ಸೋಮವಾರ, ಮಾರ್ಚ್ 1, 2021
24 °C
ಉತ್ತರ ಪ್ರದೇಶ: ಹೊಸ ಸಮೀಕರಣಕ್ಕೆ ಎಸ್‌ಪಿ, ಬಿಎಸ್‌ಪಿ, ಕಾಂಗ್ರೆಸ್‌ ಸಜ್ಜು

ಮೋದಿ ಸವಾಲು: ಕಾರ್ಯತಂತ್ರ ಬದಲು

ಸಂಜಯ್‌ ಪಾಂಡೆ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೋದಿ ಸವಾಲು: ಕಾರ್ಯತಂತ್ರ ಬದಲು

ಲಖನೌ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿರುವುದು ಉತ್ತರ ಪ್ರದೇಶ ಅದರಲ್ಲೂ ವಿಶೇಷವಾಗಿ ರಾಜ್ಯದ ಪೂರ್ವ ಭಾಗದ ಚುನಾವಣಾ ಸಮೀಕರಣವನ್ನೇ ಬದಲಾಯಿಸಿದೆ. ಸಮಾಜವಾದಿ ಪಕ್ಷ (ಎಸ್‌ಪಿ), ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಕಾಂಗ್ರೆಸ್‌ ಸೇರಿದಂತೆ ಪ್ರಮುಖ ಪಕ್ಷಗಳು ತಮ್ಮ ಕಾರ್ಯತಂತ್ರವನ್ನು ಬದಲಾಯಿಸಲು ನಿರ್ಧರಿಸಿವೆ. 

 

ಈ ಪಕ್ಷಗಳು ತಮ್ಮ ಕೆಲವು ಅಭ್ಯರ್ಥಿಗಳನ್ನು ಬದಲಾಯಿಸಲಿವೆ. ಕೆಲವು ಹೊಸ ಮುಖಗಳನ್ನು ಇಲ್ಲಿ ಕಣಕ್ಕಿಳಿಸಲಿವೆ. ಹಾಗೆಯೇ ‘ಮೋದಿ ವಿರೋಧಿ ಮತಗಳು ವಿಭಜನೆಯಾಗದಂತೆ’ ಸಣ್ಣ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಿವೆ ಎಂದು ಈ ಪಕ್ಷಗಳು ಮೂಲಗಳು ಹೇಳಿವೆ.

 

ಉತ್ತರ ಪ್ರದೇಶದ ಪೂರ್ವ ಭಾಗದ ಇನ್ನೊಂದು ಮಹತ್ವದ ಕ್ಷೇತ್ರ ಅಜಂಗಡದಿಂದ ಎಸ್‌ಪಿ ಮುಖಂಡ ಮುಲಾಯಂ ಸಿಂಗ್‌ ಯಾದವ್‌ ಸ್ಪರ್ಧಿಸುವ ಸಾಧ್ಯತೆ ಈಗ ಬಹಳಷ್ಟು ಹೆಚ್ಚಾಗಿದೆ. ‘ಪೂರ್ವ ಭಾಗದಲ್ಲಿ ಮೋದಿ ಅವರಿಗೆ ಸ್ಪರ್ಧೆ ಒಡ್ಡಬಲ್ಲ ಪ್ರಮುಖ ನಾಯಕ ನಮಗೆ ಬೇಕಾಗಿದ್ದಾರೆ’ ಎಂದು ಎಸ್‌ಪಿಯ ಹಿರಿಯ ನಾಯಕರೊಬ್ಬರು ‘ಪ್ರಜಾವಾಣಿ’ಗೆ ಹೇಳಿದ್ದಾರೆ. 

 

ಎಸ್‌ಪಿಗೆ ಹೆಚ್ಚು ನಷ್ಟ: ವಾರಾಣಸಿಯಿಂದ ಮೋದಿ ಸ್ಪರ್ಧಿಸುತ್ತಿರುವುದು ಎಸ್‌ಪಿಯ ಚುನಾವಣಾ ಲೆಕ್ಕಾಚಾರದ ಮೇಲೆ ಪರಿಣಾಮ ಬೀರಬಹುದು ಎಂದು ಎಸ್‌ಪಿ ನಾಯಕರು ಅಭಿಪ್ರಾಯಪ­ಡು­ತ್ತಾರೆ. ‘ರಾಜ್ಯದ ಪೂರ್ವ ಭಾಗದಲ್ಲಿ ಬಿಜೆಪಿ ದುರ್ಬಲ­ವಾಗಿದ್ದರೆ ಎಸ್‌ಪಿ ಪ್ರಬಲವಾಗಿದೆ. ಈಗ ಈ ಭಾಗದಲ್ಲಿ ಬಿಜೆಪಿ ತನ್ನ ಸ್ಥಿತಿಯನ್ನು ಉತ್ತಮ­ಪಡಿಸಿ­ಕೊಳ್ಳುವ ಸಾಧ್ಯತೆ ಇದೆ. ಹಾಗಾದರೆ ಅದರಿಂದ ಎಸ್‌ಪಿಗೆ ನಷ್ಟ’ ಎಂದು ಎಸ್‌ಪಿ ನಾಯಕರೊಬ್ಬರು ಹೇಳಿದ್ದಾರೆ. 

