ಶುಕ್ರವಾರ, ಜೂಲೈ 3, 2020
28 °C

ರಸ್ತೆಗೆ ಬತ್ತ ಸುರಿದು ರೈತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಸ್ತೆಗೆ ಬತ್ತ ಸುರಿದು ರೈತರ ಪ್ರತಿಭಟನೆ

ಹೊನ್ನಾಳಿ: ಬತ್ತದ ಬೆಲೆ ಕುಸಿದಿದೆ, ರೈತ ಕಂಗಾಲಾಗಿದ್ದಾನೆ, ಕಳೆದ 20 ದಿನಗಳಿಂದ ರೈತರು ಬತ್ತಕ್ಕೆ ವೈಜ್ಞಾನಿಕ ಬೆಲೆ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಯಾರೂ ಅವರತ್ತ ತಿರುಗಿಯೂ ನೋಡುತ್ತಿಲ್ಲ  ಎಂದು ಜೆಡಿಎಸ್ ಮುಖಂಡ ಎಂ. ಶಿವಲಿಂಗಪ್ಪ ಆಕ್ರೋಶ ವ್ಯಕ್ತಪಡಿಸಿದರು.ಬತ್ತಕ್ಕೆ ವೈಜ್ಞಾನಿಕ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿ ಜೆಡಿಎಸ್ ವತಿಯಿಂದ ಬುಧವಾರ ಹೊನ್ನಾಳಿಯ ತಾಲ್ಲೂಕು ಕಚೇರಿ ಬಳಿ ಬತ್ತವನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದ ನಂತರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.ರಾಜ್ಯದ ಆಡಳಿತಾರೂಢ ಬಿಜೆಪಿ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರೈತರ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ, ರೈತರ ಸಮಸ್ಯೆ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಟೀಕಿಸಿದರು.ಬಿಜೆಪಿ ನಾಯಕರು ರೆಸಾರ್ಟ್ ರಾಜಕೀಯ ಮಾಡುತ್ತಿದ್ದಾರೆ, ತಮಗೆ ಬೇಕಾದಾಗ ರಾಜ್ಯ ಸರ್ಕಾರಕ್ಕೆ ಬೆಂಬಲ ನೀಡುವುದು, ಬೇಡವಾದಾಗ ವಾಪಸ್ ಪಡೆದುಕೊಳ್ಳವುದು ಮಾಡುತ್ತಿದ್ದಾರೆ, ತಮ್ಮ ಸ್ಥಾನಗಳ ಭದ್ರತೆ, ಮಂತ್ರಿಗಿರಿಗೆ ಲಾಬಿ ಮಾಡುವುದು ಇತ್ಯಾದಿಗಳಲ್ಲೇ ಕಾಲಹರಣ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ 3ನೇ ವರ್ಷಾಚರಣೆಯಲ್ಲಿ ಎಲ್ಲರೂ ಮಗ್ನರಾಗಿದ್ದಾರೆ, ರೈತರ ಸಮಸ್ಯೆಗಳ ಅರಿವು ಅವರಿಗಿಲ್ಲ ಎಂದರು.ಬತ್ತಕ್ಕೆ ರೂ. 1,600ಗಳಷ್ಟು ಬೆಂಬಲ ಬೆಲೆ ನಿಗದಿಪಡಿಸಬೇಕು, ಹೋಬಳಿವಾರು ಖರೀದಿ ಕೇಂದ್ರ ತೆರೆಯಬೇಕು, ಎಲ್ಲಾ ಬೆಳೆಗಳಿಗೂ ಬೆಂಬಲ ಬೆಲೆ ನೀಡಬೇಕು ಎಂದು ಅವರು ಒತ್ತಾಯಿಸಿದರು.ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎಂ.ಆರ್. ಮಹೇಶ್ ಇತರರು ಮಾತನಾಡಿದರು. ಬಿ.ಎಸ್. ಆನಂದ್, ಎ.ಎಸ್. ಬಸವರಾಜ್, ಎಚ್.ಬಿ. ಸೋಮಶೇಖರ್, ಪ್ರಕಾಶ್, ಮಹೇಂದ್ರ ಕುಮಾರ್ ಹೊಸಹಳ್ಳಿ, ದೇವಿಕುಮಾರ್, ಎಚ್. ನಟರಾಜ್, ಬಿ.ಜಿ. ಜಗದೀಶ್ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.