ರಾಜಕೀಯ ನಿರೀಕ್ಷಣಾ ಜಾಮೀನಿಗೆ ಸಿದ್ದು ಯತ್ನ?

7

ರಾಜಕೀಯ ನಿರೀಕ್ಷಣಾ ಜಾಮೀನಿಗೆ ಸಿದ್ದು ಯತ್ನ?

Published:
Updated:
ರಾಜಕೀಯ ನಿರೀಕ್ಷಣಾ ಜಾಮೀನಿಗೆ ಸಿದ್ದು ಯತ್ನ?

ಮೈಸೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು `ರಾಜಕೀಯ ನಿರೀಕ್ಷಣಾ ಜಾಮೀನು~ ತೆಗೆದುಕೊಳ್ಳಲುಯತ್ನಿಸುತ್ತಿದ್ದಾರೆಯೇ?- ಇಂತಹ ಶಂಕೆಯೊಂದು ಹಳೆ ಮೈಸೂರು ಭಾಗದಲ್ಲಿ ವ್ಯಕ್ತವಾಗುತ್ತಿದೆ.



ಕಳೆದ 35 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ಸಿದ್ದರಾಮಯ್ಯ ಅವರು ಈಗ ಇದ್ದಕ್ಕಿದ್ದಂತೆ ರಾಜಕೀಯ ನಿವೃತ್ತಿಯ ಮಾತನ್ನಾಡುತ್ತಿರುವುದು ಇಂತಹ ಶಂಕೆ ಮೂಡಲು ಕಾರಣವಾಗುತ್ತಿದೆ.



ಸಿದ್ದರಾಮಯ್ಯ ಅವರ ಮಾತು ಅವರ ಅಭಿಮಾನಿಗಳಿಗೆ ಬೇಸರ ತರಿಸಿದರೆ ಅವರ ವಿರೋಧಿಗಳು ಇದೊಂದು ರಾಜಕೀಯ ತಂತ್ರ ಎಂದೇ ಹೇಳುತ್ತಿದ್ದಾರೆ.



ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಯಾಗುವುದು ಸಾಧ್ಯವಿಲ್ಲ ಎನ್ನುವುದನ್ನು ಅರಿತ ಅವರು ಇಂತಹ ಮಾತುಗಳನ್ನು ಆಡುತ್ತಿದ್ದಾರೆ. ಮುಖ್ಯಮಂತ್ರಿ ಗಾದಿಗೆ ಅಲ್ಲಿ ಸಾಕಷ್ಟು ಪೈಪೋಟಿ ಇರುವುದರಿಂದ ತಮ್ಮ ಈ ಹೇಳಿಕೆಯ ಮೂಲಕ ಅವರು ಕಾಂಗ್ರೆಸ್ ಹೈಕಮಾಂಡ್‌ಗೂ ಸಂದೇಶವೊಂದನ್ನು ರವಾನಿಸಿದ್ದಾರೆ ಎಂದು ವಿರೋಧಿಗಳು ಹೇಳಿದರೆ ಸಿದ್ದರಾಮಯ್ಯ ಆಪ್ತರು ಹೇಳುವ ಮಾತೇ ಬೇರೆ. ಬದಲಾದ ಮತದಾರರ ನಿಲುವು, ಹಣದ ರಾಜಕೀಯಕ್ಕೆ ಅವರು ಬೇಸತ್ತು ಹೋಗಿದ್ದಾರೆ. ಗ್ರಾಮ ಪಂಚಾಯ್ತಿ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಚಲಾವಣೆಯಾದ ಭಾರೀ ಪ್ರಮಾಣದ ಹಣ ಸಿದ್ದರಾಮಯ್ಯ ಅವರಿಗೆ ಜಿಗುಪ್ಸೆ ತರಿಸಿದೆ ಎಂದು ಅವರು ಹೇಳುತ್ತಾರೆ.



ತಮ್ಮ ರಾಜಕೀಯ ಜೀವನಕ್ಕೆ ಸಕಲವನ್ನೂ ನೀಡಿದ್ದ ಚಾಮುಂಡೇಶ್ವರಿ ಕ್ಷೇತ್ರವನ್ನು ಬಿಟ್ಟು ಕಳೆದ ಬಾರಿ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಅವರು ಈಗ ಅಲ್ಲಿ ಪ್ರಬಲ ಪೈಪೋಟಿಯನ್ನು ಎದುರಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆತ್ಮೀಯ ಕಾ.ಪು.ಸಿದ್ದಲಿಂಗಸ್ವಾಮಿ ಅವರು ವರುಣಾ ಕ್ಷೇತ್ರದಲ್ಲಿ ನಡೆಸಿರುವ ಚಟುವಟಿಕೆ ಹಾಗೂ ಹಣದ ಹೊಳೆ ಈ ಹಿರಿಯ ರಾಜಕಾರಣಿಯ ನಿದ್ದೆಗೆಡಿಸಿದೆ.



