ಸೋಮವಾರ, ಮೇ 17, 2021
27 °C

ಯಶಸ್ಸಿನ ಲಾಜಿಕ್ ಮ್ಯಾಜಿಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಂಜಿನಿಯರಿಂಗ್‌ನಲ್ಲಿ ಉತ್ತಮ ಫಲಿತಾಂಶ ಪಡೆದಾದ ಮೇಲೂ ಕೆಎಎಸ್ ಬರೆಯಲು ಕಾರಣ?

ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ, ಸಂಬಳಕ್ಕೆ ಕೊರತೆ ಇಲ್ಲ. ಆದರೆ ಸಾರ್ವಜನಿಕ ಆಡಳಿತ ಕ್ಷೇತ್ರದಲ್ಲಿ ಸೇವಾ ಅವಕಾಶಗಳು ಹೆಚ್ಚು. ಕೆಎಎಸ್ ಮಾಡಬೇಕು ಎಂಬ ಕನಸು ಇತ್ತು. ಬಾಲ್ಯದಲ್ಲೇ ಸಾಮಾಜಿಕ ಕಳಕಳಿ ಮೊಳಕೆಯೊಡೆದಿತ್ತು. ಸಾರ್ವಜನಿಕ ಆಡಳಿತ ವ್ಯವಸ್ಥೆಯಲ್ಲಿ ಧನಾತ್ಮಕ ಚಿಂತನೆಗಳನ್ನು ಬೆಳೆಸಬೇಕೆಂಬ ಹಂಬಲದಿಂದ ಪ್ರೊಬೆಷನರಿ ಹುದ್ದೆ ಬೆನ್ನುಹತ್ತಿದೆ.

ಸಾಧನೆಗೆ ಸ್ಫೂರ್ತಿ ಯಾರು? ಇದರ ಕೀರ್ತಿ ಯಾರಿಗೆ?

ಯಾರನ್ನೂ ರೋಲ್‌ಮಾಡೆಲ್ ಆಗಿ ಆಯ್ದುಕೊಳ್ಳಲಿಲ್ಲ. ನನ್ನಷ್ಟಕ್ಕೆ ನಾ ಓದಬೇಕು, ಸಾಧಿಸಬೇಕು ಎಂದುಕೊಂಡೆ ಅಷ್ಟೆ. ಇವತ್ತು ನಾನು ಬೆಳೆದ ದಾರಿಗೆ ಹೂ ಹಾಸಿದ್ದು ನನ್ನ ತಂದೆ, ತಾಯಿ. ಅವರಿಗೇ ಇದರ ಕ್ರೆಡಿಟ್ ಸಲ್ಲಬೇಕು.

ಅಗ್ರ ಸ್ಥಾನ ಪಡೆದಿದ್ದು ಅಚ್ಚರಿ ಎನಿಸಿತೆ?

ಇಲ್ಲ. ಅದು ನನ್ನ ಛಲವಾಗಿತ್ತು. ಪರೀಕ್ಷೆಯ ಪ್ರತಿ ಹಂತದಲ್ಲೂ ಅಚ್ಚುಕಟ್ಟಾದ ಸಿದ್ಧತೆ ಮಾಡಿಕೊಂಡಿದ್ದೆ. ನಾಲ್ಕು ವರ್ಷಗಳಿಂದ ಸಾರ್ವಜನಿಕ ಆಡಳಿತ ಕ್ಷೇತ್ರದಲ್ಲಿ ಮಾಡಿದ ಕೆಲಸ ಕೂಡ ನನ್ನ ಜ್ಞಾನವೃದ್ಧಿಗೆ ಸಹಾಯವಾಯಿತು.

ಬಹುಪಾಲು ವಿದ್ಯಾರ್ಥಿಗಳು ಓದುವುದಕ್ಕೆ ಸಮಯ ಸಿಗುವುದಿಲ್ಲ ಎಂದು ಗೊಣಗುತ್ತಾರೆ. ದೊಡ್ಡ ಹುದ್ದೆ ನಿಭಾಯಿಸುವ ಮಧ್ಯೆ ಹೇಗೆ ಕಾಲ ಹೊಂದಾಣಿಕೆ ಮಾಡಿಕೊಂಡಿರಿ?

