ಭಾನುವಾರ, ಫೆಬ್ರವರಿ 28, 2021
23 °C
ನಗರ ಸಂಚಾರ - ಕೊಪ್ಪಳ: ಹೆಚ್ಚಿದ ಆರೋಗ್ಯ ಕಾಳಜಿ, ಒತ್ತಡ ನಿವಾರಣೆಗೆ ಆದ್ಯತೆ

ಯೋಗದತ್ತ ನಗರದ ಜನತೆಯ ಚಿತ್ತ

ಶರತ್‌ ಹೆಗ್ಡೆ Updated:

ಅಕ್ಷರ ಗಾತ್ರ : | |

ಯೋಗದತ್ತ ನಗರದ ಜನತೆಯ ಚಿತ್ತ

ಕೊಪ್ಪಳ: ನಗರದ ಜನತೆ ಇದೀಗ ಆರೋಗ್ಯ ಕಾಳಜಿಗೆ ಹೆಚ್ಚು ಆದ್ಯತೆ ಕೊಡುತ್ತಿದ್ದಾರೆ. ಅದಕ್ಕೊಂದು ಹೊಸ ಸೇರ್ಪಡೆ ಯೋಗಾಸನ.

ನಗರದ ವಿವಿಧ ಭಾಗದಲ್ಲಿ ಬೆಳಿಗ್ಗೆ, ಸಂಜೆ ಯೋಗಾಸನ ನಿರತರು ಕಾಣಸಿಗುತ್ತಾರೆ. ಅಂತರರಾಷ್ಟ್ರೀಯ ಯೋಗ ದಿನಾಚರಣೆ ಬಂದ ಮೇಲಂತೂ ಇದಕ್ಕೊಂದು ವ್ಯವಸ್ಥಿತ ರೂಪ ಸಿಕ್ಕಿದೆ.ನಗರದಲ್ಲಿ ಪತಂಜಲಿ ಯೋಗ ಸಮಿತಿ, ರಾಮಕೃಷ್ಣ ವಿವೇಕಾಶ್ರಮದ ಸಹಯೋಗದ ಶಿಬಿರಗಳು, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಪತ್ರಕರ್ತ ಚಾಮರಾಜ ಸವಡಿ ನೇತೃತ್ವದ ತಂಡಗಳು ಅಲ್ಲಲ್ಲಿ ಯೋಗಾಭ್ಯಾಸಿಗಳಿಗೆ ನಿರಂತರ ವೇದಿಕೆ ಒದಗಿಸಿವೆ.ಯೋಗ ದಿನಾಚರಣೆ ಆರಂಭವಾಗುತ್ತಿದ್ದಂತೆಯೇ ಕೆಲವು ಯೋಗ ತಂಡಗಳು ಹುಟ್ಟಿಕೊಂಡು ಆಚರಣೆ ಮುಗಿಯುತ್ತಿದ್ದಂತೆಯೇ ಹಾಗೇ ಮರೆಯಾದದ್ದೂ ಈ ಕ್ಷೇತ್ರದ ಇನ್ನೊಂದು ಮುಖ. ಉಳಿದಂತೆ ಏಕಾಂಗಿಯಾಗಿ ಅಭ್ಯಾಸ ನಿರತರಾಗಿರುವವರಿಗೂ ಕೊರತೆ ಇಲ್ಲ. ಒಟ್ಟಿನಲ್ಲಿ ಈ ವರ್ಷ ಯೋಗಾಭ್ಯಾಸಕ್ಕೆ ನಗರದ ಜನತೆ ಹೆಚ್ಚು ಆದ್ಯತೆ ಕೊಟ್ಟಿದ್ದಾರೆ.ನಗರದ ಸಾರ್ವಜನಿಕ ಮೈದಾನದಲ್ಲಿ ಇತ್ತೀಚೆಗೆ ಧಾರವಾಡ ಮನಗುಂಡಿಯ ಗುರುಬಸವ ಮಹಾಮನೆಯ ನಿಸರ್ಗ ಚಿಕಿತ್ಸಾ ತಜ್ಞ ಬಸವಾನಂದ ಸ್ವಾಮೀಜಿ ನೇತೃತ್ವದಲ್ಲಿ ಯೋಗ ಮತ್ತು ನಿಸರ್ಗ ಚಿಕಿತ್ಸೆಯ ಉಚಿತ ಶಿಬಿರ ನಡೆಯಿತು.

