ಶನಿವಾರ, ಫೆಬ್ರವರಿ 27, 2021
31 °C

ಮೋದಿ ಭಾಷಣದಲ್ಲಿದ್ದ ತಪ್ಪು ಒಪ್ಪುಗಳೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೋದಿ ಭಾಷಣದಲ್ಲಿದ್ದ ತಪ್ಪು ಒಪ್ಪುಗಳೇನು?

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರಕಾರದ ಸಾಧನೆಗಳ ಬಗ್ಗೆ ಮಾತನಾಡಿದ್ದರು.  ಕೇಂದ್ರ ಸರಕಾರದ ಯೋಜನೆಗಳು ಮತ್ತು ಫಲಾನುಭವಿಗಳ ಲೆಕ್ಕಗಳನ್ನೂ ಮೋದಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು. ಆದರೆ ಮೋದಿ ಹೇಳಿದ ಅಂಕಿ ಅಂಶಗಳು ಎಲ್ಲವೂ ಸರಿ ಇದೆಯೆ? ಅಥವಾ ಸುದೀರ್ಘ ಭಾಷಣದಲ್ಲಿ  ಮೋದಿ ತಮ್ಮ ಸಾಧನೆಯನ್ನು ವಿವರಿಸುವಾಗ ಭಾವೋದ್ವೇಗದಿಂದ ಈ ರೀತಿ ಹೇಳಿದರೆ? 

ಅಂದ ಹಾಗೆ ಭಾಷಣದಲ್ಲಿ ಮೋದಿ ಹೇಳಿದ್ದೇನು? ನಿಜ ಸಂಗತಿ ಏನು? ಅಂಕಿ ಅಂಶಗಳಲ್ಲಿರುವ ತಪ್ಪು ಒಪ್ಪುಗಳೇನು? ಎಂಬುದರ ಬಗ್ಗೆ ಬೆಳಕು ಚೆಲ್ಲುವ ಮಾಹಿತಿಗಳು ಇಲ್ಲಿವೆ.ಮೋದಿ ಹೇಳಿದ್ದು:   ಈ ಹಿಂದೆ ಒಂದು ನಿಮಿಷದಲ್ಲಿ ಬರೀ 2000 ರೈಲ್ವೇ ಟಿಕೆಟ್ ಗಳನ್ನು ವಿತರಣೆ ಮಾಡಲಾಗುತ್ತಿತ್ತು. ಈಗ ಪ್ರತೀ ನಿಮಿಷಕ್ಕೆ 15,000 ಟಿಕೆಟ್ ಗಳನ್ನು ವಿತರಣೆ ಮಾಡಲಾಗುತ್ತಿದೆ.

ನಿಜಾಂಶ:  2014- 15 ರಲ್ಲಿ ಪ್ರತಿ ನಿಮಿಷಕ್ಕೆ 15,646 ಟಿಕೆಟ್ ಗಳನ್ನು ವಿತರಿಸಲಾಗುತ್ತಿತ್ತು. ಇದಕ್ಕಿಂತ ಮುನ್ನ 2012- 2013  ರಲ್ಲಿ ಪ್ರತಿ ನಿಮಿಷಕ್ಕೆ 16.021 ಟಿಕೆಟ್ ಗಳನ್ನು ವಿತರಿಸಲಾಗುತ್ತಿತ್ತು

