ಗುರುವಾರ , ಮೇ 6, 2021
25 °C

ಯಲವಿಗಿ ಯಶಸ್ಸಿನ ಕತೆ!

–ವಿಜಯಲಕ್ಷ್ಮೀ ಹಾವೇರಿ Updated:

ಅಕ್ಷರ ಗಾತ್ರ : | |

ನೈರ್ಮಲ್ಯ ಮತ್ತು ಶುದ್ಧ ನೀರು ಗ್ರಾಮೀಣ ಬದುಕಿನಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸು­ತ್ತವೆ. ನಗರ ಪ್ರದೇಶಗಳಲ್ಲಿ ಲಭ್ಯವಿರುವ ಈ ಎರಡು ಸೌಲಭ್ಯಗಳು ಪ್ರತಿಯೊಂದು ಗ್ರಾಮದ ಪ್ರತಿಯೊಬ್ಬ ವ್ಯಕ್ತಿಗೂ ಲಭ್ಯವಾದರೆ ಅದು ಗ್ರಾಮೀಣ ಬದುಕಿನ ಗುಣಾತ್ಮಕ ಬದಲಾವಣೆಯ ಮೊದಲ ಹೆಜ್ಜೆ. ರಾಜ್ಯದಲ್ಲಿ ಪಂಚಾಯತ್‌ರಾಜ್ ವ್ಯವಸ್ಥೆಗೆ ಸಾಂವಿ­ಧಾನಿಕ ಮಾನ್ಯತೆ ದೊರೆತು 20  ವರ್ಷ ಕಳೆದ ಮೇಲೂ ಇಂತಹ ಸೌಲಭ್ಯ ಸಿಗದೇ ಇರುವುದು ಮಾತ್ರ ವಿಪರ್ಯಾಸ. ಆದರೂ ಕೆಲವು ಕಡೆ ಇಂತಹ ಪ್ರಯತ್ನಗಳು ನಡೆದಿವೆ.ಗ್ರಾಮೀಣ ಭಾಗಕ್ಕೆ ಅತ್ಯಂತ ಅವಶ್ಯಕವಾದ ಮೂಲಭೂತ ಸೌಕರ್ಯಗಳನ್ನು ಸೃಷ್ಟಿಸುವ 15 ಅಂಶಗಳ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರ ಘೋಷಿಸಿ ಒಂದು ವರ್ಷ ಕಳೆದಿದೆ. ಒಂದು ವರ್ಷ­ದಲ್ಲಿಯೇ ಈ ಎಲ್ಲ 15 ಅಂಶಗಳ ಕಾರ್ಯಕ್ರಮ­ಗಳನ್ನು ಪ್ರಾರಂಭಿಸಿದ ಮೊದಲ ಗ್ರಾಮ ಪಂಚಾಯಿತಿ ಎಂಬ ಖ್ಯಾತಿಗೆ ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಯಲವಿಗಿ ಗ್ರಾಮ ಪಂಚಾಯಿತಿ ಒಳಗಾಗಿದೆ.ರೈತರ ಜಮೀನುಗಳ ಅಭಿವೃದ್ಧಿ ಕಾಮಗಾರಿಗಳು, ಅಂದರೆ ಜಮೀನು ಸಮತಟ್ಟು ಮಾಡುವುದು, ಬದುವು ಮತ್ತು ಕೃಷಿ ಹೊಂಡ ನಿರ್ಮಾಣ ಮಾಡುವ ಒಟ್ಟು 23 ಕಾಮಗಾರಿಗಳನ್ನು ಇಲ್ಲಿ ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸವಾಗಿರುವ 1492 ಕುಟುಂಬಗಳ ಪೈಕಿ 790 ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಈ ಬಾರಿ 182 ಅರ್ಜಿ ಸ್ವೀಕರಿಸಿದ್ದು ಅವುಗಳಲ್ಲಿ 129 ಶೌಚಾಲಯಗಳು ನಿರ್ಮಾಣ ವಿವಿಧ ಹಂತದಲ್ಲಿವೆ.  