ಭಾನುವಾರ, ಜನವರಿ 26, 2020
20 °C

ರಶ್ದಿ ವಿಡಿಯೊ ಸಂವಾದಕ್ಕೆ ರಾಜಸ್ತಾನ ಸರ್ಕಾರ ನಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೈಪುರ (ಪಿಟಿಐ): ವಿವಾದಿತ ಲೇಖಕ ಸಲ್ಮಾನ್ ರಶ್ದಿ ಅವರೊಂದಿಗೆ ಸಂಘರ್ಷಕ್ಕೆ ಇಳಿದಿರುವ ರಾಜಸ್ತಾನ ಸರ್ಕಾರ, ಇಲ್ಲಿನ ಸಾಹಿತ್ಯ ಉತ್ಸವದಲ್ಲಿ ಅವರ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದ ವಿವಾದಕ್ಕೆ ಮತ್ತೊಂದು ಆಯಾಮ ನೀಡಿದೆ.ಪೂರ್ವಾನುಮತಿ ಇಲ್ಲದೆ ರಶ್ದಿ ಅವರು ವಿಡಿಯೊ ಸಂವಾದದ ಮೂಲಕ ಉತ್ಸವದಲ್ಲಿ ಮಾತನಾಡಲು ಅವಕಾಶ ನೀಡುವುದಿಲ್ಲ ಎಂದು ಅದು  ಸೋಮವಾರ ಹೊಸ `ಬಾಂಬ್~ ಸಿಡಿಸಿದೆ.ಉತ್ಸವದಲ್ಲಿ ಭಾಗವಹಿಸದಂತೆ ತಮ್ಮನ್ನು ತಡೆಯಲು ರಾಜಸ್ತಾನ ಪೊಲೀಸರು ಸಂಚು ರೂಪಿಸಿದ್ದಾರೆ ಎಂದು ಭಾರತೀಯ ಸಂಜಾತ ಲೇಖಕ ಟ್ವಿಟ್ಟರ್‌ನಲ್ಲಿ ಆರೋಪಿಸಿದ ಬೆನ್ನಲ್ಲೇ ಸರ್ಕಾರದ ಈ ಹೇಳಿಕೆ ಹೊರಬಿದ್ದಿದೆ. ಈ ಬೆಳವಣಿಗೆಯಿಂದಾಗಿ, ಸಂಘಟಕರು ಉತ್ಸವದ ಕೊನೆಯ ದಿನವಾದ ಮಂಗಳವಾರ  ಆಯೋಜಿಸಲು ಉದ್ದೇಶಿಸಿದ್ದ ರಶ್ದಿ ವಿಡಿಯೊ ಸಂವಾದ ಕಾರ್ಯಕ್ರಮ ತೂಗುಯ್ಯಾಲೆಯಲ್ಲಿದೆ. ಆದರೆ, ಸಂಘಟಕರು ಮಾತ್ರ ಕಾರ್ಯಕ್ರಮ ನಡೆದೇ ನಡೆಯುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ.`ಇದು ಅತಿ ಸೂಕ್ಷ್ಮ ವಿಷಯವಾದ ಕಾರಣ ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ~ ಎಂದು ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. `ಸರ್ಕಾರದ ಅನುಮತಿ ಇಲ್ಲದೆ ಏನೂ ಮಾಡಲು ಸಾಧ್ಯವಿಲ್ಲ~ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಬಿಜು ಜಾರ್ಜ್ ಜೋಸೆಫ್ ಹೇಳಿದ್ದಾರೆ.