ಮಂಗಳವಾರ, ಮಾರ್ಚ್ 2, 2021
26 °C

ಯೋಗಗುರುವಿನ ಜನ್ಮಸ್ಥಾನ : ವಿಶೇಷಗಳ ಮಹಾತಾಣ

ಪ್ರಜಾವಾಣಿ ವಾರ್ತೆ/ ಮಾಣಿಕ ಆರ್.ಭುರೆ Updated:

ಅಕ್ಷರ ಗಾತ್ರ : | |

ಯೋಗಗುರುವಿನ ಜನ್ಮಸ್ಥಾನ : ವಿಶೇಷಗಳ ಮಹಾತಾಣ

ಬಸವಕಲ್ಯಾಣ:  ಯೋಗ ಮತ್ತು ಆಯುರ್ವೇದದಲ್ಲಿ ಪ್ರಾವೀಣ್ಯತೆ ಪಡೆದು ಜನತೆಗೆ ಅದರ ಜ್ಞಾನವನ್ನು ಧಾರೆಯೆರೆದು `ಯೋಗಗುರು~ ಎನಿಸಿದ್ದ ನಾಗಭೂಷಣ ಶಿವಯೋಗಿಗಳ ಜನ್ಮ ಸ್ಥಾನ ತಾಲ್ಲೂಕಿನ ಮುಚಳಂಬ ಗ್ರಾಮ.

 

