ಗುರುವಾರ , ಮೇ 13, 2021
39 °C

ರಾಜಕೀಯ ಸೇಡಿನ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉನ್ನತ ಹಂತದಲ್ಲಿನ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಪ್ರಬಲ ಲೋಕಪಾಲ ವ್ಯವಸ್ಥೆ ಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಆರಂಭಿಸಿದ ಹೋರಾಟಕ್ಕೆ ಹೆಗಲು ಕೊಟ್ಟ ನಾಗರಿಕ ಸಮಾಜದ ಮುಖಂಡರ ವಿರುದ್ಧ ಕೇಂದ್ರದಲ್ಲಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ತೆಗೆಯುತ್ತಿರುವ ತಕರಾರುಗಳು ಕ್ಷುಲ್ಲಕವಾದ ರಾಜಕೀಯ ಸೇಡಿನ ಕ್ರಮಗಳು ಎಂಬುದರಲ್ಲಿ ಸಂಶಯವಿಲ್ಲ. ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದವರ ವಿರುದ್ಧ ಸರ್ಕಾರವೇ ಸೇಡಿನ ಕ್ರಮ ಕೈಗೊಳ್ಳುವ ಇಂಥ ವರ್ತನೆಯು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನಿರಂಕುಶ ಧೋರಣೆಗೆ ಸಾಕ್ಷಿಯಾಗಿದೆ. ಲೋಕಪಾಲ ಮಸೂದೆಯನ್ನು ಸಶಕ್ತವಾಗಿ ರೂಪಿಸುವಂತೆ ಆಗ್ರಹಿಸಿದ ಅಣ್ಣಾ ಹಜಾರೆ ಅವರು ಈ ಸಂಬಂಧದಲ್ಲಿ ಆರಂಭಿಸಿದ ಎರಡೂ ಸತ್ಯಾಗ್ರಹಗಳನ್ನು ಆರಂಭದಲ್ಲಿ ಲಘುವಾಗಿಯೇ ಪರಿಗಣಿಸಿದ್ದ ಕೇಂದ್ರ ಸರ್ಕಾರ ಅದಕ್ಕೆ ದೇಶದಾದ್ಯಂತ ವ್ಯಕ್ತವಾದ ಜನ ಬೆಂಬಲವನ್ನು ನಿರ್ಲಕ್ಷಿಸಲಾಗಲಿಲ್ಲ.

ಅಣ್ಣಾ ಹಜಾರೆ ಮತ್ತು ಅವರ ನಾಗರಿಕ ಸಮಾಜದ ಪ್ರತಿನಿಧಿಗಳು ರೂಪಿಸಿದ ಜನಲೋಕಪಾಲ ಮಸೂದೆಯ ಅಂಶಗಳನ್ನು ಸಂಸತ್ತಿನ ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಪ್ಪಿಸಬೇಕಾದ ಅನಿವಾರ್ಯತೆಗೆ ಒಳಗಾಯಿತು. ಜೊತೆಗೆ, ರಾಜ್ಯಗಳಲ್ಲಿಯೂ ಲೋಕಾಯುಕ್ತರ ನೇಮಕ, ನಾಗರಿಕ ಸನ್ನದು, ಕೆಳಹಂತದ ಸರ್ಕಾರಿ ಸಿಬ್ಬಂದಿಯನ್ನು ಲೋಕಪಾಲದ ವ್ಯಾಪ್ತಿಗೆ ತರುವಂಥ ಅಂಶಗಳನ್ನೂ ಸೇರಿಸಿಕೊಳ್ಳಬೇಕಾಯಿತು. ಸಂಸತ್ತಿನ ಸ್ಥಾಯಿ ಸಮಿತಿಯ ಪರಿಶೀಲನೆಯ ನಂತರ ಲೋಕಪಾಲ ಮಸೂದೆ ಸಂಸತ್ತಿನಲ್ಲಿ ಮಂಡನೆಯಾಗಿ ಅಂಗೀಕಾರ ಪಡೆಯುವ ಸಾಂವಿಧಾನಿಕ ವಿಧಿಗಳಷ್ಟೆ ನಡೆಯಬೇಕಿದೆ.