ಮಂಗಳವಾರ, ಮೇ 24, 2022
30 °C

ರಸ್ತೆ ದುರಸ್ತಿಗೆ ಆಗ್ರಹಿಸಿ 25ರಂದು ರಸ್ತೆ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ದಾಪುರ: ಈ ತಿಂಗಳ 24ರೊಳಗೆ ಗಟ್ಟದಹಳ್ಳ, ಪಾಲಿಬೆಟ್ಟ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳದ್ದಿದ್ದಲ್ಲಿ ಮಾರ್ಚ್ 25ರಂದು ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಸಿದ್ದಾಪುರ ತಾ.ಪಂ. ಸದಸ್ಯ ಪಿ.ವಿ. ಜಾನ್ಸನ್ ಹಾಗೂ ಮಾಲ್ದಾರೆ ಗ್ರಾ.ಪಂ. ಅಧ್ಯಕ್ಷ ಶಜಿ ತಿಳಿಸಿದ್ದಾರೆ. ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ಗಟ್ಟದಹಳ್ಳ- ಪಾಲಿಬೆಟ್ಟ ರಸ್ತೆ ಕಾಮಗಾರಿ ಡಾಂಬರೀಕರಣ ವ್ಯವಸ್ಥಿತವಾಗಿ ನಡೆದಿಲ್ಲ. ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಿದರೂ ಇದುವರೆಗೂ ರಸ್ತೆ ದುರಸ್ತಿ ಮಾಡುವ ಕುರಿತು ಅಧಿಕಾರಿಗಳಿಂದ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ದೂರಿದರು.ಈ ಹಿಂದೆ ನಡೆಸಿದ ಪ್ರತಿಭಟನೆಗೆ ಸ್ಪಂದಿಸಿದ್ದ ವಿಧಾನ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಸ್ಥಳಕ್ಕೆ ಆಗಮಿಸಿ, ಇದು ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಮಾರ್ಗವಾಗಿರುವುದರಿಂದ ರಸ್ತೆ ಅಗಲೀಕರಣಕ್ಕೆ ಅವಶ್ಯವಿರುವ ಜಾಗ ಬಿಟ್ಟುಕೊಡುವಂತೆ ತೋಟದ ಮಾಲೀಕರನ್ನು ಕೋರಿದ್ದರು. ಅಲ್ಲದೆ, ಶೀಘ್ರ ರಸ್ತೆ ದುರಸ್ತಿ ಕಾರ್ಯ ಪ್ರಾರಂಭವಾಗಲಿದೆ ಎಂದು ಭರವಸೆ ನೀಡಿದ್ದರು. ಆದರೆ, ಭರವಸೆ ನೀಡಿ ಎರಡು ವರ್ಷ ಕಳೆದರೂ ರಸ್ತೆ ವಿಸ್ತರಣೆ ಕಾರ್ಯವಾಗಲಿ ಅಥವಾ ದುರಸ್ತಿ ಕೆಲಸವಾಗಲೀ ಪ್ರಾರಂಭವಾ ಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.ಪ್ರತಿನಿತ್ಯ ಇದೇ ಮಾರ್ಗದಲ್ಲಿ ಸುಮಾರು 45 ಬಸ್ಸುಗಳೂ ಸೇರಿದಂತೆ ಅಸಂಖ್ಯ ವಾಹನಗಳು ಸಂಚರಿ ಸುತ್ತಿದ್ದು, ಹದಗೆಟ್ಟ ರಸ್ತೆಯಿಂದ ಪ್ರಯಾಣಿಕರು ಪ್ರಯಾಣಿಸುವುದು ತುಂಬಾ ದುಸ್ತರವಾಗಿದೆ. ಒಂದೆಡೆ ಹದಗೆಟ್ಟ ರಸ್ತೆ ಹಾಗೂ ಕಾಡಾನೆಗಳ ಉಪಟಳ ದಿಂದ ಸ್ಥಳೀಯರು ನರಕ ಯಾತನೆ ಅನುಭವಿಸುತ್ತಿದ್ದು, ಸಿದ್ದಾಪುರ, ಹುಂಡಿ, ಚೆನ್ನಯ್ಯನ ಕೋಟೆಗೆ ತೆರಳಲು ಬಾಡಿಗೆ ವಾಹನ ಗಳು ಬರಲು ನಿರಾಕರಿಸುತ್ತಿವೆ. ಒಂದು ವೇಳೆ ಬಂದರೂ ದುಪ್ಪಟ್ಟು ಬಾಡಿಗೆ ನೀಡಬೇಕಾದ ದುಸ್ಥಿತಿ ಬಂದೊದಗಿದೆ ಎಂದು ತಮ್ಮ ಸಮಸ್ಯೆಯನ್ನು ತೋಡಿಕೊಂಡರು.

"

 ಇಲ್ಲಿನ ರಸ್ತೆ ಅಭಿವೃದ್ಧಿಗೆ ಅನೇಕ ಬಾರಿ ಗಡುವು ನೀಡಿದ್ದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಮಾರ್ಚ್ 25ರಂದು ಪಾಲಿಬೆಟ್ಟ ಹಾಗೂ ಗಟ್ಟದಹಳ್ಳದಲ್ಲಿ ಏಕಕಾಲಕ್ಕೆ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಗುವುದು. ಪ್ರತಿಭಟನೆಯಲ್ಲಿ ಎಲ್ಲಾ ಬಾಡಿಗೆ ವಾಹನ ಚಾಲಕರು, ತೋಟದ ಮಾಲೀಕರು, ಕಾರ್ಮಿಕ, ಮಹಿಳಾ ಸಂಘಟನೆ ಹಾಗೂ ಇತರೆ ಸಂಘ- ಸಂಸ್ಥೆ ಬೆಂಬಲ ಸೂಚಿಸಿವೆ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.