ಶನಿವಾರ, ಫೆಬ್ರವರಿ 27, 2021
27 °C

ರಸಪ್ರಜ್ಞೆ ಬೆಳವಣಿಗೆಯ ವೇದಿಕೆಗಳಾಗಲಿ

ನಿರೂಪಣೆ: ಡಿ.ಎಂ.ಕುರ್ಕೆ ಪ್ರಶಾಂತ Updated:

ಅಕ್ಷರ ಗಾತ್ರ : | |

ರಸಪ್ರಜ್ಞೆ ಬೆಳವಣಿಗೆಯ ವೇದಿಕೆಗಳಾಗಲಿ

ಎಂಟನೇ ‘ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ’ಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ವರ್ಷದಿಂದ ವರ್ಷಕ್ಕೆ ಅದ್ದೂರಿಯಾಗುತ್ತಿರುವ ಸಿನಿಮೋತ್ಸವಕ್ಕೆ ಜಾಗತಿಕ ಸಿನಿಮಾ ನಿರ್ಮಾರ್ತೃಗಳು ಸಹ ಸಾಕ್ಷಿಯಾಗುತ್ತಿದ್ದಾರೆ. ವಾರ್ತಾ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ, ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿ ಸಂಘಟಿಸುತ್ತಿರುವ ಉತ್ಸವಕ್ಕೆ ಅನೇಕರಲ್ಲಿ ಸಲಹೆ ಸೂಚನೆಗಳು ಇದ್ದೇ ಇರುತ್ತವೆ. ಅವುಗಳನ್ನು ಕೇಳಿಸುವುದು ‘ಮೆಟ್ರೊ’ ಉದ್ದೇಶ. ಈ ಉತ್ಸವದ ಕುರಿತು ಸಿನಿಮಾಟೊಗ್ರಾಫರ್ ಎಚ್‌.ಎಸ್. ರಾಮಚಂದ್ರ ಅಭಿಪ್ರಾಯ ಹಂಚಿಕೊಂಡಿದ್ದಾರೆ.ಈ ಬಾರಿಯ ಸಿನಿಮೋತ್ಸವ ಒಂದೇ ಕಡೆ ಇರುವುದು ಇಷ್ಟವಾಯಿತು. ಕಳೆದ ಬಾರಿ ನಾಲ್ಕೈದು ಕಡೆಗಳಲ್ಲಿ ಓಡಾಡಬೇಕಿತ್ತು. ನನಗೆ ವೈಯಕ್ತಿಕವಾಗಿ ಚಿತ್ರವನ್ನು ನೋಡುವುದಕ್ಕಿಂತ ಅಲ್ಲಿ ಬಂದವರ ಜತೆ ಅಭಿಪ್ರಾಯ ಹಂಚಿಕೊಳ್ಳುವುದು, ಚಿತ್ರದ ಬಗ್ಗೆ ಮಾತನಾಡುವುದು ಮುಖ್ಯ. ಒಂದೇ ಕಡೆ ಪ್ರದರ್ಶನವಾಗುತ್ತಿರುವುದರಿಂದ ಇದು ಸುಲಭವಾಗುತ್ತಿದೆ. ಅತಿಥಿ ನಿರ್ದೇಶಕರ ಜತೆ ಅಭಿಪ್ರಾಯ ಹಂಚಿಕೊಳ್ಳುವುದು– ಸಂವಾದ ನಡೆಸುವುದೂ ಮುಖ್ಯ. ಅದಕ್ಕೆ ಅವಕಾಶ ಸಿಗುತ್ತಿದೆ.

