ಭಾನುವಾರ, ಮಾರ್ಚ್ 7, 2021
19 °C

ರಂಜಾನ್ ಪಥ್ಯ

-ಇ.ಎಸ್. ಸುಧೀಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

ರಂಜಾನ್ ಪಥ್ಯ

ರಂಜಾನ್ ಎನ್ನುವುದು ದೇವರು ಕೊಟ್ಟ ವರ ಎಂದೆನ್ನುತ್ತಾರೆ ಮುಸಲ್ಮಾನರು. ಮುಸಲ್ಮಾನ್ ಕ್ಯಾಲೆಂಡರಿನ ಒಂಬತ್ತನೇ ತಿಂಗಳಿನಲ್ಲಿ ಬರುವ ಈ ಹಬ್ಬ ಸಮತೋಲನ ಹಾಗೂ ಆರೋಗ್ಯಕರ ಜೀವನ ಸಾಗಿಸಲು ಒಂದು ಉತ್ತಮ ಅವಕಾಶ. ಈ ಒಂದು ತಿಂಗಳಿನಲ್ಲಿ ಪಾಲಿಸುವ ಆಹಾರ ಕ್ರಮದಿಂದ  ಮನಸ್ಸಿನ ಮೇಲಿನ ಹತೋಟಿ, ದುಶ್ಚಟಗಳಿಂದ ಮುಕ್ತಿ ಹಾಗೂ ಶಿಸ್ತು ಅಳವಡಿಸಿಕೊಳ್ಳಲು ಸಾಧ್ಯವೆಂಬುದು ಅನೇಕರ ಅನುಭವ.
ಇನ್ನಷ್ಟು ಎಚ್ಚರಿಕೆ

ಅತಿಯಾದ ಚಹಾ ಅಥವಾ ಕಾಫಿ ಸೇವನೆಯಿಂದಾಗಿ ದೇಹದಲ್ಲಿರಬೇಕಾದ ಲವಣಾಂಶಗಳು, ಉಪ್ಪು ಹಾಗೂ ದ್ರವ ಪದಾರ್ಥಗಳು ಬಹುಬೇಗ ಖಾಲಿ ಆಗಲಿವೆ. ಸಹೆರ್ ಹಾಗೂ ಇಫ್ತಾರ್ ವೇಳೆಯಲ್ಲಿ ಆಹಾರ ಸೇವಿಸಿದ ತಕ್ಷಣ ಮಲಗಬಾರದು. ಸಂಜೆ ವೇಳೆ ಕನಿಷ್ಠ 30 ನಿಮಿಷಗಳ ನಡಿಗೆಯಿಂದ ದೇಹದ ಚಟುವಟಿಕೆ ಉತ್ತಮವಾಗಿರಲಿದೆ. ದಿನದ ವೇಳೆ ಉಪವಾಸ ಇರುವುದರಿಂದ ರಾತ್ರಿ ಊಟ ಮಾಡುವಾಗ ನಿಧಾನವಾಗಿ ಆಹಾರ ಸೇವಿಸಬೇಕು.

ರಂಜಾನ್ ವೇಳೆಯಲ್ಲಿ ದೇಹವನ್ನು ಫಿಟ್ ಆಗಿಡಲು ಬೆಳಿಗ್ಗೆಗಿಂತ ಸಂಜೆ ವೇಳೆಯಲ್ಲಿ ವರ್ಕ್‌ಔಟ್ ಮಾಡುವುದು ಉತ್ತಮ. ದೈಹಿಕ ಕಸರತ್ತಿನ ನಂತರ ಒಂದಿಷ್ಟು ಹಣ್ಣು ಅಥವಾ ಪ್ರೊಟೀನ್ ಶೇಕ್ ಕುಡಿಯಿರಿ.