ವರ್ಷಾಂತ್ಯದ ವೇಳೆಗೆ ಇಲ್ಲಿ ವೈಯಕ್ತಿಕ ಶೌಚಾಲಯ­ವನ್ನು ಹೊಂದಿದ ಕುಟುಂಬಗಳ ಸಂಖ್ಯೆ ಒಂದು ಸಾವಿರಕ್ಕೂ ಹೆಚ್ಚಾಗಲಿದೆ.ಮುಂದಿನ ವರ್ಷಾಂತ್ಯದ ವೇಳೆಗೆ  ಯಲವಿಗಿ ಪಂಚಾಯ್ತಿ ವ್ಯಾಪ್ತಿಯ ಎಲ್ಲ ಕುಟುಂಬಗಳೂ ಶೌಚಾ­ಲಯ ಹೊಂದಿ ರಾಜ್ಯದ ಮೊದಲು ಬಯಲು ಶೌಚಾಲಯ ಮುಕ್ತ ಗ್ರಾಮ ಪಂಚಾಯಿತಿ­ಯಾಗು­ತ್ತದೆ ಎಂದು ಪಂಚಾಯಿತಿ ಅಧ್ಯಕ್ಷೆ ಕಮಲವ್ವ ಕಾಶಪ್ಪ ಅಕ್ಕಿಗುಂದ ವಿಶ್ವಾಸ ವ್ಯಕ್ತಪಡಿಸುತ್ತಾರೆ.ಇಲ್ಲಿನ ಕಾಮಗಾರಿಗಳಲ್ಲಿ ಎರಡು ಕೆರೆಗಳ ಪುನ­ಶ್ಚೇತನ ಕಾಮಗಾರಿಗಳು ಪೂರ್ಣಗೊಂಡಿವೆ, ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಲ್ಲಿ ನಾಲ್ಕು ದಾರಿಗಳ ನಿರ್ಮಾಣ ಆಗಿದೆ. ಒಂದು ಸ್ಮಶಾನ  ಅಭಿವೃದ್ಧಿ ಪಡಿಸ­ಲಾಗಿದೆ. ಹತ್ತು ಕುರಿ ಹಾಗೂ ದನದ ದೊಡ್ಡಿಗಳನ್ನು ನಿರ್ಮಾಣ ಮಾಡಲಾಗಿದೆ. ಒಂದು ಆಟದ ಮೈದಾನ, ಎರಡು ರೈತರ ಕಣ, ರಾಜೀವ್ ಗಾಂಧಿ ಸೇವಾ ಕೇಂದ್ರ, ನಮ್ಮ ಹಳ್ಳಿ ನಮ್ಮ ನೀರು ಕಾರ್ಯಕ್ರಮಗಳಡಿಯಲ್ಲಿ ಯಲವಿಗಿ ಗ್ರಾಮದ ಸೋಮನಗೌಡ ಹೊಸಮನಿ ಇವರ ಹೊಲದ ಹತ್ತಿರದ ಹಳ್ಳಕ್ಕೆ ಚೆಕ್‌ಡ್ಯಾಂ ನಿರ್ಮಾಣ ಮಾಡುವ ಮೂಲಕ ಹಳ್ಳಿಯ ಕೊಳವೆ ಬಾವಿಗಳ ಮರುಪೂರಣದ ವ್ಯವಸ್ಥೆ ಮಾಡಲಾಗಿದೆ.ರಾಜೀವ್ ಗಾಂಧಿ ಚೈತನ್ಯ ಯೋಜನೆಯ ಅಡಿ­ಯಲ್ಲಿ ಮೂವತ್ತಮೂರು ಫಲಾನುಭವಿಗಳನ್ನು ಆಯ್ಕೆ ಮಾಡಿ ೮ ಜನರಿಗೆ ತರಬೇತಿ ಪೂರ್ಣಗೊಳಿಸಿ ಉದ್ಯೋಗ ಒದಗಿಸಲಾಗಿದೆ. ಉಳಿದ ತರಬೇತಿ­ಗೊಂಡಿ­ರು­ವವರು ಸ್ವಯಂ ಉದ್ಯೋಗವನ್ನು ಆಯ್ಕೆ ಮಾಡಿ­ಕೊಂಡಿ­ದ್ದಾರೆ. ಹೀಗೆ ಎಲ್ಲಾ 15 ಕಾರ್ಯ­ಕ್ರಮಗಳ ಕಾಮಗಾರಿ­ಯನ್ನು ಪ್ರಾರಂಭಿಸಿದ ಮೊದಲ ಗ್ರಾಮ ಪಂಚಾ­ಯಿತಿ ಎಂಬ ಹೆಗ್ಗಳಿಕೆಗೆ ಯಲವಿಗಿ ಗ್ರಾಮ ಪಂಚಾಯಿತಿ ಪಾತ್ರವಾಗಿದೆ. ಗ್ರಾಮದಲ್ಲಿ ಅಂತರ­ರಾಷ್ಟ್ರೀಯ ಗುಣಮಟ್ಟದ ಕುಡಿಯುವ ನೀರು ಪೂರೈ­ಸುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಸಹ ಸ್ಥಾಪನೆ ಮಾಡಲಾಗಿದೆ ಎಂದು ಉಪಾಧ್ಯಕ್ಷ ಹನು­ಮಂತ ಗೌಡರ ಹೊಸಮನಿ ಹೇಳುತ್ತಾರೆ.ಗ್ರಾಮೀಣ ಬದುಕಿನ ನೈಜ ಅವಶ್ಯಕತೆಗಳ ಚಿಂತನ ನಡೆದಿದೆ. ಕೇವಲ ಚಿಂತನೆ ಇದಲ್ಲ. ಕಾರ್ಯಕ್ರಮ­ಗಳನ್ನು ಘೋಷಣೆ ಮಾಡಲಾಗಿದೆ. ಕೈಗೆತ್ತಿಕೊಳ್ಳ­ಲಾಗಿದೆ. ಈ ಕಾರ್ಯಕ್ರಮಗಳ ತ್ವರಿತಗತಿಯ ಅನು­ಷ್ಠಾನದ ಮೂಲಕ ಗ್ರಾಮೀಣ ಬದುಕಿನ ಚಿತ್ರಣವೇ ಸಂಪೂರ್ಣ­ವಾಗಿ ಬದಲಾವಣೆಗೊಳ್ಳುತ್ತಿದೆ.  ಹಳ್ಳಿಗನ ಬದುಕಿಗೆ ಸಮೀಪವಿರುವ ಗ್ರಾಮೀಣ ಬದುಕಿನ ದೈನಂ­ದಿನ ಅವಶ್ಯಕತೆಗಳನ್ನು ಪೂರೈಸುವ ೧೫ ಅಂಶಗಳ ಕಾರ್ಯ­ಕ್ರಮ ಸಂಪೂರ್ಣವಾದರೆ  ಗ್ರಾಮೀಣ ಬದುಕಿ­ನಲ್ಲಿ ಗುಣಾತ್ಮಕ ಬದಲಾವಣೆ ತರುವ ವ್ಯವಸ್ಥೆ ರೂಪು­ಗೊಳ್ಳುತ್ತದೆ ಎಂದು ಅವರು ಹೇಳುತ್ತಾರೆ.ಗ್ರಾಮೀಣ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಪ್ರಾಣಿ­­ಗಳೊಂದಿಗಿನ ಹಳ್ಳಿಗನ ಬದುಕಿಗೆ, ಸಮರ್ಥ­ನೀಯ ಮತ್ತು ಸಮರ್ಪಕ ಜೀವನಮಟ್ಟ ಒದಗಿಸಲು, ಗ್ರಾಮೀಣ ಬದುಕಿನಲ್ಲಿ ಪ್ರತಿ ಮನೆಗೆ, ಕುರಿ/ದನದ ದೊಡ್ಡಿ ನಿರ್ಮಾಣಕ್ಕೆ ಅವಕಾಶ ಕಲ್ಪಿಸುವ ಕಾರ್ಯ­ಕ್ರಮ, ಮನೆಗೊಂದು ಶೌಚಾಲಯದ ಪರಿಣಾಮ­ಕಾರಿ, ಆಂದೋಲನಕಾರಿ ಅನುಷ್ಠಾನ, ಶುದ್ಧ ಕುಡಿ­ಯುವ ನೀರಿನ ಕುರಿತು, ‘ಗದಗ ಮಾದರಿ’ಯ ಪ್ರತಿ­ರೂಪ­ವಾಗಿ ಸರ್ಕಾರದ ವತಿಯಿಂದ ಗ್ರಾಮೀಣ ಭಾಗಕ್ಕೆ ವಿಸ್ತಾರ ಒಂದು ಸಾವಿರ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಾಡಿಗೆ ಅರ್ಪಣೆಯಂತಹ ಮಹತ್ವಾ­ಕಾಂಕ್ಷಿ ಯೋಜನೆ ಸಾಕಾರಗೊಂಡರೆ  ಗ್ರಾಮೀಣ ಬದುಕೂ ಸಹ್ಯವಾಗುತ್ತದೆ.