ರಷ್ಯ: ವಿಮಾನ ಅಪಘಾತ, ಹಾಕಿ ತಂಡದ ದುರಂತ ಅಂತ್ಯ

ಸೋಮವಾರ, ಮೇ 27, 2019
28 °C

ರಷ್ಯ: ವಿಮಾನ ಅಪಘಾತ, ಹಾಕಿ ತಂಡದ ದುರಂತ ಅಂತ್ಯ

Published:
Updated:

ಯರೊಸ್ಲಾವ್, ರಷ್ಯ (ಐಎಎನ್‌ಎಸ್/ ರಿಯಾ ನೊವೊಸ್ತಿ): ಪ್ರಯಾಣಿಕರ ವಿಮಾನವೊಂದು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮೇಲಕ್ಕೇರುವ ಹಂತದಲ್ಲಿಯೇ ಅಪಘಾತಕ್ಕೀಡಾಗಿ 8 ಮಂದಿ ಸಿಬ್ಬಂದಿಯೂ ಸೇರಿದಂತೆ 44 ಜನ ಸಾವನ್ನಪ್ಪಿದ ಘಟನೆ ಬುಧವಾರ ಸಂಭವಿಸಿದೆ.ಈ `ಯಾಕ್-42~ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಐಸ್ ಹಾಕಿ ಆಟಗಾರರ ತಂಡವೊಂದರ ಬಹುತೇಕ ಆಟಗಾರರು ಸಾವನ್ನಪ್ಪಿದ್ದಾರೆ. ಇಲ್ಲಿನ `ಲೋಕೊಮೋಟಿವ್ ಯರೊಸ್ಲಾವ್~ ತಂಡದ ಆಟಗಾರರು ಬೆಲಾರಸ್‌ನ ರಾಜಧಾನಿ ಮಿನ್ಸ್ಕ್‌ನಲ್ಲಿ ನಡೆಯಲಿರುವ ಹಾಕಿ ಲೀಗ್‌ನಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಅಲೆಗ್ಸಾಂಡರ್ ಗಲಿಮೊವ್ ಎಂಬ ಆಟಗಾರ ಮಾತ್ರ ಬದುಕುಳಿದಿದ್ದಾನೆ, ಆದರೂ ತೀವ್ರ ಸ್ವರೂಪದ ಗಾಯಗಳಾಗಿರುವುದರಿಂದ ಆತನ ಸ್ಥಿತಿ ಚಿಂತಾಜನಕವಾಗಿದೆ. ಈ ತಂಡದಲ್ಲಿ ಜರ್ಮನಿ, ಸ್ವೀಡನ್, ಸ್ಲೊವೊಕಿಯ ದೇಶಗಳ ಆಟಗಾರರೂ ಇದ್ದರು. ರಷ್ಯಾದ ಮಟ್ಟಿಗೆ ಹೆಸರುವಾಸಿಯಾಗಿರುವ ಈ ತಂಡ ಕಳೆದ ವರ್ಷ ರಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಮೂರನೇ ಸ್ಥಾನ ಗಳಿಸಿತ್ತು. 1949ರಿಂದ ನಿರಂತರವಾಗಿ ಒಂದಿಲ್ಲಾ ಒಂದು ಟೂರ್ನಿಯಲ್ಲಿ ಆಡುತ್ತಾ ಬಂದಿರುವ ಈ ತಂಡ ರೈಲ್ವೆ ಇಲಾಖೆಯ ವ್ಯಾಪ್ತಿಯೊಳಗೆ ಬರುತ್ತದೆ.ಮಾಸ್ಕೊ ನಗರದಿಂದ ಈಶಾನ್ಯಕ್ಕೆ 240 ಕಿ.ಮೀ. ದೂರದಲ್ಲಿರುವ ಯುರೊಸ್ಲಾವ್‌ನಲ್ಲಿ ಸಂಜೆ 4 ಗಂಟೆಯ ಸುಮಾರಿಗೆ ನಡೆದ ಅಪಘಾತದಲ್ಲಿ ನೋಡು ನೋಡುತ್ತಿದ್ದಂತೆಯೇ ವಿಮಾನ ಹೊತ್ತಿ ಉರಿದು, ಸ್ಫೋಟಗೊಂಡಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹೀಗಾಗಿ ಕೆಲವು ಪ್ರಯಾಣಿಕರ ದೇಹದ ಭಾಗಗಳು ಸಮೀಪದ ವೋಲ್ಗಾ ನದಿಗೂ ಬಿದ್ದಿತ್ತು. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಈ ಊರಿಗೆ ಬಂದಿರುವ ರಷ್ಯ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಈ ಘಟನೆಯ ಬಗ್ಗೆ ಸಂತಾಪ ವ್ಯಕ್ತ ಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry