ಬುಧವಾರ, ಮಾರ್ಚ್ 3, 2021
30 °C

ರಾಜಕಾಲುವೆಗಳ ನಿರ್ವಹಣೆಗೆ ಆದ್ಯತೆಯೇ ಇಲ್ಲ

ಎನ್‌. ನವೀನ್‌ ಕುಮಾರ್‌ Updated:

ಅಕ್ಷರ ಗಾತ್ರ : | |

ರಾಜಕಾಲುವೆಗಳ ನಿರ್ವಹಣೆಗೆ ಆದ್ಯತೆಯೇ ಇಲ್ಲ

ಬೆಂಗಳೂರು: ಕೆರೆ, ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆ ಕೈಗೊಂಡಿರುವ ಬಿಬಿಎಂಪಿ, ಸದ್ಯ ಒತ್ತುವರಿಯಿಂದ ಮುಕ್ತವಾದ ರಾಜಕಾಲುವೆಗಳ ನಿರ್ವಹಣೆಯನ್ನು ಸಮರ್ಪಕ ರೀತಿಯಲ್ಲಿ ಮಾಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.ನಗರದಲ್ಲಿ ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಮಡಿವಾಳ ಕೆರೆ, ಕೋಡಿಚಿಕ್ಕನಹಳ್ಳಿ ಕೆರೆ ನೀರು ಕೋಡಿ ಹೋಗಿ ಬಿಟಿಎಂ ಬಡಾವಣೆ, ಕೋಡಿಚಿಕ್ಕನಹಳ್ಳಿ ಬಡಾವಣೆ, ಅನುಗ್ರಹ ಬಡಾವಣೆ ಜಲಾವೃತಗೊಂಡಿತ್ತು. ಸಾರಕ್ಕಿ ಕೆರೆ ಉಕ್ಕಿ ಹರಿದು ಅಶ್ವತ್ಥನಾರಾಯಣ ಬಡಾವಣೆ, ಜರಗನಹಳ್ಳಿ ಸೇರಿದಂತೆ ಹಲವು ಬಡಾವಣೆಗಳು ಜಲಾವೃತಗೊಂಡಿದ್ದವು. ಇದರಿಂದ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು, ಕೆರೆ ನೀರು ಬಾಧಿತ ಪ್ರದೇಶಗಳಲ್ಲಿ ರಾಜಕಾಲುವೆ, ಉಪ ಕಾಲುವೆಗಳಲ್ಲಿ ತುಂಬಿದ್ದ ಹೂಳನ್ನು ತೆರವುಗೊಳಿಸಿದ್ದರು.ಆದರೆ, ಬೇಗೂರು, ಚಿಕ್ಕಬೇಗೂರು, ಸಿಂಗಸಂದ್ರ, ಸಾರಕ್ಕಿ, ಅಗರ, ಕೈಕೊಂಡ್ರಹಳ್ಳಿ, ಕಸವನಹಳ್ಳಿ, ಬೆಳ್ಳಂದೂರು, ವರ್ತೂರು, ಕೆ.ಆರ್‌.ಪುರ, ಕಲ್ಕೆರೆ, ಹೊಸಕೆರೆಹಳ್ಳಿ ಕೆರೆ, ಜನಾರ್ದನ ಕೆರೆಗಳಿಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆ, ಉಪ ಕಾಲುವೆಗಳಲ್ಲಿ ಹೂಳು, ಕಸ ತುಂಬಿಕೊಂಡಿದೆ. ಪ್ಲಾಸ್ಟಿಕ್‌ ತ್ಯಾಜ್ಯವಂತೂ ಎಲ್ಲ ರಾಜಕಾಲುವೆಗಳಲ್ಲೂ ಕಾಣಸಿಗುತ್ತದೆ. ಕೆಲವೆಡೆ ಕಟ್ಟಡದ ಅವಶೇಷಗಳು, ಕೋಳಿ ತ್ಯಾಜ್ಯಗಳನ್ನು ಸುರಿಯಲಾಗಿದೆ. ಇದರಿಂದ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ.ಪ್ಲಾಸ್ಟಿಕ್‌ ಆಗರ– ಅಗರ ಕೆರೆ: ಅಗರ ಕೆರೆಗೆ ಮಡಿವಾಳ ಕೆರೆಯ ನೀರು ಬಂದು ಸೇರುತ್ತದೆ. ಈ ನೀರು ರಾಜಕಾಲುವೆ ಮೂಲಕ ಬೆಳ್ಳಂದೂರು ಕೆರೆಗೆ ಹರಿದು ಹೋಗುತ್ತದೆ. ಆದರೆ, ಸರ್ಜಾಪುರ ರಸ್ತೆಯ ಜಕ್ಕಸಂದ್ರದ ಬಳಿ ರಾಜಕಾಲುವೆಯಲ್ಲಿ ಹೂಳು ತುಂಬಿಕೊಂಡಿದೆ. ಜತೆಗೆ ಪ್ಲಾಸ್ಟಿಕ್‌ ಕವರ್‌ಗಳು ನೀರಿನ ಹರಿವಿಗೆ ಅಡ್ಡಿಯಾಗಿವೆ.‘ಕೊಳಚೆ ನೀರು ಅಗರ ಕೆರೆಯ ಒಡಲು ಸೇರುತ್ತಿದೆ. ಇದೇ ನೀರು ರಾಜಕಾಲುವೆ ಮೂಲಕ ಹರಿದು ಹೋಗುತ್ತಿದೆ. ನೀರು ದುರ್ವಾಸನೆ ಬೀರುತ್ತಿರುವುದರಿಂದ ಈ ಭಾಗದಲ್ಲಿ ವಾಸ ಮಾಡುವುದು ಕಷ್ಟವಾಗಿದೆ. ಕೊಳಚೆ ನೀರನ್ನು ಶುದ್ಧೀಕರಿಸಿ ಕೆರೆಗೆ ಬಿಡಬೇಕು’ ಎಂದು ಜಕ್ಕಸಂದ್ರದ ನಿವಾಸಿ ಎಸ್‌.ಸೌಮ್ಯಾ ಅವರು ಒತ್ತಾಯಿಸಿದರು.ಹೊಸಕೆರೆಹಳ್ಳಿ ಕೆರೆ ತೂಬು ಬಂದ್‌: ಹೊಸಕೆರೆಹಳ್ಳಿ ಕೆರೆಗೆ ಎರಡು ತೂಬುಗಳಿದ್ದು, ಸದ್ಯ ಒಂದರಲ್ಲಿ ಮಾತ್ರ ನೀರು ಕೋಡಿ ಹೋಗುತ್ತದೆ.  ಈ ಕೆರೆಗೆ ಹೊಂದಿಕೊಂಡಂತೆ ನೈಸ್‌ ರಸ್ತೆ ಹಾಗೂ ಕೆರೆಕೋಡಿ ಮುಖ್ಯರಸ್ತೆಗಳು ಹಾದು ಹೋಗಿವೆ. ಈ ರಸ್ತೆಗಳು ಸಂದಿಸುವ ಜಾಗದಲ್ಲಿ ಕೆರೆಯ ತೂಬನ್ನು ಮುಚ್ಚಲಾಗಿದೆ. ಈ ಭಾಗದಿಂದ ನೀರು ಹರಿದು ಹೋಗಲು ರಾಜಕಾಲುವೆಯನ್ನು ನಿರ್ಮಿಸಲಾಗಿದೆ. ಆದರೆ, ಈ ಕಾಲುವೆ ಕೆರೆಕೋಡಿ ಮುಖ್ಯರಸ್ತೆವರೆಗೆ ಮಾತ್ರ ಇದೆ. ಅಲ್ಲಿಂದ ಕೆರೆಗೆ ಸಂಪರ್ಕ ಕಡಿತಗೊಂಡಿದೆ. ಇದರಿಂದ ರಾಜಕಾಲುವೆಯಲ್ಲಿ ನೀರು ಹರಿಯದೆ ಹುಲ್ಲು ಬೆಳೆದು ನಿಂತಿದೆ. ಜತೆಗೆ ಕಸ–ಕಡ್ಡಿಗಳನ್ನು ಹಾಕಲಾಗಿದೆ.‘ನಾವು 20 ವರ್ಷಗಳಿಂದ ಇಲ್ಲಿ ವಾಸ ಮಾಡುತ್ತಿದ್ದೇವೆ. ಆಗೆಲ್ಲ ಕೆರೆಯ ಪಾತ್ರದಲ್ಲಿ ವ್ಯವಸಾಯ ಮಾಡುತ್ತಿದ್ದ ರೈತರು, ನೀರನ್ನು ತೂಬಿನ ಮೂಲಕ ತೋಟಗಳಿಗೆ ಬಿಟ್ಟುಕೊಳ್ಳುತ್ತಿದ್ದರು. ರಾಜಕಾಲುವೆಯೂ ದೊಡ್ಡ ಗಾತ್ರದಲ್ಲಿತ್ತು. ನೈಸ್‌ ರಸ್ತೆ ಬಂದ ಮೇಲೆ ರಾಜಕಾಲುವೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳತೊಡಗಿತು’ ಎಂದು ಪುಷ್ಪಗಿರಿ ನಗರದ ನಿವಾಸಿ ಪದ್ಮಾವತಿ ‘ಪ್ರಜಾವಾಣಿ’ಗೆ ತಿಳಿಸಿದರು.‘ಸುಮಾರು ಎಂಟು ವರ್ಷಗಳ ಹಿಂದೆ ರಾಜಕಾಲುವೆಯ ಎರಡೂ ಕಡೆಗಳಲ್ಲಿ ಸಿಮೆಂಟ್‌ ಗೋಡೆಗಳನ್ನು ನಿರ್ಮಿಸಲಾಗಿದೆ. ಆದರೆ, ಇದಕ್ಕೂ ಪ್ರಭಾವಿಗಳು ಅಡ್ಡಗಾಲು ಹಾಕಿದ್ದರಿಂದ ಕಾಲುವೆ ಕಾಮಗಾರಿ ಅರ್ಧಕ್ಕೆ ನಿಂತಿದೆ’ ಎಂದರು.