ರಸ್ತೆ ನಿಯಮ ಪಾಲಿಸಲು ಸಲಹೆ

7

ರಸ್ತೆ ನಿಯಮ ಪಾಲಿಸಲು ಸಲಹೆ

Published:
Updated:

ಚಿಕ್ಕಬಳ್ಳಾಪುರ: ರಸ್ತೆ ನಿಯಮವನ್ನು ಸೂಕ್ತ ರೀತಿಯಲ್ಲಿ ಪರಿಪಾಲನೆ ಮಾಡಿದಲ್ಲಿ, ಹೆಚ್ಚಿನ ಅಪಘಾತ ಮತ್ತು ಅನಾಹುತ ತಪ್ಪಿಸಬಹುದು. ರಸ್ತೆ ನಿಯಮ ಕುರಿತು ವಿದ್ಯಾರ್ಥಿಗಳೇ ಅಲ್ಲದೇ ಹಿರಿಯರು ಸಹ ಜಾಗೃತರಾಗಿರಬೇಕು ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಎಸ್.ಶಿವಕುಮಾರ್ ತಿಳಿಸಿದರು. ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಜೂನಿಯರ್ ಕಾಲೇಜಿನ ಆವರಣದಲ್ಲಿ ಶುಕ್ರವಾರ ವಿದ್ಯಾರ್ಥಿಗಳ ಜಾಗೃತಿ ಜಾಥಾಗೆ ಚಾಲನೆ ನೀಡುವ ಮುನ್ನ ಮಾತನಾಡಿದ ಅವರು, ‘ಪ್ರತಿಯೊಬ್ಬ ವ್ಯಕ್ತಿಯು ರಸ್ತೆಯಲ್ಲಿ ಸುರಕ್ಷಿತವಾಗಿ ನಡೆದಾಡಲು ಮತ್ತು ಸಂಚರಿಸಲು ನಿಯಮಗಳನ್ನು ಅರಿತುಕೊಂಡಿರಬೇಕು’ ಎಂದರು.ಜನದಟ್ಟಣೆ ಮತ್ತು ವಾಹನ ದಟ್ಟಣೆಯಿಂದ ಕೂಡಿರುವ ರಸ್ತೆಗಳಲ್ಲಿ ವಾಹನಗಳನ್ನು ವೇಗವಾಗಿ ಚಾಲನೆ ಮಾಡಬಾರದು. ಮನ ಬಂದ ಕಡೆ ವಾಹನಗಳನ್ನು ನಿಲುಗಡೆ ಮಾಡಿ ಸಾರ್ವಜನಿಕರಿಗೆ ತೊಂದರೆ ಮಾಡಬೇಕು. ರಸ್ತೆ ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.ರಸ್ತೆ ದಾಟುವಾಗ ಎರಡು ಬದಿಗಳಲ್ಲಿ ವಾಹನಗಳು ಬರುವಿಕೆಯನ್ನು ನೋಡಬೇಕು, ಸಿಗ್ನಲ್‌ಗಳಲ್ಲಿ ಕೆಂಪು ದೀಪ ತೋರಿದಲ್ಲಿ ವಾಹನಗಳನ್ನು ನಿಲ್ಲಿಸಬೇಕು. ಪಾದಚಾರಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ವಾಹನಗಳನ್ನು ಚಾಲನೆ ಮಾಡಬೇಕು ಎಂದು ಅವರು ವಿವರಿಸಿದರು.ವಾಹನ ಚಾಲನೆ ಮಾಡುವ ಪ್ರತಿಯೊಬ್ಬ ವ್ಯಕ್ತಿಯು ವಾಹನ ಚಾಲನಾ ಪರವಾನಗಿ ಮತ್ತು ವಾಹನಕ್ಕೆ ಸಂಬಂಧಿಸಿದ ಅಧಿಕೃತ ದಾಖಲೆಗಳನ್ನು ಹೊಂದಿರಬೇಕು. ಯಾವುದೇ ಕಾರಣಕ್ಕೂ ನಿಯಮಗಳನ್ನು ಉಲ್ಲಂಘಿ ಸದೇ ವಾಹನಗಳನ್ನು ಚಾಲನೆ ಮಾಡಬೇಕು ಎಂದು ಶಿವಕುಮಾರ್ ತಿಳಿಸಿದರು. ಉಪನ್ಯಾಸಕ ಸತೀಶ್, ಹನುಮಂತರಾವ್, ಸಬ್‌ಇನ್ಸ್‌ಪೆಕ್ಟರ್ ನಯಾಜ್ ಬೇಗ್, ವಸಂತ್, ಪೊಲೀಸ್ ಸಿಬ್ಬಂದಿಗಳಾದ ಶಿವಪ್ಪ ಬ್ಯಾಕೋಡ, ವೇಣು, ಬಾಬು, ಸಾದೀಕ್ ಸಾಬ್, ನರಸಿಂಹಮೂರ್ತಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry