ಭಾನುವಾರ, ಜೂನ್ 20, 2021
29 °C

ಯಾರಯ್ಯ ನೀ ಅಲೆಮಾರಿ...

ಡಿ.ಕೆ.ರಮೇಶ್ Updated:

ಅಕ್ಷರ ಗಾತ್ರ : | |

`ಬಂಗಾರಿ~ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ನಟ ಯೋಗೀಶ್ ಖುಷಿಯಲ್ಲಿದ್ದರು. ಆ ಖುಷಿಗೆ ದೊಡ್ಡ ಹಿನ್ನೆಲೆಯಿತ್ತು. ಅತ್ತ `ಸಿದ್ಲಿಂಗು~ ರಾಜ್ಯದ ಚಿತ್ರಮಂದಿರಗಳಲ್ಲಿ ಭರ್ಜರಿ ಸವಾರಿ ಆರಂಭಿಸಿದ್ದಾನೆ. ಇತ್ತ `ಅಲೆಮಾರಿ~ ಅಲೆದಾಟಕ್ಕೆ ಸಜ್ಜಾಗಿದ್ದಾನೆ.

 

ಇವರ ಮತ್ತೊಂದು ಚಿತ್ರ `ಕಾಲಾಯ ತಸ್ಮೈ ನಮಃ~ ಇನ್ನೇನು ತೆರೆಗೆ ಬರಲಿದೆ. ಹಲವು ಚಿತ್ರಗಳು ಕೈಯಲ್ಲಿವೆ. ಎಲ್ಲಾ ಅಂದುಕೊಂಡಂತೆ ನಡೆದರೆ ಅವರು ಮುಂದಿನ ವರ್ಷ ನಿರ್ದೇಶನಕ್ಕೂ ಕೈ ಹಾಕಲಿದ್ದಾರೆ.ಅಲೆಮಾರಿಯ ಗೆಟಪ್ ಬಗ್ಗೆ ಯೋಗೀಶ್ ಮಾತಿಗಳಿದರು. ಚಿತ್ರದಲ್ಲಿ ಎರಡು ಗೆಟಪ್‌ಗಳಲ್ಲಿ ಅವರು ಮಿಂಚುತ್ತಿದ್ದಾರೆ. ಹಾಲಿನ ಹುಡುಗನ ಪಾತ್ರದ ಜತೆಗೆ ಪರದೇಸಿಯ ವೇಷವನ್ನು ತೊಟ್ಟಿದ್ದಾರೆ. ಹಾಲಿನ ಹುಡುಗನ ಪಾತ್ರಕ್ಕಿಂತಲೂ ಅವರನ್ನು ಕಾಡಿರುವುದು ಪರದೇಸಿಯ ಪಾತ್ರ. ಇಡೀ ಪಾತ್ರ ವಿಭಿನ್ನವಾಗಿ ಮೂಡಿಬಂದಿದೆ, ಪ್ರೇಕ್ಷಕರಿಗೆ ಪರದೇಸಿ ಇಷ್ಟವಾಗಲಿದ್ದಾನೆ ಎಂಬ ವಿಶ್ವಾಸದಲ್ಲಿ ಅವರಿದ್ದಾರೆ.`ಸಿದ್ಲಿಂಗು~ ಪಾತ್ರಕ್ಕಿಂತಲೂ ಅಲೆಮಾರಿ ಬೇರೆ ರೀತಿಯಲ್ಲಿದೆ ಎನ್ನುತ್ತ, `ಏಕತಾನತೆಯ ಪಾತ್ರಗಳನ್ನು ಒಲ್ಲೆ~ ಎಂಬ ಗುಟ್ಟನ್ನು ಅವರು ಬಿಚ್ಚಿಟ್ಟರು. ಸಾಮಾನ್ಯ ಹುಡುಗನ ಬದುಕಿನಲ್ಲಿ ರೌಡಿಸಂ ಕಾಲಿಟ್ಟರೆ ಏನಾಗುತ್ತದೆ ಎಂಬುದು ಚಿತ್ರದ ತಿರುಳಂತೆ.ಹಾಸ್ಯ, ಹೊಡೆದಾಟ, ಪ್ರೇಮ ಎಲ್ಲವೂ ಸೇರಿಕೊಂಡಿರುವ ಚಿತ್ರವಿದು. ಇದು ಸಂತು ನಿರ್ದೇಶನದ ಮೊದಲ ಚಿತ್ರ. ಸಂತು ಅವರನ್ನು ಯೋಗೀಶ್ ಮನಸಾರೆ ಶ್ಲಾಘಿಸಿದರು. ನಿರ್ದೇಶಕ ಪ್ರೇಮ್ ಕೈಯಲ್ಲಿ ಪಳಗಿರುವ ಸಂತು ಹೊಸ ರೀತಿಯಲ್ಲಿ ಸಿನಿಮಾ ಮಾಡಿದ್ದಾರೆ. ಅವರು ಹೊಸ ನಿರ್ದೇಶಕ ಅನ್ನಿಸುವುದೇ ಇಲ್ಲ ಎಂದರು.ಚಿತ್ರದ ನಾಯಕಿ ರಾಧಿಕಾ ಪಂಡಿತ್. ಸುಸಂಸ್ಕೃತ ಹುಡುಗಿಯ ಪಾತ್ರದಲ್ಲಿ ಅವರು ಅಭಿನಯಿಸಿದ್ದಾರಂತೆ. ಆಕೆ ಪ್ರತಿಭಾವಂತ ನಟಿ ಎಂಬ ಮೆಚ್ಚುಗೆ ಇವರಿಂದ. ಹಾಡುಗಳು ವರ್ಣ ರಂಜಿತವಾಗಿ ಮೂಡಿ ಬಂದಿವೆ. `ನೀಲಿ ನೀಲಿ~ ಹಾಗೂ ಚಿತ್ರದ ಶೀರ್ಷಿಕೆ ಗೀತೆಯನ್ನು ಅವರು ಬಹುವಾಗಿ ಮೆಚ್ಚಿಕೊಂಡರು.