ಆಳೆತ್ತರ ನೀರು: ‘ಮಳೆ ಬಂದರೆ ನೈಸ್‌ ರಸ್ತೆಯ ಸೇತುವೆ ಕೆಳಗೆ ಆಳೆತ್ತರಕ್ಕೆ ನೀರು ನಿಂತುಕೊಳ್ಳುತ್ತದೆ. ಆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲ. ಕೆರೆಯ ಕಟ್ಟೆಯ ಮೇಲೆ ಹುಲ್ಲು ಬೆಳೆದಿದ್ದು, ಹಾವುಗಳ ಆವಾಸ ಸ್ಥಾನವಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.ಹೊಸಕೆರೆಹಳ್ಳಿ ಕೆರೆಯ ಮತ್ತೊಂದು ಕಡೆಯಿಂದ ನೀರು ಹರಿದು ವೃಷಭಾವತಿ ಜಲಾಶಯಕ್ಕೆ ಸೇರುತ್ತದೆ. ಇಲ್ಲಿ ಬೃಹತ್‌ ರಾಜಕಾಲುವೆ ನಿರ್ಮಾಣಗೊಂಡಿದೆ. ಆದರೆ, ಕಾಲುವೆಯಲ್ಲಿ ದೊಡ್ಡ ಗಾತ್ರದ ಸಿಮೆಂಟ್‌ ಗೋಡೆಗಳು ಬಿದ್ದಿವೆ. ಜತೆಗೆ ಕಾಲುವೆಯ ಇಕ್ಕೆಲಗಳಲ್ಲಿ ಮರಗಳು ಬೆಳೆದು ನಿಂತಿವೆ. ಅಲ್ಲಲ್ಲಿ ಹೂಳು ತುಂಬಿದೆ.‘ರಾಜಕಾಲುವೆ ತುಂಬಾ ಆಳವಿದೆ. ಇದರಿಂದ ಎಷ್ಟೇ ನೀರು ಬಂದರೂ ಹರಿದು ಹೋಗುತ್ತಿದೆ. ಆದರೆ, ಕಸ, ಹೂಳು ತುಂಬಿಕೊಂಡರೆ ನೀರು ಉಕ್ಕಿ ಪಕ್ಕದ ಬಡಾವಣೆಗಳಿಗೆ ಹರಿಯುವ ಸಾಧ್ಯತೆ ಇದೆ. ಮೂರು ವರ್ಷಗಳ ಹಿಂದೆ ಸುತ್ತಮುತ್ತಲಿನ ಬಡಾವಣೆಗಳಿಗೆ ನೀರು ನುಗ್ಗಿತ್ತು’ ಎಂದು ಸ್ಥಳೀಯ ನಿವಾಸಿ ಶಿವಪ್ಪ ಅವರು ನೆನಪು ಮಾಡಿಕೊಂಡರು.ಹೂಳೆತ್ತಿ ರಸ್ತೆ ಬದಿಯಲ್ಲೇ ಬಿಟ್ಟರು: ಇತ್ತೀಚೆಗೆ ಮಡಿವಾಳ ಕೆರೆಯ ನೀರು ಹೊರ ವರ್ತುಲ ರಸ್ತೆಯಲ್ಲಿ ಹರಿದು ಅವಾಂತರ ಸೃಷ್ಟಿಸಿತ್ತು. ಕೆರೆಯ ಕಾಲುವೆಯಲ್ಲಿ ಹೂಳು, ಕಸ–ಕಡ್ಡಿ ತುಂಬಿದ್ದೇ ಇದಕ್ಕೆ ಕಾರಣವಾಗಿತ್ತು. ಹೀಗಾಗಿ ಬಿಬಿಎಂಪಿ ಸಿಬ್ಬಂದಿ ಕಾಲುವೆಯಲ್ಲಿ ತುಂಬಿಕೊಂಡಿದ್ದ ಕಲ್ಲು, ಮಣ್ಣು, ಕಸವನ್ನು ತೆಗೆದು ರಸ್ತೆ ಬದಿಯಲ್ಲಿ ಹಾಕಿದ್ದರು. ಆದರೆ, ಅದನ್ನು ಇನ್ನೂ ತೆರವುಗೊಳಿಸಿಲ್ಲ.‘ರಸ್ತೆ ಬದಿಯಲ್ಲಿ ಹಾಕಿದ್ದ ಕಾಲುವೆಯ ಹೂಳನ್ನು ತೆರವುಗೊಳಿಸಿಲ್ಲ. ಮಳೆ ಬಂದರೆ ಈ ಹೂಳು ಮತ್ತೆ ಕಾಲುವೆಗೆ ಸೇರುತ್ತದೆ. ಮಾರಮ್ಮ ದೇವಾಲಯದ ಕಾಲುವೆಯನ್ನು ದುರಸ್ತಿ ಮಾಡಿಲ್ಲ’ ಎಂದು ಸ್ಥಳೀಯ ನಿವಾಸಿ ತ್ಯಾಗರಾಜ್‌ ದೂರಿದರು.ಕಾನೂನು ಹೋರಾಟಕ್ಕೆ ನೆರವು

ಒತ್ತುವರಿ ತೆರವಿನಿಂದ ಮನೆ ಕಳೆದುಕೊಂಡ ಜನರು ನಡೆಸುವ ಕಾನೂನು ಹೋರಾಟಕ್ಕೆ ಆರ್ಥಿಕ ನೆರವು ನೀಡಲು ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್ ಮುಂದೆ ಬಂದಿದ್ದಾರೆ.

‘ಕೆರೆಯ ಅಂಗಳದಲ್ಲಿ ಮತ್ತು ರಾಜಕಾಲುವೆಗಳ ಮೇಲೆ ಕಟ್ಟಡ ನಿರ್ಮಿಸಲು ಅನುಮೋದನೆ ನೀಡಿದ ಅಧಿಕಾರಿಗಳು ಮತ್ತು ಬಿಲ್ಡರ್‌ಗಳಿಗೆ ಶಿಕ್ಷೆ ಆಗಬೇಕು. ಮನೆ ಕಳೆದು ಕೊಂಡವರು ಪರಿಹಾರಕ್ಕಾಗಿ ಕಾನೂನು ಹೋರಾಟ ನಡೆಸಬೇಕು. ಇದಕ್ಕಾಗಿ ನ್ಯಾಯವಾದಿಗಳಿಗೆ ನೀಡಬೇಕಾದ ಶುಲ್ಕವನ್ನು ನಾನು ಭರಿಸುತ್ತೇನೆ’ ಎಂದು ರಾಜೀವ್‌ ಚಂದ್ರಶೇಖರ್‌ ತಿಳಿಸಿದ್ದಾರೆ.‘ಬೆಂಗಳೂರಿನ ನಾಗರಿಕರು ಪ್ರಾರ್ಥಿಸುತ್ತಾ ಕೂರುವುದರಿಂದ ಯಾವುದೇ ಪ್ರಯೋಜನವಿಲ್ಲ. ಮನೆಗಳನ್ನು ಕಳೆದುಕೊಂಡವರು ಕಾನೂನು ಮೊರೆ ಹೋಗಬೇಕು ಮತ್ತು ಸರ್ಕಾರವೂ ತನ್ನ ನಾಗರಿಕರ ಬಗ್ಗೆ ಹೊಣೆಗಾರಿಕೆಯನ್ನು ಪ್ರದರ್ಶಿಸಬೇಕು.  ನಾಗರಿಕರು ನನ್ನ ಜತೆ ಸಂಪರ್ಕದಲ್ಲಿರಲು ಮನವಿ ಮಾಡುತ್ತೇನೆ. ಅವರ ಹಕ್ಕುಗಳಿಗಾಗಿ ನಾನು ಹೋರಾಟ ನಡೆಸುತ್ತೇನೆ’ ಎಂದರು.‘ಡೆಮಾಲಿಷನ್ ಬೈ ಕರಪ್ಷನ್‌’ (ಭ್ರಷ್ಟ ವ್ಯವಸ್ಥೆಯಿಂದಾಗಿ ಕಟ್ಟಡ ನೆಲಸಮ ಕಾರ್ಯಾಚರಣೆ) ನಿಂದ ಬಾಧಿತರಾದ ಬೆಂಗಳೂರಿನ ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಲು ನಾನು ಒತ್ತಾಯಿಸುತ್ತೇನೆ. ನಾನು ಸರ್ಕಾರಕ್ಕೆ ಒತ್ತಡ ಹೇರಲು ನೆರವಾಗುತ್ತೇನೆ. ಪ್ರತಿ ನಾಗರಿಕರಿಗೂ ಹಕ್ಕುಗಳಿವೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.