ಬುಧವಾರ, ಮೇ 18, 2022
24 °C

ಮೌನವಾದ ಶಾಸನ

ಎನ್.ಡಿ.ಹೆಗಡೆ ಆನಂದಪುರಂ,ಸುರೇಶ ಹಡಪದ ಬಳಗಾನೂರು Updated:

ಅಕ್ಷರ ಗಾತ್ರ : | |

8-9ನೇ ಶತಮಾನದಲ್ಲಿ ಸಾಮಂತ ರಾಜರೊಬ್ಬರು ಊರಿನ ಅಭಿವೃದ್ಧಿಗಾಗಿ ಅಗ್ರಹಾರ ನಿರ್ಮಿಸಿ ಒಂದು ಸಾವಿರ ಗೋವುಗಳನ್ನು ದಾನ ಮಾಡಿದ ಮಾಹಿತಿಯುಳ್ಳ ಶಿಲಾಶಾಸನವೊಂದು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರದ ಬಳಿ ಕಾಯಕಲ್ಪಕ್ಕೆ ಕಾದು ಕುಳಿತಿದೆ.ಆನಂದಪುರದಿಂದ ಶಿಕಾರಿಪುರ ತಾಲ್ಲೂಕು ಕೇಂದ್ರ ಸಂಪರ್ಕಿಸುವ ಹೆದ್ದಾರಿಯ ಸನಿಹದಲ್ಲೇ ಮಲಂದೂರು ಗ್ರಾಮದ ಗಡಿಯಲ್ಲಿದೆ ಈ ಶಾಸನ. ಈ ಶಾಸನವು ಸುಮಾರು 3 ಅಡಿ ಎತ್ತರವಿದ್ದು, ಮೂರು ಅಂತಸ್ತುಗಳ ಚಿತ್ರವಿದೆ. ಗೋವುಗಳನ್ನು ದಾನ ನೀಡುವ ಚಿತ್ರ, ಅರಸನೊಬ್ಬನ ಹೊಗಳಿಕೆಯ ಚಿತ್ರ ಮತ್ತು ಮೇಲ್ಭಾಗದಲ್ಲಿ ಸೂರ್ಯ, ಚಂದ್ರ ಮತ್ತು ಶಿವನ ಚಿತ್ರವಿದೆ.ಹಲವು  ಶತಮಾನಗಳಿಂದ ಮಳೆ, ಗಾಳಿ, ಬಿಸಿಲಿನ ತಾಪಕ್ಕೆ ಗುರಿಯಾಗಿ ಶಾಸನ ಅವಸಾನದ ಹಂತ ತಲುಪಿದೆ. ಇದರ ಮೇಲಿರುವ ಲಿಪಿಗಳು ಮಸುಕಾಗಿವೆ. ಸಮೀಪದಲ್ಲಿಯೇ ಜೀರ್ಣಾವಸ್ಥೆ ತಲುಪಿರುವ ಶಿವನ ಗುಡಿಯನ್ನು ಗ್ರಾಮಸ್ಥರು ಜೀರ್ಣೋದ್ಧಾರಗೊಳಿಸಿದ ಸಂದರ್ಭದಲ್ಲಿ ಇದು ಗೋಚರಿಸಿದೆ.ಈ ಶಾಸನದ ಆಳವಾದ ಅಧ್ಯಯನದಿಂದ ಹಲವು ಐತಿಹಾಸಿಕ ಅಂಶಗಳು ದೊರಕಲಿದೆ. ಈ ಸ್ಥಳದ ಮಣ್ಣಿನಲ್ಲಿ ಹಲವು ಅವಶೇಷಗಳು ಹೂತು ಹೋಗಿರುವ ಶಂಕೆ ಇದ್ದು, ಉತ್ಖನನ ನಡೆಯಬೇಕಿದೆ.ಹಾಳೂರಾದ ಬಳಗಾನೂರು

ಅಳಿವಿನ ಅಂಚಿನಲ್ಲಿರುವ ಸ್ಮಾರಕಗಳ ಪಟ್ಟಿಗೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಬಳಗಾನೂರು ಕೂಡ ಒಂದು. ಇದು ಚಾಲುಕ್ಯ ಮನೆತನದ ರಾಯಮುರಾರಿ ಸೋಮದೇವನ ಪಾದ ಪದ್ಮೋಪಜೀವಿ, ತ್ರಿಭುವನ ಮಲ್ಲದೇವರ ಆಳ್ವಿಕೆಗೆ ಒಳಪಟ್ಟ ಪ್ರದೇಶ. ಅದರ ಕುರುಹುಗಳೆಂಬಂತೆ ಅಂದಿನ ಶಿಲಾಶಾಸನಗಳು, ಮಂದಿರಗಳು ಮೂಕ ಸಾಕ್ಷಿಗಳಾಗಿ ನಿಂತಿವೆ.ಅಂದು ದಾನ, ಧರ್ಮ, ಪುರಾಣ ಪುಣ್ಯ ಕಥೆಗಳಿಂದ ಕಂಗೊಳಿಸುತ್ತಿದ್ದ ಬಳಗಾನೂರು ಈಗ ಉಳುಮೆ ಮಾಡದ ಹೊಲದಂತೆ ಕಾಣುತ್ತಿದೆ. ಈ ಮಂದಿರಗಳ ಕೆತ್ತನೆ ಕುಸುರಿ ಕೆಲಸದಿಂದ ಕೂಡಿದೆ. ಬಳಪದ ಕಲ್ಲಿನಿಂದ ನಿರ್ಮಾಣವಾದ ಬೃಹದಾಕಾರದ ಸ್ತಂಭಗಳು ನಾದ ಹೊರಡಿಸುತ್ತಿವೆ. ಮಂದಿರದ ಮಧ್ಯದಲ್ಲಿನ ನಾಟ್ಯಮಂಟಪ ಗತವೈಭವ ನೆನಪಿಸುತ್ತದೆ. ದುರದೃಷ್ಟವಶಾತ್ ಮಂದಿರದ ಸುತ್ತ ದನ ಕರುಗಳನ್ನು ಕಟ್ಟುವುದು, ಬೆರಣಿ ತಟ್ಟುವುದು ಸುಂದರ ಕೆತ್ತನೆಗೆ ಸುಣ್ಣ ಹಚ್ಚುವುದು ಮುಂತಾದ ಕಾರ್ಯಗಳಿಂದ ಮಂದಿರ ತಿಪ್ಪೆಯಲ್ಲಿಟ್ಟ ವಜ್ರದಂತಾಗಿದೆ.ರಾತ್ರಿಯೇ ಅರಳಿ ಬಾಡಿಹೋಗುವಂತಹ ಬ್ರಹ್ಮಕಮಲದಂತೆ ಬಳಗಾನೂರು ಬೆಳಕಿಗೇ ಬಂದಿಲ್ಲ. ಗ್ರಾಮಸ್ಥರು ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಾಗಿದ್ದರೂ ಪುರಾತತ್ವ ಇಲಾಖೆ ಮೌನ ತಾಳಿದೆ. ಅಂದು ಕೀರ್ತಿಯ ಪರಾಕಾಷ್ಠೆ ತಲುಪಿದ್ದ ಬಳಗಾನೂರು ಇಂದು ಹಾಳೂರಿನಂತೆ ಬಿಕೋ ಎನ್ನುತ್ತಿದೆ.ಇಲ್ಲಿಗೆ ಕೇವಲ 15 ಕಿ.ಮೀ. ಅಂತರದಲ್ಲಿರುವ ಮಸ್ಕಿ, ಅಶೋಕನ ಶಿಲಾಶಾಸನ ದೊರೆತಿರುವುದರಿಂದ ದೇಶದಾದ್ಯಂತ ಹೆಸರುವಾಸಿಯಾಗಿದೆ. ಅದೊಂದು ಪ್ರವಾಸಿ ತಾಣವಾಗಿ ರೂಪ ತಳೆದಿದೆ. ಆದರೆ ಬಳಗಾನೂರು ಎಲ್ಲಾ ಇದ್ದು ಏನೂ ಇಲ್ಲದಂತಾಗಿದೆ. ಈಗಲಾದರೂ ಸರ್ಕಾರ ಇದನ್ನು ಉಳಿಸಲು ಮುಂದೆ ಬರುವುದೆ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.