ಭಾನುವಾರ, ಮಾರ್ಚ್ 7, 2021
20 °C
ಆಟೊ ದರ ಮೀಟರ್‌ ಅಳವಡಿಕೆ

ರಾಜಕೀಯ ಪ್ರವೇಶ; ಪ್ರಯಾಣಿಕರ ನಿರೀಕ್ಷೆ ಹುಸಿ

ಪ್ರಜಾವಾಣಿ ವಾರ್ತೆ/ ವಿಶೇಷ ವರದಿ Updated:

ಅಕ್ಷರ ಗಾತ್ರ : | |

ರಾಜಕೀಯ ಪ್ರವೇಶ; ಪ್ರಯಾಣಿಕರ ನಿರೀಕ್ಷೆ ಹುಸಿ

ಮಡಿಕೇರಿ: ಪ್ರಯಾಣಿಕರು ಬಹುನಿರೀಕ್ಷೆಯಿಂದ ಕಾಯುತ್ತಿದ್ದ ಆಟೊಗೆ ದರ ಮೀಟರ್‌ ಅಳವಡಿಕೆ ಕಾರ್ಯ ನಿರೀಕ್ಷಿತ ಪ್ರಮಾಣದಲ್ಲಿ ನಡೆಯದಿರುವುದಕ್ಕೆ ರಾಜಕಾರಣಿಗಳ ಮಧ್ಯಪ್ರವೇಶವೇ ಕಾರಣವೆಂದು ಹೇಳಲಾಗುತ್ತಿದೆ.ಕೊಡಗು ಜಿಲ್ಲೆಯ ಪಟ್ಟಣ ಪ್ರದೇಶಗಳಲ್ಲಿ ಸಂಚರಿಸುವ ಆಟೊಗಳು ಡಿಜಿಟಲ್‌ ದರ ಮೀಟರ್‌ ಅಳವಡಿಸುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ನೀಡಿದ್ದ ಮಾರ್ಚ್‌ 1ರ ಗಡುವು ಮುಗಿದು 20 ದಿನಗಳು ಕಳೆದಿದ್ದರೂ ಮೀಟರ್‌ ಅಳವಡಿಕೆ ನಿರೀಕ್ಷಿತ ಪ್ರಮಾಣದಲ್ಲಿ ನಡೆದಿಲ್ಲ. ಇದುವರೆಗೆ ಕೇವಲ ನಾಲ್ಕು ಹೊಸ ಆಟೊಗಳು ಮಾತ್ರ ದರ ಮೀಟರ್‌ ಅಳವಡಿಸಿಕೊಂಡಿವೆ ಅಂದರೆ, ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬಹುದು. ಕರ್ನಾಟಕ ಮೋಟಾರು ವಾಹನಗಳ ನಿಯಮ– 2012ರ ಪ್ರಕಾರ ಪ್ರಯಾಣಿಕರನ್ನು ಸಾಗಿಸುವ ಆಟೊಗಳು ಕಡ್ಡಾಯವಾಗಿ ಡಿಜಿಟಲ್‌ ದರ ಮೀಟರ್‌ ಅಳವಡಿಸಬೇಕು. ಬಹುತೇಕ ಎಲ್ಲ ನಗರಗಳಲ್ಲಿ ಆಟೊ ಮೀಟರ್‌ ಅಳವಡಿಕೆಯು ಪೂರ್ಣಗೊಂಡಿದ್ದು, ಪ್ರಯಾಣಿಕರು ಮೀಟರ್‌ಗೆ ತಕ್ಕೆ ಬೆಲೆ ನೀಡಿ ಪ್ರಯಾಣಿಸುತ್ತಿದ್ದಾರೆ.ಕೊಡಗು ಜಿಲ್ಲೆಯಲ್ಲೂ ದರ ಮೀಟರ್‌ ಅಳವಡಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ 2013ರ ನವೆಂಬರ್‌ 22 ಹಾಗೂ 2014ರ ಜನವರಿ 31ರಂದು ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನಿಸ ಲಾಯಿತು. ಇದರ ಜತೆಗೆ ಕನಿಷ್ಠ ದರವನ್ನು ಕೂಡ ನಿಗದಿಪಡಿಸಲಾಯಿತು. ಕನಿಷ್ಠ  ಪ್ರಯಾಣ ದರವನ್ನು 1.5 ಕಿ.ಮೀಗೆ ₨ 20 ಮತ್ತು ನಂತರದ ಪ್ರತೀ ಕಿ.ಮೀ.ಗೆ ₨ 12 ಎಂದು ನಿಗದಿ ಪಡಿಸಲಾಯಿತು. ಅದಕ್ಕೆ ಸಭೆಯಲ್ಲಿ ಹಾಜರಿದ್ದ ಆಟೊ ಚಾಲಕರು ಕೂಡ ಒಪ್ಪಿಗೆ ಸೂಚಿಸಿದ್ದರು.ರಾಜಕೀಯ ಮುಖಂಡರ ಪ್ರವೇಶ

ಆಡಳಿತ ಪಕ್ಷದ ಕೆಲವು ಮುಖಂಡರ ಬಳಿ ತೆರಳಿದ ಆಟೊ ಚಾಲಕರು, ಮೀಟರ್‌ ಅಳವಡಿಸುವುದನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಅದಕ್ಕೆ ಸ್ಪಂದಿಸಿದ ಮುಖಂಡರು ಮೀಟರ್‌ ಅಳವಡಿಸುವ ನಿರ್ಧಾರವನ್ನು ಕೈಬಿಡುವಂತೆ ಜಿಲ್ಲಾಡಳಿತದ ಮೇಲೆ ಒತ್ತಡ ಹೇರಿದ್ದಾರೆ.