ಉತ್ಸವದ ಸಂಘಟಕರಲ್ಲಿ ಒಬ್ಬರಾದ ಸಂಜಯ್ ರಾಯ್ `ಈ ಕುರಿತು ನಮಗೆ ಇನ್ನೂ ಸರ್ಕಾರದಿಂದ ಅಧಿಕೃತ ಮಾಹಿತಿ ಬಂದಿಲ್ಲ. ಸದ್ಯಕ್ಕೆ ಯಾವ ಅಧಿಕಾರಿಯೂ ನಮ್ಮ ಬಳಿ ಮಾತನಾಡಿಲ್ಲ. ಹೀಗಾಗಿ ಕಾರ್ಯಕ್ರಮ ನಡೆಯುತ್ತದೆ~ ಎಂದು ಪ್ರತಿಕ್ರಿಯಿಸಿದ್ದಾರೆ.ಈ ಬಗ್ಗೆ ಮುಸ್ಲಿಂ ಸಂಘಟನೆಗಳು ವಿಭಿನ್ನ ನಿಲುವು ತಾಳಿವೆ. ಕೆಲವರು ಕಾರ್ಯಕ್ರಮ ನಡೆಸಲು ಸಮ್ಮತಿ ಸೂಚಿಸಿದ್ದಾರೆ. ಆದರೆ ರಶ್ದಿ ಯಾವುದೇ ಕಾನೂನುಬಾಹಿರ ಹೇಳಿಕೆ ನೀಡಿದರೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.ಲೇಖಕನಿಗೆ ಮುಕ್ತ ಆಹ್ವಾನ: ಈ ನಡುವೆ ಕೆಲವು ಸಂಘಟನೆಗಳು ರಶ್ದಿ ಮತ್ತು ಕಲಾವಿದ ಎಂ.ಎಫ್.ಹುಸೇನ್ ಪ್ರಕರಣಗಳನ್ನು ಸಮೀಕರಿಸಿವೆ. ಭಾರತಕ್ಕೆ ಆಗಮಿಸಿ ಸಾಹಿತ್ಯದ ಕುರಿತು ಉಪನ್ಯಾಸ ನೀಡುವಂತೆ ಕಲಾವಿದರು ಮತ್ತು ಹೋರಾಟಗಾರರ ಸಂಘಟನೆ `ಸಹಮತ್~ ವಿವಾದಿತ ಲೇಖಕನಿಗೆ ಮುಕ್ತ ಆಹ್ವಾನ ನೀಡಿದೆ.ದೆಹಲಿಯಲ್ಲಿ ಎಂ.ಎಫ್.ಹುಸೇನ್ ಕಲಾಕೃತಿಗಳ ಪ್ರದರ್ಶನ ಮತ್ತು ರಶ್ದಿ ಅವರ ವಿವಾದಿತ ಪುಸ್ತಕ `ಸೆಟಾನಿಕ್ ವರ್ಸಸ್~ ಕುರಿತು ಉಪನ್ಯಾಸ ಏರ್ಪಡಿಸಲು ಬದ್ಧ, ಕೋಮುವಾದದ ವಿರುದ್ಧ ಯಾವುದೇ ಪರಿಸ್ಥಿತಿ ಎದುರಿಸಲು ಸಹ ಸಿದ್ಧ ಎಂದು ಅದು ಹೇಳಿದೆ.ಈ ಕೃತಿಯ ಮೇಲೆ ಹೇರಲಾಗಿರುವ 23 ವರ್ಷಗಳ ನಿಷೇಧವನ್ನು ಹಿಂತೆಗೆದುಕೊಳ್ಳುವಂತೆ ಲೇಖಕರ ಗುಂಪೊಂದು ಆನ್‌ಲೈನ್‌ನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಗೃಹ ಸಚಿವ ಪಿ.ಚಿದಂಬರಂ ಅವರಿಗೆ ಮನವಿ ಸಲ್ಲಿಸಿದೆ. 250 ಜನ ಇದಕ್ಕೆ ಸಹಿ ಹಾಕಿದ್ದಾರೆ. ಉತ್ಸವದ ಬಹುತೇಕ ಅಮೂಲ್ಯ ಸಮಯವನ್ನು ನುಂಗಿ ಹಾಕಿದ ವಿವಾದದ ಕರಿ ನೆರಳು ನಾಲ್ಕನೇ ದಿನದ ಕಾರ್ಯಕ್ರಮದ ಮೇಲೆ ಬೀಳಲಿಲ್ಲ. ವಾತಾವರಣ ಸ್ವಲ್ಪ ತಿಳಿಯಾಗಿತ್ತು. ಹೆಸರಾಂತ ಗೀತ ರಚನಕಾರರಾದ ಗುಲ್ಜಾರ್, ಜಾವೇದ್ ಮತ್ತು ಪ್ರಸೂನ್ ಜೋಶಿ ಪ್ರೇಕ್ಷಕರಿಗೆ ಕಾವ್ಯಗಳ ರಸಗವಳ ಉಣಬಡಿಸಿದರು.

ಪ್ರತಿಕ್ರಿಯಿಸಿ (+)