ಮಂಗಳವಾರ, ಮೇ 11, 2021
21 °C
ಶಾಸಕ ಡಿ.ಕೆ.ಶಿವಕುಮಾರ್ ಸಹೋದರ ಸುರೇಶ್ ವಿರುದ್ಧ ದೂರು

ರಾಜಕೀಯ ದ್ವೇಷ: ಕಂದಕ ತೋಡಿ ಮನೆಗೆ ದಿಗ್ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜಕೀಯ ದ್ವೇಷ: ಕಂದಕ ತೋಡಿ ಮನೆಗೆ ದಿಗ್ಬಂಧನ

ಬೆಂಗಳೂರು: ತಾಲ್ಲೂಕಿನ ಕೋಡಿಹಳ್ಳಿ ನಿವಾಸಿ ಹಾಗೂ ಜೆಡಿಎಸ್ ಕಾರ್ಯಕರ್ತ ಜಿ.ಎಚ್.ಪ್ರಕಾಶ್ ಎಂಬುವವರು, `ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಅವರಿಂದ ತಮ್ಮ ಕುಟುಂಬಕ್ಕೆ ಜೀವಭಯ ಇದೆ' ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.`ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಮನೆಯ ಮುಂದೆ ಭಾರಿ ಕಂದಕವನ್ನು ತೋಡಿ ದಿಗ್ಬಂಧನ ಹಾಕಲಾಗಿದೆ. ಕಂದಕ ತೋಡಬೇಡಿ ಎಂದು ಹೇಳಿದ್ದಕ್ಕೆ ನಮಗೆ ಜೀವ ಬೆದರಿಕೆ ಒಡ್ಡಲಾಗಿದೆ' ಎಂದು ಅವರು ಕೋಡಿಹಳ್ಳಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.ಸ್ಥಳಕ್ಕೆ ಭೇಟಿ ನೀಡಿದ `ಪ್ರಜಾವಾಣಿ' ಪ್ರತಿನಿಧಿಗೆ ಈ ಕುರಿತು ವಿವರಿಸಿದ ಪ್ರಕಾಶ್, `ದಿನಾಂಕ 13ರ ಮಂಗಳವಾರ ನಮ್ಮ ಮನೆಯ ಮುಂದೆ ಡಿ.ಕೆ.ಸುರೇಶ್ ಮತ್ತು ಕೆಲವು ರೌಡಿಗಳು ಕಂದಕ ತೋಡಲು ಬಂದಿದ್ದರು. ನಾವು ಆಕ್ಷೇಪ ವ್ಯಕ್ತಪಡಿಸಿದಾಗ ನಮ್ಮ ಮೇಲೆ ಹಲ್ಲೆ ಮಾಡಲು ಯತ್ನಿಸಿದರು. ಅವರ ಬಳಿ ಲಾಂಗು, ಮಚ್ಚುಗಳಿದ್ದವು.

