ಬುಧವಾರ, ಜನವರಿ 22, 2020
25 °C

ಯುವ ಬಜೆಟ್, ಇಲಾಖೆ ಬಲವರ್ಧನೆ: ಮುಖ್ಯಮಂತ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ದೇಶದ ಮೂಲೆ ಮೂಲೆಗಳಿಂದ ಆಗಮಿಸಿದ ಯುವ ಜನತೆ ತಮ್ಮ ನೆಲದ ವರ್ಣರಂಜಿತ ಸಾಂಸ್ಕೃತಿಕ ಸೊಬಗನ್ನು ಕರ್ನಾಟಕದ ಕರಾವಳಿ ಭಾಗದಲ್ಲಿ ಪಸರಿಸುವ ಮೂಲಕ ಹಾಗೂ ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುವುದರೊಂದಿಗೆ 17ನೇ ರಾಷ್ಟ್ರೀಯ ಯುವಜನೋತ್ಸವ ಪಡುವಣದ ಕಡಲಲ್ಲಿ ಸೂರ್ಯ ಮುಳುಗುತ್ತಿದ್ದಂತೆಯೇ ಗುರುವಾರ ಇಲ್ಲಿ ಆರಂಭಗೊಂಡಿತು.ಹದಿನೇಳು ಸಿಡಿಮದ್ದುಗಳು ಸದ್ದು ಮಾಡುತ್ತಿದ್ದಂತೆಯೇ ಸ್ವಾಮಿ ವಿವೇಕಾನಂದರ ಪ್ರತಿಕೃತಿ ಮೆಲ್ಲಮೆಲ್ಲನೆ ನೆಲದಿಂದ ಮೇಲಕ್ಕೆದ್ದು ಬಂದಿತು. ಬಾನಲ್ಲಿ ಬಾಣ ಬಿರುಸುಗಳ ಚಿತ್ತಾರ ಮೂಡುತ್ತಿದ್ದಂತೆಯೇ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಕೊಂಬು, ಚೆಂಡೆ, ಡೋಲು, ಕಹಳೆಗಳ ಸುನಾದದ ನಡುವೆ ಯುವಜನೋತ್ಸವ ಉದ್ಘಾಟಿಸಿದರು.`ಯುವಜನತೆಯ ಶ್ರೇಯೋಭಿವೃದ್ಧಿಗಾಗಿಯೇ ಪ್ರತ್ಯೇಕ ಬಜೆಟ್ ಮಂಡಿಸುವ ಉದ್ದೇಶ ಸರ್ಕಾರಕ್ಕೆ ಇದೆ. ಮುಂದಿನ ವರ್ಷ ರಾಜ್ಯ ಯುವ ನೀತಿ ಪ್ರಕಟಿಸಲಾಗುವುದು. ರಾಜ್ಯದಲ್ಲಿನ ಯುವಜನ ಮತ್ತು ಕ್ರೀಡಾ ಇಲಾಖೆಯನ್ನು ಬಲಪಡಿಸಲಾಗುವುದು. ಎಲ್ಲಾ ತಾಲ್ಲೂಕುಗಳಲ್ಲೂ ಇಲಾಖೆಗೆ ಸಿಬ್ಬಂದಿ ನೇಮಿಸಲಾಗುವುದು~ ಎಂದು ಅವರು ಘೊಷಿಸಿದಾಗ ಸಭಿಕರಿಂದ ಚಪ್ಪಾಳೆಯ ಸುರಿಮಳೆ.ನೆಹರೂ ಮೈದಾನದಿಂದ ಆರಂಭವಾಗಿದ್ದ ಭವ್ಯ ಮೆರವಣಿಗೆ ಮಂಗಳ ಕ್ರೀಡಾಂಗಣದ ಸಮೀಪ ಬಂದು ತಂಗಿತ್ತು. ಗಣ್ಯರು ವೇದಿಕೆ ಏರುತ್ತಿದ್ದಂತೆಯೇ ಈ ಮೆರವಣಿಗೆ ವೇದಿಕೆಯ ಮುಂಭಾಗ ನಿಧಾನವಾಗಿ ಹಾದು ಹೋದ ಸನ್ನಿವೇಶ ಹೃದಯಂಗಮವಾಗಿತ್ತು. ಅರುಣಾಚಲ ಪ್ರದೇಶದಿಂದ ಆರಂಭಗೊಂಡು ಕರ್ನಾಟಕದವರೆಗೆ ಒಟ್ಟು 26 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳ ಯುವ ಕಲಾವಿದರು ತಮ್ಮ ನಾಡಿನ ಸಾಂಸ್ಕೃತಿಕ ಸೊಗಡನ್ನು ಸೇರಿದ್ದ 30 ಸಾವಿರಕ್ಕೂ ಅಧಿಕ ನೋಡಿ ಕಣ್ತಂಬಿಕೊಂಡರು.ಉತ್ತರ ಪ್ರದೇಶ, ತ್ರಿಪುರ,  ಲಕ್ಷದ್ವೀಪಗಳ ಯುವ ಕಲಾವಿದರ ಹೊರತು ದೇಶದ ಎಲ್ಲಾ ಭಾಗದ ಸಂಸ್ಕೃತಿಯ ರಾಯಭಾರಿಗಳೆನಿಸಿದ ಯುವಜನರ ದರ್ಶನವೂ ಅಲ್ಲಿ ದೊರೆಯಿತು. ತಮ್ಮ ನೆಲದ ಕೆಲ-ಸಂಸ್ಕೃತಿ ಜನಜೀವನವನ್ನು ಪ್ರತಿಬಿಂಬಿಸುತ್ತಾ 5,500 ಮಂದಿಯ ದೊಡ್ಡ ಮೆರವಣಿಗೆಯ ಸಾಲು ವೇದಿಕೆ ಮುಂಭಾಗ ಹಾದು ಹೋದಾಗ ವೇದಿಕೆಯಲ್ಲಿದ್ದ ಗಣ್ಯರಲ್ಲಿ, ನೆರೆದ ಸಭಿಕರಲ್ಲಿ ಕ್ಷಣಕಾಲ ರೋಮಾಂಚನದ ಭಾವ. ಮಂಗಳಾ ಕ್ರೀಡಾಂಗಣ ಪ್ರವೇಶಿಸಿದ ಮೆರವಣಿಗೆಯ ಮೊದಲ ತಂಡ ಸಂಜೆ 5.30ರ ವೇಳೆಗೆ ವೇದಿಕೆ ಮುಂದೆ ಹಾದುಹೋಗಲು ಆರಂಭಿಸಿ ಕೊನೆಯ ತಂಡ ಸಾಗಿದಾಗ ಸಂಜೆ 7.15ರ ಸಮಯ.ರಾಜ್ಯಗಳ ಯುವ ಪ್ರತಿಭೆಗಳ ಪರಿಚಯದ ಬಳಿಕ ವಿವಿಧ ರಾಜ್ಯಗಳಿಂದ ಆಗಮಿಸಿದ ನೆಹರು ಯುವ ಕೇಂದ್ರ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಗಣ್ಯರಿಗೆ ವಂದನೆ ಸ್ವೀಕರಿಸಿ ಮುಂದೆ ನಡೆದರು.ಬಳಿಕ ತೆರೆದುಕೊಂಡದ್ದೇ ಕರ್ನಾಟಕದ ಸಾಂಸ್ಕೃತಿಕ ವೈಭವ. ಶಂಖದಿಂದ ಹಿಡಿದು ಜಗ್ಗಲಿಗೆವರೆಗೆ 50ಕ್ಕೂ ಅಧಿಕ ಕಲಾತಂಡಗಳ ನೂರಾರು ಕಲಾವಿದರು ವೇದಿಕೆಯ ಮುಂಭಾಗ ಬಂದು ಚುಟಕಾಗಿ ಪ್ರದರ್ಶನ ನೀಡಿ ಮುನ್ನಡೆದಾಗ ಕರ್ನಾಟಕದ ಹಿರಿಮೆಗೆ ಗರಿ ಮೂಡಿದಂತಿತ್ತು. ಒಟ್ಟಾರೆ ಮಂಗಳಾ ಕ್ರೀಡಾಂಗಣದ ಅಂಗಳದಲ್ಲಿ ಯುವಜನರ ಉತ್ಸಾಹ, ಉಲ್ಲಾಸ, ಉಮೇದು ಕಣ್ಣಿಗೆ ಕುಕ್ಕುವಂತಿತ್ತು.ಆರಂಭದಲ್ಲಿ ಮೂವರು ಪ್ಯಾರಾಗ್ಲೈಡರ್‌ನಲ್ಲಿ ಮಂಗಳ ಕ್ರೀಡಾಂಗಣದ ಮೇಲ್ಭಾಗ ಹಾರಾಟ ನಡೆಸಿದಾಗ ಎಲ್ಲರ ಕಣ್ಣು ಆಗಸ ನೆಟ್ಟಿತ್ತು. ತ್ರಿವರ್ಣ ಧ್ವಜದ ಬಣ್ಣ ಹೊತ್ತ ನೂರಾರು ಬಲೂನುಗಳು ಆಗಸಕ್ಕೆ ತೇಲಿ ಹೋದಾಗಲೂ ಚೀತ್ಕಾರ ಮೊಳಗಿತು. ಲಘು ವಿಮಾನ ಮೈದಾನದ ಸಮೀಪವೇ ಸಂಚರಿಸಿ ಸಭಿಕರ ಮೇಲೆ ಪುಷ್ಪವೃಷ್ಟಿ ಸುರಿಸಿತು.

ಪ್ರತಿಕ್ರಿಯಿಸಿ (+)