 

ಅರ್ಜುನ್ ಜನ್ಯ ಅವರ ಸಂಗೀತವನ್ನು, ಕಲೈ ಮಾಸ್ಟರ್ ಅವರ ನೃತ್ಯ ನಿರ್ದೇಶನವನ್ನು ಕೊಂಡಾಡಿದರು. ಮಂಜು ಮಾಂಡವ್ಯ ಹೊಸ ರೀತಿಯಲ್ಲಿ ಸಂಭಾಷಣೆ ಬರೆದಿದ್ದಾರೆ. ಪ್ರೇಕ್ಷಕರಿಗೆ ಇದು ಇಷ್ಟವಾಗಲಿದೆ ಎಂಬ ಲೆಕ್ಕಾಚಾರ ಅವರದ್ದು.`ಸಿದ್ಲಿಂಗು~ ಅವರಿಗೆ ವಿಶೇಷ ಮನ್ನಣೆ ತಂದುಕೊಟ್ಟ ಚಿತ್ರವಂತೆ. `ಅದರ ಯಶಸ್ಸಿಗೆ ನಿರ್ದೇಶಕ ವಿಜಯ್ ಪ್ರಕಾಶ್ ಕಾರಣ. ಮೊದಮೊದಲು ಪಾತ್ರಕ್ಕೆ ಹೊಂದಿಕೊಳ್ಳುವುದೇ ಕಷ್ಟವಾಗಿತ್ತು.

 

