ಗುರುವಾರ , ಮಾರ್ಚ್ 4, 2021
30 °C

ರಂಗಕರ್ಮಿಗಳ ಆತ್ಮವಿಶ್ವಾಸದ ಪ್ರತೀಕ ಸಿಜಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಂಗಕರ್ಮಿಗಳ ಆತ್ಮವಿಶ್ವಾಸದ ಪ್ರತೀಕ ಸಿಜಿಕೆ

ಬೆಂಗಳೂರು: `ರಂಗಭೂಮಿಯ ಸಾವಿರಾರು ಕಲಾವಿದರಿಗೆ ಧೈರ್ಯ ತುಂಬಿದ ಸಿಜಿಕೆ, ರಂಗಕರ್ಮಿಗಳ ಆತ್ಮವಿಶ್ವಾಸದ ಪ್ರತೀಕದಂತಿದ್ದಾರೆ~ ಎಂದು ಕಲಾ ನಿರ್ದೇಶಕ ಶಶಿಧರ ಅಡಪ ಮೆಚ್ಚುಗೆ ವ್ಯಕ್ತಪಡಿಸಿದರು.ರಂಗ ನಿರಂತರ ಸಂಸ್ಥೆ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಿಜಿಕೆ ನೆನಪು ಹಾಗೂ `ಚೌಟಾಯನ~ ಡಿ.ಕೆ.ಚೌಟ ಅವರ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.`ರಂಗಭೂಮಿ ಒಂದು ಕಾಲದಲ್ಲಿ ಕೆಲವೇ ಮಂದಿ ಸಂಭಾವಿತರಿಗೆ ಸೇರಿತ್ತು. ಅದು ಎಲ್ಲರಿಗೂ ದಕ್ಕುವಂತೆ ಸಿಜಿಕೆ ಮಾಡಿದರು. ರಂಗಭೂಮಿಯ ಅನೇಕರ ವ್ಯಕ್ತಿತ್ವವನ್ನು ಅವರು ರೂಪಿಸಿದರು. ಒಂದು ಚೇತನವಾಗಿ ಅವರು ಸದಾ ನಮ್ಮ ಜತೆಗಿದ್ದಾರೆ~ ಎಂದರು.`ಮಾತನಾಡಿದಂತೆ ಮಾಡು ಎಂಬುದು ಸಿಜಿಕೆ ನಿಲುವಾಗಿತ್ತು. ಸುಮ್ಮನೆ ಕೂರುವುದಕ್ಕಿಂತ ಸರಿಯೋ ತಪ್ಪೋ ಏನಾದರೂ ಮಾಡು ಎಂದು ಅವರು ಪ್ರೇರೇಪಿಸುತ್ತಿದ್ದರು. ಅಂತಹ ಮಹಾನ್ ರಂಗಕರ್ಮಿಯ ಅಂತಃಸತ್ವ ರಂಗಭೂಮಿಯಲ್ಲಿ ಜೀವಂತವಾಗಿ ಉಳಿಯಬೇಕು~ ಎಂದು ಅವರು ತಿಳಿಸಿದರು.ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಡಾ.ಬಿ.ವಿ.ರಾಜಾರಾಂ ಮಾತನಾಡಿ, `ಅನೇಕ ಹೊಸ ಹೊಸ ನಾಟಕಕಾರರನ್ನು ಸಿಜಿಕೆ ಹುಟ್ಟುಹಾಕಿದರು. ಬರೆಯುವುದೇ ಇಲ್ಲ ಎಂದು ಹಠ ಹಿಡಿದಂತಿದ್ದ ಕಿ.ರಂ.ನಾಗರಾಜರಂತಹ ವಿದ್ವಾಂಸರಿಂದಲೂ ನಾಟಕಗಳನ್ನು ಬರೆಸಿದರು. ಸಿಜಿಕೆ ಅವರಿಂದಾಗಿ ಸಾಣೆಹಳ್ಳಿಯಲ್ಲಿ ರಂಗ ಚಟುವಟಿಕೆ ಅರಳಿತು. ಸುಚಿತ್ರಾ ಸಂಸ್ಥೆಯ ಅಂಗಳದಲ್ಲಿ ಪೀರ್ ಬಯಲು ರಂಗಭೂಮಿ ಮೈದಳೆಯಿತು~ ಎಂದು ಬಣ್ಣಿಸಿದರು.`ಕನಸುಗಳನ್ನು ಬಿತ್ತಿದ ಕನಸುಗಾರ ಸಿಜಿಕೆ. ರಂಗಭೂಮಿ ಪರಿಷತ್ತು ಹುಟ್ಟು ಹಾಕಬೇಕು ಎಂಬುದು ಅವರ ಕನಸಾಗಿತ್ತು. ಇದಕ್ಕಾಗಿ ಹಲವು ವರ್ಷಗಳ ಕಾಲ ಶ್ರಮಿಸಿದರು. ಆದರೆ ರಂಗಕರ್ಮಿಗಳ ದೌರ್ಬಲ್ಯಗಳಿಂದಾಗಿ ಅವರು ಕಂಡ ಅನೇಕ ಕನಸುಗಳನ್ನು ನನಸು ಮಾಡಲು ಸಾಧ್ಯವಾಗುತ್ತಿಲ್ಲ~ ಎಂದು ವಿಷಾದ ವ್ಯಕ್ತಪಡಿಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ್, `ತಮ್ಮ ಜತೆಗೆ ಅನೇಕ ಕಲಾವಿದರನ್ನು ಬೆಳೆಸಿದ ಸಿಜಿಕೆ ನೆನಪು ಅತಿ ಮುಖ್ಯವಾಗುತ್ತದೆ. ಅವರ ನೆನಪು ಚೇತೋಹಾರಿಯಾದುದು. ಸಿಜಿಕೆ ಹಾಗೂ ಡಿ.ಕೆ. ಚೌಟ ಅವರದ್ದು ಅನುರೂಪದ ಹೊಂದಾಣಿಕೆ. ಸಿಜಿಕೆ ನೆನಪಿನಲ್ಲಿ ಚೌಟ ಅವರ ನಾಟಕ ಪ್ರದರ್ಶನ ನಡೆಯುತ್ತಿರುವುದು ಸಂತಸದ ವಿಷಯ~ ಎಂದರು.ಈ ಸಂದರ್ಭದಲ್ಲಿ ರಂಗಕರ್ಮಿ ಕೆ.ಕೇಶವಲು, ನಿರ್ದೇಶಕ ಬಿ.ಜಿ.ರಾಮಕೃಷ್ಣ ಅವರನ್ನು ಸನ್ಮಾನಿಸಲಾಯಿತು.ರಕ್ತದಾನ ಶಿಬಿರದಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಸಿಜಿಕೆ ಅವರ ಪತ್ನಿ ಜಯಲಕ್ಷ್ಮಿ, ರಂಗಕರ್ಮಿ ರಶ್ಮಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.