ನೂರಾರು ಮಂದಿ ಹಾಜರಾಗಿದ್ದೂ ಅಲ್ಲದೇ ಆರೋಗ್ಯ ಸಂಬಂಧಿ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. 21 ದಿನಗಳ ಉಪವಾಸ ಮತ್ತು ಜಲ ಚಿಕಿತ್ಸೆಯ ಪರಿಣಾಮ ಅತಿ ತೂಕ ಇಳಿಸಿಕೊಳ್ಳಲು ನೆರವಾಯಿತು ಎಂಬುದು ಫಲಿತಾಂಶ ಪಡೆದವರ ಅಭಿಮತ.ಇತ್ತ ಪತಂಜಲಿ ಯೋಗ ಸಮಿತಿ 10 ವರ್ಷಗಳಿಂದ ಜಿಲ್ಲೆಯಲ್ಲಿ ಸದ್ದಿಲ್ಲದೇ ಕಾರ್ಯನಿರ್ವಹಿಸುತ್ತಿದೆ. ಭಾಗ್ಯನಗರ, ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ ಆವರಣ, ಗವಿಸಿದ್ದೇಶ್ವರ ಡಿ.ಇಡಿ ಕಾಲೇಜು ಆವರಣದಲ್ಲಿ ಶಿಬಿರ ಏರ್ಪಡಿಸಿದ್ದಾರೆ. ಈ ವರ್ಷ ಒಂದು ಹೆಜ್ಜೆ ಮುಂದುವರಿದ ಸಮಿತಿಯು ಯೋಗ ಸಹ ಶಿಕ್ಷಕರ ತರಬೇತಿ ಶಿಬಿರ ಹಮ್ಮಿಕೊಂಡಿದೆ.ಯೋಗ ಶಿಕ್ಷಕರಾಗಲು ಬಯಸುವವರಿಗೆ 100 ಗಂಟೆಗಳ ವೃತ್ತಿಪರ ತರಬೇತಿ ನೀಡಲಾಗುತ್ತಿದೆ. ಶಾಲಾ ಕಾಲೇಜುಗಳ ದೈಹಿಕ ಶಿಕ್ಷಕರು,

ಆಸಕ್ತರು ಈ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ.ಕೇವಲ ಯೋಗ ಮಾತ್ರವಲ್ಲ. ಆಹಾರ ಪದ್ಧತಿ, ಜೀವನ ಶೈಲಿ, ರಕ್ತದಾನದ ಮಹತ್ವ, ಉಪವಾಸ ಪ್ರಯೋಜನಗಳು ಸೇರಿದಂತೆ ಆರೋಗ್ಯಕರ ಬದುಕಿನ ಹಲವು ಆಯಾಮಗಳನ್ನು ತಿಳಿಹೇಳಲಾಗುತ್ತದೆ ಎಂದು ಯೋಗ ಸಮಿತಿ ಉಪಪ್ರಭಾರಿ ಭೀಮಸೇನ ಮೇಘರಾಜ್‌ (ಮೊಬೈಲ್‌: 96637 99777).ಒತ್ತಡದ ಬದುಕು, ಬದಲಾದ ಜೀವನಶೈಲಿ, ಕಾಡುತ್ತಿರುವ ಹೊಸ ಹೊಸ ಸಮಸ್ಯೆಗಳನ್ನು ಸ್ವಲ್ಪಮಟ್ಟಿಗಾದರೂ ನಿವಾರಿಸಲು ಯೋಗಾಭ್ಯಾಸಕ್ಕೆ ಒಗ್ಗಿಕೊಂಡಿದ್ದೇವೆ ಎನ್ನುತ್ತಾರೆ ಯೋಗ ನಿರತರು.

*

ವಿಶ್ವ ಯೋಗ ದಿನಾಚರಣೆ ಜಾರಿಗೆ ಬಂದ ಮೇಲೆ ಯೋಗಾಸಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

-ಭೀಮಸೇನ ಮೇಘರಾಜ್‌, ಉಪ ಪ್ರಭಾರಿ, ಪತಂಜಲಿ ಯೋಗ ಸಮಿತಿ ಕೊಪ್ಪಳ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.