‘ನನಗೀಗ ಕಾಲು ನೋವಿಲ್ಲ, ಚರ್ಮ ರೋಗವಿಲ್ಲ, ತಲೆನೋವು ಬರುವುದಿಲ್ಲ’ ಎಂದು ದುರುಗಪ್ಪ ಜಕ್ಕಣ್ಣವರ ಮೆಚ್ಚುಗೆಯ ಮಾತನಾಡುತ್ತಾರೆ. ಇಷ್ಟು ದಿನದವರೆಗೆ ಶುದ್ಧ  ಕುಡಿಯುವ ನೀರು ಹೋಗಲಿ, ಕನಿಷ್ಠ ನೀರಿನ ಪೂರೈಕೆಯಿಂದಲೂ ನಮ್ಮ ಗ್ರಾಮ ಬಹು­ದೂರ ಇತ್ತು.  ಆದರೆ ಈಗ ಪರಿಸ್ಥಿತಿ ಬದಲಾಗಿದೆ ಎಂಬ ಭಾವ ಅವರಲ್ಲಿದೆ.‘ಮಕ್ಕಳಾಟವು ಚೆಂದ, ಮತ್ತೆ ಯೌವ್ವನ ಚೆಂದ, ಮುಪ್ಪಿನಲ್ಲಿ ಬಲು ಚೆಂದ ನೆರೆಗಡ್ಡ’ ಎಂಬ ಜಾನಪದ ನಾಣ್ಣುಡಿಯಂತೆ, ಮಕ್ಕಳಿಗೊಂದು ಆಟದ ಮೈದಾನ, ಯುವಕ-–ಯುವತಿಯರಿಗೆ ಜೀವನೋಪಾಯಕ್ಕಾಗಿ, ಸಂಜೀವಿನಿ ಮತ್ತು ರಾಜೀವಗಾಂಧಿ ಯುವ ಚೈತನ್ಯ ಯೋಜನೆಯಂತಹ, ಗ್ರಾಮೀಣ ಜೀವನದಲ್ಲಿ ವ್ಯವಸ್ಥಿತ ಉದ್ಯೋಗ ಸೃಷ್ಟಿಗೆ ಇಂಬುಕೊಡುವ ಕಾರ್ಯಕ್ರಮ­ಗಳು ಜಾರಿಗೊಳ್ಳುತ್ತಿರುವುದು ಹಳ್ಳಿಗರು ಅಭಿಮಾನ­ಪೂರ್ವಕ­ವಾಗಿ ಸ್ವಾಗತಿಸುತ್ತಿದ್ದಾರೆ. ಯಾವುದೇ ಒಂದು ಕಾರ್ಯಕ್ರಮದ ಅಡಿಯಲ್ಲಿ ಎರಡು ಲಕ್ಷ ಯುವಕ – ಯುವತಿಯರು ಗ್ರಾಮ ಸಭೆಯಲ್ಲಿ ಆಯ್ಕೆ­ಯಾಗಿ, ಉದ್ಯೋಗ ಪಡೆಯಲು ಅರ್ಹತೆ ಹೊಂದಿರು­ವುದು ಇದೇ ಮೊದಲಬಾರಿಯಾಗಿದೆ.ಗ್ರಾಮೀಣ ಭಾಗದ ಪ್ರತಿ ಮನೆಗೆ ಕೇವಲ ಮನೆ­ಗೊಂದು ಶೌಚಾಲಯ ಮಾತ್ರವಲ್ಲ ಅಲ್ಲಿ ಚಕ್ಕಡಿಯ ಗಾಲಿಗೆ ಸೀರೆ ಕಟ್ಟಿ ಮೈದೊಳೆದುಕೊಳ್ಳುವ ಪರಿಸ್ಥಿತಿ­ಯನ್ನು ಬದಲಾಯಿಸಲು, ಗ್ರಾಮೀಣ ಜನರ ಅದ­ರಲ್ಲೂ ಮಹಿಳೆಯರ ಪ್ರಮುಖ ಅವಶ್ಯಕತೆಯಾದ ‘ಬಚ್ಚಲು ಮನೆ ಸಹಿತ –ಶೌಚಾಲಯ’ದ ನಿರ್ಮಾಣ ಕಾರ್ಯವು ‘ಗ್ರಾಮೀಣ ಗೌರವ’ ಎಂಬ ಹೆಸರಿನಲ್ಲಿ ಈ ವರ್ಷ ಪ್ರಾರಂಭವಾಗಿದೆ. ‘ಈ ಯೋಜನೆ ಯಶಸ್ವಿ­ಯಾದರೆ ನಮ್ಮ ಮಹಿಳೆಯರಿಗೂ ಗೌರವ ಬರುತ್ತದೆ’ ಎಂದು ಕಮಲವ್ವ ಅಕ್ಕಿಗುಂದ ಹೇಳುತ್ತಾರೆ.