ಭಾನುವಾರ, ಜನವರಿ 19, 2020
25 °C

ಯನಗುಂದಾ ಗ್ರಾಮಕ್ಕೆ ಶಾಪವಾದ ಮದ್ಯಪಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಔರಾದ್: ಒಂದು ಕಡೆ ಮೂಲ ಸೌಲಭ್ಯ ಕೊರತೆ ಮತ್ತೊಂದೆಡೆ ಮದ್ಯ ಹಾವಳಿಯಿಂದ ತಾಲ್ಲೂಕಿನ ಯನಗುಂದಾ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.ಎಲ್ಲಡೆ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ಮೇಲೆ ಹೊಲಸು ನೀರು ಹರಿಯುತ್ತಿದೆ. ಇದರಿಂದ ಗ್ರಾಮದಲ್ಲಿ ನೈರ್ಮಲ್ಯ ಸಮಸ್ಯೆ ನಿರ್ಮಾಣವಾಗಿದೆ. ಸೊಳ್ಳೆಗಳ ಕಾಟದಿಂದ ಅನಾರೋಗ್ಯದ ಮೇಲೂ ಪರಿಣಾಮವಾಗಿದೆ. ಈ ಕುರಿತು ಪಂಚಾಯಿತಿಯವರಿಗೆ ಸಾಕಷ್ಟು ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಯುವಕ ಮತ್ತು ಮಹಿಳಾ ಸಂಘದವರು ದೂರುತ್ತಾರೆ.ಗ್ರಾಮದಲ್ಲಿ ಹೆಚ್ಚಿರುವ ಮದ್ಯಪಾನ ಹಾವಳಿಯಿಂದ ಗ್ರಾಮದ ಮಹಿಳೆಯರ ಸಹನೆ ಕಟ್ಟೆ ಒಡೆದು ಹೋರಾಟಕ್ಕೆ ಮುಂದಾಗಿದ್ದಾರೆ. ಈ ಗ್ರಾಮದ  ಅಮಿನಬೀ ಮೈನೋದಿನ್‌ ಎಂಬ ಮಹಿಳೆ ಕುಡುಕ ಗಂಡನ ಹಿಂಸೆಗೆ ಒಳಗಾಗಿ ಒಂದು ಕಣ್ಣು ಕಳೆದುಕೊಂಡಿದ್ದಾಳೆ. ಮತ್ತೊಬ್ಬಾತ ಹೆಂಡತಿ ಮಕ್ಕಳನ್ನು ಪೀಡಿಸಿ ತವರು ಮನೆಗೆ ಕಳುಹಿಸಿಕೊಟ್ಟಿದ್ದಾನೆ. ಇಂತಹ ಘಟನೆಗಳು ಒಂದಲ್ಲ. ಬೇಕಾದಷ್ಟು ಇವೆ  ಎನ್ನುತ್ತಾರೆ  ಗ್ರಾಮದ ಉಗ್ರ ಭಾರತಿ ಮಹಿಳಾ ಸಂಘಟನೆ ಅಧ್ಯಕ್ಷೆ ಮುಕ್ತಮ್ಮ  ಗಾಯಕವಾಡ.ಗ್ರಾಮದಲ್ಲಿ ಬೇಕಾಬಿಟ್ಟಿಯಾಗಿ ಮದ್ಯ ಮಾರಾಟ ಮಾಡಲಾಗುತ್ತದೆ. ಇದರ ವಿರುದ್ಧ  ಹಲವು ದಿನಗಳಿಂದ ಹೋರಾಟ ಮಾಡುತ್ತಿದ್ದೇವೆ. ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗಿತ್ತು. ಆದರೂ ಮದ್ಯ ಮಾರಾಟ ಜೋರು ಮಾತ್ರ ತಪ್ಪುತ್ತಿಲ್ಲ.

ಹೀಗಾಗಿ ಈಗ ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳಬೇಕು ಎಂದು ವಿವಿಧ ಮಹಿಳಾ ಗುಂಪುಗಳು ಸೇರಿ ಉಗ್ರ ಭಾರತಿ ಮಹಿಳಾ ಸಂಘಟನೆ ರಚಿಸಿಕೊಂಡಿರುವುದಾಗಿ ಮುಕ್ತಮ್ಮ  ಹೇಳುತ್ತಾರೆ.ಸಂಘಟನೆ ಮೂಲಕ ಅಕ್ರಮ ಮದ್ಯ ಮಾರಾಟ ಮಾಡುವವರ ಮೇಲೆ ಮತ್ತು ಕುಡಿಯುವರ ಮೇಲೆ ನಿಗಾ ಇಡಲಾಗುತ್ತದೆ. ಅಕ್ರಮ ಮಾರಾಟ ಮಾಡುವವರನ್ನು ಹಿಡಿದುಕೊಟ್ಟಿದ್ದೇವೆ. ಆದರೆ ಪೊಲೀಸರಿಂದ ಸೂಕ್ತ ಸಹಕಾರ ಸಿಗುತ್ತಿಲ್ಲ ಎಂದು ಗ್ರಾಮದ ಬಾಬುರಾವ ರೊಂಡೆ  ಅಸಮಾಧಾನ ವ್ಯಕ್ತಪಡಿಸುತ್ತಾರೆ.ಪುರುಷರನ್ನು ಕುಡಿಯದಂತೆ ಮನವೊಲಿಸುವ ಪ್ರಯತ್ನವೂ ನಡೆದಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ ಹಾಕಲು ಅಕ್ರಮ ಮಾರಾಟ ನಿಲ್ಲಬೇಕು ಎಂಬುದು ಭಾಗಮ್ಮ  ಸ್ವಸಹಾಯ ಸಂಘದ ಅಧ್ಯಕ್ಷೆ ರುಕ್ಮಿಣಿ ಅವರ ಅಭಿಪ್ರಾಯ. ಕೂಲಿ ಮಾಡುವವರೇ ಹೆಚ್ಚಿರುವ ಗ್ರಾಮದಲ್ಲಿ ಕುಡಿದು ಹಾಳಾಗುತ್ತಿದ್ದಾರೆ. ಅವರ ಕುಟುಂಬಗಳು ಬೀದಿಗೆ ಬರುತ್ತಿವೆ.ಇದನ್ನು  ತಡೆಯುವ ಉದ್ದೇಶದಿಂದ ನಾವು ಮದ್ಯ ವಿರುದ್ಧ ಆಂದೋಲನ ನಡೆಸುತ್ತಿದ್ದೇವೆ. ನಮನ್ನು ಜೈಲಿಗೆ ಹಾಕಿದರೂ ಚಿಂತೆ ಇಲ್ಲ. ಗುರಿ ಮುಟ್ಟುವ ತನಕ ಹೋರಾಟ ನಡೆಸುತ್ತೇವೆ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ.

ಮುಂದೆ ಸ್ವಸಹಾಯ ಸಂಘದ ಮೂಲಕ ಸ್ವಯಂ ಉದ್ಯೋಗ ಮಾಡಿ ಯನಗುಂದಾ ಮಾದರಿ ಗ್ರಾಮ ಮಾಡುವ ಕನಸು ಈ ಮಹಿಳೆಯರದ್ದು.–ಮನ್ಮಥಪ್ಪ ಸ್ವಾಮಿ

ಪ್ರತಿಕ್ರಿಯಿಸಿ (+)