ಶನಿವಾರ, ಮೇ 21, 2022
25 °C

ಯೂರೊ ಫುಟ್‌ಬಾಲ್ ಸೆಮಿಫೈನಲ್: ಇಟಲಿಗೆ ಕಠಿಣ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾರ್ಸಾ (ರಾಯಿಟರ್ಸ್): ಯುವ ಆಟಗಾರರನ್ನು ನೆಚ್ಚಿಕೊಂಡಿರುವ ಜರ್ಮನಿ ಮತ್ತು ರಕ್ಷಣಾ ವಿಭಾಗದ ಮೇಲೆ ಭರವಸೆ ಇಟ್ಟಿರುವ ಇಟಲಿ ತಂಡಗಳು `ಯೂರೊ- 2012~ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಗುರುವಾರ ಪರಸ್ಪರ ಎದುರಾಗಲಿವೆ.ಇಟಲಿ ಪ್ರಮುಖ ಟೂರ್ನಿಗಳಲ್ಲಿ ಈ ಹಿಂದೆ ಹಲವು ಬಾರಿ ಜರ್ಮನಿ ತಂಡದ ಪ್ರಶಸ್ತಿಯ ಕನಸನ್ನು ನುಚ್ಚುನೂರು ಮಾಡಿತ್ತು. ಯೂರೊ ಮತ್ತು ವಿಶ್ವಕಪ್ ಟೂರ್ನಿಯ ನಾಕೌಟ್ ಹಂತದಲ್ಲಿ ಜರ್ಮನಿ ತಂಡ ಇಟಲಿ ಜೊತೆ ಏಳು ಸಲ ಪೈಪೋಟಿ ನಡೆಸಿದೆ. ಆದರೆ ಒಮ್ಮೆಯೂ ಗೆಲುವು ಪಡೆದಿಲ್ಲ.ಆದ್ದರಿಂದ ಈ ಹಿಂದಿನ ಸೋಲುಗಳಿಗೆ ಮುಯ್ಯಿ ತೀರಿಸಬೇಕೆಂಬ ಲೆಕ್ಕಾಚಾರದೊಂದಿಗೆ ಫಿಲಿಪ್ ಲಾಮ್ ನೇತೃತ್ವದ ಜರ್ಮನಿ ವಾರ್ಸಾದ ನ್ಯಾಷನಲ್ ಕ್ರೀಡಾಂಗಣದಲ್ಲಿ ಕಣಕ್ಕಿಳಿಯಲಿದೆ. ಜರ್ಮನಿ ಟೂರ್ನಿಯಲ್ಲಿ ಆಡಿರುವ ಎಲ್ಲ ಪಂದ್ಯಗಳಲ್ಲಿ ಗೆಲುವು ಪಡೆದಿದೆ. ಯುವ ಆಟಗಾರರನ್ನೇ ಒಳಗೊಂಡಿರುವ ತಂಡ ಇದುವರೆಗೆ ಒಂಬತ್ತು ಗೋಲುಗಳನ್ನು ಗಳಿಸಿದೆ.ಜರ್ಮನಿ ವಿರುದ್ಧ ಹೊಂದಿರುವ ಗೆಲುವಿನ ದಾಖಲೆ ಇಲ್ಲೂ ಮುಂದುವರಿಯಲಿದೆ ಎಂಬ ವಿಶ್ವಾಸವನ್ನು ಇಟಲಿ ಕೋಚ್ ಸೇಸರ್ ಪ್ರಾಂದೆಲ್ಲಿ ವ್ಯಕ್ತಪಡಿಸಿದ್ದಾರೆ. `ಜರ್ಮನಿ ಮುಯ್ಯಿ ತೀರಿಸುವ ತವಕದಲ್ಲಿದೆ ಎಂಬುದು ನಮಗೆ ಗೊತ್ತು. ಪೂರ್ಣ ಸಾಮರ್ಥ್ಯದೊಂದಿಗೆ ನಮ್ಮನ್ನು ಎದುರಿಸಲು ಸಜ್ಜಾಗಿದ್ದಾರೆ. ಆದ್ದರಿಂದ ಎಚ್ಚರಿಕೆಯ ಆಟವಾಡುವುದು ಅಗತ್ಯ~ ಎಂದು ಅವರು ಹೇಳಿದ್ದಾರೆ.ಇಟಲಿ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ 4-2 ರಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿತ್ತು. ಮತ್ತೊಂದೆಡೆ ಜರ್ಮನಿ 4-2 ರಲ್ಲಿ ಗ್ರೀಸ್ ವಿರುದ್ಧ ಗೆಲುವು ಪಡೆದು ಸೆಮಿಫೈನಲ್‌ಗೆ ಪ್ರವೇಶಿಸಿತ್ತು.

ಜರ್ಮನಿ ತಂಡ ಮಿಡ್‌ಫೀಲ್ಡರ್ ಬಾಸ್ಟಿಯನ್ ಶ್ವೆನ್‌ಸ್ಟೀಗರ್, ಮಾರಿಯೊ ಗೊಮೆಜ್, ಲೂಕಾಸ್ ಪೊಡೊಲ್‌ಸ್ಕಿ, ಮಿರೊಸ್ಲಾವ್ ಕ್ಲೋಸ್ ಮತ್ತು ಥಾಮಸ್ ಮುಲ್ಲರ್ ಅವರನ್ನು ನೆಚ್ಚಿಕೊಂಡಿದೆ. `ಈ ಬಾರಿ ಇಟಲಿ ಒಡ್ಡುವ ತಡೆಯನ್ನು ದಾಟಿ ಮುನ್ನಡೆಯುವೆವು~ ಎಂದು ಪೊಡೊಲ್‌ಸ್ಕಿ ನುಡಿದಿದ್ದಾರೆ.ಇಟಲಿ ತಂಡ ಆ್ಯಂಡ್ರೆ ಪಿರ್ಲೊ, ಮಾರಿಯೊ ಬಲೊಟೆಲ್ಲಿ ಮತ್ತು ಡೇನಿಯಲ್ ಡಿ ರೋಸಿ ಅವರಿಂದ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸುತ್ತಿದೆ. ಪಿರ್ಲೊ ಟೂರ್ನಿಯಲ್ಲಿ ಇದುವರೆಗೆ ಅತ್ಯುತ್ತಮ ಆಟ ತೋರಿದ್ದಾರೆ.

ಈ ತಂಡದ ನಾಯಕ ಹಾಗೂ ಗೋಲ್‌ಕೀಪರ್ ಜಾನ್‌ಲಿಯುಜಿ ಬುಫಾನ್ ಕೂಡಾ ಜರ್ಮನಿಗೆ ತಲೆನೋವಾಗಿ ಕಾಡುವ ಸಾಧ್ಯತೆಯಿದೆ. ಟೂರ್ನಿಯಲ್ಲಿ ಒಂಬತ್ತು ಗೋಲುಗಳನ್ನು ಗಳಿಸಿರುವ ಜರ್ಮನಿಗೆ ಇಟಲಿಯ ಬಲಿಷ್ಠ        ರಕ್ಷಣಾ ವಿಭಾಗ ಹಾಗೂ ಗೋಲಿ ಬುಫಾನ್ ಅವರನ್ನು ತಪ್ಪಿಸುವುದು ಸುಲಭವಲ್ಲ.ಇಟಲಿ ತನ್ನ `ಫಿನಿಶಿಂಗ್~ನಲ್ಲಿ ಸುಧಾರಣೆ ಕಂಡುಕೊಳ್ಳುವತ್ತ ಗಮನಹರಿಸಿದೆ. ಏಕೆಂದರೆ ಇಂಗ್ಲೆಂಡ್ ವಿರುದ್ಧದ ಎಂಟರಘಟ್ಟದ ಪಂದ್ಯದಲ್ಲಿ ತಂಡವು ಚೆಂಡಿನ ಮೇಲೆ ಶೇ. 68 ರಷ್ಟು ನಿಯಂತ್ರಣ ಸಾಧಿಸಿತ್ತು. ಮಾತ್ರವಲ್ಲ 35 ಸಲ ಚೆಂಡನ್ನು ಗುರಿ ಸೇರಿಸುವ ಪ್ರಯತ್ನ ನಡೆಸಿತ್ತು. ಆದರೆ ಒಂದರಲ್ಲೂ ಯಶ ಕಂಡಿರಲಿಲ್ಲ.ನಾಕೌಟ್ ಪಂದ್ಯಗಳಲ್ಲಿ ಇಟಲಿ ವಿರುದ್ಧ ಜರ್ಮನಿ ಯಶಸ್ಸು ಗಳಿಸಿದ್ದ ಕಡಿಮೆ ಎಂಬ ಪ್ರಶ್ನೆ ಎದುರಾದಾಗ ಕೋಚ್ ಜೋಕಿಮ್ ಲೋವ್, `ಇತಿಹಾಸವನ್ನು ಮರೆತಿದ್ದೇವೆ. ಈ ಹಿಂದಿನ ಸೋಲುಗಳು ನಮ್ಮನ್ನು ಕಾಡುತ್ತಿಲ್ಲ~ ಎಂದು ಉತ್ತರಿಸಿದ್ದಾರೆ.ಇಟಲಿ ಮತ್ತು ಇಂಗ್ಲೆಂಡ್ ನಡುವಿನ ಹಲವು ಪಂದ್ಯಗಳು ಸ್ಮರಣೀಯವಾಗಿ ಉಳಿದುಕೊಂಡಿವೆ. ಮೆಕ್ಸಿಕೊದಲ್ಲಿ ನಡೆದ 1970ರ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯ ಅದರಲ್ಲಿ ಮಹತ್ವದ್ದು. ಅಂದು ಇಟಲಿ 4-3 ರಲ್ಲಿ ಗೆಲುವು ಪಡೆದಿತ್ತು. 2006ರ ವಿಶ್ವಕಪ್ ಟೂರ್ನಿಯ ನಾಲ್ಕರಘಟ್ಟದ ಪಂದ್ಯದಲ್ಲಿ ಇಟಲಿ 2-0 ರಲ್ಲಿ ಜರ್ಮನಿಯನ್ನು ಮಣಿಸಿತ್ತು. ಗೆಲುವಿನ ಗೋಲು ಪಂದ್ಯದ ಹೆಚ್ಚುವರಿ ಅವಧಿಯಲ್ಲಿ ದಾಖಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.