ಬುಧವಾರ, ಏಪ್ರಿಲ್ 14, 2021
25 °C

ಯೋಗೇಶ್ವರ್ ಗೆದ್ದರೆ ಸಚಿವ ಸ್ಥಾನ: ಸಿಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಚನ್ನಪಟ್ಟಣದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರನ್ನು ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸಿದರೆ ಅವರನ್ನು ಸಚಿವರನ್ನಾಗಿ ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.ಬಿಜೆಪಿ ಅಭ್ಯರ್ಥಿ ಯೋಗೇಶ್ವರ್ ಪರ ಮತಯಾಚನೆಗೆ ಚನ್ನಪಟ್ಟಣದ ಖಾಸಗಿ ಬಸ್ ನಿಲ್ದಾಣದ ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ  ಬಹಿರಂಗ ಸಭೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಕನಿಷ್ಠ 25 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿ ಕೊಡಿ, ನಾವು ಅವರನ್ನು ಸಚಿವರನ್ನಾಗಿ ನಿಮ್ಮ ಕ್ಷೇತ್ರಕ್ಕೆ ಕಳುಹಿಸುತ್ತೇವೆ ಎಂದು ಅವರು ಹೇಳಿದರು.ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಹಾಗೂ ಹಳೆ ಮೈಸೂರು ಪ್ರದೇಶದಲ್ಲಿ ಪಕ್ಷವನ್ನು ಸಂಘಟಿಸಲು ಯೋಗೇಶ್ವರ್ ಅವರನ್ನು ಸಚಿವರನ್ನಾಗಿಸುತ್ತೇವೆ. ಈಗಾಗಲೇ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಜವಾಬ್ದಾರಿಯುತ ಸ್ಥಾನದಲ್ಲಿದುಕೊಂಡು ಈ ಮಾತನ್ನು ಹೇಳಿದ್ದಾರೆ. ಸಂಸದ ಅನಂತಕುಮಾರ್ ಅವರೂ ಅನುಮೋದಿಸಿದ್ದಾರೆ. ಅದಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಅವರು ತಿಳಿಸಿದರು.ಮಾದರಿ ತಾಲ್ಲೂಕು ಮಾಡಲು ಬದ್ಧ: ಚನ್ನಪಟ್ಟಣವನ್ನು ಮಾದರಿ ತಾಲ್ಲೂಕನ್ನಾಗಿ ಮಾಡಲು ಎಷ್ಟು ಬೇಕೋ ಅಷ್ಟು ಹಣ ಬಿಡುಗಡೆ ಮಾಡಲು ನಾನು ಸಿದ್ಧನಿದ್ದೇನೆ. ತಾಲ್ಲೂಕಿಗೆ ಅಗತ್ಯವಿರುವ ಶಿಂಷಾ-ಇಗ್ಗಲೂರು ಏತ ನೀರಾವರಿ ಯೋಜನೆಯ ಜಾರಿಗೆ ಈಗಾಗಲೇ ಸರ್ಕಾರ 150 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಚುನಾವಣೆ ಮುಗಿದ ನಂತರ ಈ ಯೋಜನೆ ಅನುಷ್ಠಾನಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.ಕ್ಷೇತ್ರದಲ್ಲಿ ಸ್ಥಗಿತಗೊಂಡಿರುವ ರೇಷ್ಮೆ ಕಾರ್ಖಾನೆಯನ್ನು 3 ತಿಂಗಳಲ್ಲಿ ಪುನರಾರಂಭ ಮಾಡಿಸಲಾಗುವುದು. ಹಿಂದಿನ ಸರ್ಕಾರಗಳು ಈ ಕಾರ್ಖಾನೆಯನ್ನೇ ಮುಚ್ಚಲು ಮುಂದಾಗಿದ್ದವು. ಆದರೆ ನಮ್ಮ ಸರ್ಕಾರ ಅದಕ್ಕೆ ಜೀವ ತುಂಬುವ ಕೆಲಸ ಮಾಡಲಿದೆ. ಗೊಂಬೆಗಳ ನಾಡಾದ ಚನ್ನಪಟ್ಟಣದಲ್ಲಿ ಗೊಂಬೆ ಉತ್ಪಾದನೆಯ ಅಭಿವೃದ್ಧಿಗೆ ಅಗತ್ಯವಾದ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.ಗುಡಿಸಲು ರಹಿತ ತಾಲ್ಲೂಕು: ತಾಲ್ಲೂಕಿನಲ್ಲಿ ಒಂದೇ ಒಂದು ಗುಡಿಸಲು ಇರಬಾರದು. ಗುಡಿಸಲು ರಹಿತ ಹಾಗೂ ಮಾದರಿ ತಾಲ್ಲೂಕಾಗಿ ಚನ್ನಪಟ್ಟಣವನ್ನು ಅಭಿವೃದ್ಧಿ ಮಾಡಲು ಅಗತ್ಯ ಕ್ರಮವನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದರು.ಅಲ್ಪಸಂಖ್ಯಾತರನ್ನು ಪಕ್ಷದಿಂದ ದೂರ ಇಡುವ ಹುನ್ನಾರವನ್ನು ಕೆಲವರು ಮಾಡಿದ್ದಾರೆ. ಆದರೆ ರಾಜ್ಯ ಸರ್ಕಾರ ಈ ಬಾರಿ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ 1,086 ಕೋಟಿ ರೂಪಾಯಿ ಮೀಸಲಿಟ್ಟಿದೆ. ಎಸ್ಸಿ/ಎಸ್.ಟಿ ಜನರ ಅಭಿವೃದ್ಧಿಗೆ 6,500 ಕೋಟಿ ಒದಗಿಸಲಾಗಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಶೇ 1ರ ಬಡ್ಡಿ ದರದಲ್ಲಿ ರೈತರಿಗೆ ಸಾಲ ಒದಗಿಸಿದ ಸರ್ಕಾರ ನಮ್ಮದು. ರೈತರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಅಗತ್ಯ ಆರ್ಥಿಕ ನೆರವು ಒದಗಿಸುವುದರ ಜತೆಗೆ ಮೊಟ್ಟ ಮೊದಲ ಬಾರಿಗೆ ಕೃಷಿ ಬಜೆಟ್ ಮಂಡಿಸಿದ ಕೀರ್ತಿ ರಾಜ್ಯದ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ ಎಂದರು.ಕೇಂದ್ರದ ವಿರುದ್ಧ ವಾಗ್ದಾಳಿ: ರೇಷ್ಮೆ ಆಮದು ಸುಂಕವನ್ನು ಕಡಿತಗೊಳಿಸುವ ಮೂಲಕ ಕೇಂದ್ರ ಸರ್ಕಾರದ ಈ ಭಾಗದ ರೇಷ್ಮೆ ಬೆಳೆಗಾರರ ಜೀವನದ ಜತೆ ಚಲ್ಲಾಟವಾಡುತ್ತಿದೆ. ಈ ಮೂಲಕ ರೇಷ್ಮೆ ಬೆಳೆಗಾರರ ಮೇಲೆ ಚಪ್ಪಡಿ ಕಲ್ಲನ್ನು ಕೇಂದ್ರ ಸರ್ಕಾರ ಎಳೆದಿದೆ ಎಂದು ಮುಖ್ಯಮಂತ್ರಿ ದೂರಿದರು.ಅಳುವವರಿಗೆ ಪಾಠಕಲಿಸಿ: ‘ಕೀಳುಮಟ್ಟದ ರಾಜಕೀಯ ಮಾಡುವವರಿಗೆ, ಗ್ಲಿಸರಿನ್ ಹಾಕಿಕೊಂಡು ಅಳುವವರಿಗೆ ಜನತೆ ಜನತೆ ಪಾಠ ಕಲಿಸಬೇಕು’ ಎಂದ ಅವರು, ‘ಇಲ್ಲಿಯೇ ಶವಯಾತ್ರೆ ಮಾಡಿ, ಸಮಾಧಿ ಮಾಡಿ, ಅಂತ್ಯಕ್ರಿಯೆ ಮಾಡಿ ಎಂಬ ಮಾತುಗಳು ನಡೆಯುವುದಿಲ್ಲ’ ಎಂದು ಪರೋಕ್ಷವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಟೀಕಿಸಿದರು.ಹಿರಿಯರಾದ ಅವರು 100 ವರ್ಷ ಬದುಕಲಿ. ಸಾಮಾನ್ಯವಾಗಿ 70 ವರ್ಷದ ನಂತರ ಸನ್ಯಾಸತ್ವ ತೆಗೆದುಕೊಂಡು ಮಕ್ಕಳು, ಮೊಮ್ಮಕ್ಕಳು ಮತ್ತು ಕುಟುಂಬದ ಜತೆ ಕಾಲ ಕಳೆಯಬೇಕಾದ ಈ ಕಾಲದಲ್ಲಿ ಶವಯಾತ್ರೆ, ಮಣ್ಣು, ಸಂಸ್ಕಾರದಂತಹ ಮಾತುಗಳನ್ನು ಆಡುವುದನ್ನು ಬಿಡಿ’ ಎಂದು ಅವರು ಹೇಳಿದರು.ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ಮಾತನಾಡಿ, ಯೋಗೇಶ್ವರ್ ಅವರನ್ನು ಗೆಲ್ಲಿಸಿದರೆ ಸಚಿವರನ್ನಾಗಿಸಲಾಗುವುದು ಎಂದು ಪುನರುಚ್ಚರಿಸಿದರು.

ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಮಾತನಾಡಿ, ‘ಕ್ಷೇತ್ರಕ್ಕೆ ಅತ್ಯಗತ್ಯವಾಗಿರುವ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಿದರೆ ಅದೇ ನನಗೆ ಸಚಿವ ಸ್ಥಾನ ಕೊಟ್ಟಷ್ಟು ತೃಪ್ತಿಯಾಗುತ್ತದೆ’ ಎಂದರು.ಸಂಸದ ಅನಂತ್ ಕುಮಾರ್, ಸಂಸದೆ ಹೇಮಾಮಾಲಿನಿ, ಸಚಿವರಾದ ಶೋಭಾ ಕರಂದ್ಲಾಜೆ, ಜಗದೀಶ್ ಶೆಟ್ಟರ್, ಬಿ.ಎನ್.ಬಚ್ಚೇಗೌಡ, ರಾಮದಾಸ್, ವಿ. ಸೋಮಣ್ಣ, ಶಾಸಕರಾದ ಶ್ರೀನಿವಾಸ್, ಸಿ.ಟಿ.ರವಿ, ಭಾರತಿಶೆಟ್ಟಿ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಜಿ.ಟಿ.ದೇವೇಗೌಡ ಮೊದಲಾದವರು ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.