ಇದು ಐತಿಹಾಸಿಕವಾಗಿಯೂ ಮಹತ್ವ ಪಡೆದಿದ್ದು ಇಲ್ಲಿನ ಶಾಸನ ಕಲ್ಲುಗಳು, ಹಳೆಯ ರಾಮಲಿಂಗೇಶ್ವರ ದೇವಸ್ಥಾನ ಮತ್ತು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಮೂರ್ತಿಗಳು ಹಾಗೂ ಕೆತ್ತನೆಯ ಕಲ್ಲುಗಳು ಇದಕ್ಕೆ ಸಾಕ್ಷಿಯಾಗಿವೆ.ನಾಗಭೂಷಣರು ಗ್ರಾಮದ ಅಪ್ಪಟ ರೈತ ಕುಟುಂಬವಾದ ಮಾಶೆಟ್ಟೆ ಮನೆತನದಲ್ಲಿ ಹುಟ್ಟಿದರು. ಮೊದಲು ಎಲ್ಲರಂತೆ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಅವರಲ್ಲಿದ್ದ ಅಧ್ಯಾತ್ಮದೆಡೆಗಿನ ತುಡಿತ ಸಂಸಾರದ ಮೋಹದಿಂದ ಬಿಡಿಸಿಕೊಳ್ಳುವಂತೆ ಮಾಡಿತು. ಆದ್ದರಿಂದ ಅವರು ದೇಶಪರ್ಯಟನೆ ಕೈಗೊಂಡರು.ಹುಬ್ಬಳ್ಳಿಯ ಸಿದ್ಧಾರೂಢರು ಮತ್ತು ಉತ್ತರ ಭಾರತದ ಪ್ರಮುಖ ಸಂತ ರಮಣ ಮಹರ್ಷಿಗಳ ಸತ್ಸಂಗದಲ್ಲಿದ್ದು ಜ್ಞಾನ ಪಡೆದು ಗ್ರಾಮಕ್ಕೆ ಹಿಂದಿರುಗಿ ಯೋಗಶಾಲೆ ಆರಂಭಿಸಿದರು. ಆಯುರ್ವೇದದ ಮೂಲಕ ಸಾವಿರಾರು ಜನರನ್ನು ರೋಗಮುಕ್ತರನ್ನಾಗಿ ಮಾಡಿದರು. ಕುಷ್ಠರೋಗ ಗುಣಪಡಿಸುವಲ್ಲಿ ಅವರು ಸಿದ್ಧಹಸ್ತರಾಗಿದ್ದರು. ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರೂ ತಿಂಗಳಗಟ್ಟಲೇ ಇಲ್ಲಿದ್ದು ಉಪಚಾರ ಪಡೆದಿದ್ದಾರೆ.ಹೀಗೆ ತಮ್ಮ ಕಾರ್ಯದ ಮೂಲಕ ಜನಮನದಲ್ಲಿ `ಶಿವಯೋಗಿ~ಯಾಗಿ ನೆಲೆಗೊಂಡರು. 1970ರಲ್ಲಿ ನಿಧನರಾದರು. ಗ್ರಾಮದಲ್ಲಿ ಅವರ ದೇವಸ್ಥಾನ ಕಟ್ಟಲಾಗಿದೆ. ಶಿವಯೋಗಿಗಳು ಆಯುರ್ವೇದ ಮತ್ತು ಯೋಗದ ಬಗ್ಗೆ ಬರೆದ ಟಿಪ್ಪಣೆಗಳು ಅಲ್ಲಲ್ಲಿ ದೊರೆಯುತ್ತಿದ್ದು ಮಠದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ ಅವುಗಳನ್ನು ಸಂಗ್ರಹಿಸಿ ಗ್ರಂಥ ಪ್ರಕಟಿಸುವ ಕಾರ್ಯ ಕೈಗೊಂಡಿದ್ದಾರೆ.ಇಲ್ಲಿನ ರಾಮಲಿಂಗೇಶ್ವರ ದೇವಸ್ಥಾನ 12 ನೇ ಶತಮಾನದ್ದು ಎಂಬುದು ಮಂದಿರದ ಎದುರಿನ ಶಾಸನ ಕಲ್ಲಿನಿಂದ ಗೊತ್ತಾಗುತ್ತದೆ. ಗ್ರಾಮದ ಪ್ರಜ್ಞಾವಂತ ನೌಕರರ ಸಂಘದಿಂದ ಕಲ್ಲಿನ ಕೆತ್ತನೆಯ ಕಂಬಗಳಿಂದ ಕಟ್ಟಲಾದ ಈ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಅಭಿವೃದ್ಧಿ ನಡೆಸಲಾಗಿದೆ. ಇಲ್ಲಿರುವ ಪವಾಡ ಪುರುಷ ಯಲ್ಲಾಲಿಂಗೇಶ್ವರ ದೇವಸ್ಥಾನವೂ ಪ್ರಸಿದ್ಧವಾಗಿದೆ. ಅಂಬೇಡ್ಕರ ಭವನ ಮತ್ತು ಚರ್ಚ್‌ನ ಮೂಲಕವೂ ರಚನಾತ್ಮಕ ಕಾರ್ಯ ಕೈಗೊಳ್ಳಲಾಗಿದೆ.ಹೈದ್ರಾಬಾದ್ ವಿಮೋಚನಾ ಚಳವಳಿಯಲ್ಲಿ ಇಲ್ಲಿನ 22 ಜನರು ಹುತಾತ್ಮರಾಗಿದ್ದಾರೆ. ಗೋರ್ಟಾ ಹತ್ಯಾಕಾಂಡ ತಡೆಯಲು ಹೋಗಿ ಇಲ್ಲಿನವರು ಹತರಾದರು ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.ಗ್ರಾಮದ ಸುತ್ತ ಫಲವತ್ತಾದ ಕಪ್ಪುಭೂಮಿ ಇದೆ. ಇಲ್ಲಿ ಬೆಳೆದ ಬಿಳಿಜೋಳ `ಮುಚಳಂಬಿ ಜೋಳ~ ಎಂದೇ ಪ್ರಸಿದ್ಧವಾಗಿದೆ. ಇಲ್ಲಿನ ಅರ್ಜುನ ಕಾಂಬಳೆ ಮನೆತನದವರು ಸಿದ್ಧಪಡಿಸುವ ಚಪ್ಪಲಿಗಳು ಕಂಪೆನಿಯ ಚಪ್ಪಲಿಗಳಂತೆ ಇರುವುದರಿಂದ ಈ ಭಾಗದವರು ಇದನ್ನೇ ಖರೀದಿಸುತ್ತಾರೆ.ಇಲ್ಲಿ ಮನೆಮನೆಗೆ ರಾಜಕೀಯ ಮುಖಂಡರಿದ್ದಾರೆ. ಆದರೂ ಗ್ರಾಮದಲ್ಲಿ ಅನೇಕ ಸಮಸ್ಯೆಗಳಿವೆ. ಪ್ರಾಥಮಿಕ ಮತ್ತು ಪ್ರೌಢಶಾಲೆಯ ಕಟ್ಟಡ ಶಿಥಿಲವಾಗಿದ್ದು ಹೊಸ ಕಟ್ಟಡ ಮಂಜೂರಾಗಿದೆ ಎಂದು ಕೆಲ ವರ್ಷಗಳಿಂದ ಹೇಳಲಾಗುತ್ತಿದ್ದರೂ ನಿರ್ಮಾಣ ಕಾರ್ಯ ನಡೆಯುತ್ತಿಲ್ಲ. ಅಂಗನವಾಡಿ ಕಟ್ಟಡ ಮತ್ತು ಆರೋಗ್ಯ ಸಹಾಯಕಿಯರ ಕೇಂದ್ರ ಹಾಳಾಗಿದೆ. ದಲಿತರ ಓಣಿ ಹಾಗೂ ಇತರೆಡೆ ಸಿಮೆಂಟ್ ರಸ್ತೆ ನಿರ್ಮಿಸಬೇಕಾಗಿದೆ.ಚರಂಡಿ ನೀರು ಹರಿದು ಹೋಗಲು ಜಾಗ ಇಲ್ಲದ್ದರಿಂದ ಅಲ್ಲಲ್ಲಿ ಹೊಲಸು ನೀರಿನ ಹೊಂಡಗಳು ನಿರ್ಮಾಣವಾಗಿವೆ. ಚುಳಕಿನಾಲಾ ಜಲಾಶಯ ಪಕ್ಕದಲ್ಲಿದ್ದರೂ ಕುಡಿಯುವ ನೀರಿನ ಸಮಸ್ಯೆ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.