 

ಮೋದಿ ಅವರನ್ನು ತಡೆಯಲು  ಚಿಕ್ಕ ಪಕ್ಷಗ­ಳೊಂದಿಗೆ ಹೊಂದಾಣಿಕೆಯ ಸಾಧ್ಯತೆಯನ್ನು ಪರಿ­ಶೀ­ಲಿಸ­ಲಾಗುವುದು ಎಂದು ನಾಯಕರು ತಿಳಿಸಿದ್ದಾರೆ. ಘೋಸಿ, ಸಲೇಂಪುರ್‌, ವಾರಾಣಸಿ, ಮಿರ್ಜಾಪುರ್‌ ಮತ್ತು ಇತರ ಕೆಲವು ಕ್ಷೇತ್ರಗಳ ಎಸ್‌ಪಿ ಅಭ್ಯರ್ಥಿಗಳ ಬದಲಾವಣೆ ಸಾಧ್ಯತೆಯೂ ಇದೆ. 

 

ಮುಲಾಯಂ ಮತ್ತು ಮೋದಿ ಅವರ ನಡುವೆ ನಿರಂತರವಾಗಿ ವಾಗ್ಯುದ್ಧ ನಡೆದಿದೆ. ಇದು ತಮ್ಮಿಬ್ಬರ ನಡುವೆಯೇ ಸ್ಪರ್ಧೆ ಇದೆ ಎಂಬುದನ್ನು ಜನರಿಗೆ ಮನದಟ್ಟು ಮಾಡುವ ತಂತ್ರ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 

 

ಬಿಎಸ್‌ಪಿಗೆ ಬ್ರಾಹ್ಮಣ ಮತದ ಆತಂಕ: ಬಿಎಸ್‌ಪಿ ಕೂಡ ತನ್ನ ಕಾರ್ಯತಂತ್ರವನ್ನು ಬದಲಾಯಿಸಿದೆ ಎನ್ನಲಾಗಿದೆ. ವಾರಾಣಸಿಗೆ ಮೋದಿ ಬಂದಿರುವುದ­ರಿಂದ ಬಿಎಸ್‌ಪಿಯ ಬ್ರಾಹ್ಮಣ ಮತದಾರರು ಬಿಜೆಪಿಯತ್ತ ವಾಲಬಹುದು ಎಂಬ ಆತಂಕ ಬಿಎಸ್‌ಪಿ­ಯನ್ನು ಕಾಡುತ್ತಿದೆ. ಮಾಯಾವತಿ ನೇತೃತ್ವದ ಬಿಎಸ್‌ಪಿಯ ಚುನಾವಣಾ ಯಶಸ್ಸಿಗೆ ಅದರ ಪರವಾಗಿರುವ ಬ್ರಾಹ್ಮಣ–ದಲಿತ ಸಮೀ­ಕರಣವೇ ಕಾರಣ. ಈ ಬಾರಿಯೂ ಬಿಎಸ್‌ಪಿ 23 ಬ್ರಾಹ್ಮಣ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 

 

ಕಾಂಗ್ರೆಸ್‌ ಹೊಸ ಮುಖ: ಕಾಂಗ್ರೆಸ್‌ ಕೂಡ ರಣ­ತಂತ್ರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಉದ್ದೇಶಿಸಿದೆ. ವಾರಾಣಸಿಯಲ್ಲಿ ಮೋದಿ ಅವರ ವಿರುದ್ಧ ಹೊಸ ಮುಖವೊಂದನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ಚಿಂತಿಸುತ್ತಿದೆ. ಸ್ಥಳೀಯರಾದ ರಾಜೇಶ್‌ ಮಿಶ್ರಾ ಅಥವಾ ಅಜಯ್‌ ರಾಯ್‌ ಅವರ­ಲ್ಲೊ­ಬ್ಬರಿಗೆ ಟಿಕೆಟ್‌ ನೀಡಲು ಕಾಂಗ್ರೆಸ್‌ ಯೋಜಿಸಿತ್ತು. ಈಗ ಅದು ಬದಲಾಗಬಹುದು ಎನ್ನಲಾಗಿದೆ. ಕೇಜ್ರಿವಾಲ್‌ ಸ್ಪರ್ಧೆ ಬೆದರಿಕೆಯಲ್ಲ: ಬಿಜೆಪಿ