ಮೋದಿ ಹೇಳಿದ್ದು:   ಒಂದು ವರ್ಷದಲ್ಲಿ  ಪವನ ಶಕ್ತಿ ಶೇ. 40 ರಷ್ಟು ಏರಿಕೆಯಾಗಿದೆ
ನಿಜಾಂಶ:  ಜೂನ್  2015ರಲ್ಲಿ  24 ಗಿಗಾ ವ್ಯಾಟ್ ಇದ್ದದ್ದು ಜೂನ್ 2016ಕ್ಕೆ  27 ಗಿಗಾ ವ್ಯಾಟ್ ಆಗಿ ಏರಿಕೆ ಮಾಡಲಾಗಿದೆ. ಅಂದರೆ ಶೇ. 12.5 ದಷ್ಟು ಪವನ ಶಕ್ತಿ ಏರಿಕೆ
ಸಾಕ್ಷ್ಯ :  2016ರಲ್ಲಿ ಅಂದರೆ ಪ್ರಸ್ತುತ 27 ಗಿಗಾ ವ್ಯಾಟ್ ಪವನ ಶಕ್ತಿ ಉತ್ಪಾದಿಸಲಾಗುತ್ತದೆ.  ಪ್ರತೀ ವರ್ಷ ಶೇ. 30 ರಷ್ಟು ಏರಿಕೆ ಮಾಡಲು ಯೋಚನೆ ಮಾಡಲಾಗುತ್ತಿದ್ದು, ಇದು ನೆರವೇರಿದರೆ 2016- 2017ರ ಅವಧಿಗೆ 4,300 ಮೆಗಾ ವ್ಯಾಟ್ ಹೆಚ್ಚಿಗೆ ಪವನ ಶಕ್ತಿಯನ್ನು ಉತ್ಪಾದಿಸಬಹುದು ಎಂದು ಸುಲ್ಜಾನ್ ಗ್ರೂಪ್ ಚೇರ್ ಮೆನ್ ತುಳಸಿ ತಂತಿ ಹೇಳಿದ್ದರು.

ಮೋದಿ ಹೇಳಿದ್ದು:   2011ರ ಜನಗಣತಿ ಪ್ರಕಾರ 18,000 ಗ್ರಾಮಗಳಲ್ಲಿ ವಿದ್ಯುತ್ ಇರಲಿಲ್ಲ. ನಾವು 10,000 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ

ನಿಜಾಂಶ: ಜೂನ್ 30, 2016ರಲ್ಲಿ ಒಟ್ಟು 9, 481 ಗ್ರಾಮಗಳಿಗಷ್ಟೇ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ

ಸಾಕ್ಷ್ಯ:  2016 ಮೇ. 9ರಿಂದ ಮೇ 15 ರ ಅವಧಿಯಲ್ಲಿ  ದೀನ್ ದಯಾಳ್ ಉಪಾಧ್ಯಾಯ ಗ್ರಾಮ್ ಜ್ಯೋತಿ ಯೋಜನೆಯಡಿಯಲ್ಲಿ 112 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
ಈ ಮೂಲಕ ಒಟ್ಟು  7,766 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ - ವಿದ್ಯುತ್  ಸಚಿವಾಲಯ ಹೇಳಿಕೆ, ಸ್ವಾತಂತ್ರ್ಯ ದಿನಾಚರಣೆಯ ಹೊತ್ತಿಗೆ 10,000 ಗ್ರಾಮಗಳಿಗೆ ವಿದ್ಯುತ್ ಕಲ್ಪಿಸುವುದಾಗಿ ಮೋದಿ ಸರಕಾರ ಗುರಿ ಇಟ್ಟಿತ್ತಾದರೂ, ಆ ಗುರಿ ತಲುಪಿರುವ ಬಗ್ಗೆ ಸುದ್ದಿಯಾಗಿಲ್ಲ

ಮೋದಿ ಹೇಳಿದ್ದು:   ಪ್ರತಿ ದಿನ ನಾವು ಗ್ರಾಮೀಣ ಪ್ರದೇಶದಲ್ಲಿ 100 ಕಿಮೀ ರಸ್ತೆ ನಿರ್ಮಿಸುತ್ತಿದ್ದೇವೆ. ಈ ಹಿಂದೆ ಪ್ರತಿ ದಿನ 55-77 ಕಿಮೀ  ರಸ್ತೆ ನಿರ್ಮಿಸಲಾಗುತ್ತಿತ್ತು
ನಿಜಾಂಶ:  ಯುಪಿಎ ನೇತೃತ್ವದ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಪ್ರತಿ ದಿನ  85 ಕಿಮಿ ರಸ್ತೆ ನಿರ್ಮಾಣವಾಗುತ್ತಿತ್ತು.  ಬಿಜೆಪಿ ನೇತೃತ್ವದ ಸರಕಾರ  ಪ್ರತಿ ದಿನ  105 ಕಿಮಿ ರಸ್ತೆಗಳನ್ನು ನಿರ್ಮಿಸುತ್ತಿದೆ.