ದಿನದ ಬಹುಪಾಲು ಉಪವಾಸದಲ್ಲೇ ಕಳೆಯುವುದರಿಂದ ಹಾಗೂ ಪೌಷ್ಟಿಕ ಆಹಾರ ಸೇವನೆಯಿಂದ ದೇಹದ ಕಲ್ಮಶಗಳು ಹೊರಹೋಗಿ, ಹೊಸ ಚೈತನ್ಯ ತುಂಬಲಿದೆ ಎಂದು ಮುಸಲ್ಮಾನರ ಧರ್ಮಗ್ರಂಥ ಮಾತ್ರವಲ್ಲ ವೈದ್ಯರೂ ಪುಷ್ಠೀಕರಿಸುತ್ತಾರೆ.ಒಂದು ತಿಂಗಳು ಪ್ರತಿನಿತ್ಯ ಬೆಳಿಗ್ಗೆ 4ರಿಂದ 4.30ರೊಳಗೆ ಒಂದಿಷ್ಟು ತಿಂದು ಉಪವಾಸ ಆರಂಭಿಸುವ ಮುಸಲ್ಮಾನರು ಸಂಜೆ 7ರವರೆಗೂ ಏನನ್ನೂ ತಿನ್ನದೆ, ಕೆಲವರು ಉಗುಳನ್ನೂ ನುಂಗದೆ ಕಟ್ಟುನಿಟ್ಟಾದ ಉಪವಾಸ ವ್ರತ ನಡೆಸುತ್ತಾರೆ. ಆಹಾರದಿಂದ ದೊರಕುವ ಗ್ಲೂಕೋಸ್ ಅಂಶ ಇಳಿಮುಖವಾಗುತ್ತಿದ್ದಂತೆ ದೇಹವು ಯಕೃತ್ ಹಾಗೂ ಮಾಂಸಖಂಡಗಳಲ್ಲಿ ಶೇಖರವಾದ ಗ್ಲೂಕೋಸನ್ನು ಬಳಸಲು ಆರಂಭಿಸುತ್ತದೆ.

ಉಪವಾಸ ಮಾಡಲಾರಂಭಿಸಿದ ಒಂದಿಷ್ಟು ದಿನಗಳ ನಂತರ ದೇಹದಲ್ಲಿ ಶೇಖರಗೊಂಡ ಕೊಬ್ಬು ಕೂಡ ಶಕ್ತಿಯ ಪೊಟ್ಟಣಗಳಾಗಿ ಪೂರೈಕೆಯಾಗತೊಡಗುತ್ತದೆ. ಆದರೆ ಈ ಉಪವಾಸದ ಸಂದರ್ಭದಲ್ಲಿ ಸೇವಿಸುವ ಆಹಾರವೂ ಅಷ್ಟೇ ಪೌಷ್ಟಿಕವಾಗಿರಬೇಕಾದದ್ದು ಬಹಳ ಮುಖ್ಯ. ಕೊಬ್ಬು, ಎಣ್ಣೆರಹಿತ ಆಹಾರಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡುವುದು ಉತ್ತಮ. ಆದರೆ ಬಹಳಷ್ಟು ಮಂದಿ ಕರಿದ ಸಮೋಸಾ, ಕೊಬ್ಬು ಭರಿತ ಮಾಂಸ ಇತ್ಯಾದಿಗಳನ್ನು ಸೇವಿಸುವುದರಿಂದ ದೇಹವನ್ನು ಹತೋಟಿಗೆ ತರುವುದು ಕಷ್ಟ ಎಂದು ಕೆಲವು ವೈದ್ಯರು ಅಭಿಪ್ರಾಯಪಡುತ್ತಾರೆ.
ಗ್ಯಾಸ್ಟ್ರಿಕ್‌ಗೆ ರಹದಾರಿ

ಈ ಸಂದರ್ಭದಲ್ಲಿ ಸಮೋಸಾ ಇತ್ಯಾದಿ ಕರಿದ ಪದಾರ್ಥ ಸೇವಿಸುವವರು ಜಾಸ್ತಿ. ದೀರ್ಘಕಾಲದ ಉಪವಾಸದ ನಂತರ ಕರಿದ ಪದಾರ್ಥ ಸೇವಿಸುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚು. ಸಮೋಸಾ ಬದಲು ಇಡ್ಲಿ, ದೋಸೆ ಸೇವನೆ ಉತ್ತಮ. ಹಣ್ಣು, ಮಜ್ಜಿಗೆ, ಮೊಸರು, ಯೋಗರ್ಟ್ ಸೇವನೆ ಅವಶ್ಯಕ.