ಸಿಟ್ಟಿನಿಂದ ಅವರು ಕಲ್ಲು ಗುಂಡುಗಳನ್ನು ಎತ್ತಿ ಮನೆಯ ಮೇಲೆ ಹಾಕಿ ನಮ್ಮನ್ನು ಅವಾಚ್ಯ ಪದಗಳಿಂದ ನಿಂದಿಸಿದರು. ಈ ಕುರಿತು ನಾವು ಮನೆಯ ಮುಂದೇ ಇರುವ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ದೂರು ದಾಖಲಿಸಿಕೊಳ್ಳದೆ ನಮ್ಮನ್ನು ವಾಪಸ್ ಕಳುಹಿಸಿದರು' ಎಂದು ದೂರಿದರು.`ನಮ್ಮ ಕುಟುಂಬವು ಹಿಂದಿನಿಂದಲೂ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡೇ ನಮ್ಮ ಹಿರಿಯರು ರಾಜಕೀಯ ಮಾಡಿದ್ದಾರೆ. ನಾನು ಸುರೇಶ್ ಅವರೊಂದಿಗೂ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡ್ದ್ದಿದೇನೆ. ಆದರೆ ಕ್ರಮೇಣ ಅವರ ಹಾಗೂ ಶಾಸಕರ ವರ್ತನೆ ಹಿಡಿಸದೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಜೆ.ಡಿ.ಎಸ್‌ಗೆ ಸೇರ್ಪಡೆ ಆದೆ. ಇದರಿಂದ ಕುಪಿತಗೊಂಡ ಸುರೇಶ್' ಈ ರೀತಿ ಮಾಡಿದ್ದಾರೆ' ಎಂದು ಪ್ರಕಾಶ್ ವಿವರಿಸಿದರು.`20 ವರ್ಷಗಳಿಂದ ನಾನು ಇದೇ ಜಾಗದಲ್ಲಿ ವಾಸ ಮಾಡುತ್ತ್ದ್ದಿದೇನೆ. ಇತ್ತೀಚೆಗೆ ಮನೆಯ ಮುಂದೆ ಇದ್ದ ಖಾಲಿ ಜಾಗದಲ್ಲಿ ಮನೆ ಕಟ್ಟಿದ್ದೇವೆ. ನಮ್ಮ ಮನೆಯ ಮುಂದೆ 8 ಅಡಿ ರಸ್ತೆಯಿದ್ದು ಆ ರಸ್ತೆಯಲ್ಲಿ ಓಡಾಡುತ್ತಿದ್ದೇವೆ. ನಾವು ಕಾಂಗ್ರೆಸ್ ಪಾರ್ಟಿಯಲ್ಲಿದ್ದಾಗ ಈ ಬಗ್ಗೆ ಏನನ್ನೂ ಕೇಳದೆ ಸುಮ್ಮನೆ ಇದ್ದ ಸುರೇಶ್ ನಾನು ಪಕ್ಷ ಬಿಟ್ಟ ಮೇಲೆ ರಾಜಕೀಯ ದ್ವೇಷದಿಂದ ಈಗ ಈ ರೀತಿ ಮಾಡಿದ್ದಾರೆ' ಎಂದು ಆರೋಪಿಸಿದರು.ಪೊಲೀಸ್ ಸ್ಟೇಷನ್ ಮುಂಭಾಗದ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಜಿ.ಎಚ್.ಪ್ರಕಾಶ್ ಅವರ ಮನೆಯಿದೆ. ಇವರ ಮನೆಯ ಆಜುಬಾಜಿನಲ್ಲೇ ಡಿ.ಕೆ.ಸುರೇಶ್ ಅವರಿಗೆ ಸೇರಿದ ನಿವೇಶನಗಳೂ ಇವೆ. ಸುರೇಶ್ ಅವರು ತಮ್ಮ ನಿವೇಶನಗಳಲ್ಲಿ ದಿನಾಂಕ 15ರ ಶನಿವಾರ ಜೆಸಿಬಿ ಬಳಸಿ ಸುಮಾರು 4 ಅಡಿ ಅಗಲ ಹಾಗೂ 6 ಅಡಿ ಆಳದ ಕಂದಕ ತೆಗೆಸಿದ್ದಾರೆ.ಆರೋಪ ಅಲ್ಲಗಳೆದ ಡಿ.ಕೆ.ಸುರೇಶ್ : `ಕೋಡಿಹಳ್ಳಿಯ ಪೊಲೀಸ್ ಠಾಣೆ ಮುಂಭಾಗದ ಸರ್ವೇ ನಂಬರ್ 9ರಲ್ಲಿ ನಾವು ಜಮೀನು ಖರೀದಿ ಮಾಡಿದ್ದು ಆ ಜಾಗವನ್ನು ಇಲ್ಲಿಯವರೆಗೂ ಖಾಲಿ ಬಿಡಲಾಗಿತ್ತು. ಈಗ ಅದಕ್ಕೆ ಕಾಂಪೌಂಡ್ ನಿರ್ಮಿಸಲು ಮುಂದಾಗಿದ್ದೇವೆ. ಆದರೆ ಪಕ್ಕದಲ್ಲೇ ವಾಸವಾಗಿರುವ ಜಿ.ಎಚ್.ಪ್ರಕಾಶ್ ತಮ್ಮ ಜಾಗದ ಜೊತೆಗೆ ಹೆಚ್ಚುವರಿಯಾಗಿ ನಮ್ಮ ಜಾಗವನ್ನೂ ಅತಿಕ್ರಮಿಸಿಕೊಂಡು ಮನೆ ಕಟ್ಟಿಕೊಂಡಿದ್ದಾರೆ.