ಸಾಕ್ಷ್ಯ:   2013-14 ರ ಅವಧಿಗೆ ಹೋಲಿಸಿದರೆ  2014- 2015ರ ಅವಧಿಯಲ್ಲಿ ಪ್ರಧಾನ್ ಮಂತ್ರಿ ಗ್ರಾಮ್ ಸಡಕ್  ಯೋಜನೆಯಡಿಯಲ್ಲಿ ಹೆಚ್ಚಿನ ರಸ್ತೆ ನಿರ್ಮಾಣವಾಗಿದೆ. ಮೋದಿ ಹೇಳಿದ್ದು:   2016ರಲ್ಲಿ ಬೇಳೆ ಕೃಷಿ 1.5 ರಷ್ಟು ಹೆಚ್ಚಳವಾಗಿದೆ.

ನಿಜಾಂಶ: 2016 ಅಗಸ್ಟ್ ತಿಂಗಳ ಅಂಕಿ ಅಂಶ ಪ್ರಕಾರ 13 ಮಿಲಿಯನ್ ಹೆಕ್ಟೇರ್ ನಲ್ಲಿ ಬೇಳೆ ಕೃಷಿ ಬೆಳೆಯಲಾಗುತ್ತಿದೆ. 9.3 ಮಿಲಿಯನ್ ಹೆಕ್ಟೇರ್  ಭೂಮಿಯಲ್ಲಿ ಸಾಮಾನ್ಯವೆಂಬಂತೆ  1.4 ರಷ್ಟು ಹೆಚ್ಚಳವಾಗಿದೆ.

ಮೋದಿ ಹೇಳಿದ್ದು:  ವಿದೇಶಿ ಹೂಡಿಕೆಗೆ  ಪ್ರಶಸ್ತ ಜಾಗ ಭಾರತ

ನಿಜಾಂಶ:  2014 ಮತ್ತು 2015 ರ ವಿದೇಶಿ ನೇರ ಹೂಡಿಕೆ ಮೌಲ್ಯ ಪಟ್ಟಿಯಲ್ಲಿ ಭಾರತ 10 ನೇ ಸ್ಥಾನದಲ್ಲಿದೆ - ವಿಶ್ವ ಹೂಡಿಕೆ ವರದಿ 2016

ಸಾಕ್ಷ್ಯ:   2014 ರಲ್ಲಿ 35 ಬಿಲಿಯನ್ ಡಾಲರ್ ಇದ್ದ ವಿದೇಶಿ ನೇರ ಹೂಡಿಕೆ 2015 ರಲ್ಲಿ 44 ಬಿಲಿಯನ್ ಆಗಿ ಏರಿಕೆಯಾಗಿದೆ. ಆದರೆ ಚೀನಾದ ಎಫ್ ಡಿ ಐ ಭಾರತಕ್ಕಿಂತ ಮೂರು ಪಟ್ಟು ಇದೆ.

 

ಮೋದಿ ಹೇಳಿದ್ದು:   ಎನ್ ಡಿ ಎ ಸರಕಾರದ ಅಧಿಕಾರವಧಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ 3,500 ಕಿಮೀ ರೈಲ್ವೇ ಮಾರ್ಗ ನಿರ್ಮಾಣವಾಗಿದೆ.

ನಿಜಾಂಶ: 2014- 15 ರಲ್ಲಿ 1,983 ಕಿಮೀ  ಮತ್ತು 2015 -16 ರಲ್ಲಿ 1,780  ಕಿಮೀ ರೈಲ್ವೇ ಮಾರ್ಗ ನಿರ್ಮಾಣವಾಗಿದೆ. ಅಂದರೆ ಎರಡು ವರ್ಷಗಳಲ್ಲಿನ 3, 763 ಕಿಮೀ ರೈಲ್ವೇ ಮಾರ್ಗ

 