ಎಲ್ಲ ಕಡೆಯೂ ಡಿಜಿಟಲ್ ತಂತ್ರಜ್ಞಾನ ಇದೆ. ತಾಂತ್ರಿಕತೆ ಉನ್ನತವಾದಂತೆ ಹೊಸದು ಬರುತ್ತಿರುತ್ತದೆ. ವೈಯಕ್ತಿಕವಾಗಿ ನಾನು ಗಮನಿಸಿರುವಂತೆ ಸಿನಿಮೋತ್ಸಗಳಲ್ಲಿ ಈ ವಿಷಯದ ಬಗ್ಗೆ ನಡೆಯುವ ಕಾರ್ಯಾಗಾರ–ಚರ್ಚೆಗಳಲ್ಲಿ ಜನರು ಹೆಚ್ಚು ಆಸಕ್ತಿ–ಕಾಳಜಿಯಿಂದ ಭಾಗವಹಿಸುವುದಿಲ್ಲ. ಛಾಯಾಗ್ರಹಕರ ಒಕ್ಕೂಟದಿಂದಲೂ ಎರಡು ಮೂರು ಬಾರಿ ಕಾರ್ಯಾಗಾರ ಸಂಘಟಿಸಲು ಓಡಾಡಿದೆವು. ಉಪಯೋಗವಾಗಲಿಲ್ಲ.ಉತ್ಸವಗಳಿಂದ ಬೇರೆ ಬೇರೆ ನಿರ್ದೇಶಕರ ಜತೆ ಉತ್ತಮ ಸಂವಾದಗಳು ಆಗುತ್ತವೆ. ಆ ಮಾಧ್ಯಮದ ಜತೆ ನಮಗೆ ವೈಯಕ್ತಿಕವಾಗಿ ಸಂಭಾಷಣೆ ಆಗಬೇಕು. ಈ ಸಿನಿಮಾಗಳನ್ನು ಏಕೆ ಮಾಡುತ್ತಿದ್ದಾರೆ? ಎಂದು ತಿಳಿಯಲು ಅದು ದಾರಿಯಾಗುತ್ತದೆ. ಈ ಸಂಭಾಷಣೆಯಿಂದ ಎಲ್ಲ ಚಿತ್ರ ಪ್ರೇಮಿಗಳಿಗೂ ವೈಯಕ್ತಿಕವಾಗಿ ಅನುಕೂಲವಾಗುತ್ತದೆ. ಸಿನಿಮಾ ವ್ಯಾಕರಣ ಡಿಜಿಟಲ್ ಕಾರಣದಿಂದ ವೇಗವಾಗಿ ಬದಲಾಗುತ್ತಿದೆ. ನಿರೂಪಣೆಗೂ ಇದು ಅನ್ವಯವಾಗುತ್ತದೆ. ಸಿನಿಮಾ ಮಾತ್ರವಲ್ಲ, ಆಡುಭಾಷೆಯಲ್ಲೂ ಬದಲಾವಣೆ ಕಾಣುತ್ತೇವೆ. ಈ ರೀತಿಯ ಬದಲಾವಣೆಗಳನ್ನು ಅರ್ಥ ಮಾಡಿಕೊಳ್ಳಲು ಬೆಂಗಳೂರು ಸಿನಿಮೋತ್ಸವ ಪ್ಲಾಟ್‌ಫಾರ್ಮ್‌.ಸಿನಿಮಾ ರಸಗ್ರಹಣದ ಕಾರ್ಯಾಗಾರಗಳು ದೊಡ್ಡಮಟ್ಟದಲ್ಲಿ ನಿರಂತರವಾಗಿ ಆಗಬೇಕು. ಸಾಹಿತ್ಯದಲ್ಲಿ ರಸಪ್ರಜ್ಞೆ ಎಂದು ಕರೆಯುತ್ತೇವಲ್ಲ ಈ ದೃಷ್ಟಿಯಲ್ಲಿ ಹೇಳುವುದಾದರೆ ಒಟ್ಟು ಸಿನಿಮಾವನ್ನು ನೋಡುವ ದೃಷ್ಟಿ ಬೆಳೆದಿಲ್ಲ ಎನಿಸುತ್ತದೆ. ರಸಪ್ರಜ್ಞೆ/ರಸಗ್ರಹಣ ಬೆಳವಣಿಗೆಯ ಬಗ್ಗೆ ಗಂಭೀರವಾಗಿ ವಿಷಯ ವಿನಿಮಯವಾಗಬೇಕು. ಸಿನಿಮಾಕ್ಕೆ ವೈಜ್ಞಾನಿಕ ಹಿನ್ನೆಲೆ ಇದೆ. ಒಟ್ಟು ಸಿನಿಮಾ ನೋಡುವ ರಸಪ್ರಜ್ಞೆ ಬೆಳೆಸಬೇಕು.