ಸೋಮವಾರ, ಮೇ 17, 2021
27 °C

ರಜೆ ಇಲ್ಲದೆ 30 ವರ್ಷ ನೌಕರಿ!

ಮನೋಜ್‌ಕುಮಾರ್ ಗುದ್ದಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಜೆ ಇಲ್ಲದೆ 30 ವರ್ಷ ನೌಕರಿ!

ಧಾರವಾಡ: ಜೀವನದಲ್ಲಿ ವಿಶಿಷ್ಟ ಸಾಧನೆ ಮಾಡಲು ಹೊರಟಿರುವ ವ್ಯಕ್ತಿಯೊಬ್ಬರು ಸತತ 30 ವರ್ಷಗಳಿಂದ ಒಂದೂ ರಜೆ ಪಡೆಯದೇ ನೌಕರಿ ಮಾಡಿದ್ದು, ಇದೀಗ ಆ ಸಾಧನೆ 31ನೇ ವರ್ಷಕ್ಕೆ ಕಾಲಿಟ್ಟಿದೆ.ಇಲ್ಲಿಯ ಸಿಬಿಟಿ ಬಳಿಯ ವಿಜಯಾ ಬ್ಯಾಂಕ್‌ನಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿರುವ ಅಶೋಕ ಬಾಬರ್ (54) ಅಂತಹ ಸಾಧನೆ ಮಾಡಲು ಮುಂದಾಗಿದ್ದಾರೆ. ರಜೆ (ಕ್ಯಾಷುವಲ್ ಲೀವ್) ಪಡೆಯದೇ ಕೆಲಸ ಮಾಡಿದ ಅವರ ಸಾಧನೆಗೆ ಜೂನ್ 15ಕ್ಕೆ ಮೂರು ದಶಕ ತುಂಬಿದೆ.ಜೀವನದಲ್ಲಿ ಶಕ್ತಿ ಇರುವತನಕ ಕೆಲಸ ಮಾಡುತ್ತಿರಬೇಕು ಎಂಬ ಮಾತಿನಲ್ಲಿ ನಂಬಿಕೆ ಇಟ್ಟಿರುವ ಅಶೋಕ ಅವರದು ಪತ್ನಿ ಭಾರತಿ, ಪುತ್ರಿಯರಾದ ರಂಜನಾ, ಜಯಶ್ರೀ ಹಾಗೂ ಪುತ್ರ ವಿಶ್ವದೀಪ ಅವರನ್ನು ಒಳಗೊಂಡ ತುಂಬು ಸಂಸಾರ.`ಪತಿಯೊಂದಿಗೆ ಎಲ್ಲಾದರೂ ಪ್ರವಾಸ ಹೋಗಬೇಕು ಎಂಬ ಆಸೆ  ಇದ್ದೇ ಇದೆ. ಅದು ಎಲ್ಲ ಹೆಣ್ಣುಮಕ್ಕಳಲ್ಲೂ ಇರುವಂಥದ್ದೇ. ಆದರೆ  ಪತಿಯ ಸಾಧನೆಗೆ ಅಡ್ಡಿ ಬರಬಾರದು ಎಂಬ ಉದ್ದೇಶದಿಂದ ನಾನು ಯಾವತ್ತೂ ಒತ್ತಾಯ ಮಾಡಿಲ್ಲ. ಆದರೆ ಭಾನುವಾರ ಬ್ಯಾಂಕ್‌ಗೆ ರಜೆ ಇರುವುದರಿಂದ ಅವರೇ ನಮ್ಮನ್ನು ಹೊರಗಡೆ ಕರೆದುಕೊಂಡು ಹೋಗುತ್ತಾರೆ' ಎಂದು ಅಭಿಮಾನದಿಂದ ಹೇಳುತ್ತಾರೆ ಭಾರತಿ.ಇಷ್ಟು ಸುದೀರ್ಘ ಅವಧಿಯ ರಜೆ ರಹಿತ ಜೀವನದಲ್ಲಿ ಅಶೋಕ ಬಾಬರ್‌ಗೆ ಹಲವು ತೊಡಕುಗಳೂ ಎದುರಾಗಿವೆ. ಆದರೂ ರಜೆ ಹಾಕಿಲ್ಲ. ಮದುವೆಯಾದಾಗ, ಮಕ್ಕಳು ಜನಿಸಿದಾಗ, ತಂದೆ, ತಾಯಿ ತೀರಿಕೊಂಡಾಗ, ರಸ್ತೆ ಅಪಘಾತದಲ್ಲಿ ಗಾಯಗೊಂಡು ಎಂಟು ಹೊಲಿಗೆ ಬಿದ್ದಾಗಲೂ ಇವರು ರಜೆ ತೆಗೆದುಕೊಳ್ಳಲೇ ಇಲ್ಲವಂತೆ!ತಂದೆ ಲಕ್ಷ್ಮಣರಾವ್ ಬಾಬರ್, ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ವೃತ್ತಿ ಜೀವನದ ಕೊನೆಯ ಮೂರು ವರ್ಷಗಳ ಕಾಲ ಅವರೂ ರಜೆ ತೆಗೆದುಕೊಳ್ಳಲಿಲ್ಲ. ಇದರಿಂದ ಪ್ರೇರಣೆ ಪಡೆದ ಅಶೋಕ, ನಿವೃತ್ತಿ ಜೀವನದವರೆಗೂ ಒಂದೂ ರಜೆ ಪಡೆಯದೇ ನೌಕರಿ ಮಾಡಲು ನಿರ್ಧರಿಸಿದ್ದಾರೆ. ಇವರ ಕಾಯಕ ಪ್ರೀತಿ ಮೆಚ್ಚಿ ಚಿತ್ರದುರ್ಗದ ಮುರುಘಾಶರಣರು 1993ರಲ್ಲಿ `ಕಾಯಕ ಪ್ರೇಮಿ' ಪ್ರಶಸ್ತಿ ನೀಡಿ ಗೌರವಿಸಿದರು. ರಜೆ ದಿನವೇ ಅವರು ಚಿತ್ರದುರ್ಗಕ್ಕೆ ಹೋಗಿ ಪ್ರಶಸ್ತಿ ಸ್ವೀಕರಿಸಿದರು!ಜ. 23, 24 ಹಾಗೂ 25ರಂದು ಮೂರುದಿನಗಳವರೆಗೆ ಕುಟುಂಬ ಸಮೇತ ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಹೋಗಿ ಬಂದರು. ಹಾಗೆಂದು ರಜೆ ಹಾಕಿ ಹೋಗಿದ್ದರು ಎಂದು ಭಾವಿಸಿದರೆ ತಪ್ಪು, ಮೂರೂ ದಿನ ಸರ್ಕಾರಿ ರಜೆಗಳಿದ್ದವು.ಬಡ್ತಿ ತ್ಯಾಗ: ಸಾಧನೆ ಪೂರ್ಣಗೊಳಿಸಲು ಅಶೋಕ ತಮ್ಮ ಬಡ್ತಿಯನ್ನೇ ತ್ಯಾಗ ಮಾಡಿದ್ದಾರೆ. ವಿಜಯಾ ಬ್ಯಾಂಕ್‌ನ ಅಧಿಕಾರಿಗಳು ಬಡ್ತಿ ನೀಡಲು ಮುಂದಾಗಿದ್ದರು. ಇದರಿಂದ ಸುಮಾರು ್ಙ 3 ಸಾವಿರದವರೆಗೆ ವೇತನವೂ ಹೆಚ್ಚುತ್ತಿತ್ತು. ಆದರೆ ಬಡ್ತಿ ಸಿಗಬೇಕೆಂದರೆ ಒಂದು ರಜೆ ಹಾಕಲೇಬೇಕಾಗುತ್ತದಂತೆ. ಅದಕ್ಕೇ ಬಡ್ತಿ ಪಡೆದಿಲ್ಲ ಎಂಬುದನ್ನು ಅವರ ಪತ್ನಿ ಭಾರತಿ ಬಹಿರಂಗಪಡಿಸುತ್ತಾರೆ.1983ರ ಜೂನ್ 15ರಂದು ಹುಬ್ಬಳ್ಳಿಯ ಬ್ರಾಡ್‌ವೆ ಶಾಖೆಯಲ್ಲಿ ಅಟೆಂಡರ್ ಆಗಿ ಕೆಲಸಕ್ಕೆ ಸೇರಿದ ಅಶೋಕ, 1990ರಲ್ಲಿ ಧಾರವಾಡ ಟೋಲ್‌ನಾಕಾದಲ್ಲಿರುವ ಶಾಖೆಗೆ ವರ್ಗವಾಗಿ ಬಂದರು. 2010ರಲ್ಲಿ ಸಿಬಿಟಿ ಬಳಿ ಇರುವ ಶಾಖೆಗೆ ವರ್ಗಾವಣೆಗೊಂಡಿದ್ದಾರೆ.

1994ರ ಏಪ್ರಿಲ್ 24ರಂದು ಭಾರತಿ ಅವರನ್ನು ಮದುವೆಯಾದರು. ಅಂದೂ ಸಹ ಭಾನುವಾರವಾಗಿತ್ತು. ಈ ಬಗ್ಗೆ ಮೊದಲೇ ಬೀಗರಿಗೂ ಹೇಳಿದ್ದರಂತೆ!`ಇನ್ನೂ ಆರು ವರ್ಷ ನನ್ನ ಸರ್ವಿಸ್ ಉಳಿದಿದ್ದು, ಅಲ್ಲಿಯವರೆಗೂ ಯಾವುದೇ ಕಾರಣಕ್ಕೂ ರಜೆ ಹಾಕಬಾರದು ಎಂದುಕೊಂಡಿದ್ದೇನೆ' ಎಂದು ಗಟ್ಟಿ ನಿರ್ಧಾರದ ಧ್ವನಿಯಲ್ಲಿ ಅಶೋಕ ಬಾಬರ್ ಹೇಳುತ್ತಾರೆ. ಅವರ ಸಾಧನೆಯನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ಗೆ ಕಳುಹಿಸಲು ತೀರ್ಮಾನಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.