ನವದೆಹಲಿ (ಪಿಟಿಐ): ವಾರಾಣಸಿಯಲ್ಲಿ ಆಮ್‌ ಆದ್ಮಿ ಪಕ್ಷದ (ಎಎಪಿ) ಮುಖಂಡ ಅರವಿಂದ ಕೇಜ್ರಿವಾಲ್‌ ಅವರಿಂದ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಯಾವುದೇ ಬೆದರಿಕೆ ಇಲ್ಲ ಎಂದು ಬಿಜೆಪಿ ಹೇಳಿದೆ.

 


ಈ ಮಧ್ಯೆ, ವಾರಾಣಸಿ ಕ್ಷೇತ್ರದಿಂದ ಅರವಿಂದ ಕೇಜ್ರಿವಾಲ್‌ ಅವರನ್ನು ಕಣಕ್ಕಿಳಿಸಲು ಸಿದ್ಧ ಎಂದು ಎಎಪಿ ಹೇಳಿದೆ.


‘ನಾವು ಕೇಜ್ರಿವಾಲ್‌ ಅವರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಇಡೀ ರಾಷ್ಟ್ರದಲ್ಲಿ ಮೋದಿ ಅಲೆ ಇದೆ’ ಎಂದು ಬಿಜೆಪಿಯ ಮಾಧ್ಯಮ ಸಮ­ನ್ವಯಕಾರ ಹರೀಶ್‌ ಖುರಾನಾ ಹೇಳಿದ್ದಾರೆ."

 


‘ಅರಾಜಕತಾವಾದಿ ಎಂಬುದನ್ನು ಕೇಜ್ರಿ­ವಾಲ್‌ ಸಾಬೀತು­ಪಡಿಸಿದ್ದಾರೆ. ದೆಹಲಿ­ಯಲ್ಲಿ 49 ದಿನಗಳ ಅವರ ಆಡಳಿತ ಸಂಪೂರ್ಣ ವಿಫಲ­ವಾಗಿದೆ. ಅವರು ವಿಶ್ವಾಸಾರ್ಹತೆಯನ್ನು ಕಳೆದು­ಕೊಂಡಿದ್ದಾರೆ’ ಎಂದೂ ಅವರು ತಿಳಿಸಿದ್ದಾರೆ.

 


‘ಉತ್ತರ ಪ್ರದೇಶ ಬಿಡಿ, ದೆಹಲಿಯಲ್ಲಿ ಒಂದೇ ಒಂದು ಸ್ಥಾನ ಗೆಲ್ಲಲೂ ಅವರಿಗೆ ಸಾಧ್ಯವಾಗು­ವುದಿಲ್ಲ’ ಎಂದು ಖುರಾನಾ ಹೇಳಿದ್ದಾರೆ.


ಮೋದಿ ವಿರುದ್ಧ ಸ್ಪರ್ಧಿಸಲು ಸಿದ್ಧ­ವಿ­ರುವುದಾಗಿ ಕೇಜ್ರಿವಾಲ್‌ ಅವರು ಭಾನುವಾರ ಬೆಂಗಳೂರಿನಲ್ಲಿ ಹೇಳಿ­ದ್ದರು. ಆದರೆ, ಈ ಬಗ್ಗೆ ಮಾರ್ಚ್‌ 23ರಂದು ವಾರಾಣಸಿಯಲ್ಲಿ ನಿರ್ಧಾರ ಕೈಗೊಳ್ಳುವುದಾಗಿಯೂ ಅವರು ತಿಳಿಸಿದ್ದರು.

 


ಆದರೆ, ಅಂತಿಮ ನಿರ್ಧಾರ ಕೈಗೊಳ್ಳು­ವುದಕ್ಕೂ ಮುನ್ನವೇ ಕೇಜ್ರಿವಾಲ್‌ – ಮೋದಿ ಪೈಪೋಟಿಗೆ ಎಎಪಿ ಸಿದ್ಧವಾಗಿದೆ ಎಂದು ಪಕ್ಷದ ಹಿರಿಯ ಮುಖಂಡ­ರೊಬ್ಬರು ತಿಳಿಸಿದ್ದಾರೆ.

 


‘ದೆಹಲಿ ನಂತರ ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ಪಕ್ಷವು ಪ್ರಾಬಲ್ಯ ಹೊಂದಿದೆ’ ಎಂದು ಅವರು ಹೇಳಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.