ಭಾನುವಾರ, ಮೇ 16, 2021
28 °C

ರಾಗಗಳ ಸಂಸಾರ

ಶಿರೀಷ ಜೋಶಿ Updated:

ಅಕ್ಷರ ಗಾತ್ರ : | |

ರಾಗಗಳ ಸಂಸಾರ

ಹಿಂದೂಸ್ತಾನಿ ಸಂಗೀತದಲ್ಲಿ ರಾಗಗಳನ್ನು ವರ್ಗೀಕರಿಸುವ ಪದ್ಧತಿ ಒಂದು ಕಾಲಕ್ಕೆ ಬೇರೆಯದೇ ಆಗಿತ್ತು. ಮನುಷ್ಯನಂತೆ ರಾಗಗಳಿಗೂ ಒಂದು ಸಂಸಾರವಿದೆ ಎಂದು ಭಾವಿಸಿ ಅವುಗಳನ್ನು ವರ್ಗೀಕರಿಸಲಾಗುತ್ತಿತ್ತು. ಪ್ರತಿಯೊಂದು ರಾಗಕ್ಕೂ ಐದಾರು ಮಡದಿಯರು. ಇವರನ್ನು ರಾಗಿಣಿಯರು ಎಂದು ಕರೆಯಲಾಗುತ್ತಿತ್ತು.ಪ್ರತಿಯೊಂದು ರಾಗಕ್ಕೂ ಎಂಟು ಜನ ಪುತ್ರರು. ಉದಾಹರಣೆಗೆ- ಭರತ ಮತದ ಪ್ರಕಾರ ಮಾಲಕಂಸ ರಾಗಕ್ಕೆ ಗುಜರಿ, ವಿದ್ಯಾವತಿ, ತೋಡಿ, ಖಂಬಾವತಿ, ಕಕುಭ ಎಂಬ ಆರು ರಾಗಿಣಿಯರು! ಹನುಮ ಮತದ ಪ್ರಕಾರ ಇದೇ ಮಾಲಕಂಸ ರಾಗಕ್ಕೆ ತೋಡಿ, ಗುಣಕರಿ, ಗೌರಿ, ಖಂಬಾವತಿ, ಕಕುಭ ಎಂಬ ಐದು ರಾಗಿಣಿಯರು ಪತ್ನಿಯರಾಗಿದ್ದಾರೆ.ಇನ್ನೂ ಕೆಲವು ರಾಗಗಳಿಗೆ ಮಕ್ಕಳು, ಮೊಮ್ಮಕ್ಕಳು ಸೇರಿ ರಾಗಗಳ ಸಂಸಾರ ಬೆಳೆಯುತ್ತದೆ. ತಾನಸೇನ್ ರಚಿಸಿದ ರಾಗ `ತೋಡಿ~, ಇದು ರಾಗಿಣಿಯಾದ್ದರಿಂದ ಅದನ್ನು ಮಿಯಾಕಿ ತೋಡಿ ಎಂದು ಕರೆಯಲಾಯಿತು. (ರಾಗವಾಗಿದ್ದರೆ ಅದು ಮಿಯಾಕಾ ತೋಡಿ ಆಗುತ್ತಿತ್ತು)ರಾಗ-ರಾಗಿಣಿ ವರ್ಗೀಕರಣ ಮಾಡುವಾಗ ಅವುಗಳಿಗೆ ಮನುಷ್ಯನಂತೆಯೇ ಸಂಸಾರವನ್ನು ಕಲ್ಪಿಸಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರ ಬಲು ರೋಚಕವಾಗಿದೆ.