ಶುಕ್ರವಾರ, ಮಾರ್ಚ್ 5, 2021
27 °C
ಸಿಸಿಬಿ ಕಾರ್ಯಾಚರಣೆ * ಮೊಬೈಲ್ ಅಂಗಡಿ ಮಾಲೀಕ ಬಂಧನ

ಯಾರದ್ದೋ ದಾಖಲೆ, ಯಾರಿಗೋ ಸಿಮ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾರದ್ದೋ ದಾಖಲೆ, ಯಾರಿಗೋ ಸಿಮ್

ಬೆಂಗಳೂರು: ನಕಲಿ ದಾಖಲೆ ಬಳಸಿ ಚಾಲೂ (ಆ್ಯಕ್ಟಿವೇಷನ್) ಮಾಡಿದ ಸಿಮ್‌ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಮೋಹನ್ (22) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.‘ಹೊಂಗಸಂದ್ರ ಸಮೀಪದ ಬಾಲಾಜಿ ಲೇಔಟ್‌ನಲ್ಲಿ ‘ಗಗನ್ ಮೊಬೈಲ್ ಸೆಂಟರ್’ ಅಂಗಡಿ ಇಟ್ಟುಕೊಂಡಿದ್ದ ಮೋಹನ್, ಸಿಮ್‌ ಖರೀದಿಸಲು ಬರುತ್ತಿದ್ದ ಗ್ರಾಹಕರ ದಾಖಲೆ ಮತ್ತು ಭಾವಚಿತ್ರ ಪಡೆದುಕೊಳ್ಳುತ್ತಿದ್ದ. ನಂತರ ಅವರಿಗೆ ತಿಳಿಯದಂತೆ ಅವುಗಳನ್ನು ಸ್ಕ್ಯಾನ್ ಮಾಡಿ ಕಂಪ್ಯೂಟರ್‌ನಲ್ಲಿ ಇಟ್ಟುಕೊಳ್ಳುತ್ತಿದ್ದ. ಬಳಿಕ ಅವೇ ದಾಖಲೆಗಳನ್ನು ಬಳಸಿ, ಸಿಮ್‌ಗಳನ್ನು ಚಾಲೂ ಮಾಡುತ್ತಿದ್ದ’ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.‘ಒಂದು ಸಿಮ್‌ ಚಾಲೂ ಮಾಡಿದರೆ, ಕಂಪೆನಿ ಕಡೆಯಿಂದ ಈತನಿಗೆ ₹ 10 ಕಮಿಷನ್ ಬರುತ್ತಿತ್ತು. ಹೀಗಾಗಿ ಚಾಲೂ ಮಾಡಿ ತನ್ನ ಬಳಿಯೇ ಸಿಮ್‌ಗಳನ್ನು ಇಟ್ಟುಕೊಳ್ಳುತ್ತಿದ್ದ ಆರೋಪಿ, ಹೆಚ್ಚು ಹಣ ಕೊಡುತ್ತಿದ್ದ ವ್ಯಕ್ತಿಗಳಿಗೆ ದಾಖಲೆ ಪಡೆಯದೆ ಅವುಗಳನ್ನು ಕೊಡುತ್ತಿದ್ದ. ‘ಮಾರಾಟವಾಗದೆ ಉಳಿಯುತ್ತಿದ್ದ ಸಿಮ್‌ಗಳನ್ನು ಮೂರು ತಿಂಗಳ ನಂತರ ಬೇರೆ ಕಂಪೆನಿಗಳಿಗೆ ಪೋರ್ಟ್‌ ಮಾಡಿ, ಆ ಕಂಪೆನಿಗಳಿಂದಲೂ ಕಮಿಷನ್‌ ಪಡೆಯುತ್ತಿದ್ದ’ ಎಂದು ಮಾಹಿತಿ ನೀಡಿದರು.ಒಬ್ಬನ ದಾಖಲೆಗೆ 150ಸಿಮ್:  ‘ಆರೋಪಿಯು ಒಬ್ಬ ವ್ಯಕ್ತಿಯ ದಾಖಲೆಗಳಿಂದ ಕನಿಷ್ಠ 150 ಸಿಮ್‌ಗಳನ್ನು ಚಾಲೂ ಮಾಡುತ್ತಿದ್ದ. ಈ ಸಂಗತಿ ಗೊತ್ತಿದ್ದರೂ ಲಾಭದ ಉದ್ದೇಶದಿಂದ ಮೊಬೈಲ್ ಸೇವಾ ಕಂಪೆನಿಗಳು ಸುಮ್ಮನಾಗಿವೆ. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ಆ ಕಂಪೆನಿಗಳ ಆಡಳಿತ ಮಂಡಳಿಗೂ ನೋಟಿಸ್ ನೀಡಲಾಗುವುದು’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.‘ಭಯೋತ್ಪಾದಕರು, ರೌಡಿಗಳು, ಆನ್‌ಲೈನ್‌ ವಂಚಕರು ಸೇರಿದಂತೆ ಅಪರಾಧ ಕೃತ್ಯ ಎಸಗುವ ಬಹುತೇಕರು ಇದೇ ಮಾರ್ಗದಿಂದ ಸಿಮ್‌ ಖರೀದಿಸಿರುತ್ತಾರೆ. ಕೃತ್ಯ ನಡೆದ ನಂತರ ಕರೆಗಳ ವಿವರ (ಸಿಡಿಆರ್‌) ಆಧರಿಸಿ ಪತ್ತೆ ಮಾಡಿದಾಗ, ಆ ಸಿಮ್‌ ಕಾರ್ಡ್‌ನ ದಾಖಲೆ ಯಾರ ಹೆಸರಿನಲ್ಲಿರುತ್ತದೋ ಆ ವ್ಯಕ್ತಿ ಸಿಗುತ್ತಾನೆ. ಹೀಗಾಗಿ  ನಿಜವಾದ ಸಮಾಜಘಾತುಕರನ್ನು ಪತ್ತೆ ಮಾಡುವುದು ಕಷ್ಟವಾಗುತ್ತಿದೆ’ ಎಂದು ಹೇಳಿದರು.ಬಂಧಿತನಿಂದ 2,500 ನಗದು, ಗ್ರಾಹಕರ ದಾಖಲೆಗಳು, ನಕಲಿ ಸಿಮ್‌ ಕಾರ್ಡ್‌ಗಳು, ಅಂಗಡಿಯ ಸೀಲು ಸೇರಿದಂತೆ ಮತ್ತಿತರ ಪರಿಕರಗಳನ್ನು ಜಪ್ತಿ ಮಾಡಲಾಗಿದೆ. ಈತ ಆರು ತಿಂಗಳಿನಿಂದ ಈ ದಂಧೆಯಲ್ಲಿ ತೊಡಗಿದ್ದು, ಮೊಬೈಲ್ ಸೇವಾ ಕಂಪೆನಿಗಳು ಇಂಥವರ ವಿರುದ್ಧ ನಿಗಾ ವಹಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.