ನಮ್ಮ ಜಾಗದಲ್ಲಿ ನಾವು ಕಾಂಪೌಂಡ್ ನಿರ್ಮಿಸಲು ಹೋದರೆ ನಮಗೇ ತೊಂದರೆ ನೀಡುತ್ತಿದ್ದಾರೆ' ಎಂದು ಹೇಳಿರುವ ಡಿ.ಕೆ.ಸುರೇಶ್ ಜಿ.ಎಚ್.ಪ್ರಕಾಶ್ ಅವರ ಆರೋಪಗಳನ್ನು ಅಲ್ಲಗಳೆದಿದ್ದಾರೆ.`ನಮಗೆ ಬೇರೆಯವರ ಜಾಗದ ಮೇಲೆ ಆಸೆಯಿಲ್ಲ. ಎಷ್ಟು ಜಮೀನು ಖರೀದಿ ಮಾಡಿದ್ದೆವೋ ಅಷ್ಟಕ್ಕೆ ಮಾತ್ರ ಕಾಂಪೌಂಡ್ ನಿರ್ಮಿಸಲಾಗುತ್ತಿದೆ.

ಆದರೆ ಪ್ರಕಾಶ್ ವಿನಾಕಾರಣ ನಮ್ಮ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ನೀಡಿದ ನಂತರ ಪೋಲಿಸರು ಜಾಗವನ್ನು ಅಳತೆ ಮಾಡಿಸಿ ನಂತರ ಕಾಂಪೌಂಡ್ ಹಾಕಿಕೊಳ್ಳುವಂತೆ ನಮಗೆ ಸೂಚಿಸಿದ್ದಾರೆ. ಅಳತೆ ಮಾಡಲು ಸರ್ವೇ ಇಲಾಖೆಗೆ ಮನವಿ ಮಾಡಲಾಗಿದೆ. ಒಂದು ವೇಳೆ ಸರ್ವೇ ಸಂದರ್ಭದಲ್ಲಿ ನಾನು ಜಾಗ ಬಿಡಬೇಕು ಎಂದು ತೀರ್ಮಾನವಾದರೆ ಬಿಟ್ಟುಕೊಡುತ್ತೇನೆ ಅಥವಾ ನನಗೇ ಜಾಗ ಬರಬೇಕಿದೆ ಎಂದು ಅವರು ಹೇಳಿದರೆ ನನಗೆ ಬಿಟ್ಟುಕೊಡಲಿ.

ಇದರಲ್ಲಿ ಯಾವುದೇ ರಾಜಕೀಯ ದ್ವೇಷವಿಲ್ಲ. ಆದರೂ ಜೆ.ಡಿ.ಎಸ್.ನವರು ತಮ್ಮ ರಾಜಕೀಯ ಲಾಭಕ್ಕಾಗಿ ಈ ವಿಷಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ' ಎಂದು ಆರೋಪಿಸಿದರು.

`ಕಾನೂನು ಪ್ರಕಾರ ಕೆಲಸ': ಘಟನೆಗೆ ಸಂಬಂಧಿಸಿದಂತೆ ಕೋಡಿಹಳ್ಳಿ ಸಬ್ ಇನ್‌ಸ್ಪೆಕ್ಟರ್ ಮಹದೇವ ಸ್ವಾಮಿ ಪ್ರತಿಕ್ರಿಯಿಸಿದ್ದು `ಕಾನೂನು ಪ್ರಕಾರ ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ' ಎಂದರು.`ಜಿ.ಎಚ್.ಪ್ರಕಾಶ್ ಮತ್ತು ಡಿ.ಕೆ.ಸುರೇಶ್ ಇಬ್ಬರ ನಡುವೆ ರಸ್ತೆ ಬಿಡುವ ವಿಚಾರ ಸಿವಿಲ್ ವ್ಯಾಜ್ಯದ ಸ್ವರೂಪದ್ದಾಗಿದೆ. ಇದನ್ನು ಅವರು ನ್ಯಾಯಾಲಯದಲ್ಲಿಯೇ ಬಗೆಹರಿಸಿಕೊಳ್ಳಬೇಕು. ಇದು ಪೊಲೀಸ್ ಇಲಾಖೆಗೆ ಸಂಬಂಧಪಟ್ಟಿದ್ದಲ್ಲ.

ಜಿ.ಎಚ್.ಪ್ರಕಾಶ್ ಡಿ.ಕೆ.ಸುರೇಶ್ ವಿರುದ್ಧ ನೀಡಿರುವ  ದೂರನ್ನು ಜೂನ್13ರಂದೇ ದಾಖಲಿಕೊಳ್ಳಲಾಗಿದೆ. ಸುರೇಶ್ ಅವರಿಗೆ ಸರ್ವೇ ನಂತರ ಕಾಂಪೌಂಡ್ ನಿರ್ಮಾಣ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ' ಎಂದರು.