ನೀತಿಸಂಹಿತೆ ಅಡ್ಡಿ

ಪ್ರಸ್ತುತ  ಲೋಕಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಆಟೊ ಮೀಟರ್‌ ಕುರಿತು ಈಗ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲವೆಂದು ಸಾರಿಗೆ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.  ಮೀಟರ್‌ ಇಲ್ಲದಿದ್ದರೆ ದಂಡ

ಹೊಸ ಆಟೊಗಳಿಗೆ ಪರವಾನಗಿ ನೀಡುವ ಸಂದರ್ಭದಲ್ಲಿ ಮೀಟರ್‌ ಅಳವಡಿಕೆಯನ್ನು ಕಡ್ಡಾಯ ಮಾಡಿದ್ದೇವೆ. ಮೀಟರ್‌ ಇಲ್ಲದಿದ್ದರೆ ಪರವಾನಗಿ ನೀಡುವುದಿಲ್ಲ. ಅದರಂತೆ ಹಳೆಯ ಆಟೊಗಳಿಗೆ ಎಫ್‌.ಸಿ (ಫಿಟ್‌ನೆಸ್‌ ಸರ್ಟಿಫಿಕೇಟ್‌) ನೀಡುವ  ಸಂದರ್ಭದಲ್ಲಿ ಮೀಟರ್‌ ಕಡ್ಡಾಯಗೊಳಿಸಿದ್ದೇವೆ. ಮೀಟರ್‌ ಇಲ್ಲದಿರುವ ಆಟೊಗಳಿಗೆ ನಾವೀಗ ಎಫ್‌.ಸಿ. ನೀಡುತ್ತಿಲ್ಲ.ಎಫ್‌.ಸಿ ಪಡೆದು ನವೀಕರಣಗೊಳಿಸದೇ ಆಟೊಗಳು ಸಂಚರಿಸುತ್ತಿದ್ದರೆ ಅವುಗಳಿಗೆ ದಂಡ ವಿಧಿಸಬಹುದಾಗಿದೆ. ರಾಜೀ ಸಂಧಾನದ ಮೂಲಕವಾದರೆ ₨ 500, ನ್ಯಾಯಾಲಯದ ಮೂಲಕವಾದರೆ ₨ 2,000ದಿಂದ ₨ 5,000ವರೆಗೆ ದಂಡ ವಿಧಿಸುವ ಅವಕಾಶವಿದೆ. ಪುನಃ ಎಫ್‌.ಸಿ. ಇಲ್ಲದೇ ಆಟೊ ಓಡಿಸಿದರೆ ಅಂತಹ ಚಾಲಕರಿಗೆ ₨ 5,000ದಿಂದ ₨ 10,000 ದಂಡ ಹಾಗೂ ಒಂದು ವರ್ಷದವರೆಗೆ ಕಾರಾಗೃಹ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.‘ಮೀಟರ್‌ ಅಳವಡಿಸಿಕೊಂಡು ಕೆಲವು ಸಮಯ ಆಟೊಗಳನ್ನು ಓಡಿಸಲಿ. ತಮಗೆ ನಷ್ಟವಾಗುತ್ತಿದೆ ಎಂದು ಚಾಲಕರು ಗಮನಕ್ಕೆ ತಂದರೆ ಕನಿಷ್ಠ ದರವನ್ನು ಪರಿಷ್ಕರಣೆ ಮಾಡುವ ಅವಕಾಶ ಪ್ರಾಧಿಕಾರಕ್ಕೆ ಇದ್ದೇ ಇದೆ. ಮೀಟರ್‌ ಅಳವಡಿಸುವುದರಿಂದ ಎಷ್ಟು ಬಾಡಿಗೆ ಹಣ ನೀಡಬೇಕೆನ್ನುವುದು ಪ್ರಯಾಣಿಕರಿಗೂ ತಿಳಿಯುತ್ತದೆ. ಪ್ರತಿ ಬಾರಿ ಪ್ರಯಾಣಿಕರು– ಚಾಲಕರು ಚೌಕಾಸಿ ಮಾಡುವುದು ತಪ್ಪುತ್ತದೆ’ ಎಂನ್ನುತ್ತಾರೆ ಸಾರಿಗೆ ಇಲಾಖೆಯ ಅಧಿಕಾರಿಗಳು.‘ಸಾರ್ವಜನಿಕರ ಹಿತ ಕಾಯದ ಜನಪ್ರತಿನಿಧಿಗಳು’

‘ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಶಾಸನ ರೂಪಿಸುವ ಜನಪ್ರತಿನಿಧಿಗಳು, ಅದೇ ಶಾಸನಗಳು ತಮ್ಮ ಕ್ಷೇತ್ರದಲ್ಲಿ ಜಾರಿಯಾಗುವಾಗ ಏಕೆ ಅಡ್ಡಿಪಡಿಸುತ್ತಾರೆ? ಕೊಡಗಿನಲ್ಲಿ ಸುಮಾರು 6,000 ಆಟೊಗಳು ಸಂಚರಿಸುತ್ತವೆ. ಇದೇ ಆಟೊಗಳಲ್ಲಿ ಸಾವಿರಾರು ಜನರು ಪ್ರಯಾಣಿಸುತ್ತಾರೆ. ಆಟೊ ಚಾಲಕರ ಹಿತ ಕಾಯಲು ಮುಂದೆ ಬಂದಿರುವ ಜನಪ್ರತಿನಿಧಿಗಳು ತಮಗೆ ಮತ ನೀಡಿದ ಸಾವಿರಾರು ಜನ ಪ್ರಯಾಣಿಕರ ಹಿತದ ಬಗ್ಗೆ ಏಕೆ ಚಿಂತಿಸುತ್ತಿಲ್ಲ’ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.