ಸೋಮವಾರ, ಜೂನ್ 14, 2021
26 °C

ರಾಜಕೀಯ ಇಚ್ಛಾಶಕ್ತಿಯ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಸಂವಿಧಾನದ ಆಶಯಗಳನ್ನು ಜಾರಿಗೆ ತರಲು ಎಲ್ಲ ರಾಜಕೀಯ ಪಕ್ಷಗಳಲ್ಲಿಯೂ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ~ ಎಂದು ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಹೇಳಿದರು.

ನಗರದಲ್ಲಿ ಶುಕ್ರವಾರ ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಆಯೋಜಿಸಿದ್ದ `ಭಾರತದ ಸಂವಿಧಾನ - 62~ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.`ಭಾರತದ ಸಂವಿಧಾನಕ್ಕೆ ದೇಶದ ಎಲ್ಲ ಜಾತಿ ಹಾಗೂ ಧರ್ಮಗಳ ಜನತೆಯನ್ನು ಒಂದು ಗೂಡಿಸುವ ಶಕ್ತಿಯಿದೆ. ಎಲ್ಲ ಧರ್ಮಗ್ರಂಥಗಳು ಸೋತರೂ ಸಂವಿಧಾನದ ಆಶಯಗಳು ಸೋಲಲಾರವು. ಆದರೆ ಸಂವಿಧಾನದ ಮೂಲ ಆಶಯಗಳನ್ನು ಜಾರಿಗೆ ತರುವಲ್ಲಿ ಯಾವುದೇ ರಾಜಕೀಯ ಪಕ್ಷಗಳಿಗೂ ಮನಸ್ಸಿಲ್ಲ. ಬದಲಾಗಿ ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಕಾರ್ಯಗಳೇ ಹೆಚ್ಚು ಹೆಚ್ಚು ನಡೆಯುತ್ತಿವೆ. ಇಂದಿಗೂ ಪ್ರತಿ ಹಳ್ಳಿಗಳಲ್ಲಿಯೂ ದಲಿತರ ಕೇರಿಗಳಿವೆ  ಎಂದರೆ ಈ ಸಮಾಜದಲ್ಲಿ ಬುದ್ಧ, ಬಸವೇಶ್ವರರ ತತ್ವಗಳು ಉಳಿದಿವೆ ಎಂದು ಒಪ್ಪಲು ಸಾಧ್ಯವಿಲ್ಲ~ ಎಂದು ಅವರು ವಿಷಾದಿಸಿದರು.`ಸಂವಿಧಾನ ಅಂಗೀಕಾರವಾಗಿ 62 ವರ್ಷಗಳು ಕಳೆದರೂ ನಮ್ಮಲ್ಲಿ ಸಮಾನತೆ, ಸ್ವಾತಂತ್ರ್ಯ ತುಂಬಿದ ಜಾತ್ಯತೀತ ಸಮಾಜದ ನಿರ್ಮಾಣ ಇನ್ನೂ ಸಾಧ್ಯವಾಗಿಲ್ಲ. ಸಂವಿಧಾನ ಹಾಗೂ ಅಂಬೇಡ್ಕರ್ ನಡುವಿನ ಕರುಳು ಬಳ್ಳಿಯ ಸಂಬಂಧವನ್ನೇ ಕಡಿಯುವ ಪ್ರಯತ್ನಗಳಾಗುತ್ತಿವೆ. ದಲಿತರನ್ನು ಮತ್ತೆ ತುಳಿಯುವ ಪ್ರಯತ್ನಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ಹೀಗಾಗಿ ದಲಿತ ಯುವ ಜನರು, ವಿದ್ಯಾರ್ಥಿಗಳು ಈ ಬಗ್ಗೆ ಎಚ್ಚರವಾಗಬೇಕು~ ಎಂದು ಅವರು ಕರೆ ನೀಡಿದರು.ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಬಿ.ಸಿ.ಮೈಲಾರಪ್ಪ ಮಾತನಾಡಿ, `ದಲಿತರು ಉನ್ನತ ಸ್ಥಾನಗಳಿಗೆ ಏರಿದಾಗ ಕೆಟ್ಟದಾದ ಜಾತೀಯತೆಯ ಸಂದರ್ಭವನ್ನು ಎದುರಿಸಬೇಕಾಗುತ್ತದೆ. ದಲಿತರ ಬೆಳವಣಿಗೆಯನ್ನು ಈ ಸಮಾಜದ ಜಾತಿ ವ್ಯವಸ್ಥೆಯು ಇನ್ನೂ ಒಪ್ಪದಿರುವುದು ಸಮಾಜದ ಸಂಕುಚಿತ ಮನೋಭಾವವನ್ನು ತಿಳಿಸುತ್ತದೆ~ ಎಂದು ತಿಳಿಸಿದರು.ಬಹುಜನ ಸಮಾಜವಾದಿ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಎನ್.ಮಹೇಶ್, ಬೆಂಗಳೂರು ವಿಶ್ವವಿದ್ಯಾಲಯದ ಲೆಕ್ಕ ಪರಿಶೋಧಕ ಎನ್.ಬಿ.ಶಿವರುದ್ರಪ್ಪ, ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿ ಘಟಕದ ವಿಶೇಷಾಧಿಕಾರಿ ಡಾ.ಸಿ.ಬಿ. ಹೊನ್ನುಸಿದ್ಧಾರ್ಥ, ಸಿಂಡಿಕೇಟ್ ಸದಸ್ಯ ಡಾ.ವೇದಮೂರ್ತಿ, ಮೈಸೂರು ವಿಶ್ವವಿದ್ಯಾಲಯದ ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.