ಆಗೆಲ್ಲಾ ನಿರ್ದೇಶಕರು ಕಾಳಜಿ ವಹಿಸಿದರು. ಅವರಿಗೆ ನನ್ನೊಳಗಿರುವ ಕಲಾವಿದನನ್ನು ಹೊರತೆಗೆಯುವ ಕಲೆ ಗೊತ್ತಿತ್ತು. ಅದು ನಮ್ಮದೇ ಬ್ಯಾನರ್‌ನ ಚಿತ್ರ. ಪುಟ್ಟ ತಂತ್ರಜ್ಞರಿಂದ ಹಿಡಿದು ಎಲ್ಲರೂ ಶ್ರಮಿಸಿದ್ದರಿಂದ ಚಿತ್ರ ಗಮನ ಸೆಳೆಯಿತು~ ಎಂದು ಸ್ಮರಿಸಿದರು.`ಯೋಗೀಶ್ ಹೆಚ್ಚು ಕಡಿಮೆ ತಮಿಳಿನ ಧನುಷ್‌ರಂತೆ ಕಾಣುತ್ತಾರಲ್ಲಾ?~ ಎಂಬ ಪ್ರಶ್ನೆಗೆ ಜೋರು ನಗು ಅವರಿಂದ. `ಇಬ್ಬರ ದೇಹ ನೋಡಲು ಒಂದೇ ರೀತಿ ಇದೆ. ಕೆಲ ನಿರ್ದೇಶಕರು ಇದನ್ನು ಗುರುತಿಸಿರಬಹುದು. ನಾನು ಬಹಳ ಹಿಂದಿನಿಂದಲೂ ಧನುಷ್ ಅವರ ಚಿತ್ರಗಳನ್ನು ನೋಡುತ್ತಿದ್ದೆ. ಹಾಗಂತ ಇದು ಅನುಕರಣೆ ಎಂದು ಹೇಳಲಾಗದು~ ಎಂದ ಅವರಿಗೆ ಯಾರನ್ನೂ ಅನುಕರಿಸಲು ಇಷ್ಟ ಇಲ್ಲವಂತೆ. `ಬಂಗಾರಿ~ಯ ಚಿತ್ರೀಕರಣ ಶೇ 70ರಷ್ಟು ಪೂರ್ಣಗೊಂಡಿದೆಯಂತೆ. ಚಿತ್ರದಲ್ಲಿ ಅವರದು ಹಳ್ಳಿ ಹುಡುಗನ ಪಾತ್ರ. `ಈ ಹಿಂದೆ ಇಂತಹ ಪಾತ್ರದಲ್ಲಿ ಅಭಿನಯಿಸಿರಲಿಲ್ಲ. ಒಂದೊಳ್ಳೆ ಕೌಟುಂಬಿಕ ಕತೆ ಇದು. ನಾಯಕಿ ರಾಗಿಣಿ ಜತೆಗಿನ ಕೆಮಿಸ್ಟ್ರಿ ಜನರಿಗೆ ಹಿಡಿಸಬಲ್ಲದು. ಇದೂ ಕೂಡ ಯಶಸ್ಸಿನ ಸಾಲಿಗೆ ಸೇರಬಹುದು~ ಎಂಬ ನಿರೀಕ್ಷೆಯಲ್ಲಿದ್ದಾರೆ ಯೋಗೀಶ್.ಇದಲ್ಲದೆ ಎರಡು ರೀಮೇಕ್ ಚಿತ್ರಗಳೂ ಅವರ ಬತ್ತಳಿಕೆಯಲ್ಲಿವೆ. ಒಂದು ತೆಲುಗಿನ `ಬಿಂದಾಸ್~, ಮತ್ತೊಂದು ತಮಿಳಿನ `ಪೊರಾಳಿ~ಯ ಮರುಸೃಷ್ಟಿ. ಎರಡರಲ್ಲೂ ಹಾಸ್ಯದ್ದೇ ರಸಾಯನ. ತೆಲುಗಿನಲ್ಲಿ ಹಿಟ್ ಆಗಿರುವ `ಬಿಂದಾಸ್~ ಚಿತ್ರಕ್ಕೆ ರೆಕ್ಕೆಪುಕ್ಕ ಮೂಡಿದೆ.ಇದೇ 28ಕ್ಕೆ ಸೆಟ್ಟೇರಲು ಅದು ಸಿದ್ಧವಾಗಿದೆ. `ಪೊರಾಳಿ~ ಇನ್ನೂ ಮಾತುಕತೆಯ ಹಂತದಲ್ಲಿದೆ. ಪುನೀತ್ ರಾಜ್‌ಕುಮಾರ್ ಅವರೊಟ್ಟಿಗೆ ಚಿತ್ರದಲ್ಲಿ ಕಾಣಿಸಿಕೊಳ್ಳುವ ಉತ್ಸಾಹದಲ್ಲಿ ಅವರಿದ್ದಾರೆ.  ಅಂದಹಾಗೆ ನಟನೆಯ ಜತೆಗೆ ನಿರ್ದೇಶನವನ್ನೂ ಮಾಡಬೇಕೆಂಬ ಕನಸು ಅವರೊಳಗಿದೆ. ಆದರೆ ಅದಕ್ಕೆ ಇನ್ನೂ ಕಾಲ ಕೂಡಿಬರಬೇಕಂತೆ. ಈ ವರ್ಷ ನಟನೆಯಲ್ಲೇ ತಲ್ಲೆನರಾಗಲಿರುವ ಅವರು ಒಳ್ಳೆಯ ಕತೆ ಸಿಕ್ಕರೆ ಮುಂದಿನ ವರ್ಷ ನಿರ್ದೇಶನಕ್ಕೆ ಮುಂದಾಗುತ್ತಾರಂತೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.