ಸ್ನಾನಗೃಹ ಸಹಿತ ಶೌಚಾಲಯದ’ ಕಲ್ಪನೆಯೇ ಹಳ್ಳಿಗಳ ಮಟ್ಟಿಗೆ ತೀರ ಆಧುನಿಕ. ಸರ್ಕಾರಗಳು ಇಂದಿನ­ವರೆಗೆ ಈ ದಿಸೆಯಲ್ಲಿ ಯಾವುದೇ ಚಿಂತನೆ­ಯನ್ನು ನಡೆಸಿರಲಿಲ್ಲ್ಲ. ಈಗ ಅಂತಹ ಪ್ರಯತ್ನ ನಡೆ­ಯು­ತ್ತಿದೆ. ಅಲ್ಲದೇ 2000 ಅಡಿ ಜಾಗದಲ್ಲಿ ಪ್ರತಿ­ಯೊಂದು ಗ್ರಾಮದಲ್ಲಿ ಮಹಿಳೆಯರಿಗೆ ನಿರ್ಮಾಣ­ಗೊಳ್ಳಲಿರುವ ಪ್ರತ್ಯೇಕ ಶೌಚಾಲಯ ಸಂಕೀರ್ಣ, ಸ್ವತಂತ್ರವಾದ ಕೊಳವೆ ಬಾವಿ ಸಂಪರ್ಕ ಹೊಂದಿ, ತಲೆಯತ್ತಲಿದೆ. ಅಂತಹ ಕಡೆ ಮಹಿಳೆಯರಿಗೆ ಪ್ರತ್ಯೇಕ­ಸ್ನಾನದ ಮನೆ, ಬಟ್ಟೆ ತೊಳೆಯಲು ಜಾಗ, ಡ್ರೆಸ್ಸಿಂಗ್ ರೂಂ, ಹೇರ್ ಡ್ರೈಯರ್ ಹಾಗೂ ಶೌಚಾಲಯ ಸಂಕೀರ್ಣದ ಮುಂದೆ ಒಂದು ಚಿಕ್ಕ ಚೊಕ್ಕ­ವಾದ ಮಕ್ಕಳ ಆಟಕ್ಕೆ ಅನುಕೂಲ ಕಲ್ಪಿಸುವ ಉದ್ಯಾನ­ವನದ ಮಾದರಿಯ ಆಟೋಪಕರಣ ವ್ಯವಸ್ಥೆ­ಯನ್ನು ನಿರ್ಮಿಸಲಾಗುತ್ತದೆ.ಈ ಯೋಜನೆಯ ಜೊತೆಗೆ ಗ್ರಾಮೀಣ ಬದುಕಿನಲ್ಲಿ ಹಾಸುಹೊಕ್ಕಾಗಿರುವ, ಗ್ರಾಮೀಣ ಮಹಿಳೆಯ ಬಟ್ಟೆ ತೊಳೆಯುವ ಸಮಸ್ಯೆ ನಿವಾರಣೆಗೆ, ಸರ್ಕಾರದ ವಿನೂತನ ಕಾರ್ಯಕ್ರಮವೊಂದು ತಲೆಯೆತ್ತಿದೆ. ಹಳ್ಳ-ಕೊಳ್ಳ, ಕೆರೆ-ಬಾವಿಯ ಕಡೆಗೆ ಗ್ರಾಮೀಣ ಮಹಿಳೆ ಪ್ರತಿನಿತ್ಯ ಬಟ್ಟೆ ತೊಳೆಯಲು ಹೋಗುವುದು ಸರ್ವೇಸಾಮಾನ್ಯ.  ಈ ಸಂದರ್ಭದಲ್ಲಿ ಮಕ್ಕಳ ರಕ್ಷಣೆಗೆ ಇಲ್ಲದ ಬಾಲವಾಡಿಗಳ ಅನುಪಸ್ಥಿತಿಯಲ್ಲಿ ಮಹಿಳೆ ಮಕ್ಕಳನ್ನೂ ತನ್ನೊಂದಿಗೆ ಕರೆದೊಯ್ಯುತ್ತಾಳೆ. ಇದನ್ನು ತಪ್ಪಿಸುವ ಕೆಲಸವೂ ಇಲ್ಲಿ ನಡೆಯುತ್ತಿದೆ. ರಾಜ್ಯದ ಗ್ರಾಮೀಣಾಭಿವೃದ್ಧಿ ವಿಷಯದಲ್ಲಿ ಯಲವಿಗಿ ಗ್ರಾಮ ಪಂಚಾಯ್ತಿ ಹಲವಾರು ಪ್ರಥಮಗಳಿಗೆ ನಾಂದಿ ಹಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.