ಶುಕ್ರವಾರ, ಮೇ 7, 2021
20 °C

ರಂಗಭೂಮಿ ಸಾಮಾಜಿಕ ನೀತಿ ಸಂದೇಶ ಮಾಧ್ಯಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ: ಸಾಮಾಜಿಕ ವ್ಯವಸ್ಥೆಯಲ್ಲಿನ ವಿವಿಧ ಆಯಾಮಗಳ ನಡುವಿನ ಸಾಮರಸ್ಯ ಬದುಕಿನ ಮೂಲಸೆಲೆಯಂತಿದ್ದ ಸಾಂಸ್ಕೃತಿಕ ಬದುಕು ಯಾಂತ್ರೀಕೃತ ವ್ಯವಸ್ಥೆಯಲ್ಲಿ ಕಳೆದು ಹೋಗುತ್ತಿದೆ ಎಂದು ಸಾಮಾಜಿಕ ಚಿಂತಕ, ನಿವೃತ್ತ ಪ್ರಾಂಶುಪಾಲ ಪ್ರೊ.ಎಸ್.ಎಚ್. ಪಟೇಲ್ ಕಳವಳ ವ್ಯಕ್ತಪಡಿಸಿದರು.ಸೋಮವಾರ ಪಟ್ಟಣದ ಹಳೇ ಉಪ ವಿಭಾಗಾಧಿಕಾರಿ ಕಚೇರಿಯ ಆವರಣದಲ್ಲಿ ಸ್ಥಳೀಯ ರಾಷ್ಟ್ರೀಯ ವಿದ್ಯಾಸಂಸ್ಥೆ, ನವೋದಯ ಪ್ರಾಥಮಿಕ ಶಾಲೆ, ಆದರ್ಶ ಮಹಿಳಾ ಮಂಡಳಿ, ಸಮಸ್ತರು ಸಾಂಸ್ಕೃತಿಕ ಸಂಘಟನೆ ಹಾಗೂ ಧಾರವಾಡ ಬಾಲವಿಕಾಸ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ವಿಶೇಷ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ `ಸಂಸ್ಕೃತಿ ಉತ್ಸವ~ಕ್ಕೆ ಸಮಾಳ ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಕಾಲಕಾಲಕ್ಕೆ ತರಬೇತಿ ನೀಡಿದರೆ, ಮಕ್ಕಳಲ್ಲಿನ ಅಡಗಿರುವ ಪ್ರತಿಭೆಯ ಮೊಗ್ಗು ಅರಳಲು ಹಾಗೂ ಜತೆಗೆ, ಅವರಲ್ಲಿನ ಕಲಾತ್ಮಕ ಮನಸು ಪ್ರಕಾಶಮಾನವಾಗಿ ಬೆಳಗುವ ಮೂಲಕ ಅವರ ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗುತ್ತದೆ. ವೈಯಕ್ತಿಕ ನೆಲೆಗಟ್ಟಿನ ಬದುಕಿನ ಜಂಜಾಟದಲ್ಲಿ ಆಸೆ, ಆಕ್ಷಾಂಕ್ಷೆಗಳ ಬೆನ್ನು ಬಿದ್ದಿರುವ ನಾವು ಮಾನವೀಯ ಮೌಲ್ಯಗಳನ್ನು ಮರೆತುಬಿಟ್ಟಿದ್ದೇವೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಸಾಮಾಜಿಕ ಬದುಕು ಹಾಗೂ ನೈತಿಕ ಮೌಲ್ಯಗಳ ಪುನರ್‌ಸ್ಥಾಪನೆಯ ಪರಿಣಾಮಕಾರಿ ಮಾಧ್ಯಮವಾಗಿರುವ ರಂಗಭೂಮಿ ಅನಿವಾರ್ಯ ಎಂದು ಅಭಿಪ್ರಾಯಪಟ್ಟರು.ರಾಷ್ಟ್ರೀಯ ವಿದ್ಯಾಸಂಸ್ಥೆಯ ಅಧ್ಯಕ್ಷ ಪಟೇಲ್ ಬೆಟ್ಟನಗೌಡ, ನಿವೃತ್ತ ಪ್ರಾಂಶುಪಾಲ ಜಿ. ಬಸವಂತಪ್ಪ ಮಾತನಾಡಿದರು.ಸಾಂಸ್ಕೃತಿಕ ಸಂಘಟನೆಯ ಸಂಚಾಲಕ, ನಾಟಕ ಅಕಾಡೆಮಿ ಪುರಸ್ಕೃತ ಬಿ. ಪರಶುರಾಂ, ಡಿವೈಎಸ್‌ಪಿ ಎಚ್.ಆರ್. ರಾಧಾಮಣಿ, ಬಾಲವಿಕಾಸ ಅಕಾಡೆಮಿ ರಾಜ್ಯ ಸಮಿತಿ ಸದಸ್ಯ ಭೂಸನೂರಮಠ್, ಜಿಲ್ಲಾ ಸಮಿತಿ ಸದಸ್ಯ ಇಸ್ಮಾಯಿಲ್ ಎಲಿಗಾರ್, ವಿದ್ಯಾಸಂಸ್ಥೆಯ ಕಾರ್ಯದರ್ಶಿ ಹಾಲಪ್ಪ ಇದ್ದರು.ನಾಟಕ ಅಕಾಡೆಮಿ ಪುರಸ್ಕೃತ ರಂಗಕರ್ಮಿ ಬಿ. ಪರಶುರಾಂ ಹಾಗೂ ಶಿಬಿರದ ನಿರ್ದೇಶಕ ಬಿ.ಟಿ. ಅರುಣ್ ಗೊಪ್ಪೇನಹಳ್ಳಿ ನಿರ್ದೇಶನ ಹಾಗೂ ಗುಂಡಗತ್ತಿ ಅಂಜಿನಪ್ಪ ಅವರ ಸಂಗೀತ ನಿರ್ದೇಶನದಲ್ಲಿ ಶಿಬಿರಾರ್ಥಿಗಳು ಅಭಿನಯಿಸಿದ `ಧಗೆ ಏರಿದ ಧರಣಿ~(ನವೀನ್ ಸುವರ್ಣಾ ಮೂಲ ಕತೆಯಾಧಾರಿತ) ಕಿರುನಾಟಕ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದ ಜನಮನಸೂರೆಗೊಂಡಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.