ಪ್ರತಿಯೊಂದು ರಾಗಕ್ಕೂ ಅದರದೇ ಆದ ವ್ಯಕ್ತಿತ್ವವಿದೆ. ಅದರದೇ ಆದ ಜೀವಂತಿಕೆಯಿದೆ. ಹೀಗಾಗಿ ರಾಗಗಳನ್ನೂ ಮನುಷ್ಯ ರೂಪದಲ್ಲಿ ಕಾಣುವ ಪ್ರಯತ್ನವನ್ನು ನಮ್ಮ ಪ್ರಾಚೀನ ಸಂಗೀತಶಾಸ್ತ್ರಜ್ಞರು ಮಾಡಿದ್ದರು. ಹೀಗಾಗಿ ಸಂಗೀತಕ್ಷೇತ್ರದಲ್ಲಿ ತಮ್ಮ ಮತಗಳನ್ನು ಸ್ಥಾಪಿಸಿದ ಭರತ, ಶಿವ ಅಥವಾ ಸೋಮೇಶ್ವರ, ಕೃಷ್ಣ ಅಥವಾ ಕಲ್ಲಿನಾಥ, ಹನುಮರು ರಾಗಗಳಿಗೆ ಸಂಸಾರವನ್ನು ಆರೋಪಿಸಿದ್ದರು.1803ರಲ್ಲಿ ಪಾಟ್ನಾದ ದೊರೆ ಮೊಹಮ್ಮದ್ ರಜಾ ತನ್ನ `ನಗಮಾ-ತೆ-ಆಸಿಫಿ~ ಎಂಬ ಗ್ರಂಥದಲ್ಲಿ ಈ ಪದ್ಧತಿಯನ್ನು ಮೊಟ್ಟಮೊದಲ ಬಾರಿಗೆ ಖಂಡಿಸಿದ. ನಂತರ ರಾಗ-ರಾಗಿಣಿಗಳ ವರ್ಗೀಕರಣ ಬೇರೆಯ ದಾರಿಯನ್ನು ಹಿಡಿಯಿತು. ನಂತರ ಬಂದ ವಿಷ್ಣು ನಾರಾಯಣ ಭಾತಖಾಂಡೆಯವರು ಕರ್ನಾಟಕಿ ಸಂಗೀತದ ಮೇಳಗಳನ್ನು ಮಾದರಿಯನ್ನಾಗಿಟ್ಟುಕೊಂಡು ಹಿಂದೂಸ್ತಾನಿ ರಾಗಗಳನ್ನು ಹತ್ತು ಥಾಟಗಳಲ್ಲಿ ವರ್ಗೀಕರಿಸಿದರು.ರಾಗಗಳಿಗೆ ವ್ಯಕ್ತಿತ್ವವನ್ನು ಕಲ್ಪಿಸುವ ನಿಟ್ಟಿನಲ್ಲಿ ರೂಪಿಸಲಾಗಿದ್ದ ರಾಗ-ರಾಗಿಣಿ ಪದ್ಧತಿ ಇಂದು ನಿಂತು ಹೋಗಿದೆ ನಿಜ. ಆದರೆ, ರಾಗಗಳಿಗೆ ಇರುವ ವ್ಯಕ್ತಿತ್ವವನ್ನು ಇಂದಿಗೂ ಅನೇಕ ಸಂಗೀತಗಾರರು ಒಪ್ಪುತ್ತಾರೆ.ಕುಮಾರಗಂಧರ್ವರು ರಾಗಗಳಿಗೆ ತನ್ನದೇ ಆದ ವ್ಯಕ್ತಿತ್ವವಿದೆ ಎಂದು ಭಾವಿಸಿ, ರಾಗಗಳನ್ನು ಉಲ್ಲೇಖಿಸುವಾಗ `ಅವನು~ ಅಥವಾ `ಅವಳು~ ಎಂಬ ಪದಪ್ರಯೋಗ ಮಾಡುತ್ತಿದ್ದರು. ಕೆಲವರು ರಾಗಗಳನ್ನು ದೇವ-ದೇವತೆಗಳೆಂದೂ ನಂಬಿದ್ದಾರೆ. ಇನ್ನು ಕೆಲವರು ರಾಗಗಳೊಂದಿಗೆ ಗೆಳೆತನದ ನಂಟು ಬೆಳೆಸಿಕೊಳ್ಳಲು ಶ್ರಮಿಸುತ್ತಿದ್ದಾರೆ. ನಮ್ಮ ಸಂಗೀತಗಾರರಲ್ಲಿ ಇರುವ ಈ ನಂಬುಗೆಯೇ ಅನೇಕ ರಸನಿಮಿಷಗಳಿಗೂ ಕಾರಣವಾಗಿದೆ.ಒಮ್ಮೆ ಪಂ.ರವಿಶಂಕರ್ ತಮ್ಮ ಶಿಷ್ಯರಿಗೆ `ತಿಲಕ್ ಕಾಮೋದ~ ರಾಗವನ್ನು ಕಲಿಸುತ್ತಿದ್ದರು. ಆಗ ಒಬ್ಬ ಶಿಷ್ಯ ಅವರನ್ನು ಪ್ರಶ್ನಿಸಿದ-