ಸಿಂಧ್ಯ ಪ್ರತಿಕ್ರಿಯೆ

`ಶಿವಕುಮಾರ್ ಅವರನ್ನು ಈ ಕ್ಷೇತ್ರದ ಜನತೆ ಬಹುಮತದಿಂದ ಗೆಲ್ಲಿಸಿದ್ದಾರೆ. ಆದರೆ ಚುನಾವಣೆಯಲ್ಲಿ ವಿರುದ್ಧ ಕೆಲಸ ಮಾಡಿದವರಿಗೆ ತೊಂದರೆ ನೀಡುವುದು, ಕಿರುಕುಳ ಕೊಡುವುದು ಶಾಸಕರಾಗಿ ಅವರಿಗೆ ತರವಲ್ಲ. ಒಮ್ಮೆ ಶಾಸಕರಾದ ಮೇಲೆ ಇಡೀ ಕ್ಷೇತ್ರದ ಜನತೆಗೇ ಅವರು ಶಾಸಕರು. ಈಗ ಅವರು ಬರೀ ಕಾಂಗ್ರೆಸ್ಸಿಗರಲ್ಲ.

ಜಿ.ಎಚ್.ಪ್ರಕಾಶ್ ಮನೆ ಮುಂದೆ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹೊಂಡ ತೋಡಿಸಿ ಅವರು ಹೊರಬರದಂತೆ ತಡೆಯೊಡ್ಡಿರುವುದು ಸರಿಯಲ್ಲ. ಈ ಕೆಲಸವನ್ನು ಯಾರೇ ಮಾಡಿದ್ದರೂ ಅದನ್ನು ತಡೆಗಟ್ಟಿ ಮಾನವೀಯತೆ ಮೆರೆಯಬೇಕಿತ್ತು. ಏಕಾಏಕಿ ಮನೆಯ ಮುಂದೆ ದೊಡ್ಡ ಹೊಂಡವನ್ನು ತೋಡುವ ಮೂಲಕ ಪ್ರಕಾಶ್ ಅವರನ್ನು ಭಯಭೀತರನ್ನಾಗಿಸಿ ದ್ವೇಷ ಸಾಧನೆಗೆ ಮುಂದಾಗಿರುವುದು ಸರಿಯಲ್ಲ.ಇದು ಖಂಡನೀಯ. ಇಂತಹ ಕೆಟ್ಟ ಸಂಪ್ರದಾಯಗಳನ್ನು ಬಿಟ್ಟು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಇಲ್ಲವಾದಲ್ಲಿ ಇದರ ವಿರುದ್ಧ ನಾವು ಕಾನೂನು ಹೋರಾಟ ಮಾಡಬೇಕಾಗುತ್ತದೆ' ಎಂದು ಜೆಡಿಎಸ್ ಮುಖಂಡ ಪಿ.ಜಿ.ಆರ್.ಸಿಂಧ್ಯ `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.

ರಾಜಕೀಯ ಬಣ್ಣ ಸಲ್ಲ: ಡಿಕೆಶಿ

`ನಮ್ಮ ಸ್ವಂತ ಜಾಗಕ್ಕೆ ಕಾಂಪೌಂಡ್ ನಿರ್ಮಿಸಲು ಹೋಗಿದ್ದೇವೆಯೇ ವಿನಾ ಬೇರಾರ ಆಸ್ತಿಗೂ ಅಲ್ಲ. ಪಿ.ಜಿ.ಆರ್.ಸಿಂಧ್ಯ ಅವರು ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರನ್ನೇ ಸ್ಥಳಕ್ಕೆ ಕರೆತಂದು ದಾಖಲೆಗಳನ್ನು, ಜಾಗವನ್ನು ಪರಿಶೀಲಿಸಲಿ. ಪ್ರಕಾಶ್ ಅವರ ಜಾಗವಿದ್ದರೆ ಬಿಡಿಸಿಕೊಡಲಿ, ಇಲ್ಲವಾದಲ್ಲಿ ನಮ್ಮ ಜಾಗವನ್ನು ನಮಗೆ ಬಿಟ್ಟುಕೊಡಲಿ.