ಜಾತಿ ಸಂಘಟನೆ ಮತ್ತು ಹಣದ ಪ್ರಭಾವದಿಂದ ಈಗಾಗಲೇ ವರುಣಾ ಕ್ಷೇತ್ರದಲ್ಲಿ ಬೇರು ಬಿಡಲು ಯತ್ನಿಸುತ್ತಿರುವ ಸಿದ್ದಲಿಂಗಸ್ವಾಮಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ತಮ್ಮ ಪ್ರಭಾವವನ್ನು ಬೀರಿ ಬಿಜೆಪಿ ಗೆಲ್ಲುವಂತೆ ಮಾಡಿದ್ದರು. ಅಲ್ಲದೆ ಸಿದ್ದಲಿಂಗಸ್ವಾಮಿ ಅವರೇ ವರುಣಾ ಕ್ಷೇತ್ರದ ತಮ್ಮ ಪಕ್ಷದ ಅಭ್ಯರ್ಥಿ ಎಂದು ಈಗಾಗಲೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಬಿಜೆಪಿ ಈ ಪ್ರಕಟಣೆಯನ್ನು ಮಾಡಿದ ಸಂದರ್ಭದಲ್ಲಿ ಸುಮ್ಮನಿದ್ದ ಸಿದ್ದರಾಮಯ್ಯ ಈಗ ಇಂತಹ ಹೇಳಿಕೆ ನೀಡುವುದಕ್ಕೆ ಕಾರಣ ಏನು?



ಮಾಜಿ ಸಚಿವ ಶ್ರೀರಾಮುಲು ಮತ್ತು ರೆಡ್ಡಿ ಸಹೋದರರು ಹೊಸ ಪಕ್ಷ ಕಟ್ಟುವ ವಿಚಾರ ಬಹಿರಂಗಗೊಂಡ ಸಮಯದಲ್ಲಿಯೇ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಮಾತನಾಡಿರುವುದು ಆಕಸ್ಮಿಕವಲ್ಲ. ರೆಡ್ಡಿ ಸಹೋದರರು ಹೊಸ ಪಕ್ಷ ರಚನೆ ಮಾಡಿದರೆ ಬಿಜೆಪಿ ಸರ್ಕಾರ ಪತನವಾಗಿ ಅವಧಿಗೆ ಮೊದಲೇ ವಿಧಾನಸಭೆ ಚುನಾವಣೆ ನಡೆಯುವುದು ಖಚಿತ. ಈ ಮುನ್ಸೂಚನೆಯನ್ನು ಅರಿತೇ ಸಿದ್ದರಾಮಯ್ಯ ಇಂತಹ ಮಾತನಾಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.



ಮೈಸೂರು ಚಾಮರಾಜನಗರ ಜಿಲ್ಲೆಯಲ್ಲಿ ಇನ್ನೂ ಕಾಂಗ್ರೆಸ್ ಬಲವಾಗಿಯೇ ಇದೆ. ಆದರೆ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ಕ್ಷೇತ್ರದಲ್ಲಿ ಪರಿಸ್ಥಿತಿ ಬೇರೆಯಾಗಿದೆ. ಅಲ್ಲದೆ ರಾಜಕೀಯ ನಿವೃತ್ತಿ ಅಥವಾ ರಾಜಕೀಯ ವಿಶ್ರಾಂತಿಯ ಮಾತು ಹಳೆ ಮೈಸೂರು ಭಾಗಕ್ಕೆ ಹೊಸದೇನೂ ಅಲ್ಲ. 25 ವರ್ಷಗಳ ಕಾಲ ಚಾಮರಾಜನಗರದ ಲೋಕಸಭಾ ಸದಸ್ಯರಾಗಿದ್ದ ಶ್ರೀನಿವಾಸ ಪ್ರಸಾದ್ ಅವರು ಒಂದು ಅವಧಿಗೆ ರಾಜಕೀಯ ವಿಶ್ರಾಂತಿಯನ್ನು ಪಡೆದು ನಂತರ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸಿದ್ದರಾಮಯ್ಯ ಕೂಡ ಇಂತಹ ಮಾತುಗಳನ್ನೇ ಆಡುತ್ತಿದ್ದು ಅವರ ಮನೂಲಿಸಲಾಗುವುದು. ಶೀಘ್ರದಲ್ಲಿಯೇ ವರುಣಾದಲ್ಲಿ ಭಾರೀ ಸಭೆಯೊಂದನ್ನು ನಡೆಲಾಗುವುದು ಎಂದು ಅವರ ಅಭಿಮಾನಿಗಳು ಹೇಳುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry