ಗುರುವಾರ , ಜೂನ್ 17, 2021
27 °C

ರಾಜಕೀಯದಲ್ಲಿ ಮಹಿಳೆಯರು

ಅಮಿತ್ ಎಂ.ಎಸ್. Updated:

ಅಕ್ಷರ ಗಾತ್ರ : | |

ಪ್ರಿಯಾಂಕಾ ಗಾಂಧಿ

`ರಾಜಕೀಯ ಜನರಿಗೆ ಸಹಾಯ ಮಾಡಲು ಇರುವ ಗಟ್ಟಿಯಾದ ವೇದಿಕೆಯಲ್ಲ. ನಾನು ಅದರಿಂದ ಹೊರಗಿದ್ದೇ ಅವರಿಗಾಗಿ ಕೆಲಸ ಮಾಡಬಲ್ಲೆ~ ಎಂದು ಹೇಳುವ ಪ್ರಿಯಾಂಕಾ ಸಕ್ರಿಯ ರಾಜಕಾರಣಕ್ಕೆ ಇಳಿದಿಲ್ಲ. ಮೂವರು ಪ್ರಧಾನಿಗಳನ್ನು ನೀಡಿದ ಕುಟುಂಬದಲ್ಲಿ ಜನಿಸಿದ ಪ್ರಿಯಾಂಕಾಗೆ ರಾಜಕಾರಣ ರಕ್ತಗತವಾಗಿ ಬಂದದ್ದು. ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರದಂತಹ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರೂ ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ದೂರವೇ ಉಳಿದಿದ್ದಾರೆ. ಹೋದೆಲ್ಲೆಡೆ ಅಪಾರ ಸಂಖ್ಯೆಯಲ್ಲಿ ಜನರನ್ನು ಸೇರಿಸುವ ಶಕ್ತಿ ಹೊಂದಿರುವ ಪ್ರಿಯಾಂಕಾ ಉತ್ತಮ ಸಂಘಟಕಿ ಎಂಬುದು ರಾಜಕೀಯ ವಿಶ್ಲೇಷಕರ ಅಭಿಮತ. ತಾಯಿ ಸೋನಿಯಾ ಗಾಂಧಿ ಮತ್ತು ಸಹೋದರ ರಾಹುಲ್ ಗಾಂಧಿ ಅವರ ಕ್ಷೇತ್ರಗಳಾದ ರಾಯ್‌ಬರೇಲಿ ಮತ್ತು ಅಮೇಥಿಗಳಿಗೆ ಪದೇ ಪದೇ ಭೇಟಿ ನೀಡಿ ಜನರೊಂದಿಗೆ ಬೆರೆಯುವ ಪ್ರಿಯಾಂಕಾ ಸ್ಪರ್ಧೆಗಿಳಿಯುವ ದಿನ ದೂರವಿಲ್ಲ ಎನ್ನಲಾಗುತ್ತಿದೆ. ಚುನಾವಣಾ ಅಖಾಡಕ್ಕೆ ಇಳಿಯದಿದ್ದರೂ ಪ್ರಿಯಾಂಕಾ ರಾಜಕೀಯ ನಡೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆಯುತ್ತಿರುವುದಂತೂ ನಿಜ.