- ಡಾ. ಸಲಾಹುದ್ದೀನ್, ಆರ್ಥೋಡೆಂಟಿಸ್ಟ್, ಡೆಂಟಲ್ ಡಯಾಗ್ನೋಸ್ಟಿಕ್ ಸೆ

ದ್ರವಾಹಾರಕ್ಕೆ ಆದ್ಯತೆಪ್ರತಿವರ್ಷ ಹತ್ತು ದಿನಗಳ ವ್ಯತ್ಯಾಸದಲ್ಲಿ ರಂಜಾನ್ ಬರುತ್ತದೆ. ಈ ವರ್ಷ ಮಳೆಗಾಲದಲ್ಲಿ ಬಂದಿದೆ. ಉಪವಾಸಕ್ಕೆ ಅತ್ಯಂತ ಪ್ರಶಸ್ತವಾದ ಕಾಲವಿದು. ದಿನದ 14 ಗಂಟೆಗಳ ಕಾಲ ಉಪವಾಸ ಇರುವ ಬಹುತೇಕ ಮುಸಲ್ಮಾನರು ನೀರು, ಇಂಜೆಕ್ಷನ್‌ನಿಂದಲೂ ದೂ

ಇರುತ್ತಾರೆ. ಹೀಗಾಗಿ ಈ ರಂಜಾನ್‌ನಲ್ಲಿ ದ್ರವ ಪದಾರ್ಥಗಳನ್ನು ಹೆಚ್ಚು ಸೇವಿಸಬೇಕು. ಕೊಬ್ಬು, ಜಿಡ್ಡು, ಖಾರ ಪದಾರ್ಥಗಳು ವರ್ಜ್ಯ. ಇಫ್ತಾರ್ ನಂತರ ಹಾಗೂ ಮಲಗುವ ಮುಂಚೆ 8-12 ಲೋಟ ನೀರು ಕುಡಿಯಬೇಕು. ಎರಡರಿಂದ ಮೂರು ಖರ್ಜೂರ ಹಾಗೂ 120 ಮಿ.ಲೀ. ಹಣ್ಣಿನ ರಸ ಸೇವನೆಯಿಂದ ದೇಹದಲ್ಲಿ ಕಡಿಮೆ ಆಗಬಹುದಾದ ಸಕ್ಕರೆ ಅಂಶ ಹೆಚ್ಚಲಿದೆ.ಆಹಾರದಲ್ಲಿ ಇರಲಿ ಪ್ರೊಟೀನ್

ಉಪವಾಸಕ್ಕೂ ಮುನ್ನ ಹೆಚ್ಚು ನೀರು, ಹಣ್ಣಿನ ರಸ ಸೇವಿಸಬೇಕು. ಉಪವಾಸ ಮುಗಿದ ನಂತರ ಸಂಜೆ ಒಂದರಿಂದ ಒಂದೂವರೆ ಗಂಟೆಗಳ ಕಾಲ ದ್ರವ ಪದಾರ್ಥ ಸೇವಿಸುವುದು ಉತ್ತಮ. ಬೇಸಿಗೆಯಲ್ಲಿ ಬಾಯಾರಿಕೆ ಹೆಚ್ಚಾದರೆ ಮಳೆಗಾಲದಲ್ಲಿ ಹಸಿವು ಅಧಿಕ. ಈ ವೇಳೆಯಲ್ಲಿ `ಮೆಟಬಾಲಿಸಂ' (ಚಯಾಪಚಯ) ಪ್ರಮಾಣ ಹೆಚ್ಚಿರುವುದರಿಂದ ನಾರು, ಪ್ರೊಟೀನ್ ಇರುವ ಪದಾರ್ಥಗಳನ್ನು ಹೆಚ್ಚು ಸೇವಿಸಬೇಕು. ಒಂದು ದಿನದಲ್ಲಿ ಒಂದು ಸಾವಿರ ಕ್ಯಾಲೋರಿಗೂ ಮೀರದಂತೆ ಆಹಾರ ಸೇವಿಸುವುದರಿಂದ ದೈಹಿಕ ಚಟುವಟಿಕೆಗಳು ಉತ್ತಮವಾಗಿರುತ್ತವೆ.ಜೀರ್ಣಕ್ರಿಯೆ ವೃದ್ಧಿ

ಉಪವಾಸದಿಂದ ಜೀರ್ಣಕ್ರಿಯೆ ಉತ್ತಮಗೊಳ್ಳಲಿದೆ. ಜೀರ್ಣಕ್ರಿಯೆ ಜವಾಬ್ದಾರಿ ಹೊತ್ತ ಜಠರಕ್ಕೆ ವಿಶ್ರಾಂತಿ ದೊರಕುವುದರಿಂದ ಅದರ ಕಾರ್ಯಕ್ಷಮತೆ ಹೆಚ್ಚುತ್ತದೆ. ಜತೆಗೆ ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚು ಶೇಖರವಾದ ವಿಟಮಿನ್, ಪ್ರೊಟೀನ್, ಕೊಬ್ಬು ಕರಗುತ್ತದೆ. ಈ ಒಂದು ತಿಂಗಳ ಉಪವಾಸದಿಂದ ಅಂಗಗಳ ಕಾರ್ಯವ್ಯವಸ್ಥೆ ಕೂಡ ಹತೋಟಿಗೆ ಬರಲಿದೆ.ಇಂದ್ರಿಯಗಳಿಗೆ ಲಗಾಮು

ರಂಜಾನ್ ಎಂದರೆ ಬಹಳಷ್ಟು ಮುಸಲ್ಮಾನರು ವ್ರತದ ಬದಲು ಹಬ್ಬ ಎಂದು ತಿಳಿದಿದ್ದಾರೆ. ಈ ಒಂದು ತಿಂಗಳ ಕಾಲ ಇಂದ್ರಿಯಗಳನ್ನು ಹತೋಟಿಗೆ ತರುವುದು ಮುಖ್ಯ ಉದ್ದೇಶ. ಆದರೆ ಉಪವಾಸ ಮುಗಿದ ತಕ್ಷಣ ಯದ್ವಾತದ್ವಾ ಆಹಾರ ಸೇವನೆ ಜೀರ್ಣಕ್ರಿಯೆಯ ವ್ಯವಸ್ಥೆಯನ್ನೇ ಬುಡಮೇಲು ಮಾಡಿಬಿಡಬಹುದು. ಕ್ರಮಬದ್ಧವಾಗಿ ಉಪವಾಸ ಕೈಗೊಂಡವರು ಒಂದು ತಿಂಗಳಿನಲ್ಲಿ 5ರಿಂದ 7 ಕೆ.ಜಿ. ತೂಕ ಇಳಿಸಿಕೊಳ್ಳುತ್ತಾರೆ. ಹೆಚ್ಚು ಆರೋಗ್ಯವಂತರಾಗುತ್ತಾರೆ. ಇದರ ಜತೆಯಲ್ಲೇ ತಮ್ಮ ಮನಸ್ಸಿನ ಮೇಲಿನ ಹತೋಟಿಯೂ ಹೆಚ್ಚಲಿದೆ. ಇದರಿಂದಾಗಿ ದುಶ್ಚಟಗಳನ್ನು ಹೊಂದಿದವರು ಈ ಒಂದು ತಿಂಗಳು ಸರಿಯಾಗಿ ಉಪವಾಸ ಕೈಗೊಂಡರೆ ತಮ್ಮ ಎಲ್ಲಾ ರೀತಿಯ ದುಶ್ಚಟಗಳಿಂದ ಮುಕ್ತರಾಗಬಹುದು.