ಓದುವ ಆಸಕ್ತಿ ಇಲ್ಲದವರು ಮಾತ್ರ ಟೈಮ್ ಸಿಗುತ್ತಿಲ್ಲ ಎನ್ನಬಹುದು. ದಿನಕ್ಕೆ ಆರು ತಾಸು ಓದುವುದು ನನ್ನ ಅಭ್ಯಾಸ. ಎಷ್ಟೇ ಒತ್ತಡ ಇದ್ದವರೂ ಷ್ಟು ಸಮಯ ಓದುವುದಕ್ಕೆ ಸಾಧ್ಯವಿದೆ. ಸಮಯ ಸಿಗುತ್ತಿಲ್ಲ ಎನ್ನುವವರಿಗೆ; ಸಿಕ್ಕ ಸಮಯವನ್ನು ಬಳಸಿಕೊಳ್ಳುವ ಕಲೆ ಗೊತ್ತಾಗಿಲ್ಲ ಎಂದರ್ಥ.

ಓದಿನ ತಯಾರಿ ಹೇಗಿತ್ತು?

ಲಕ್ಷ್ಮಿಕಾಂತ ಅವರ ದಿ ಕಾನ್‌ಸ್ಟಿಟ್ಯೂಷನ್ ಆಫ್ ಇಂಡಿಯಾ, ಖುಲ್ಲಾರ್ ಅವರ ಜಿಯಾಗ್ರಫಿ ಆಫ್ ಇಂಡಿಯಾ ಇವು ನಾನು ನಿರಂತರವಾಗಿ ಓದಿದ ಪುಸ್ತಕಗಳು. ಇವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಪುಲ ಮಾಹಿತಿ ನೀಡುತ್ತವೆ. ಹಿಂದೂ, ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ, ಫ್ರಂಟ್‌ಲೈನ್ ಮುಂತಾದ ಪತ್ರಿಕೆಗಳೂ ಸಹಕಾರಿಯಾದವು. ಸ್ಪರ್ಧಾ ಪರೀಕ್ಷೆ ಎದುರಿಸುವವರು ಮೊದಲು ಪತ್ರಿಕೆ ಓದುವ ರೂಢಿ ಬೆಳೆಸಿಕೊಳ್ಳಬೇಕು.

ಸುಮಾರು ಎಷ್ಟು ದಿನಗಳ ಸಿದ್ಧತೆ ಅಗತ್ಯ?

ಲೋಕಸೇವಾ ಆಯೋಗಗಳ ಪರೀಕ್ಷೆ ಬರೆಯುವವರು ಪದವಿ ಆರಂಭದಿಂದಲೇ ಅದಕ್ಕೆ ತಯಾರಿ ಮಾಡಿಕೊಳ್ಳಬೇಕು. ಪದವಿ ಮುಗಿದಾಕ್ಷಣ ಒಂದು ವರ್ಷ ಗಟ್ಟಿ ಓದು ಅಗತ್ಯ. ಒಟ್ಟಾರೆ ನಾಲ್ಕು ವರ್ಷಗಳ ಸತತ ಯತ್ನ ಮಾಡಿದರೆ ಸುಲಭವಾಗಿ ಕೆಎಎಸ್ ಪಾಸಾಗಬಹುದು. ಕೆಲವರು ತಪಸ್ಸಿಗೆ ಕುಳಿತಂತೆ ಆರೇ ತಿಂಗಳಲ್ಲಿ ಓದಿ ಸಿದ್ಧಿಸಿಕೊಳ್ಳುತ್ತೇನೆ ಎಂದುಕೊಳ್ಳುತ್ತಾರೆ. ಇದು ಕಷ್ಟ.

ತುಂಬ ಜನ ಪರೀಕ್ಷೆ ಬರೆಯುವ ಮುನ್ನವೇ ಮಾನಸಿಕವಾಗಿ ಸೋತು ಬಿಟ್ಟಿರುತ್ತಾರಲ್ಲ?