ಹೀನಾ ರಬ್ಬಾನಿ

ಪಾಕಿಸ್ತಾನದ ಮೊದಲ ಮಹಿಳಾ ವಿದೇಶಾಂಗ ಸಚಿವೆಯಾಗಿ ಕಳೆದ ವರ್ಷವಷ್ಟೆ ಅಧಿಕಾರ ಸ್ವೀಕರಿಸಿದ ಹೀನಾ ರಬ್ಬಾನಿ ಖರ್ ಪಾಕಿಸ್ತಾನದ ಅತ್ಯಂತ ಕಿರಿಯ ಸಚಿವೆ ಕೂಡ. ಕುಟುಂಬದಲ್ಲಿ ಅನೇಕರು ರಾಜಕಾರಣದಲ್ಲಿದ್ದರಿಂದ ಹೀರಾ ರಾಜಕೀಯದ ಒಲವು ಸಹಜವಾಗಿ ಬಂದದ್ದು. 2002ರಲ್ಲಿ ನಡೆದ ರಾಷ್ಟ್ರೀಯ ಚುನಾವಣೆಯಲ್ಲಿ ಆಗಿನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್‌ನಿಂದ (ಪಿಎಂಎಲ್) ಪಂಜಾಬ್ ಪ್ರಾಂತ್ಯದ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಹೀನಾ ಮನೆಯಲ್ಲಿಯೇ ಕುಳಿತಿದ್ದರೆ ಆಕೆಯ ಪರವಾಗಿ ಮತಯಾಚನೆ ಮಾಡಿದ್ದು ಆಕೆಯ ತಂದೆ ಗುಲಾಮ್ ನೂರ್ ರಬ್ಬಾನಿ. ಹೀನಾರ ಒಂದು ಚಿತ್ರವನ್ನೂ ಸಹ ಪ್ರಚಾರದ ವೇಳೆ ಬಳಸಿರಲಿಲ್ಲ. ಆದರೂ ಹೀನಾ ಗೆಲುವಿನ ಸವಿ ಸವಿದರು. 2008ರಲ್ಲಿ ಮರುಚುನಾವಣೆ ನಡೆದಾಗ ಪಿಎಂಎಲ್ ಆಕೆಗೆ ಟಿಕೆಟ್ ನೀಡಲು ನಿರಾಕರಿಸಿತು. ಬಳಿಕ ಹೀನಾ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯಿಂದ ಕಣಕ್ಕಿಳಿದು ಜಯಭೇರಿ ಬಾರಿಸಿದರು. ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವೆಯಾಗಿ ಸೇವೆ ಸಲ್ಲಿಸುತ್ತಿದ್ದಾಗ ಷಾ ಮಹಮೂದ್ ಖುರೇಷಿ ರಾಜೀನಾಮೆ ಬಳಿಕ ವಿದೇಶಾಂಗ ಮಂತ್ರಿಯಾಗುವ ಅವಕಾಶವೂ ಒದಗಿಬಂತು. ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಬಜೆಟ್ ಮಂಡಿಸಿದ ಮೊದಲ ಮಹಿಳೆ ಎಂಬ ಕೀರ್ತಿಯೂ 34ರ ಹರೆಯದ ಹೀನಾಗೆ ಸಲ್ಲುತ್ತದೆ.

ರೂಬಿ ದಲ್ಲಾ

ಕೆನಡಾದ ಹೌಸ್ ಆಫ್ ಕಾಮನ್ಸ್ ಸದಸ್ಯತ್ವ ಪಡೆದ ಮೊದಲ ಸಿಖ್ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾದವರು 36ರ ರೂಬಿ ದಲ್ಲಾ. ಪಂಜಾಬ್ ಮೂಲದವರಾದ ರೂಬಿ 10ನೇ ವಯಸ್ಸಿನಲ್ಲಿಯೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಮಾಡಿದಾಕೆ. 1984ರಲ್ಲಿ ನಡೆದ ಸ್ವರ್ಣಮಂದಿರ ಘಟನೆಯ ಬಳಿಕ ರೂಬಿ ಆಗಿನ  ಪ್ರಧಾನಿ ಇಂದಿರಾಗಾಂಧಿಯವರಿಗೆ ಇನ್ನು ಮುಂದೆ ಹಿಂಸಾಚಾರಕ್ಕೆ ಅವಕಾಶ ಕೊಡದಂತೆ ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಬೇಕೆಂದು ಕೋರಿ ಪತ್ರಬರೆದಿದ್ದಳು. ಅದಕ್ಕೆ ಇಂದಿರಾಗಾಂಧಿ ಬಹಿರಂಗವಾಗಿಯೇ ಉತ್ತರಿಸಿದ್ದರು. ವೈದ್ಯ ವೃತ್ತಿಗಿಳಿದ ಕೆಲವೇ ವರ್ಷದಲ್ಲಿ ವಿನ್ನಿಪೆಗ್ ಲಿಬರಲ್ ಪಕ್ಷ ಸೇರಿಕೊಂಡ ರೂಬಿಯನ್ನು 2004ರ ಚುನಾವಣಾ ಅಭ್ಯರ್ಥಿಯಾಗಿ ಪಕ್ಷ ಘೋಷಿಸಿತು. ಇದು ಪಕ್ಷದೊಳಗೆ ತೀವ್ರ ವಿವಾದ ಸೃಷ್ಟಿಸಿತು. ಅತಿ ಕಡಿಮೆ ಅಂತರದಲ್ಲಿ ಗೆಲುವಿನ ನಗೆ ಬೀರಿದ ರೂಬಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡಿದರು. 2005ರಲ್ಲಿ ಮರುಚುನಾವಣೆ ನಡೆದು ರೂಬಿ ಜಯಗಳಿಸಿದರೂ ಪಕ್ಷ ಅಧಿಕಾರಕ್ಕೆ ಬರುವಲ್ಲಿ ವಿಫಲವಾಯಿತು. 2006-11ರವರೆಗೆ ಸಂಸದೆಯಾಗಿ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಸರ್ಕಾರದ ತಪ್ಪುಗಳ ವಿರುದ್ಧ ನಿರಂತರ ವಾಗ್ದಾಳಿಗಳನ್ನು ನಡೆಸಿದರು. ವಿವಾದ ಮತ್ತು ಹಗರಣಗಳೂ ಆಕೆ ಸುತ್ತ ಸುತ್ತಿಕೊಂಡವು. 2011ರ ಚುನಾವಣೆಯಲ್ಲಿ ಸೋಲನ್ನನುಭವಿಸಿದ ರೂಬಿ ಸದ್ಯ ಲಿಬರಲ್ ಪಕ್ಷದ ಸಾಮಾನ್ಯ ಕಾರ್ಯಕರ್ತೆ.

ಮಾರಾ ಕಾರ್ಫಾಗ್ನಾ

ರೂಪದರ್ಶಿಯಾಗಿ ಹೆಸರು ಮಾಡಿದ ಕಾರ್ಫಾಗ್ನಾ ಹಲವು ಟೀವಿ ಶೋಗಳಲ್ಲಿಯೂ ಕಾಣಿಸಿಕೊಂಡಾಕೆ. ಇಟಲಿಯ ಸಾಲೆರ‌್ನೊದಲ್ಲಿ ಜನಿಸಿದ ಈಕೆ ಓದಿದ್ದು ಕಾನೂನು ಪದವಿ. 2004ರಲ್ಲಿ ರಾಜಕೀಯಕ್ಕೆ ಕಾಲಿಟ್ಟ ಬಳಿಕ ಇಟಾಲಿಯಾ ಫೊರ್ಜಾ ಪಕ್ಷದ ಚೇಂಬರ್ ಆಫ್ ಡೆಪ್ಯುಟೀಸ್‌ಗೆ ಆಯ್ಕೆಯಾದರು. 2008ರಿಂದ 2011ರವರೆಗೆ ಸಮಾನ ಅವಕಾಶ ಖಾತೆ ಸಚಿವೆಯಾಗಿ ಸೇವೆ ಸಲ್ಲಿಸಿದರು. ವಿಶ್ವದ ಅತ್ಯಂತ ಸುಂದರ ಮಹಿಳಾ ಸಚಿವೆಯರಲ್ಲಿ ಕಾರ್ಫಾಗ್ನಾ ಕೂಡ ಒಬ್ಬರು. ಅರೆಬೆತ್ತಲೆ ಪೋಸು ಕೊಡುತ್ತಿದ್ದ ರೂಪದರ್ಶಿ ಏನು ಆಡಳಿತ ಮಾಡುತ್ತಾಳೆ ಎಂಬ ಟೀಕೆಗಳಿಗೆ ತನ್ನ ಕೆಲಸಗಳ ಮೂಲಕವೇ ಉತ್ತರ ನೀಡಿದಾಕೆ ಈಕೆ. ಸ್ತ್ರೀವಾದ ವಿರೋಧಿಯಾಗಿದ್ದ ಈಕೆ ಮುಕ್ತ ಲೈಂಗಿಕತೆ ಮತ್ತು ಸಲಿಂಗಕಾಮದ ವಿರುದ್ಧ ದನಿ ಎತ್ತಿದರು. ಬೀದಿ ವೇಶ್ಯಾವಾಟಿಕೆಯನ್ನು ಅಪರಾಧವೆಂದು ಪರಿಗಣಿಸುವ ಕಾನೂನನ್ನು ಜಾರಿಗೊಳಿಸುವ ದಿಟ್ಟತನ ತೋರಿದರು. ಐರೋಪ್ಯ ರಾಷ್ಟ್ರಗಳ ಪ್ರಭಾವಳಿಯಲ್ಲಿ ಇಟಲಿ ಸಿಲುಕಿದೆ. ಅದನ್ನು ಮುಕ್ತಗೊಳಿಸುವುದು ನನ್ನ ಗುರಿ ಎಂದು ಹೇಳಿಕೊಂಡ ಕಾರ್ಫಾಗ್ನಾ ತೆಗೆದುಕೊಂಡ ನಿರ್ಣಯಗಳು ಕೆಲ ಸಂಘಟನೆಗಳ ತೀವ್ರ ವಿರೋಧಕ್ಕೂ ಕಾರಣವಾಗಿದ್ದವು.

