ಬುಧವಾರ, ಮೇ 18, 2022
23 °C

ರವಿಯ ರುಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜುಳುಜುಳು ಹರಿವ ನೀರು, ಅಲ್ಲೇ ಹಾಸಿದ ಕಲ್ಲುಬಂಡೆಗಳ ಸಾಲು, ನೆಲದ ಪೂರ್ತಿ ಹುಲ್ಲಿನ ಹಾಸು, ದಟ್ಟನೆ ಹಬ್ಬಿ ಹೂಬಿಟ್ಟ ಮರ, ಎಲ್ಲಕ್ಕೂ ಹಸಿರು ಚಾದರ, ಇವೆಲ್ಲವನ್ನು ಸೀಳಿ ಬರುವ ಸೂರ್ಯರಶ್ಮಿ... ಕುಂಚದ ಮೂಲಕ ಪ್ರಕೃತಿಯ ಸೊಬಗನ್ನು ಇದಕ್ಕಿಂತ ಸೊಗಸಾಗಿ ಹೇಳಲು ಸಾಧ್ಯವೇ?`ಬಹುತೇಕ ಕಲಾವಿದರಂತೆ ನನಗೂ ಪರಿಸರವೇ ಸ್ಫೂರ್ತಿ. ಮೊಗೆದಷ್ಟೂ ಮುಗಿಯದ ಸಮುದ್ರ ಅದು, ಕಲಾವಿದರ ಬಂಡವಾಳವೂ ಹೌದು~  ಎನ್ನುತ್ತಾರೆ ಕಲಾವಿದ ಆರ್. ರವಿರಾಜ್. ಚಿತ್ರಕಲಾ ಪರಿಷತ್‌ನಲ್ಲಿ ನಡೆಯುತ್ತಿರುವ ಕಲಾಪ್ರದರ್ಶನಕ್ಕೆ ಅವರು ನೀಡಿರುವ ಹೆಸರು ಆಶೀರ್ವಾದ (ಗ್ರೇಸ್). ಎಲ್ಲವೂ ಸೂರ್ಯನ ಉಡುಗೊರೆ ಎನ್ನುವ ರವಿರಾಜ್ ತಮ್ಮ ಬಹುತೇಕ ಚಿತ್ರಗಳಲ್ಲಿ ಎಳೆಬಿಸಿಲನ್ನು ಒಂದಲ್ಲ ಒಂದು ರೀತಿಯಲ್ಲಿ ಬಳಸಿಕೊಂಡಿದ್ದಾರೆ. ತಮ್ಮ ಅನುಕೂಲಕ್ಕಾಗಿ ಪ್ರಕೃತಿ ಮೇಲೆ ಹರಿಹಾಯುವವರ ಮೇಲಿನ ಆಕ್ರೋಶವೂ ಅವರ ಚಿತ್ರಗಳಲ್ಲಿ ಬಿಂಬಿತವಾಗಿದೆ.`ಕರಾವಳಿ ತಡಿಯ ಉಡುಪಿ ನನ್ನೂರು. ಅಲ್ಲಿ ಸಮುದ್ರ ತೀರದ ಪ್ರದೇಶಗಳು, ಅಲೆಗಳು, ಕೂಡ್ಲು ತೀರ್ಥದಂತಹ ಜಲಪಾತಗಳು ಎಲ್ಲವೂ ಸಹಜ ಸೌಂದರ್ಯಗಳೇ. ಬಾಲ್ಯದಿಂದ ಇದನ್ನೆಲ್ಲಾ ಕಂಡು ಅನುಭವಿಸಿದ ನನಗೆ ಇದನ್ನೇ ಕ್ಯಾನ್ವಾಸ್ ಮೇಲೆ ಪಡಿಮೂಡಿಸುವುದು ಕಷ್ಟವಾಗಲಿಲ್ಲ. ಕಲೆ ಎಂದಿಗೂ ಖುಷಿ ನೀಡುವಂತಿರಬೇಕು.