ಯುವಕನ ಅಪಹರಿಸಿ ಇರಿದು ಕೊಂದರು

ಬೆಂಗಳೂರು: ಕಾಲೇಜಿನ ಹಿರಿಯ ವಿದ್ಯಾರ್ಥಿಗೆ ಫೇಸ್‌ಬುಕ್‌ನಲ್ಲಿ ‘ಹಾಯ್ ಶಿಷ್ಯ’ ಎಂದು ಕಳುಹಿಸಿದ ಸಂದೇಶದ ವಿಚಾರಕ್ಕೆ ಯುವಕರ ಮಧ್ಯೆ ಆರಂಭವಾದ ಜಗಳ, ಅರುಣ್ ರಾವ್ (21) ಕೊಲೆಯಲ್ಲಿ ಅಂತ್ಯಗೊಂಡಿದೆ.
ಚಿಕ್ಕಜಾಲ ಸಮೀಪದ ಬಾಗಲೂರು ಕ್ರಾಸ್ ಬಳಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಬೆಟ್ಟಹಲಸೂರು ಸಮೀಪದ ಮುನೇಶ್ವರ ಬ್ಲಾಕ್‌ನ ಅರುಣ್ ಪಿಯುಸಿ ಮುಗಿಸಿದ್ದು, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೊ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.
ಇತ್ತೀಚೆಗೆ ಅವರ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂದೀಪ್ ಎಂಬಾತನಿಗೆ ಫೇಸ್‌ಬುಕ್‌ನಲ್ಲಿ ‘ಹಾಯ್ ಶಿಷ್ಯ’ ಎಂದು ಅರುಣ್ ಸಂದೇಶ ಕಳುಹಿಸಿದ್ದರು. ಇದಕ್ಕೆ ಆತನ ಸ್ನೇಹಿತ ಅಜಿತ್ ಎಂಬಾತ ಲೈಕ್ ಮಾಡಿದ್ದ.
ಇದರಿಂದ ಕೋಪಗೊಂಡಿದ್ದ ಆತ, ಅರುಣ್ ಮನೆ ಬಳಿ ಬಂದು ಗಲಾಟೆ ಮಾಡಿದ್ದ. ಆಗ ಅರುಣ್ ಮತ್ತು ಆತನ ಸ್ನೇಹಿತರು ಸಂದೀಪ್ ಮೇಲೆ ಹಲ್ಲೆ ಮಾಡಿದ್ದರು. ಘಟನೆಯಿಂದ ಆತಂಕಗೊಂಡಿದ್ದ ಅರುಣ್ ತಾಯಿ ಅಮರಾವತಿ ಚೆನ್ನೈನಲ್ಲಿರುವ ಸಹೋದರಿಯ ಮನೆಗೆ ಪುತ್ರನನ್ನು ಕಳುಹಿಸಿದ್ದರು. ಅಲ್ಲಿಂದ ಸೋಮವಾರವಷ್ಟೆ ಆತ ವಾಪಸಾಗಿದ್ದ.
ಈ ಬಗ್ಗೆ ತಿಳಿದುಕೊಂಡಿದ್ದ ಸಂದೀಪ್, ರಾತ್ರಿ 8.30ರ ಸುಮಾರಿಗೆ ಸ್ನೇಹಿತರೊಂದಿಗೆ ಮನೆಗೆ ಬಂದಿದ್ದ. ನಂತರ ಅರುಣ್ ಜತೆ ಮಾತನಾಡುವುದಿದೆ ಎಂದು ಆತನ ತಾಯಿಗೆ ಹೇಳಿ, ವಿದ್ಯಾರಣ್ಯಪುರ ಕ್ರಾಸ್‌ನಲ್ಲಿರುವ ಪ್ರಶಾಂತ್ ಹೋಟೆಲ್‌ಗೆ ಕರೆದೊಯ್ದಿದ್ದ.
ಸ್ನೇಹಿತರೊಂದಿಗೆ ಹೋದ ಪುತ್ರ ಎಷ್ಟೊತ್ತಾದರೂ ಮನೆಗೆ ಬರದಿದ್ದರಿಂದ ಗಾಬರಿಗೊಂಡ ತಾಯಿ, ಹೋಟೆಲ್‌ಗೆ ಹುಡುಕಿಕೊಂಡು ಬಂದಿದ್ದಾರೆ. ಈ ವೇಳೆ ಸಂದೀಪ್ ಮತ್ತು ಆತನ ಸ್ನೇಹಿತರು ಅರುಣ್ ಮೇಲೆ ಹಲ್ಲೆ ನಡೆಸುತ್ತಿದ್ದನ್ನು ಕಂಡ ಅವರು ನೆರವಿಗೆ ಕೂಗಿಕೊಂಡಿದ್ದಾರೆ.
ಇದನ್ನು ಗಮನಿಸಿದ ಆರೋಪಿಗಳು, ಅರುಣ್‌ನನ್ನು ಕಾರಿನಲ್ಲಿ ಅಪಹರಿಸಿಕೊಂಡು ಬಾಗಲೂರು ಕ್ರಾಸ್ ಕಡೆಗೆ ಹೋಗಿದ್ದಾರೆ. ನಂತರ ಪಾಳುಬಿದ್ದ ಸಿಮೆಂಟ್ ಇಟ್ಟಿಗೆ ಫ್ಯಾಕ್ಟರಿಯೊಂದರಲ್ಲಿ ಮನಬಂದಂತೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಅರುಣ್‌ನನ್ನು ಗಮನಿಸಿದ ಸ್ಥಳೀಯರು, ಸಮೀಪದ ಆಸ್ಪತ್ರೆಗೆ ಸೇರಿಸಿದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಆತ ಕೊನೆಯುಸಿರೆಳೆದ ಎಂದು ಚಿಕ್ಕಜಾಲ ಪೊಲೀಸರು ತಿಳಿಸಿದರು.
ಘಟನೆ ಸಂಬಂಧ ಹುಣಸಮಾರನಹಳ್ಳಿಯ ಸಂದೀಪ್ (26) ಭರತ್ (23) ಹಾಗೂ ಯೋಗೇಶ್‌ನನ್ನು (25) ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.