ಮಲಾಲಾಯ್ ಜೋಯಾ

ಆಫ್ಘಾನಿಸ್ತಾನದ ಅತ್ಯಂತ ಧೈರ್ಯಶಾಲಿ ಮಹಿಳೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಶಂಸೆಗೆ ಒಳಗಾದ ಲೇಖಕಿ, ಸಾಮಾಜಿಕ ಕಾರ್ಯಕರ್ತೆ ಹಾಗೂ ರಾಜಕಾರಣಿ ಮಲಾಲಾಯ್ ಜೋಯಾ. ಆಫ್ಘಾನಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಗೆ 2005ರಲ್ಲಿ ಆಯ್ಕೆಯಾದ ಜೋಯಾ ಅಧಿಕಾರದಲ್ಲಿರುವ ಉಗ್ರವಾದದ ಬೆಂಬಲಿಗರ ಬಗ್ಗೆ ದನಿ ಎತ್ತಿದವರು. ಸಂಸತ್ತು ಯುದ್ಧದೊರೆಗಳು, ಕ್ರಿಮಿನಲ್‌ಗಳು ಮತ್ತು ಡ್ರಗ್ ಮಾಫಿಯಾ ದೊರೆಗಳಿಂದ ತುಂಬಿ ಹೋಗಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದರು. ಇದು ಅನೇಕರ ಆಕ್ರೋಶಕ್ಕೆ ಕಾರಣವಾಯಿತು. ಪರಿಣಾಮ 2007ರಲ್ಲಿ ಈಕೆಯನ್ನು ಸಂಸತ್‌ನಿಂದ ಅಮಾನತು ಮಾಡಲಾಯಿತು. ಇದರಿಂದ ಅವರು ವಿಚಲಿತರಾಗಲಿಲ್ಲ. ಜೋಯಾಗೆ ನೋಮ್ ಚೋಮ್‌ಸ್ಕಿ ಸೇರಿದಂತೆ ದೇಶವಿದೇಶದ ಪ್ರಗತಿಪರರ ಬೆಂಬಲ ವ್ಯಕ್ತವಾಯಿತು. 2010ರಲ್ಲಿ ಟೈಮ್ಸ ನಿಯತಕಾಲಿಕೆ ಪ್ರಕಟಿಸಿದ ವಿಶ್ವದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಜೋಯಾ ಕೂಡ ಸ್ಥಾನ ಗಿಟ್ಟಿಸಿದ್ದರು. ಆಫ್ಘಾನಿಸ್ತಾನದ ಅರಾಜಕತೆಯಲ್ಲಿ ಲಾಭ ಪಡೆದುಕೊಳ್ಳುವ ಅಮೆರಿಕದ ತಂತ್ರದ ವಿರುದ್ಧವೂ ಜೋಯಾ ಸಿಡಿದೆದ್ದರು. ಇದರಿಂದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅಮೆರಿಕಕ್ಕೆ ತೆರಳಬೇಕಿದ್ದ ಅವರಿಗೆ ವೀಸಾ ನಿರಾಕರಿಸಲಾಯಿತು. ಜೋಯಾ ಹತ್ಯೆಗೆ ನಾಲ್ಕು ಬಾರಿ ಪ್ರಯತ್ನ ನಡೆಯಿತು. `ಅವರು ನನ್ನನ್ನು ಕೊಲ್ಲಬಹುದು. ನನ್ನ ದನಿಯನ್ನಲ್ಲ, ಏಕೆಂದರೆ ಇದು ಇಡೀ ಆಫ್ಘನ್ ಮಹಿಳೆಯರ ಧ್ವನಿ. ನೀವು ಹೂವನ್ನು ಕತ್ತರಿಸಬಹುದು, ಆದರೆ ವಸಂತ ಋತು ಬರುವುದನ್ನು ತಡೆಯಲು ಸಾಧ್ಯವಿಲ್ಲ~ ಎಂದಿದ್ದರು. 34ರ ಹರೆಯದ ಈಕೆಯ ಹೋರಾಟದ ಬದುಕು ಹಾಲಿವುಡ್‌ನ ಅನೇಕ ಚಿತ್ರಗಳಿಗೂ ಸ್ಫೂರ್ತಿಯಾಗಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.