ಒಂದು ವೇಳೆ ಸಿಂಧ್ಯ ಅವರದ್ದೇ ಜಾಗವಿದ್ದರೆ ಬೇಕಾದರೆ ಅವರೇ ತೆಗೆದುಕೊಳ್ಳಲಿ. ನಮ್ಮದೇನೂ ತಕರಾರಿಲ್ಲ. ಸುಮ್ಮನೇ ಜನತೆಯ ದಿಕ್ಕು ತಪ್ಪಿಸಲು ಸಲ್ಲದ ವಿಚಾರಕ್ಕೆ ರಾಜಕೀಯ ಬಣ್ಣ ಬೆರೆಸುವುದು ಸರಿಯಲ್ಲ' ಎಂದು ಶಾಸಕ ಡಿ.ಕೆ.ಶಿವಕುಮಾರ್ ಹೇಳಿದರು.

ಜಿಲ್ಲಾಧಿಕಾರಿಗೆ ವರದಿ ಸಲ್ಲಿಸುವೆ: ಎಸ್ಪಿ

ಬೆಂಗಳೂರು: 
`ಇದು ಸಂಪೂರ್ಣ ಸಿವಿಲ್ ಸ್ವರೂಪದ ಪ್ರಕರಣವಾಗಿದ್ದು, ಪೊಲೀಸರ ಪಾತ್ರ ಅಷ್ಟಾಗಿ ಬರುವುದಿಲ್ಲ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ಪ್ರತಿಕ್ರಿಯಿಸಿದ್ದಾರೆ.`ಕೋಡಿಹಳ್ಳಿಯಲ್ಲಿ ಜೆಡಿಎಸ್ ಮುಖಂಡ ಜಿ.ಎಚ್.ಪ್ರಕಾಶ್ ಅವರು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಭಾನುವಾರ ಡಿಎಸ್‌ಪಿ ಅವರನ್ನು ಸ್ಥಳಕ್ಕೆ ಕಳುಹಿಸಿ ತನಿಖೆ ಮಾಡಿಸಿದ್ದೇನೆ. ತನಿಖೆಯಲ್ಲಿ ಇದು ಸಿವಿಲ್ ಪ್ರಕರಣ ಎಂಬುದು ಗೊತ್ತಾಗಿದೆ. ಜಿ.ಎಚ್.ಪ್ರಕಾಶ್ ಅವರ ಮನೆಯ ಬಳಿ ಶಾಸಕ ಡಿ.ಕೆ ಶಿವಕುಮಾರ್ ಅವರ ಸಹೋದರ ಡಿ.ಕೆ. ಸುರೇಶ್ ಜಮೀನು ಕೂಡಾ ಇದೆ.

ಜಮೀನಿನ ವಿಷಯಕ್ಕೆ ಸಂಬಂಧಿಸಿದಂತೆ ಅಲ್ಲಿ ಗೊಂದಲ ಏರ್ಪಟ್ಟಿದೆ ಎಂಬುದು ಮೇಲ್ನೋಟಕ್ಕೆ ತಿಳಿದು ಬರುತ್ತದೆ. ಡಿ.ಕೆ ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರು ತಮ್ಮ ಜಾಗ ಭದ್ರ ಮಾಡಿಕೊಳ್ಳುವ ಸಲುವಾಗಿ ಗುಂಡಿ ತೋಡಿದ್ದಾರೆ. ಇದಕ್ಕೆ ಪ್ರಕಾಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ' ಎಂದು ತಿಳಿಸಿದರು.ಇಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ವರದಿಯನ್ನು ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಅವರಿಗೆ ಸಲ್ಲಿಸುತ್ತೇನೆ. ಇದು ಸಿವಿಲ್ ಪ್ರಕರಣವಾದ್ದರಿಂದ ಅವರೇ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ.ವರದಿ ಆಧರಿಸಿ ಕ್ರಮ-ಜಿಲ್ಲಾಧಿಕಾರಿ

ಘಟನೆ ಕುರಿತಂತೆ `ಪ್ರಜಾವಾಣಿ'ಗೆ ವಿವರಿಸಿದ ಜಿಲ್ಲಾಧಿಕಾರಿ ವಿ.ಶ್ರೀರಾಮ ರೆಡ್ಡಿ ಅವರು, ಎಸ್ಪಿ ಅವರು ನೀಡುವ ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.