ಬುಧವಾರ, ಜುಲೈ 28, 2021
29 °C

ರಾಜಕೀಯ ತಿಕ್ಕಾಟಕ್ಕೆ ಜಿಲ್ಲೆ ಬಲಿ

ಪ್ರಜಾವಾಣಿ ವಾರ್ತೆ ಬಸವರಾಜ ಹವಾಲ್ದಾರ Updated:

ಅಕ್ಷರ ಗಾತ್ರ : | |

ರಾಜಕೀಯ ತಿಕ್ಕಾಟಕ್ಕೆ ಜಿಲ್ಲೆ ಬಲಿ

ಬೆಳಗಾವಿ: ರಾಜ್ಯ ಸರ್ಕಾರದ ಹಲವಾರು ಯೋಜನೆಗಳು ಜಿಲ್ಲೆಯಲ್ಲಿ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ. ಈ ಕುರಿತು ಜನರ ಕೂಗು ಸರ್ಕಾರಕ್ಕೆ ಕೇಳುತ್ತಿಲ್ಲ. ಸರ್ಕಾರ ಹಾಗೂ ಸಾರ್ವಜನಿಕರ ನಡುವೆ ಸಂಪರ್ಕ ಕೊಂಡಿ ಆಗಬಹುದಾಗಿದ್ದ ರಾಜಕೀಯ ಪಕ್ಷಗಳ ಮುಖಂಡರು ಆಂತರಿಕ ತಿಕ್ಕಾಟದಲ್ಲಿ ಮುಳುಗಿದ್ದಾರೆ.ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿ ಮೀರಿದೆ. ನಿಜವಾದ ಉದ್ಯೋಗ ಆಕಾಂಕ್ಷಿಗೆ ಉದ್ಯೋಗ ಸಿಗುತ್ತಿಲ್ಲ. ಇಂದಿಗೂ ಸಾಕಷ್ಟು ಪ್ರಮಾಣದಲ್ಲಿ ಬಡವರ ಉದ್ಯೊಗ ಪತ್ರಗಳು ಅಧಿಕಾರಿಗಳು, ಮರಿ ರಾಜಕೀಯ ನಾಯಕರ ಬಳಿಯೇ ಇವೆ.ನೈಮರ್ಲ್ಯ ಯೋಜನೆ, ಪಡಿತರ ಚೀಟಿ ವಿತರಣೆ, ವೃದ್ದಾಪ್ಯ ವೇತನ ಸೇರಿದಂತೆ ಹಲವಾರು ಯೋಜನೆಗಳು ಅರ್ಹರನ್ನು ತಲುಪಿಲ್ಲ ಎಂಬ ಕೂಗು ಕೇಳಿ ಬರುತ್ತಲೇ ಇದೆ.ರೈತರ ಹೊಲದಲ್ಲಿ ಬೆಳೆದು ನಿಂತಿರುವ ಕಬ್ಬು ಇನ್ನೂ ಕಟಾವಾಗಿಲ್ಲ. ಬಿಲ್ ಪಾವತಿಯಾಗಿಲ್ಲ. ಕ್ಯಾಬೇಜ್ ಬೆಳೆಗೆ ಬೆಲೆ ಸಿಗುತ್ತಿಲ್ಲ ಎಂದು ರೈತರು ರಸ್ತೆ ಸುರಿದು ಪ್ರತಿಭಟನೆ ಮಾಡಿದ್ದಾರೆ. ಇತ್ತೀಚೆಗೆ ಅಕಾಲಿಕ ಮಳೆ ಸುರಿದು ಹಾನಿಗೆ ಒಳಗಾದ ಮಾವಿನ ಬೆಳೆಗಾರರ ಕೂಗು ಕೇಳುವವರಿಲ್ಲ ಎಂಬುದು ರೈತರ ಆರೋಪ.ಇಂತಹ ಹಲವಾರು ಸಮಸ್ಯೆಗಳನ್ನು ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತರುತ್ತಿದ್ದಾರೆ. ನಿತ್ಯ ಜಿಲ್ಲಾಧಿಕಾರಿಗೆ ಮನವಿಗಳು ಸಲ್ಲಿಕೆಯಾಗುತ್ತಲೇ ಇವೆ. ಆದರೆ ಆ ಮನವಿಗಳ ಗತಿ ಏನಾಗಿದೆ ಎಂಬುದು ಯಾರಿಗೂ ಗೊತ್ತಿಲ್ಲ.ಆಡಳಿತ ಪಕ್ಷದ ಶಾಸಕರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಿದೆ. ಸಂಸದರೂ ಅವರೇ ಇದ್ದಾರೆ. ದೊಡ್ಡ ಪ್ರಮಾಣದಲ್ಲಿ ಕಾರ್ಯಕರ್ತರ ಪಡೆಯೇ ಇದೆ. ಸರ್ಕಾರದ ಯೋಜನೆಗಳು ಸರಿಯಾಗಿ ಅನುಷ್ಠಾನವಾಗದಿದ್ದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಯೋಜನೆ ಅನುಷ್ಠಾನದ ಬಗೆಗೆ ನಿಗಾವಹಿಸಬೇಕಿದ್ದ ಇವರು ಮೌನವಾಗಿದ್ದಾರೆ ಎಂದು ಜನಪ್ರತಿನಿಧಿಗಳೇ ಹೇಳುವರು.ಪಕ್ಷದ ಶಾಸಕರು ಹಾಗೂ ಕಾರ್ಯಕರ್ತರು ಗುಂಪು, ಗುಂಪಾಗಿ ಹೋಗಿದ್ದಾರೆ. ಜಿಲ್ಲೆಯ ಆಡಳಿತದ ಮೇಲಿನ ನಿಯಂತ್ರಣ ತಪ್ಪಿ ಹೋಗಿದೆ. ಯೋಜನೆ ಜಾರಿಗಿಂತ ನಮಗೇನು ಸಿಗುತ್ತದೆ ಎನ್ನುವವರ

ಸಂಖ್ಯೆ ಹೆಚ್ಚಾಗಿದೆ.ಇನ್ನು ಪ್ರತಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್ಸಿನ ಏಳು ಶಾಸಕರು ಜಿಲ್ಲೆಯಲ್ಲಿದ್ದಾರೆ. ಸರ್ಕಾರದ ವೈಫಲ್ಯ, ಸಾರ್ವಜನಿಕರ ಸಮಸ್ಯೆಗಳನ್ನು ಎತ್ತಿಕೊಂಡು ಹೋರಾಟ ಮಾಡಬೇಕಾದ ಜವಾಬ್ದಾರಿ ಇವರ ಮೇಲಿದೆ.ಸಮಸ್ಯೆಗಳ ವಿರುದ್ಧ ಹೋರಾಟಕ್ಕೆ ಒಗ್ಗಟ್ಟು ತೋರುವುದು ಒತ್ತಟ್ಟಿಗೆ ಇರಲಿ, ಪಕ್ಷದ ಕಾರ್ಯಕ್ರಮಗಳಲ್ಲಿಯೂ ಜಿಲ್ಲೆಯಲ್ಲಿರುವ ಪಕ್ಷದ ಶಾಸಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ತ್ರೈಮಾಸಿಕ ಸಭೆಗಳಿಗೂ ಸರಿಯಾಗಿ ಹಾಜರಾಗುವುದಿಲ್ಲ.ಇನ್ನು ಪಕ್ಷದ ಪದಾಧಿಕಾರಿಗಳು ದಿಕ್ಕಿಗೊಬ್ಬರು ಹೋಗುತ್ತಿದ್ದಾರೆ. ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ, ಅಲ್ಲೊಂದು ಮನವಿ ಕೊಟ್ಟು ಮನೆಗೆ ತೆರಳವುದೇ ಇವರ ಹೋರಾಟವಾಗಿದೆ. ಯಾವುದೇ ಸಮಸ್ಯೆಯ ವಿರುದ್ಧ ಗಟ್ಟಿಯಾದ ಧ್ವನಿ ಕೇಳಿ ಬರುತ್ತಿಲ್ಲ.ಜಿಲ್ಲೆಯಲ್ಲಿ ಸಂಘಟನೆಯ ಹಾದಿಯಲ್ಲಿರುವ ಜೆಡಿ (ಎಸ್) ಪಕ್ಷದಲ್ಲೂ ಆಂತರಿಕ ಕಿತ್ತಾಟ ಹೆಚ್ಚಾಗಿದೆ. ಇಲ್ಲಿ ಒಬ್ಬರು ಜನರ ಪರ ಧ್ವನಿ ಎತ್ತಿದಾಗ ಇನ್ನೊಬ್ಬರು ಧ್ವನಿಗೂಡಿಸುವುದಿಲ್ಲ. ಹೊಸಬರು ಹಾಗೂ ಹಳಬರ ನಡುವೆ ತಿಕ್ಕಾಟ ಮುಂದುವರೆದಿದೆ.ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಅನೇಕ ಭರವಸೆಗಳನ್ನು ನೀಡುವ ಶಾಸಕರು ಹಾಗೂ ಕಾರ್ಯಕರ್ತರು, ಈಗ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗೆಗೆ ಧ್ವನಿ ಎತ್ತುತ್ತಿಲ್ಲ. ಸಮಸ್ಯೆಗಳ ಹೋರಾಟದ ವಿರುದ್ಧ ಪ್ರತಿಪಕ್ಷಗಳೂ ಕೈಜೋಡಿಸಿರುವುದು ಜನರ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.