ನಿಜ. ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲದಿರುವುದೇ ಇದಕ್ಕೆ ಕಾರಣ. ಹಿಂಜರಿಕೆ, ಭಯ ಮತ್ತು ಅತೀವ ಆತ್ಮವಿಶ್ವಾಸವು ಬಹಳಷ್ಟು ಬಾರಿ ಸೋಲಿಗೆ ದಾರಿಯಾಗುತ್ತದೆ. ಬಹಳಷ್ಟು ಜನ, ಪ್ರೊಬೆಷನರಿ ಹುದ್ದೆಗಳ ಪರೀಕ್ಷೆ ತೆಗೆದುಕೊಂಡಾಕ್ಷಣ ತಾನು ದೊಡ್ಡದೊಂದು ಯುದ್ಧಕ್ಕೆ ಸಿದ್ಧನಾಗಿದ್ದೇನೆ ಎಂದು ಭ್ರಮಿಸಿಕೊಳ್ಳುತ್ತಾರೆ. ಇಲ್ಲಿ ಯುದ್ಧ ಮಾಡುವುದೇನೂ ಇಲ್ಲ. ಓದುವುದು, ಓದಿದ್ದನ್ನು ಬರೆಯುವುದು ಅಷ್ಟೇ.

ಕೋಚಿಂಗ್ ಅನಿವಾರ್ಯವೇ?

ಹೌದು. ಕೋಚಿಂಗ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲ ರೂಪ, ತಂತ್ರ ಅರ್ಥವಾಗುತ್ತದೆ. ಅಪಾರ ಜ್ಞಾನ ಇದ್ದವರೂ ಕೆಲ ಸಾರಿ ಮಾರ್ಗದರ್ಶನದ ಕೊರತೆಯಿಂದ ಹಿಂದೆ ಬಿದ್ದಿರುವ ಉದಾಹರಣೆ ಇವೆ.

ಪರಿಶ್ರಮ ಮತ್ತು ಬುದ್ಧಿಮತ್ತೆ: ಯಾವುದು ಮುಖ್ಯ? ಬುದ್ಧಿಮತ್ತೆ ಇಲ್ಲದವರೂ ಪರಿಶ್ರಮದಿಂದ ಪಾಸಾಗಬಹುದೇ?

ಬುದ್ಧಿಯಿಂದ ಕೂಡಿದ ಪರಿಶ್ರಮ ಮುಖ್ಯ.

ಪ್ರಯತ್ನ ಮತ್ತು ಅದೃಷ್ಟ: ಯಾವುದು ಅಗತ್ಯ?

ಅದೃಷ್ಟ ಯಾವತ್ತೂ ಪ್ರಯತ್ನದ ಬೆನ್ನಿಗಿರುತ್ತದೆ. ಸೇಬುಹಣ್ಣು ಮರದಿಂದ ಕೆಳಕ್ಕೆ ಬಿದ್ದಿದ್ದು ನ್ಯೂಟನ್‌ನ ಅದೃಷ್ಟ. ಅದರಿಂದ ಗುರುತ್ವಾಕರ್ಷಣೆ ಶಕ್ತಿ ಶೋಧಿಸಿದ್ದು ಅವನ ಪ್ರಯತ್ನ.

ಸಾಧಿಸುವವರಿಗೆ ಪೂರಕ ಪರಿಸರ ಮತ್ತು ಪ್ರೋತ್ಸಾಹ ಬೇಕಲ್ಲವೇ?

ಅದಿಲ್ಲದಿದ್ದರೂ ಪರವಾಗಿಲ್ಲ. `ತುಳಿಯುವ~ ಕಾಲ್ಗಳು ಇರಬಾರದು.

ಪೂರ್ವಭಾವಿ ಪರೀಕ್ಷೆ ಹೇಗೆ ಬರೆದಿರಿ?

ಭೂಗೋಳಶಾಸ್ತ್ರ ಆಯ್ದುಕೊಂಡೆ. ಅದೊಂದು ರೀತಿಯ ವಿಜ್ಞಾನವೂ ಹೌದು. ಇಡೀ ಪ್ರಪಂಚವನ್ನು ದುರ್ಬೀನು ಹಿಡಿದು ತೋರಿಸುತ್ತದೆ. ನಾನು ಎಂಜಿನಿಯರಿಂಗ್ ಓದಿದ್ದು ಮತ್ತಷ್ಟು ಸಹಕಾರಿಯಾಯಿತು.