ಮೋದಿ ಹೇಳಿದ್ದು:   ಮುದ್ರಾ ಯೋಜನೆಯ ಫಲಾನುಭವಿಗಳಾಗಿದ್ದು 35 ಮಿಲಿಯನ್ ಕುಟುಂಬಗಳು ಮತ್ತು ಶೇ. 80 ರಷ್ಟು ಮಹಿಳೆಯರು

ನಿಜಾಂಶ: 2015 - 16ರಲ್ಲಿ  34.8 ಮಿಲಿಯನ್  ಖಾತೆಗಳಿಂದ ಸಾಲ ಪಡೆಯಲಾಗಿದೆ. ಸಾಲ ಪಡೆದವರಲ್ಲಿ ಶೇ. 79 ರಷ್ಟು ಮಹಿಳೆಯರು, ಶೇ. 18 ರಷ್ಟು ಎಸ್ ಸಿ ಮತ್ತು ಶೇ. 5 ರಷ್ಟು ಎಸ್ಟಿ ವಿಭಾಗದವರಾಗಿದ್ದಾರೆ.

ಮೋದಿ ಹೇಳಿದ್ದು:  ಎಲ್ ಪಿಜಿ ಸಂಪರ್ಕಕ್ಕಾಗಾಗಿರುವ ಉಜ್ವಲ ಯೋಜನೆಯಲ್ಲಿ 5 ಮಿಲಿಯನ್ ಸಂಪರ್ಕ ಕಲ್ಪಿಸಲಾಗಿದೆ.

ನಿಜಾಂಶ: 3. 5 ಮಿಲಿಯನ್ ಅರ್ಜಿಗಳು ಜನರಿಂದ ಬಂದಿದ್ದು. ಇದರಲ್ಲಿ 1.7 ಮಿಲಿಯನ್  ಜನರಿಗೆ ಸಂಪರ್ಕ ನೀಡಲಾಗಿದೆ

ಮೋದಿ ಹೇಳಿದ್ದು:  210  ಮಿಲಿಯನ್ ಜನರು ಜನ್ ಧನ್  ಯೋಜನೆಯಡಿಯಲ್ಲಿ ಬ್ಯಾಂಕ್ ಖಾತೆ ತೆರೆದಿದ್ದಾರೆ
ನಿಜಾಂಶ: ಈ ಯೋಜನೆಯಡಿಯಲ್ಲಿ 228 ಮಿಲಿಯನ್ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದ್ದರೂ  ಶೇ. 24 ಖಾತೆಗಳಲ್ಲಿ ದುಡ್ಡೇ ಇಲ್ಲ.

ಮೋದಿ ಹೇಳಿದ್ದು: ಒಂದು ವರ್ಷದಲ್ಲಿ ಶೇ. 116 ರಷ್ಟು  ಸೌರಶಕ್ತಿ ಹೆಚ್ಚಳ

ನಿಜಾಂಶ: 2015 ರಲ್ಲಿ  4 ಗಿಗಾ ವ್ಯಾಟ್ ಇದ್ದದ್ದು  ಜೂನ್ 2016ಕ್ಕೆ 7.8 ಗಿಗಾ ವ್ಯಾಟ್  ಆಗಿ ಏರಿಕೆಯಾಗಿದೆ. ಅಂದರೆ ಶೇ. 95 ರಷ್ಟು ಹೆಚ್ಚಳ

ಮೋದಿ ಹೇಳಿದ್ದು:  ಮೋದಿ 700 ಮಿಲಿಯನ್ ಜನರು ವಿವಿಧ ಯೋಜನೆಗಳೊಂದಿಗೆ ಆಧಾರ್ ಸಂಪರ್ಕ ಕಲ್ಪಿಸಿ ಪ್ರಯೋಜನ ಪಡೆದಿದ್ದಾರೆ.

ನಿಜಾಂಶ: ಮಾರ್ಚ್ 31 , 2016ರಲ್ಲಿ  ವಿವಿಧ ಯೋಜನೆಗಳಿಗೆ ಆಧಾರ್ ಸಂಪರ್ಕ ಕಲ್ಪಿಸಿ ಫಲಾನುಭವಿಗಳಾದವರು 716. 7 ಮಿಲಿಯನ್ ಜನರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.