`ಗುರುಗಳೇ, ಈ ರಾಗದ ವಾದಿ ಸಂವಾದಿಗಳು ಯಾವುವು?~

ರವಿಶಂಕರರು ತಮ್ಮ ಕೈಯಲ್ಲಿರುವ ಸಿತಾರವನ್ನು ಕೆಳಗಿಳಿಸಿ ಹೇಳಿದರು-

`ರಾಗಗಳೆಂದರೆ ಮನುಷ್ಯರಂತೆಯೇ.ನಿಮ್ಮ ಗೆಳೆಯ ಹೇಗೆ ಬಂದರೂ ಅವನ ಗುರುತು ಹಿಡಿಯುತ್ತೀರಿ ತಾನೆ? ಹಾಗೆಯೇ ರಾಗಗಳೂ ಕೆಲವು ಸಲ ವೇಷ ಬದಲಿಸಿ ಬರುತ್ತವೆ. ಆಗಲೂ ಅವುಗಳನ್ನು ವೇಷ ಬದಲಿಸಿ ಬಂದ ಗೆಳೆಯನನ್ನು ಗುರುತಿಸುವ ಹಾಗೆ ಗುರುತಿಸಬೇಕು.ಒಂದು ರಾಗವನ್ನು ಒಳಹೊಕ್ಕು, ಅದರ ಎಲ್ಲ ಪಾರ್ಶ್ವಗಳನ್ನು ಗುರುತಿಸುವಷ್ಟರ ಮಟ್ಟಿಗೆ ಅವು ನಮಗೆ ಪರಿಚಿತವಾಗಬೇಕು. ರಾಗದ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳಿ. ಅದು ನಿಮ್ಮಡನೆ ಮಾತನಾಡುತ್ತದೆ. ಆಗ ನೀವದನ್ನು ಹೆಚ್ಚು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ರಾಗವನ್ನು ಒಂದು ವ್ಯಕ್ತಿತ್ವ ಎಂದು ತಿಳಿಯುವುದು ಅದನ್ನು ಅರ್ಥ ಮಾಡಿಕೊಳ್ಳಲು ಇರುವ ಅದ್ಭುತ ಮಾರ್ಗ~.ಆ ಶಿಷ್ಯ ಮುಂದೇನೂ ಕೇಳಲಿಲ್ಲ. ಶುಷ್ಕ ಶಾಸ್ತ್ರಗಳಿಗಿಂತಲೂ ಮಿಗಿಲಾಗಿ ಸಂಗೀತದಲ್ಲಿ ಕಲಿಯುವುದು ಮತ್ತೇನೋ ಇದೆ ಎಂದವರು ಸೂಕ್ಷ್ಮವಾಗಿ ತಿಳಿಯಪಡಿಸಿದ್ದರು. ರಾಗವನ್ನು ಅರಿತುಕೊಳ್ಳುವ ಗುಟ್ಟನ್ನೇ ತಮ್ಮ ಶಿಷ್ಯನೆದುರು ತೆರೆದಿಟ್ಟಿದ್ದರು ಪಂ.ರವಿಶಂಕರಜಿ! ಗುರುಗಳು ನೀಡುವ ಇಂಥ ಸೂಕ್ಷ್ಮ ಸುಳಿವುಗಳನ್ನು ಅರ್ಥೈಸಿಕೊಳ್ಳುವ ಜಾಣ್ಮೆ ಮಾತ್ರ ಎಲ್ಲ ಶಿಷ್ಯರಿಗೂ ಇರುವುದಿಲ್ಲ! 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.