ಮ್ಯಾಗಿ ವಾಪಸ್ ಪಡೆದ ನೆಸ್ಲೆ

ನವದೆಹಲಿ (ಪಿಟಿಐ): ನೆಸ್ಲೆ ಇಂಡಿಯಾ ಸಂಸ್ಥೆಯು ತನ್ನ ಉತ್ಪನ್ನ ಮ್ಯಾಗಿಯನ್ನು ಮಾರುಕಟ್ಟೆಯಿಂದ ವಾಪಸ್ ಪಡೆಯಲು ಗುರುವಾರ ತಡರಾತ್ರಿ ನಿರ್ಧರಿಸಿದೆ.
‘ಎರಡು ನಿಮಿಷ’ದ ಮ್ಯಾಗಿ ನೂಡಲ್ಸ್ಗಳಲ್ಲಿ ಆರೋಗ್ಯಕ್ಕೆ ಹಾನಿಕರ ಅಂಶಗಳಿವೆ ಎಂಬ ಕಾರಣಕ್ಕೆ ಹಲವು ರಾಜ್ಯಗಳು ಉತ್ಪನ್ನವನ್ನು ನಿಷೇಧಿಸಲು ನಿರ್ಧರಿಸಿದ ಬೆನ್ನಿಗೇ ನೆಸ್ಲೆ ಇಂಡಿಯಾ ಸಂಸ್ಥೆ ಈ ನಿರ್ಧಾರ ಕೈಗೊಂಡಿದೆ.
ಈ ಉತ್ಪನ್ನ ‘ಸಂಪೂರ್ಣ ಆರೋಗ್ಯಕರ’ ಎಂದು ಸಂಸ್ಥೆ ತನ್ನ ಹೇಳಿಕೆಯಲ್ಲಿ ಒತ್ತಿ ಹೇಳಿದೆ. ‘ಈ ಉತ್ಪನ್ನದ ಬಗ್ಗೆ ಇತ್ತೀಚೆಗೆ ಉಂಟಾಗಿರುವ ಆತಂಕ ಆಧಾರರಹಿತ. ಇದು ಗ್ರಾಹಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಹಾಗಾಗಿ ಮಾರುಕಟ್ಟೆಯಿಂದ ಉತ್ಪನ್ನ ವಾಪಸ್ ಪಡೆಯಲು ನಿರ್ಧರಿಸಲಾಗಿದೆ’ ಎಂದು ಹೇಳಿಕೆಯಲ್ಲಿ ಸಂಸ್ಥೆಯು ವಿವರಿಸಿದೆ.
ಪ್ರಸ್ತುತ ಗೊಂದಲ ಪರಿಹಾರವಾದ ಕೂಡಲೇ ಉತ್ಪನ್ನವನ್ನು ಮತ್ತೆ ಮಾರು ಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಸಂಸ್ಥೆಯು ಹೇಳಿದೆ.
ಮತ್ತೆ ನಾಲ್ಕು ರಾಜ್ಯಗಳಲ್ಲಿ ನಿಷೇಧ: ಕಾಶ್ಮೀರ, ಗುಜರಾತ್, ಉತ್ತರಾಖಂಡ ಹಾಗೂ ತಮಿಳುನಾಡಿನಲ್ಲಿಯೂ ಮ್ಯಾಗಿ ಮಾರಾಟಕ್ಕೆ ನಿಷೇಧ ಹೇರಲಾಗಿದೆ.
ತಮಿಳುನಾಡು, ಉತ್ತರಾಖಂಡ ಸರ್ಕಾರಗಳು ಮೂರು ತಿಂಗಳವರೆಗೆ ಹಾಗೂ ಕಾಶ್ಮೀರ, ಗುಜರಾತ್ ಒಂದು ತಿಂಗಳವರೆಗೆ ಮ್ಯಾಗಿ ಮೇಲೆ ನಿಷೇಧ ಹೇರಿವೆ.
ನಂಬಲರ್ಹ ಪರೀಕ್ಷೆ
ದೆಹಲಿ ಹಾಗೂ ಕೇರಳ ರಾಜ್ಯಗಳು ನಡೆಸಿದ ಮ್ಯಾಗಿ ಮಾದರಿ ಪರೀಕ್ಷೆಗಳು ಸಂಪೂರ್ಣವಾಗಿ ನಂಬಲರ್ಹವಾಗಿವೆ. ಆದ ಕಾರಣ, ನೆಸ್ಲೆ ಇಂಡಿಯಾ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಇತರ ರಾಜ್ಯಗಳ ವರದಿಗಳಿಗೆ ಕಾಯುವ ಅಗತ್ಯವಿಲ್ಲ ಎಂದು ಕೇಂದ್ರ ಆಹಾರ ಸುರಕ್ಷತೆ ಹಾಗೂ ಮಾನದಂಡ ಪ್ರಾಧಿಕಾರ (ಎಫ್ಎಸ್ಎಸ್ಎಐ) ಹೇಳಿದೆ.
ಈ ನಡುವೆ ಪ್ರಾಧಿಕಾರವು ಗೋವಾ, ಮಧ್ಯಪ್ರದೇಶ ಹಾಗೂ ಪಂಜಾಬ್್ ರಾಜ್ಯಗಳಿಗೆ ಮತ್ತೊಮ್ಮೆ ಪರೀಕ್ಷೆ ನಡೆಸುವಂತೆ ಸೂಚಿಸಿದೆ.
****
ಮ್ಯಾಗಿ ಮಾದರಿಗಳಲ್ಲಿ ವಿಷಕಾರಕ ಅಂಶಗಳು ಇರುವುದು ದೃಢಪಟ್ಟರೆ ನೆಸ್ಲೆ ಕಂಪೆನಿ ಹಾಗೂ ಪ್ರಚಾರ ರಾಯಭಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು
–ರಾಮ್ವಿಲಾಸ್ ಪಾಸ್ವಾನ್, ಕೇಂದ್ರ ಆಹಾರ ಸಚಿವ
*ಘಟಕದಲ್ಲೇ ಉಳಿಯುತ್ತಿವೆ ಮ್ಯಾಗಿ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.