ಮಂಗಳವಾರ, ಜೂನ್ 15, 2021
23 °C
ಸಮಾನತೆ ಸಾರಿದ ಚಿಂತಕನ ನೆನಪಿನಲ್ಲಿ ಉಪನ್ಯಾಸ

ಮೌಢ್ಯ ಬಯಲು ಮಾಡಿದ ನಾರಾಯಣ ಗುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ: ಮೌಢ್ಯಗಳ ಆಚರಣೆಯಿಂದ ತಳ ಸಮುದಾಯದ ಬಡ ಕುಟುಂಬಗಳು ನಾಶವಾಗುತ್ತಿದ್ದಾಗ ಮೌಢ್ಯಗಳ ಬಣ್ಣ ಬಯಲು ಮಾಡಿ ಅದರ ವಿರುದ್ಧ ಧ್ವನಿ ಎತ್ತಿದ ವಿಶಿಷ್ಟ ವ್ಯಕ್ತಿತ್ವ ನಾರಾಯಣ ಗುರುಗಳದ್ದು ಎಂದು ಮುಂಬೈನ ಬರಹಗಾರ ಬಾಬು ಶಿವಪೂಜಾರಿ ಹೇಳಿದರು.ಸಂಜಯ್‌ ಮೆಮೋರಿಯಲ್‌ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಪರಸ್ಪರ ಸಾಹಿತ್ಯ ವೇದಿಕೆ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಹಾಮಾನವತಾವಾದಿ ನಾರಾಯಣ ಗುರುಗಳ ಕುರಿತು ಅವರು ಉಪನ್ಯಾಸ ನೀಡಿದರು.ತಳ ಸಮುದಾಯ ಸುಶಿಕ್ಷಿತರಾಗುವವರೆಗೂ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ ನಾರಾಯಣ ಗುರುಗಳು ಈ ಕಾರಣಕ್ಕೆ ದೇವಾಲಯಗಳ ಜತೆಗೆ ಶಾಲೆ ಗಳನ್ನು ಸ್ಥಾಪಿಸಲು ಮುಂದಾಗಿದ್ದರು ಎನ್ನುವುದನ್ನು ನೆನಪಿಸಿದರು.ನಾರಾಯಣ ಗುರುಗಳನ್ನು ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಮುಂದಾದ ತಪಸ್ವಿ ಎನ್ನಬಹುದೇ ಹೊರತು ಅವರೊಬ್ಬ ದೈವಿ ಸಾಕ್ಷಾತ್ಕಾರಕ್ಕಾಗಿ ತಪಸ್ಸು ಮಾಡಿದ ವ್ಯಕ್ತಿಯಲ್ಲ. ಸಹಪಂಕ್ತಿ ಭೋಜನ, ಅಂತರ್ಜಾತಿ ವಿವಾಹ, ಬಾಲ್ಯವಿವಾಹ ನಿಷೇಧ ಕಾರ್ಯಕ್ರಮಗಳ ಮೂಲಕ ಅಸಮಾನತೆ ಹಾಗೂ ಶೋಷಣೆ ತುಂಬಿ ತುಳುಕುತ್ತಿದ್ದ ಸಮಾಜದಲ್ಲಿ ಅವರು ಸಂಚಲನ ಮೂಡಿಸಿದರು ಎಂದರು.ಸಮಾಜದಲ್ಲಿ ಅಂತರ್ಗತವಾಗಿದ್ದ ನೈತಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದ ಶ್ರೇಯಸ್ಸು ನಾರಾಯಣ ಗುರುಗಳಿಗೆ ಸಲ್ಲುತ್ತದೆ. ಅಸಮಾನತೆ, ಅಸ್ಪೃಶ್ಯತೆಯ ಬಗ್ಗೆ ಸಮಾಜದ ಮೇಲ್ವರ್ಗದ ಜನರಲ್ಲಿ ನಾರಾಯಣ ಗುರುಗಳಿಂದಾಗಿ ಪಾಪ ಪ್ರಜ್ಞೆ ಮೂಡುವಂತಾಯಿತು ಎಂದು ವಿಶ್ಲೇಷಿಸಿದರು.ಕಾರ್ಯಕ್ರಮ  ಉದ್ಘಾಟಿಸಿದ ಜನಪದ ವಿದ್ವಾಂಸ ವಿ.ಗ.ನಾಯಕ್‌ ಮಾತನಾಡಿ, ಪ್ರತಿಯೊಬ್ಬರೂ ಯಾವ ರೀತಿ ಜಾತಿಯ ಗಡಿಗಳಿಂದ ಕಳಚಿಕೊಳ್ಳುತ್ತಾರೆ ಎನ್ನುವುದು ಬಹಳ ಮುಖ್ಯ. ನಾವು ನಿತ್ಯ ಒಡನಾಡುವ ವ್ಯಕ್ತಿಗಳು ಯಾವ ವರ್ಗಕ್ಕೆ ಸೇರಿದವರು ಎನ್ನುವುದನ್ನು ಪರಿಶೀಲಿಸಿದರೆ ನಾವು ಎಷ್ಟರಮಟ್ಟಿಗೆ ಜಾತ್ಯತೀತರು ಎಂಬ ಅಂಶ ಸ್ಪಷ್ಟವಾಗುತ್ತದೆ. ಇಂತಹ ಚಿಂತನೆಗಳನ್ನು ಹುಟ್ಟುಹಾಕಿದವರು ನಾರಾಯಣ ಗುರುಗಳು ಎಂದರು.ಮಾನವತಾವಾದ ಎನ್ನುವುದು ಕೇವಲ ಮಾತಿಗೆ ಸೀಮಿತವಾಗದೆ ಬದುಕಿನಲ್ಲಿ ಅದನ್ನು ಅರಗಿಸಿಕೊಳ್ಳುವ ಜಾಯಮಾನ ನಮ್ಮದಾಗಬೇಕು ಎಂದು ನಾರಾಯಣ ಗುರುಗಳು ಪ್ರತಿಪಾದಿಸಿದ್ದರು. ಕುವೆಂಪು ಸಾಹಿತ್ಯದಲ್ಲಿನ ವೈಚಾರಿಕತೆಯ ಹಿಂದೆ ನಾರಾಯಣ ಗುರುಗಳ ಚಿಂತನೆ ಪ್ರಭಾವವಿದೆ ಎಂದು ಅಭಿಪ್ರಾಯಪಟ್ಟರು.ಇದೇ ಸಂದರ್ಭದಲ್ಲಿ ಸಂಜಯ್‌ ಮೆಮೋರಿಯಲ್ ಪಾಲಿಟೆಕ್ನಿಕ್‌ ಕಾಲೇಜಿನ ರಾಜ್ಯ ಪ್ರಶಸ್ತಿ ಪುರಸ್ಕೃತ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಪ್ರಕಾಶ್‌.ಎಚ್. ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ರಾಜಶೇಖರ್‌.ಸಿ.ಎ. ಅಧ್ಯಕ್ಷತೆ ವಹಿಸಿದ್ದರು. ಪರಸ್ಪರ ಸಾಹಿತ್ಯ ವೇದಿಕೆಯ ಅಧ್ಯಕ್ಷ ಡಾ.ಸರ್ಫ್ರಾಜ್‌ ಚಂದ್ರಗುತ್ತಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.