ಗುರುವಾರ , ಮೇ 19, 2022
24 °C

ಯೂರೊ ಫುಟ್‌ಬಾಲ್: ಅಲೊನ್ಸೊ ಮಿಂಚು; ಫ್ರಾನ್ಸ್ ಕನಸು ಭಗ್ನ ;ಸೆಮಿಫೈನಲ್ ಪ್ರವೇಶಿಸಿದ ಸ್ಪೇನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಾನೆಸ್ಕ್ (ರಾಯಿಟರ್ಸ್): ಕ್ಸಾವಿ ಅಲೊನ್ಸೊ ತಂದಿತ್ತ ಎರಡು ಗೋಲುಗಳ ನೆರವಿನಿಂದ ಸ್ಪೇನ್ ತಂಡ 2-0 ರಲ್ಲಿ ಫ್ರಾನ್ಸ್ ವಿರುದ್ಧ ಗೆಲುವು ಪಡೆದು `ಯೂರೊ 2012 ಫುಟ್‌ಬಾಲ್~ ಚಾಂಪಿಯನ್‌ಷಿಪ್‌ನ ಸೆಮಿಫೈನಲ್ ಪ್ರವೇಶಿಸಿತು.ಡಾನ್‌ಬಾಸ್ ಅರೆನಾ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಹಣಾಹಣಿ ಕ್ಸಾವಿ ಅವರಿಗೆ 100ನೇ ಅಂತರರಾಷ್ಟ್ರೀಯ ಪಂದ್ಯವಾಗಿತ್ತು. ಎರಡು ಗೋಲುಗಳ ಮೂಲಕ ಈ ಪಂದ್ಯವನ್ನು ಸ್ಮರಣೀಯವನ್ನಾಗಿಸಿಕೊಂಡ ಅವರು ಸ್ಪೇನ್ ತಂಡದ ಪ್ರಶಸ್ತಿಯ ಕನಸನ್ನು ಜೀವಂತವಾಗಿರಿಸಿಕೊಂಡರು.19ನೇ ನಿಮಿಷದಲ್ಲಿ ತಂಡಕ್ಕೆ ಮುನ್ನಡೆ ತಂದಿತ್ತ ಕ್ಸಾವಿ ಹೆಚ್ಚುವರಿ ಅವಧಿಯಲ್ಲಿ (90+1) ಪೆನಾಲ್ಟಿ ಕಿಕ್ ಅವಕಾಶದಲ್ಲಿ ಇನ್ನೊಂದು ಗೋಲು ಗಳಿಸಿ      ಗೆಲುವನ್ನು ಖಚಿತಪಡಿಸಿಕೊಂಡರು. ಇದೇ ಕ್ರೀಡಾಂಗಣದಲ್ಲಿ ಬುಧವಾರ ನಡೆಯುವ ಸೆಮಿಫೈನಲ್‌ನಲ್ಲಿ ಸ್ಪೇನ್ ತಂಡ ಪೋರ್ಚುಗಲ್ ವಿರುದ್ಧ ಪೈಪೋಟಿ ನಡೆಸಲಿದೆ.ಯೂರೋಪಿನ ಎರಡು ದಿಗ್ಗಜ ತಂಡಗಳ ನಡುವಿನ ಕ್ವಾರ್ಟರ್ ಫೈನಲ್ ಹೋರಾಟ ರೋಚಕತೆಯಿಂದ ಕೂಡಿತ್ತು. ಸ್ಪೇನ್‌ನ ಆಕ್ರಮಣಕಾರಿ ಆಟವನ್ನು ತಡೆಯುವ ನಿಟ್ಟಿನಲ್ಲಿ ಫ್ರಾನ್ಸ್ ಕೋಚ್ ಲಾರೆಂಟ್ ಬ್ಲಾಂಕ್ ಮೊದಲ ಇಲೆವೆನ್‌ನಲ್ಲಿ ಐವರು ಮಿಡ್‌ಫೀಲ್ಡರ್‌ಗಳನ್ನು (4-5-1) ಕಣಕ್ಕಿಳಿಸಿದ್ದರು.