ಮಿತಾಹಾರ ಉತ್ತಮ

ಉಪವಾಸದ ವೇಳೆ ಹೆಚ್ಚು ಖಾರ, ಕೊಬ್ಬು ಇಲ್ಲದ ಆಹಾರವನ್ನು ಸೇವಿಸುವುದು ಉತ್ತಮ. ಉಪವಾಸ ಆರಂಭಿಸುವ ಮುನ್ನ ಎರಡು ಚಪಾತಿ, ಸ್ವಲ್ಪ ಅನ್ನ ತಿನ್ನುತ್ತೇವೆ. ಅದರ ಜೊತೆ ದ್ರವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುತ್ತೇವೆ. ಉಪವಾಸ ಮುಗಿಯುತ್ತಿದ್ದಂತೆ ಎರಡು ಖರ್ಜೂರ, ಹಣ್ಣಿನ ರಸ. ನಂತರ ಒಂದೂವರೆ ಗಂಟೆ ಪ್ರಾರ್ಥನೆ. ಬಳಿಕ ಊಟ ಸೇವನೆ. ಉಪವಾಸ ಇರಬೇಕು ಎಂದು ಪ್ರಜ್ಞಾ ಪೂರ್ವಕವಾಗಿ ಪೌಷ್ಟಿಕ ಆಹಾರ  ಸೇವಿಸುವುದಿಲ್ಲ. ಹಿತಮಿತವಾಗಿ ತಿಂದರಷ್ಟೇ ಸುಲಭವಾಗಿ ಜೀರ್ಣವಾಗುವುದು. ಕಳೆದ 20 ವರ್ಷಗಳಿಂದ ರಂಜಾನ್ ಉಪವಾಸ ಕೈಗೊಳ್ಳುತ್ತಿರುವ ನಾನು ಪಾಲಿಸಿಕೊಂಡು ಬಂದ ನಿಯಮಗಳಿವು.

-ಇರ್ಫಾನ್ ಪಾಶಾ, ಔಷಧ ವ್ಯಾಪಾರಿ

ಅಡುಗೆಯಲ್ಲಿ ಬದಲಾವಣೆ

*ಪದಾರ್ಥಗಳನ್ನು ಎಣ್ಣೆಯಲ್ಲಿ ಹೆಚ್ಚು ಕರಿಯುವ ಬದಲು ಕಡಿಮೆ ಎಣ್ಣೆಯಲ್ಲಿ ಹುರಿಯುವುದು ಲೇಸು. ರುಚಿಯಲ್ಲಿ ಒಂದಿಷ್ಟು ಬದಲಾವಣೆ ಕಂಡುಬರುತ್ತದೆ.

*ಕರಿ ತಯಾರಿಸುವಾಗ ಆರು ಚಮಚ ಎಣ್ಣೆಯ ಬದಲು ನಾಲ್ಕು ಚಮಚ ಬಳಸಿದರೆ ಸಾಕು. ಇದರಿಂದ ದೇಹವನ್ನು ಸೇರುವ ಎಣ್ಣೆಯ ಪ್ರಮಾಣ ಕಡಿಮೆಯಾಗುತ್ತದೆ. ಈರುಳ್ಳಿ, ಟೊಮೆಟೊ ಬಳಕೆ ಹೇರಳವಾಗಿದ್ದರೆ ಉತ್ತಮ.

*ಆಹಾರ ಪದಾರ್ಥಗಳನ್ನು ಕರಿಯುವ ಬದಲು ಗ್ರಿಲ್ ಮಾಡುವುದು ಅಥವಾ ಬೇಯಿಸುವುದು ಒಳ್ಳೆಯದು. ಹೀಗೆ ಮಾಡಿದಾಗ ರುಚಿ ಮತ್ತಷ್ಟು ಹೆಚ್ಚುವುದಲ್ಲದೆ ಆರೋಗ್ಯಕ್ಕೂ ಉತ್ತಮ. ಅದರಲ್ಲೂ ಕೋಳಿ ಹಾಗೂ ಮೀನನ್ನು ಬೇಯಿಸಿ ತಿನ್ನುವುದೇ ಲೇಸು.

ಇವರಿಗೆ ಉಪವಾಸ ಬೇಡ

ಉಪವಾಸದಿಂದ ಹೊರಗಿರಬಹುದಾದವರು ಮಧುಮೇಹಿಗಳು, ಅತಿಯಾದ ಗ್ಯಾಸ್ಟ್ರಿಕ್ ಸಮಸ್ಯೆ ಎದುರಿಸುತ್ತಿರುವವರು, ವಯಸ್ಸಾದವರು, ಮೂರು ತಿಂಗಳಾದ ಗರ್ಭಿಣಿಯರು, ಶಸ್ತ್ರಚಿಕಿತ್ಸೆ ಹಾಗೂ ಅನಾರೋಗ್ಯಕ್ಕೆ ತುತ್ತಾಗಿ ಗುಣಮುಖವಾಗುತ್ತಿರುವವರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.