ವೈಯಕ್ತಿಕವಾಗಿ ಹೇಳುವುದಾದರೆ ನನ್ನ ಬೆಳೆಸಿದ್ದು ಇಂಥ ರಸಗ್ರಹಣ ಶಿಬಿರಗಳೇ. ನಾನು ಬಾಲ್ಯದಲ್ಲಿರುವಾಗ ನೀನಾಸಮ್‌ ‘ಚಲನಚಿತ್ರ ರಸಗ್ರಹಣ ಶಿಬಿರ’ದಲ್ಲಿ ಪಾಲ್ಗೊಳ್ಳುತ್ತಿದ್ದೆ. ಈಗ ಅದು ನೀನಾಸಮ್ ಸಾಂಸ್ಕೃತಿಕ ಶಿಬಿರ ಎಂದಾಗಿದೆ. ‘ಚಲನಚಿತ್ರ ರಸಗ್ರಹಣ ಶಿಬಿರ’ ವೈಯಕ್ತಿಕವಾಗಿ ಪ್ರಭಾವ ಬೀರಿತು. ಈ ರಸಪ್ರಜ್ಞೆಯನ್ನು ನಾವು ಹೆಚ್ಚು ಮಾಡಿಕೊಳ್ಳುವ ಅಗತ್ಯವಿದೆ ಎನಿಸುತ್ತದೆ. ಅಕಾಡೆಮಿಗಳು ರಸಗ್ರಹಣ ಶಿಬಿರಗಳನ್ನು ನಿರಂತರವಾಗಿ ನಡೆಸುವುದು ಉತ್ತಮ. ಸಿನಿಮೋತ್ಸವಗಳು ಇದಕ್ಕೆ ಒಂದು ವೇದಿಕೆಗಳು.ನಾನು ಕೋಲ್ಕತ್ತ ಮತ್ತು ಪುಣೆ ಸಿನಿಮೋತ್ಸವದಲ್ಲಿ ಪಾಲ್ಗೊಳ್ಳುವೆ. ಕೋಲ್ಕತ್ತದಲ್ಲಿ ಸಾಮಾನ್ಯ ಜನರೂ ಸಿನಿಮಾವನ್ನು ಗಂಭೀರವಾಗಿ ನೋಡುವರು. ಅವರಿಗೆ ಅನ್ನಿಸಿದ್ದನ್ನು ನೇರವಾಗಿ ಹೇಳುತ್ತಾರೆ. ಈ ರೀತಿಯ ಸಂವಾದಗಳು ಹೊಸ ಹೊಳಹುಗಳನ್ನು ನೀಡುತ್ತವೆ. ರಂಗಭೂಮಿಯನ್ನು ಜೀವಂತವಾಗಿಸಿಕೊಂಡಿರುವ ನಗರಿ ಪುಣೆ . ಇಲ್ಲಿನ ಸಿನಿಮೋತ್ಸವದಲ್ಲಿ ಪಾಲ್ಗೊಳ್ಳುವ ಶೇ 80ರಷ್ಟು ಜನರು 25 ವರ್ಷದೊಳಗಿನವರು. ಪ್ರಾಮಾಣಿಕವಾಗಿ ಸಿನಿಮಾ ಆಸಕ್ತಿ ಇಟ್ಟುಕೊಂಡವರು. ಚಿತ್ರ ನೋಡುವುದಷ್ಟೇ ಅಲ್ಲ, ಸಂವಾದಗಳಲ್ಲೂ ಪಾಲ್ಗೊಳ್ಳುತ್ತಾರೆ.ನಾನು ಶೇ 40ರಷ್ಟು ಸಿನಿಮಾಗಳನ್ನು ನೋಡಲು, 60ರಷ್ಟು ಸಂವಾದಗಳಲ್ಲಿ ಪಾಲ್ಗೊಳ್ಳಲು ಸಿನಿಮೋತ್ಸವಗಳಲ್ಲಿ ಭಾಗಿಯಾಗುವೆ. ಈ ಸಂವಾದಗಳು ಜಾಗತಿಕ ಮಾಹಿತಿಗೂ ಕಾರಣವಾಗುತ್ತದೆ. ನಮ್ಮಲ್ಲೂ ಈ ರೀತಿಯ ರಸಗ್ರಹಣ ಶಿಬಿರಗಳು ನಿರಂತರವಾಗಿ ಆದರೆ ಒಳ್ಳೆಯದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.