ರಮ ಮತ್ತೆ ಮರಳಿ ತರಲು ಸಾಧ್ಯವಿದೆ ಎಂದರು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನೀಲಾಂಬಿಕಾ ನಾಯಕ ಅಧ್ಯಕ್ಷತೆ ವಹಿಸಿದ್ದರು.  ವೇದಿಕೆಯಲ್ಲಿ ಪಂಚಾಯಿತಿ ಅಧ್ಯಕ್ಷ ಎಸ್.ಟಿ. ನಾಯ್ಕ, ಉಪಾಧ್ಯಕ್ಷ ಕೃಷ್ಣ ನಾಯ್ಕ, ತಾ.ಪಂ. ಉಪಾಧ್ಯಕ್ಷ ಈಶ್ವರ ನಾಯ್ಕ,  ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್. ಮೇಟಿ, ಸದಸ್ಯೆ ಇಂದಿರಾ ಮುಕ್ರಿ ಇದ್ದರು. ಧಾರೇಶ್ವರ ಗೆಳೆಯರ ಬಳಗ ಅಧ್ಯಕ್ಷ ಸಚಿನ್ ನಾಯ್ಕ ಸ್ವಾಗತಿಸಿದರು.  ಯುವಜನ ಸೇವಾ ಕ್ರೀಡಾ ಸಹಾಯಕ ಅಧಿಕಾರಿ ರವೀಂದ್ರ ಭಟ್ಟ ಸೂರಿ ನಿರೂಪಿಸಿದರು. ಗೋಪಾಲಕೃಷ್ಣ ಭಟ್ಟ ಪ್ರಾರ್ಥಿಸಿದರು. ನೇಹಾ ಸಂಗಡಿಗರು ಸ್ವಾಗತ ನೃತ್ಯ ಪ್ರದರ್ಶಿಸಿದರು. ಸ್ಥಳೀಯರಾದ ನಾಗೇಶ ನಾಯ್ಕ, ಎಂ.ಎಚ್. ನಾಯ್ಕ, ಯುವ ಸಂಯುಕ್ತ ಸಂಘದ ಪದಧಿಕಾರಿಗಳಾದ ಆರ್.ಕೆ. ಅಂಬಿಗ, ಗಣೇಶ ಅಂಬಿಗ ಮೊದಲಾದವರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.