ಗುರುವಾರ , ಮೇ 19, 2022
21 °C
ಗುಲ್ಬರ್ಗದಲ್ಲಿ ಹರಿಸ್, ಹಲೀಮ್‌ಗೆ ಭಾರಿ ಬೇಡಿಕೆ

ರಂಜಾನ್‌ಗೆ ಅರಬ್ ಮೂಲದ ವಿಶೇಷ ಖಾದ್ಯ

ಪ್ರಜಾವಾಣಿ ವಾರ್ತೆ/ಸುಮಿತ್ರಾ ಮಾಲಿಪಾಟೀಲ Updated:

ಅಕ್ಷರ ಗಾತ್ರ : | |

ರಂಜಾನ್‌ಗೆ ಅರಬ್ ಮೂಲದ ವಿಶೇಷ ಖಾದ್ಯ

ಗುಲ್ಬರ್ಗ: ಮುಸ್ಲಿಮರ ಪವಿತ್ರ ಕಾಲವಾದ ರಂಜಾನ್ ಮಾಸದಲ್ಲಿ ಅರಬ್ ಮೂಲದ ಹರಿಸ್ ಹಾಗೂ ಹಲೀಮ್‌ಗೆ ಬೇಡಿಕೆ ಹೆಚ್ಚಾಗಿದೆ. ಗುಲ್ಬರ್ಗ ಇಂತಹ ವಿಶಿಷ್ಟ ಖಾದ್ಯಗಳಿಗೆ ಹೆಸರುವಾಸಿ. ಹೀಗಾಗಿಯೇ ಹರಿಸ್ ಮತ್ತು ಹಲೀಮ್‌ನ ಪರಿಮಳ ನಗರದಲ್ಲಿ ಹರಡಿದೆ. ರಂಜಾನ್‌ಗೆ ಈ ಖಾದ್ಯಗಳು ಸೀಮಿತ. ಇವನ್ನು ಸ್ಥಳೀಯರೂ ತಯಾರಿಸುತ್ತಾರೆ. ಆದರೆ ಇದನ್ನು ತಯಾರಿಸುವುದರಲ್ಲಿಯೇ ಪರಿಣತಿ ಪಡೆದ ಹೋಟೆಲ್‌ಗಳು ಇಲ್ಲಿವೆ. ಹೈದರಾಬಾದ್‌ನಿಂದ ನುರಿತ ಬಾಣಸಿಗರನ್ನು ಕರೆಸಿವೆ. ರಂಜಾನ್ ಪ್ರಯುಕ್ತ ನಗರದ ಸೂಪರ್ ಮಾರ್ಕೆಟ್, ದರ್ಗಾಕ್ಕೆ ಹೋಗುವ ರಸ್ತೆಯ ತಳ್ಳುವ ಗಾಡಿಯಲ್ಲಿ ದಹಿವಡಾ, ಹರಿಸ್, ಹಲೀಮ್ ಮತ್ತಿತರ ಖಾದ್ಯಗಳ ಭರ್ಜರಿ ಮಾರಾಟ ನಡೆದಿದೆ. ಅದರಲ್ಲೂ ದರ್ಗಾದ ಮುಸ್ಲಿಂ ಚೌಕ್‌ನಲ್ಲಿರುವ ಆಲ್ಫಾ  ಹೋಟೆಲ್‌ನ ಹರಿಸ್ ಮತ್ತು ಹಲೀಮ್‌ಗೆ ಜನ ಮುಗಿಬೀಳುತ್ತಾರೆ. ಇಲ್ಲಿ ದಿನಕ್ಕೆ ತಲಾ 50 ಕೆ.ಜಿ. ಹರಿಸ್, ಹಲೀಮ್ ತಯಾರಾಗುತ್ತದೆ.ರಂಜಾನ್‌ನಲ್ಲೇ ಯಾಕೆ: ಮುಸ್ಲಿಮರು ಪವಿತ್ರ  ರಂಜಾನ್ ತಿಂಗಳು ಪೂರ್ತಿ ಪ್ರತಿ ದಿನ 14 ರಿಂದ 16 ಗಂಟೆ ಉಪವಾಸ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ಮೃದು ಹಾಗೂ ಶಕ್ತಿಯುತವಾದ ಆಹಾರ ಬೇಕಾಗುತ್ತದೆ. ಉಪವಾಸದ ನಂತರ ಗಟ್ಟಿ ಪದಾರ್ಥಗಳನ್ನು ತಿಂದು ಜೀರ್ಣಿಸಿಕೊಳ್ಳುವುದು ಕಷ್ಟ. ಅಲ್ಲದೇ ಮರುದಿನ ಮತ್ತೆ ಉಪವಾಸ ಮಾಡಲು ಶಕ್ತಿ ಬೇಕಾಗುತ್ತದೆ. ಆದ್ದರಿಂದ ಈ ಖಾದ್ಯಗಳನ್ನು ವಿಶಿಷ್ಟವಾಗಿ ಸಿದ್ಧಪಡಿಸಲಾಗುತ್ತದೆ. ವಿವಿಧ ಧಾನ್ಯಗಳನ್ನು ಹಾಕಿ ಮಾಡುವ ಕಿಚಡಿಗಿಂತಲೂ ಹರಿಸ್ ಮತ್ತು ಹಲೀಮ್ ರುಚಿಕರವಾಗಿರುತ್ತವೆ.

