ಗುರುವಾರ , ಮೇ 28, 2020
27 °C

ಯಕ್ಷಗಾನ ಕಲಾವಿದರಿಗೆ ಕ್ಷೇಮನಿಧಿಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಕ್ಷಗಾನ ಕಲಾವಿದರಿಗೆ ಕ್ಷೇಮನಿಧಿಗೆ ಮನವಿ

ಬೆಂಗಳೂರು: ‘ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ನೌಕರರಿಗೆ ಭವಿಷ್ಯ ನಿಧಿ ಸೌಲಭ್ಯ ನೀಡುವಂತೆ ಯಕ್ಷಗಾನ ಕಲಾವಿದರಿಗೆ ಕ್ಷೇಮನಿಧಿ ನೀಡಲು ಸರ್ಕಾರ ಮುಂದಾಗಬೇಕು’ ಎಂದು ಉದ್ಯಮಿ ದಯಾನಂದ ಪೈ ಮನವಿ ಮಾಡಿದರು.ಕರ್ನಾಟಕ ಕಲಾದರ್ಶಿನಿ ಸಂಸ್ಥೆ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ‘ಯಕ್ಷ ಸಂಭ್ರಮ- 2011’ ಹಾಗೂ ಡಾ. ಶಿವರಾಮಕಾರಂತ ಪ್ರಶಸ್ತಿ ಮತ್ತು ಎಚ್.ಎಲ್.ಭಟ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ಭಾಗವಹಿಸಿ ಅವರು ಮಾತನಾಡಿದರು.‘ಮಂಗಳೂರು ವಿಶ್ವವಿದ್ಯಾಲಯದ ಹೆಸರಿನಲ್ಲಿ ಒಂದುಕೋಟಿ ರೂಪಾಯಿ ಮೂಲಧನವನ್ನು ಠೇವಣಿ ಇಡಲು ನಿರ್ಧರಿಸಿದ್ದು ಇದರಿಂದ ಬರುವ ವಾರ್ಷಿಕ ಬಡ್ಡಿಯನ್ನು ಯಕ್ಷಗಾನ ಡಿಪ್ಲೊಮಾ ಹಾಗೂ ಪದವಿ ನೀಡಲು ಕೋರಲಾಗಿದೆ’ ಎಂದು ತಿಳಿಸಿದರು.‘ಬಹುತೇಕ ವಿನಾಶದ ಅಂಚಿಗೆ ತಲುಪಿದ್ದ ಯಕ್ಷಗಾನ ಅನೇಕರ ಒತ್ತಾಸೆಯಿಂದಾಗಿ ಕಳೆದ ಕೆಲವರ್ಷಗಳಿಂದ ಚೇತರಿಕೆಯ ಹಾದಿಯಲ್ಲಿದೆ. ಇದೊಂದು ಉತ್ತಮ ಬೆಳವಣಿಗೆಯಾಗಿದ್ದು ಸರ್ಕಾರದ ಪ್ರೋತ್ಸಾಹ ಅಗತ್ಯವಿದೆ’ ಎಂದರು.‘ಯಶಸ್ಸು ಎನ್ನುವುದು ಕೇವಲ ಗುರಿಯಾಗದೇ ನಿರಂತರಯಾನವಾಗಬೇಕು. ಈ ನಿಟ್ಟಿನಲ್ಲಿ ಕಲಾವಿದರು ನಿರಂತರ ಸಾಧನೆಯಲ್ಲಿ ತೊಡಗಬೇಕು’ ಎಂದು ಅವರು ಕಿವಿಮಾತು ಹೇಳಿದರು.ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಕುಂಬ್ಳೆ ಸುಂದರರಾವ್ ಮಾತನಾಡಿ ‘ಯಕ್ಷಗಾನ ಕಲಾವಿದರಿಗೆ ಕಳೆದ ಮೂರು ವರ್ಷಗಳಿಂದ ರೂ ಒಂದು ಸಾವಿರ ಮಾಸಾಶನ ದೊರೆತಿಲ್ಲ. ಇದಕ್ಕಾಗಿ ಸರ್ಕಾರವನ್ನು ಅಕಾಡೆಮಿ ಒತ್ತಾಯಿಸಿದೆ’ ಎಂದು ಹೇಳಿದರು.‘ಪ್ರಸ್ತುತ ಸಂದರ್ಭದಲ್ಲಿ ಕೇವಲ ಒಂದು ಸಾವಿರ ರೂಪಾಯಿ ಮಾಸಾಶನದಿಂದ ಕಲಾವಿದರ ಬದುಕಿಗೆ ಯಾವುದೇ ಉಪಯೊಗವಾಗುತ್ತಿಲ್ಲ. ಮಾಸಾಶನವನ್ನು ಕನಿಷ್ಠ ಮೂರುವರೆ ಸಾವಿರ ರೂಪಾಯಿಗೆ ಏರಿಕೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಅವರು ತಿಳಿಸಿದರು.‘ಯಕ್ಷಗಾನ ಕಲೆಗೆ ಮಕ್ಕಳು ಬಹುದೊಡ್ಡ ಆಸ್ತಿಯಾಗಿದ್ದಾರೆ. ಚಿಕ್ಕಂದಿನಲ್ಲೇ ಮಕ್ಕಳು ಯಕ್ಷಗಾನ ಆಸಕ್ತಿ ಬೆಳೆಸಿಕೊಳ್ಳುವುದರಿಂದ ಕನಿಷ್ಠ ಯಕ್ಷಗಾನದ ಬಗ್ಗೆ ಅಭಿರುಚಿ ಬೆಳೆದು ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತದೆ’ ಎಂದು ಹೇಳಿದರು.ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸಂಗೀತ ಮತ್ತು ನಾಟಕ ವಿಭಾಗದ ನಿವೃತ್ತ ಉಪ ನಿರ್ದೇಶಕ ಎಚ್.ವಿ. ಕೃಷ್ಣಮೂರ್ತಿ ಮಾತನಾಡಿ ‘ನಶಿಸಿ ಹೋಗುತ್ತಿರುವ ಪ್ರದರ್ಶನ ಕಲೆಗಳನ್ನು ಪೋಷಿಸಲು ಪ್ರೇಕ್ಷಕ ವರ್ಗದ ಆಸಕ್ತಿ ಅತಿ ಮುಖ್ಯವಾಗಿದೆ. ಕಲೆಗೆ ಉತ್ತಮ ವೇದಿಕೆ ದೊರೆತರೆ ಅದು ತಾನೇ ತಾನಾಗಿ ಬೆಳೆಯುತ್ತದೆ’ ಎಂದು ಹೇಳಿದರು. ತೆಂಕುತಿಟ್ಟು ಹಾಗೂ ಬಡಗುತಿಟ್ಟಿನ ಕಲಾವಿದರಾದ ಪುತ್ತೂರು ಶ್ರೀಧರ ಭಂಡಾರಿ ಮತ್ತು ಶ್ರೀಪಾದ ಹೆಗಡೆ ಅವರಿಗೆ ಈ ಸಂದರ್ಭದಲ್ಲಿ ಡಾ. ಶಿವರಾಮಕಾರಂತ ಪ್ರಶಸ್ತಿ ಪ್ರದಾನ ಮಾಡಲಾಯಿತು. ಯಕ್ಷಗಾನ ವೇಷಭೂಷಣ ತಯಾರಕ ಬಾಬುರಾವ್ ಅವರಿಗೆ ಎಚ್.ಎಲ್.ಭಟ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಹೋಟೆಲ್ ಉದ್ಯಮಿ ಕೃಷ್ಣಮೂರ್ತಿ ರಾವ್, ಕೆನರಾ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಎಲ್.ಜಗದೀಶ್ ಪೈ, ಮೈತ್ರಿ ಸಮೂಹದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್, ದಕ್ಷಿಣ ಕನ್ನಡಿಗರ ಸಂಘದ ಅಧ್ಯಕ್ಷ ಯು.ಬಿ.ವೆಂಕಟೇಶ್, ಅಕಾಡೆಮಿ ರಿಜಿಸ್ಟ್ರಾರ್ ಪದ್ಮಜಾ ಕುಮಾರಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಇದಕ್ಕೂ ಮುನ್ನ ಕರ್ನಾಟಕ ಕಲಾದರ್ಶಿನಿ ಬಾಲ ಕಲಾವಿದರಿಂದ ‘ಹೂವಿನ ಕೋಲು ಪ್ರದರ್ಶನ’ ಮತ್ತು ಬಡಗುತಿಟ್ಟು ಶೈಲಿಯ ‘ಮೈಂದ ದಿವಿಜ ಕಾಳಗ’, ತೆಂಕು ತಿಟ್ಟಿನ ಕಲಾವಿದರಿಂದ ‘ವೀರ ಅಭಿಮನ್ಯು’ ಹಾಗೂ ಬಡಗು ತಿಟ್ಟಿನ ಕಲಾವಿದರಿಂದ ‘ಚಂದ್ರಹಾಸ ಚರಿತ್ರ’ ಯಕ್ಷಗಾನ ಪ್ರದರ್ಶನಗಳು ನಡೆದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.