ಮುಖ್ಯ ಪರೀಕ್ಷೆಗೆ ತಯಾರಿ ಹೇಗಿರಬೇಕು?

ಅದು ಅವರವರ ಲಾಜಿಕ್ ಮತ್ತು ಮ್ಯಾಜಿಕ್‌ಗಳಿಗೆ ಬಿಟ್ಟ ವಿಚಾರ. ನನಗೆ ಮಾನವರ ಸ್ವಭಾವದ ಬಗ್ಗೆ ಅತೀವ ಆಸಕ್ತಿ, ಅಚ್ಚರಿ ಇದೆ. ಹಾಗಾಗಿ ಮುಖ್ಯಪರೀಕ್ಷೆಯಲ್ಲಿ ಭೂಗೋಳಶಾಸ್ತ್ರದ ಜತೆಗೆ ಮನಶಾಸ್ತ್ರ ಆಯ್ದುಕೊಂಡೆ. ಎರಡನ್ನೂ ಗಹನವಾಗಿ ಓದಿದೆ. ನನ್ನದೇ ಲಾಜಿಕ್ ಪ್ರಯೋಗಿಸಿ ಮೆದುಳಿನಲ್ಲಿ ಸೆಟ್ ಮಾಡಿಕೊಂಡೆ ಅಷ್ಟೆ.

ಸಂದರ್ಶನ ಹೇಗಿತ್ತು?

ಈವರೆಗೆ ಎದುರಿಸಿದ ಎಲ್ಲ ಸಂದರ್ಶನಗಳಲ್ಲಿ ಒಂದು ವಿಷಯ ಅನುಭವಕ್ಕೆ ಬಂದಿದೆ- ಪತ್ರಿಕೆಗಳು ಸಂದರ್ಶನಕ್ಕೆ ರಾಜಮಾರ್ಗ ತೋರಿಸಬಲ್ಲವು. ಈಗಾಗಲೇ ಅಬಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವುದೂ ನನಗೆ ಸಹಕಾರಿಯಾತು. 150 ಅಂಕಗಳನ್ನು ಪಡೆಯುವುದು ನೀರು ಕುಡಿದಷ್ಟೇ ಸುಲಭವಾಯಿತು.

`ನುಂಗಣ್ಣರ~ ಬಗ್ಗೆ ಹೇಳಿ?

ಅಧಿಕಾರಿ ವರ್ಗಕ್ಕೆ ಇಂಥ ಹೆಸರು ಬಂದಿದ್ದು ಖೇದಕರ. ನಾನು ಪ್ರಾಮಾಣಿಕ ಎಂದು ಹೇಳಿಕೊಳ್ಳುವ ಬದಲು ನನ್ನ ಕೆಲಸಗಳು ಅದನ್ನು ಹೇಳಬೇಕು. ಭ್ರಷ್ಟಾಚಾರ ನಿಯಂತ್ರಣಕ್ಕೆ ನನ್ನದೇ ಆದ ಉಪಾಯಗಳಿವೆ. ಭ್ರಷ್ಟಾಚಾರಿಗಳನ್ನು ತಿದ್ದುವ ಬದಲು ಜನರಲ್ಲಿ ಜಾಗೃತಿ ಮೂಡಿಸಬೇಕು. ಇದೇ ಶಾಶ್ವತ ಪರಿಹಾರವಾಗಬಲ್ಲದು. ಸರ್ಕಾರಿ ಯೋಜನೆಗಳು, ಅದರ ಹಕ್ಕು ಮತ್ತು ಪಾಲುದಾರಿಕೆ ಬಗ್ಗೆ ಜನರಿಗೆ ಸಂಪೂರ್ಣ ಮಾಹಿತಿ ಮುಟ್ಟಿಸಬೇಕು. ಇದರಿಂದ ಅವರೇ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತಾರೆ.

ಮುಂದಿನ ಪರೀಕ್ಷಾರ್ಥಿಗಳಿಗೆ ಕಿವಿಮಾತು ಹೇಳಿ?

ಆಸಕ್ತಿಯನ್ನು ಯಾವತ್ತೂ ಕೊಲ್ಲಬೇಡಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.