ಅದರಲ್ಲಿ ವಿಷಾದದ ಎಳೆ ಇರಬಾರದು. ಚಿತ್ರವನ್ನು ಇಷ್ಟಪಡುವ ಕಲಾಪ್ರೇಮಿ ಅದರ ಮುಂದೆ ಐದು ನಿಮಿಷ ನಿಂತು ವೀಕ್ಷಿಸಿ ಇಷ್ಟಪಟ್ಟರೆ ಕಲಾವಿದನಿಗೆ ಅದೇ ಉಡುಗೊರೆ~ ಎನ್ನುತ್ತಾರೆ ರವಿರಾಜ್.ಪ್ರಕೃತಿ ಪ್ರೇಮದೊಂದಿಗೆ ಪ್ರಾಣಿ ಸಂತತಿ ಉಳಿಯಬೇಕೆಂಬ ಆಶಯವೂ ಅವರ ಕಲಾಕೃತಿಗಳಲ್ಲಿ ವ್ಯಕ್ತವಾಗಿದೆ. ರಾಜಗಾಂಭೀರ್ಯ ತೋರಬೇಕಿದ್ದ ಸಿಂಹದ ಕಣ್ಣು ಕಳೆಗುಂದಿದೆ. ಮುಖದಲ್ಲೂ ತೇಜಸ್ಸಿಲ್ಲ. ಕೊಳಲು ಹಿಡಿದ ಕೃಷ್ಣನನ್ನು ಕಾಣಲು ಬಂದ ದನಗಳು ದೃಷ್ಟಿಯನ್ನೇ ಕಳೆದುಕೊಂಡಿವೆ.

 

ತನ್ನ ಒಳಿತಿಗಾಗಿ ನಿಸರ್ಗದ ಇತರ ಸಂಕುಲಗಳ ಮೇಲೆ ಸವಾರಿ ಮಾಡುವ ಮನುಷ್ಯನ ಬೇಜವಾಬ್ದಾರಿಯ ಬಗ್ಗೆ ಅಸಮಾಧಾನವೂ ವ್ಯಕ್ತವಾಗಿದೆ. ಇವರ ಎಲ್ಲಾ ಚಿತ್ರಗಳು ಆಕ್ರಿಲಿಕ್ ಹಾಗೂ ಆಯಿಲ್ ಪೇಂಟಿಗ್‌ನಲ್ಲಿ ರಚಿತವಾದವು. ವೃತ್ತಿಯಲ್ಲಿ ಕಿರ್ಲೋಸ್ಕರ್ ಕಂಪೆನಿಯ ಕ್ವಾಲಿಟಿ ಎಂಜಿನಿಯರ್ ಆಗಿದ್ದರೂ ಕಲೆಯ ಒಲವು ಮಾತ್ರ ಕಡಿಮೆಯಾಗಿಲ್ಲ.`ಆಶೀರ್ವಾದ~ ಪ್ರದರ್ಶನಕ್ಕೆ ರವಿರಾಜ್ ಅವರಿಗೆ ಜತೆಯಾದವರು ಹುಬ್ಬಳ್ಳಿ ಮೂಲದ ಎಂ.ಎನ್.ಪಾಟೀಲ. ಕಲೆ ಇವರಿಗೆ ವೃತ್ತಿ. ಹುಬ್ಬಳ್ಳಿಯಲ್ಲಿ ಸಿನಿಮಾಗಳ ಬ್ಯಾನರ್ ಬರೆಯುವ ಕೆಲಸದ ಮೂಲಕ ಇವರು ಕಲಾವಿದರಾದವರು. ಚಿತ್ರಕಲಾ ಪ್ರದರ್ಶನದ ಹಳೇ ಚಿತ್ರ ಸಂಗ್ರಹ ವಿಭಾಗದಲ್ಲಿ ಆರು ವರ್ಷ ಕೆಲಸ ಮಾಡಿದ್ದರು. `ಬುದ್ಧ~ ಇವರ ಮಾದರಿ ವ್ಯಕ್ತಿ. ಶಾಂತಿ ಹಾಗೂ ನೆಮ್ಮದಿ ನನ್ನ ಚಿತ್ರಗಳ ಕಥಾವಸ್ತು. ಸಂಸಾರದ ಎಲ್ಲ ಜಂಜಡಗಳಿಂದ ಮುಕ್ತನಾಗಿ ಏಕಾಂಗಿಯಾಗಿ ನಿಂತು ದೈವತ್ವಕ್ಕೇರಿದ ಬುದ್ಧ ನನ್ನ ಎಲ್ಲಾ ಕಲಾಕೃತಿಗಳಲ್ಲಿ ಒಂದಿಲ್ಲೊಂದು ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. ಆತನ ಶಾಂತ ಮುದ್ರೆಯನ್ನು ಮೊಗದಲ್ಲಿ ಬಿಂಬಿಸುವುದು ಸುಲಭದ ಮಾತಲ್ಲ. ಆತನ ಬಗ್ಗೆ ಸಾಕಷ್ಟು ಅಭ್ಯಸಿಸಿಯೇ ಚಿತ್ರ ಬರೆಯಲು ಆರಂಭಿಸಿದ್ದು~ ಎನ್ನುವ ಪಾಟೀಲರ ಮೊಗವೂ ಅಷ್ಟೇ ಶಾಂತ.`ಮುಂಬೈನ ಎಲಿಫೆಂಟ್ ಕೇವ್ಸ್‌ಗೆ ಹೋಗಿದ್ದ ಸಂದರ್ಭದಲ್ಲಿ ಅಲ್ಲಿ ಕಂಡ ಮಹೇಶ ಮೂರ್ತಿಯನ್ನು ನೋಡಿ ಅದರ ಪ್ರತಿಬಿಂಬವನ್ನೇ ರಚಿಸಿದೆ. ಉಗ್ರಾವತಾರ, ಧ್ಯಾನಸ್ಥ ಹಾಗೂ ಬೋಧನೆಯ ಚಹರೆ ಆ ತ್ರಿಮೂರ್ತಿಯ ವೈಶಿಷ್ಟ್ಯ. ಭಾವಗಳನ್ನು ಬಿಂಬಿಸುವುದು ನನಗಿಷ್ಟದ ಪ್ರಕಾರವೂ ಹೌದು.ಧ್ಯಾನಕ್ಕೆ ಕುಳಿತ ಬುದ್ಧನಿಗೆ ಸುತ್ತಲಿನ ಮರ, ಬಳ್ಳಿ, ಉದುರುವ ಎಲೆ, ಹಸುಗಳು ಸಾಥ್ ನೀಡಿವೆ. ತಾವರೆ ಸದಾ ಹೊಸತನದ ಸಂಕೇತ ನೀಡಿದರೆ ಹಸು ತಾಳ್ಮೆ ಹಾಗೂ ಮಾನವೀಯತೆಯ ಪ್ರತೀಕ. ನವಿಲು ಶಾಂತಿಯ ಪಾಠ ಹೇಳಿದರೆ ಆಲದ ಮರ ಜ್ಞಾನದ ನೆರಳು ನೀಡುತ್ತದೆ. ಬುದ್ಧ ಮರುಹುಟ್ಟು ಪಡೆದು ಬರಬೇಕು ಎಂಬುದೇ ಎಲ್ಲಾ ಚಿತ್ರಗಳ ಒಟ್ಟು ಸಂದೇಶ~ ಎಂದು ವಿವರಿಸುತ್ತಾರೆ ಅವರು.ಬುದ್ಧನ ಶಾಂತತೆ ಹಾಗೂ ಸೂರ್ಯನ ಎಳೆಕಿರಣಗಳಲ್ಲಿ ಆಶಾವಾದದ ಪ್ರಬಲ ನಿರೀಕ್ಷೆಯಿದೆ. ಒಂದೆಡೆ ಸೂರ್ಯ ದೈವವಾದರೆ ಇನ್ನೊಂದೆಡೆ ಬುದ್ಧ. ಎರಡು ಕಲಾಕೃತಿಗಳೂ ಪ್ರತಿಪಾದಿಸುವುದು ಒಂದೇ ತತ್ವವನ್ನು. ಅದನ್ನು ಕ್ಯಾನ್ವಾಸ್ ಮೇಲೆ ಚಿತ್ರಿಸಿದ ಬಗೆಯಷ್ಟೇ ವಿಭಿನ್ನ. ಚಿತ್ರಕಲಾ ಪರಿಷತ್‌ನಲ್ಲಿ ಇದೇ 17ರವರೆಗೆ ಪ್ರದರ್ಶನ ಮುಂದುವರೆಯಲಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.