ಹರಿಸ್

ಹರಿಸ್ ತಯಾರಿಸಲು ಹಿಂದಿನ ದಿನವೇ ಗೋಧಿಯನ್ನು ನೆನೆಹಾಕುತ್ತಾರೆ. ಮರು ದಿನ ಬೆಳಿಗ್ಗೆ ಚೆನ್ನಾಗಿ ತೊಳೆದು ಬಿಸಿನೀರಿನಲ್ಲಿ 2 ತಾಸು ಮತ್ತೆ ನೆನೆಸಿ ನಂತರ 8 ರಿಂದ 9 ತಾಸು ಕುದಿಸುತ್ತಾರೆ. ಅಷ್ಟರಲ್ಲಿ ಅದು ಹದಕ್ಕೆ ಬರುತ್ತದೆ. ಅದನ್ನು ಚೆನ್ನಾಗಿ ಅರೆಯುತ್ತಾರೆ. ಮಸಾಲೆ, ಖಾರ, ಉಪ್ಪು, ಸಾಜೀರ್, ಏಲಕ್ಕಿ, ಒಣಗಿದ ಹಣ್ಣು ಸೇರಿಸುತ್ತಾರೆ. ನಂತರ ಪ್ರತ್ಯೇಕವಾಗಿ ಕೋಳಿ, ಕುರಿ ಅಥವಾ ದನದ ಮಾಂಸ ಕುದಿಸಿ ಹಾಕುತ್ತಾರೆ. ಮತ್ತೆ 2 ರಿಂದ 3 ಗಂಟೆವರೆಗೆ ಚೆನ್ನಾಗಿ ಕೊಚ್ಚುತ್ತಾರೆ. ಇದರಿಂದ ಮಾಂಸ ಸಣ್ಣ ಸಣ್ಣ ಚೂರುಗಳಾಗುತ್ತವೆ.ಹಲೀಮ್

`ಹರಿಸ್ ತಯಾರಿಸುವ ರೀತಿಯಲ್ಲೇ ಇಲ್ಲಿಯೂ ಗೋಧಿಯನ್ನು ಉಪಯೋಗಿಸಲಾಗುತ್ತದೆ. ಜತೆಗೆ 20 ಬಗೆಯ ಧಾನ್ಯಗಳನ್ನು, ವಿಶಿಷ್ಟ ಮಸಾಲೆ ಪದಾರ್ಥಗಳನ್ನು ಬಳಸುತ್ತಾರೆ. 5 ಕೆ.ಜಿ. ಗೋಧಿಗೆ ಒಂದು ಕೊಡ ನೀರು ಹಾಗೂ ಎಲ್ಲ ವಿಧದ 200 ಗ್ರಾಂ ಧಾನ್ಯಗಳನ್ನು ಸೇರಿಸುತ್ತಾರೆ. ಇದರಲ್ಲೂ ಮಾಂಸವನ್ನು ಉಪಯೋಗಿಸಬಹುದು. ಆದರೆ ಇದು ಹರಿಸ್ ತರಹ ತೆಳುವಾಗಿರುವುದಿಲ್ಲ. ಸ್ವಲ್ಪ ನುಚ್ಚು-ನುಚ್ಚಾಗಿರುತ್ತದೆ. ಸಿಹಿ ಹಲೀಮ್ ಸಹ ತಯಾರಿಸಲಾಗುತ್ತದೆ. ಆದರೆ ಜನ ಹೆಚ್ಚು ಇಷ್ಟಪಡುವುದು ಮಾಂಸದ ಹರಿಸ್ ಮತ್ತು ಹಲೀಮ್' ಎನ್ನುತ್ತಾರೆ  ಗುಲ್ಬರ್ಗದ ಆಲ್ಫಾ ಹೋಟೆಲ್  ಮಾಲೀಕ ಅಬ್ದುಲ್ ಗಫಾ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.