ದೇಶದಲ್ಲಿ ಕಾನೂನು ರಚಿಸುವ ಸಂಸತ್ತಿನ ಪಾರಮ್ಯವನ್ನು ಅಣ್ಣಾ ಹಜಾರೆಯವರಾಗಲೀ, ನಾಗರಿಕ ಸಮಾಜದ ಪ್ರತಿನಿಧಿಗಳಾಗಲೀ ಪ್ರಶ್ನಿಸಿದ್ದಿಲ್ಲ.ಸಾರ್ವಜನಿಕ ಸಭೆಯಲ್ಲಿ ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳು ಭ್ರಷ್ಟಾಚಾರದ ಬಗ್ಗೆ ಜನಪ್ರತಿನಿಧಿಗಳ ನಿಷ್ಕಾಳಜಿಯ ಕುರಿತಾಗಿ ದೇಶದ ಜನ ತಾಳಿದ್ದ ಅಸಮಾಧಾನದ ಮಾತುಗಳಷ್ಟೆ. ಇವನ್ನೇ ನೆಪವಾಗಿಟ್ಟುಕೊಂಡು ನಾಗರಿಕ ಸಮಾಜದ ಮೂವರು ಪ್ರತಿನಿಧಿಗಳ ವಿರುದ್ಧ ಹಕ್ಕುಚ್ಯುತಿಯ ಆರೋಪವನ್ನು ಹೊರಿಸಲು ಸರ್ಕಾರ ಮುಂದಾಗಿದೆ. ಜೊತೆಗೆ ಸಂಸತ್ತು ಮತ್ತು ಸರ್ಕಾರದ ಇಲಾಖೆಗಳನ್ನು ಬಳಸಿಕೊಂಡು ಅವರನ್ನು ದಂಡಿಸಲು ಯತ್ನಿಸುತ್ತಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ಹತ್ತಿಕ್ಕುವ ನಿರಂಕುಶ ಧೋರಣೆ. ವ್ಯಕ್ತಿಗತ ಟೀಕೆಗಳ ಮೂಲಕ ಅಣ್ಣಾ ಹಜಾರೆ ಮತ್ತು ಅವರ ಬೆಂಬಲಕ್ಕಿದ್ದವರ ಚಾರಿತ್ರ್ಯಹನನಕ್ಕೆ ಯತ್ನಿಸಿ ಅವರನ್ನು ಭ್ರಷ್ಟಾಚಾರ ವಿರೋಧಿ ಹೋರಾಟದಿಂದ ಹಿಮ್ಮೆಟ್ಟಿಸಲು ಯತ್ನಿಸಿ ವಿಫಲವಾದ ಮೇಲೆ ಈ ತಂತ್ರವನ್ನು ಸರ್ಕಾರ ಅನುಸರಿಸುತ್ತಿದೆ. ಅಪ್ರಿಯವಾದ ಸತ್ಯ ಸಂಗತಿಗಳನ್ನು ಬಯಲಿಗೆ ಎಳೆಯುವವರ ಧ್ವನಿ ಅಡಗಿಸಲು ಸರ್ವಾಧಿಕಾರಿಗಳು ನಡೆಸುವ ತಂತ್ರವನ್ನು ಈ ಪ್ರಕರಣಗಳು ನೆನಪಿಸುತ್ತವೆ. ಸಂಸದರಿಗೆ ಸಂಬಂಧಪಟ್ಟಂತೆ ಸಾರ್ವಜನಿಕ ಹಿತಾಸಕ್ತಿಯ ಪ್ರಶ್ನೆಗಳನ್ನು ಸಂಸತ್ತಿನಲ್ಲಿ ಕೇಳುವುದಕ್ಕೆ ಲಂಚ ಕೇಳಿದ, ಸರ್ಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ ಹಣ ಕೊಟ್ಟಂಥ ಪ್ರಕರಣಗಳನ್ನು ದೇಶದ ಜನತೆ ಈಗಾಗಲೇ ವಿವಿಧ ಮಾಧ್ಯಮಗಳಲ್ಲಿ ಗಮನಿಸಿದ್ದಾರೆ. ಇಂಥ ಪ್ರಕರಣಗಳಿಂದ ಮುಕ್ಕಾಗದ ಜನಪ್ರತಿನಿಧಿಗಳ ವರ್ಚಸ್ಸು, ಅವರ ಕರ್ತವ್ಯವನ್ನು ಸಾರ್ವಜನಿಕವಾಗಿ ನೆನಪಿಸಿದಾಗ ಕುಂದುತ್ತದೆ ಎಂದರೆ ಅಂಥ ನಿಯಮಗಳು ಪುನರ್ ಪರಿಶೀಲನೆಗೆ ಒಳಗಾಗುವ ಅವಶ್ಯಕತೆ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.