ಮತ್ತೊಂದೆಡೆ ಸ್ಪೇನ್ ಕೋಚ್ ವಿನ್ಸೆಂಟ್ ಡೆಲ್ ಬಾಸ್ಕ್ ಆರಂಭದಲ್ಲಿ ಫೆರ್ನಾಂಡೊ ಟೊರೆಸ್ ಬದಲು ಸೆಸ್ ಫ್ಯಾಬ್ರೆಗಸ್‌ಗೆ ಅವಕಾಶ  ನೀಡಿದ್ದರು. ಹಾಲಿ ಚಾಂಪಿಯನ್ ಸ್ಪೇನ್ ತಂಡ ತಾಳ್ಮೆಯ ಆಟದ ಮೂಲಕ ಯಶಸ್ಸು ಸಾಧಿಸಿದರೆ, ಫ್ರಾನ್ಸ್ ತಂಡ ಆಟಗಾರರ ನಡುವಿನ ಹೊಂದಾಣಿಕೆಯ ಕೊರತೆಯಿಂದ ನಿರಾಸೆ ಎದುರಿಸಿತು.19ನೇ ನಿಮಿಷದಲ್ಲಿ ಅಲೊನ್ಸೊ ಸುಂದರ `ಹೆಡರ್~ ಮೂಲಕ ಸ್ಪೇನ್‌ಗೆ ಮೊದಲ ಗೋಲು ತಂದಿತ್ತರು. ಆ್ಯಂಡ್ರೆಸ್ ಇನೀಸ್ತ ಅವರಿಂದ ಚೆಂಡನ್ನು ಪಡೆದುಕೊಂಡ ಜೊರ್ಡಿ ಆಲ್ಬ ಎದುರಾಳಿ ತಂಡದ ಡಿಫೆಂಡರ್‌ಗಳನ್ನು ಯಶಸ್ವಿಯಾಗಿ ತಪ್ಪಿಸಿ ಅಲೊನ್ಸೊಗೆ ಕ್ರಾಸ್ ನೀಡಿದರು. ಅವರು ನಿಖರವಾಗಿ ಹೆಡ್ ಮಾಡಿ ಚೆಂಡನ್ನು ನೆಟ್‌ನೊಳಕ್ಕೆ ಕಳುಹಿಸಿದರು.ಮೊದಲ ಅವಧಿಯ 32ನೇ ನಿಮಿಷದಲ್ಲಿ ಫ್ರಾನ್ಸ್‌ಗೆ ಸಮಬಲ ಸಾಧಿಸುವ ಉತ್ತಮ ಅವಕಾಶ ಲಭಿಸಿತ್ತು. ಆದರೆ ಯೋಹಾನ್ ಕಬಾಯೆ ಫ್ರೀಕಿಕ್‌ನಲ್ಲಿ ಒದ್ದ ಚೆಂಡನ್ನು ಸ್ಪೇನ್ ಗೋಲ್‌ಕೀಪರ್ ಇಕರ್ ಕ್ಯಾಸಿಲ್ಲಾಸ್ ಯಶಸ್ವಿಯಾಗಿ ತಡೆದರು.ದ್ವಿತೀಯಾರ್ಧದಲ್ಲಿ ಫ್ರಾನ್ಸ್ ಸಮಬಲದ ಗೋಲಿಗಾಗಿ ತಕ್ಕಪ್ರಯತ್ನ ನಡೆಸಿತು. ಕೋಚ್ ಲಾರೆಂಟ್ ಬ್ಲಾಂಕ್ ಆಕ್ರಮಣಕಾರಿ ಮಿಡ್‌ಫೀಲ್ಡರ್‌ಗಳಾದ ಸಮಿರ್ ನಸ್ರಿ ಮತ್ತು ಜೆರೆಮಿ ಮೆನೆಜ್ ಅವರನ್ನು ಬದಲಿ ಆಟಗಾರರಾಗಿ ಕಣಕ್ಕಿಳಿಸಿದರು. ಆದರೆ ಸ್ಪೇನ್‌ನ ಬಲಿಷ್ಠ ರಕ್ಷಣಾ ವಿಭಾಗದಲ್ಲಿ ಬಿರುಕು ಕಂಡುಕೊಳ್ಳಲು ಇವರಿಗೂ ಸಾಧ್ಯವಾಗಲಿಲ್ಲ.ಕೊನೆಯ 10 ನಿಮಿಷಗಳಲ್ಲಿ ಫ್ರಾನ್ಸ್ ತನ್ನೆಲ್ಲಾ ಶಕ್ತಿಯನ್ನು ಪ್ರಯೋಗಿಸಿ ಮೇಲಿಂದ ಮೇಲೆ ಆಕ್ರಮಣ ನಡೆಸಿತು. ಸ್ಪೇನ್ ಮಾತ್ರ ಎಲ್ಲ ಒತ್ತಡವನ್ನು ಮೆಟ್ಟಿನಿಂತಿತಲ್ಲದೆ, ಎದುರಾಳಿ ತಂಡಕ್ಕೆ ಗೋಲು ಗಳಿಸುವ ಅವಕಾಶವನ್ನೇ ನೀಡಲಿಲ್ಲ.ಪಂದ್ಯ ಕೊನೆಗೊಳ್ಳಲು ಕೆಲವೇ ಸೆಕೆಂಡ್‌ಗಳಿರುವಾಗ ವಿಜಯಿ ತಂಡ ಎರಡನೇ ಗೋಲು ಗಳಿಸಿತು. ಸ್ಪೇನ್‌ನ ಪೆಡ್ರೊ ರಾಡ್ರಿಗಸ್ ಅವರನ್ನು ಎದುರಾಳಿ ತಂಡದ ಆಂಥೋಣಿ ರೆವಿಲ್ಲೆರ್ ಫೌಲ್ ಮಾಡಿದ್ದಕ್ಕೆ ರೆಫರಿ ಪೆನಾಲ್ಟಿ ವಿಧಿಸಿದರು. ಈ ಅವಕಾಶದಲ್ಲಿ ಅಲೊನ್ಸೊ ಚೆಂಡನ್ನು ಗುರಿ ಸೇರಿಸುವಲ್ಲಿ ಯಾವುದೇ ತಪ್ಪು ಮಾಡಲಿಲ್ಲ.ಸ್ಪೇನ್ ತಂಡಕ್ಕೆ ಕಳೆದ ಏಳು ಪಂದ್ಯಗಳಲ್ಲಿ ಫ್ರಾನ್ಸ್ ವಿರುದ್ಧ ಲಭಿಸಿದ ಮೊದಲ ಗೆಲುವು ಇದಾಗಿದೆ. ಸ್ಪೇನ್ ತಾನಾಡಿದ ಕಳೆದ 18 ಪ್ರಮುಖ ಪಂದ್ಯಗಳಲ್ಲಿ ಸೋಲು ಅನುಭವಿಸಿಯೇ ಇಲ್ಲ. 2010 ವಿಶ್ವಕಪ್ ಟೂರ್ನಿಯ ಲೀಗ್ ಹಂತದಲ್ಲಿ 0-1 ರಲ್ಲಿ ಸ್ವಿಟ್ಜರ್‌ಲೆಂಡ್ ಎದುರು ಸೋಲು ಅನುಭವಿಸಿತ್ತು. ಆ ಬಳಿಕ ತಂಡ ಅಜೇಯವಾಗಿ ಉಳಿದುಕೊಂಡಿದೆ.`ಮೊದಲ ನಿಮಿಷದಿಂದ ಕೊನೆಯವರೆಗೂ ಪಂದ್ಯದ ಮೇಲೆ ನಮಗೆ ಪೂರ್ಣ ಹಿಡಿತ ಸಾಧಿಸಲು ಆಗಿದೆ ಎಂಬುದು ನನ್ನ ಭಾವನೆ. ಗೆಲುವು ಪಡೆಯುವುದು ಸುಲಭವಾಗಿರಲಿಲ್ಲ. ಆದರೆ ನಾವು ಶ್ರೇಷ್ಠ ಪ್ರದರ್ಶನ ನೀಡಿದೆವು~ ಎಂದು ಪಂದ್ಯದ ಬಳಿಕ ಅಲೊನ್ಸೊ ಪ್ರತಿಕ್ರಿಯಿಸಿದ್ದಾರೆ.`ಮೊದಲ ಅವಧಿಯಲ್ಲಿ ಎದುರಾಳಿಗೆ ಗೋಲು ಬಿಟ್ಟುಕೊಟ್ಟದ್ದು ಹಿನ್ನಡೆಯಾಗಿ ಪರಿಣಮಿಸಿತು. 0-0 ಸ್ಕೋರ್‌ನೊಂದಿಗೆ ವಿರಾಮಕ್ಕೆ ತೆರಳುವುದು ನಮ್ಮ ಯೋಜನೆಯಾಗಿತ್ತು~ ಎಂದು ಲಾರೆಂಟ್ ಬ್ಲಾಂಕ್ ನುಡಿದಿದ್ದಾರೆ.`ಸ್ಪೇನ್‌ನ ಲೆಫ್ಟ್ ವಿಂಗ್ ಬಲಿಷ್ಠವಾಗಿದೆ. ಅದಕ್ಕಾಗಿ ಕೆಲವೊಂದು ನಿರ್ದಿಷ್ಟ ಯೋಜನೆಯೊಂದಿಗೆ ಕಣಕ್ಕಿಳಿದಿದ್ದೆವು. ಆದರೆ ನಮ್ಮ ಯೋಜನೆ ತಲೆಕೆಳಗಾಯಿತು~ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.