ಶುಕ್ರವಾರ, ಜೂನ್ 25, 2021
29 °C

ರಾಜಕೀಯ ಹೋರ್ಡಿಂಗ್‌ ತೆರವಿಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬೆಂಗಳೂರು ನಗರ ಜಿಲ್ಲೆ­ಯಲ್ಲಿ ಹಾಕಲಾಗಿರುವ ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ಎಲ್ಲ ಹೋರ್ಡಿಂಗ್‌­­ಗಳನ್ನು ಶನಿವಾರದೊಳಗೆ ತೆರವುಗೊಳಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ಆಯುಕ್ತ ಎಂ. ಲಕ್ಷ್ಮಿನಾರಾಯಣ ಸೂಚನೆ ನೀಡಿದ್ದಾರೆ.



ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮಾಹಿತಿ ನೀಡಿದರು. ‘ಬೆಂಗಳೂರು ನಗರ ಜಿಲ್ಲೆ­ಯಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಸಮರೋಪಾದಿ­ಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ವಿವರಿಸಿದರು.



‘ಸರ್ಕಾರದ ಯೋಜನೆಗಳಿಗೆ ಸಂಬಂಧಿ­ಸಿ­ದಂತೆ ಹಾಕಿರುವ ಫಲಕ­ಗಳಲ್ಲಿ ರಾಜಕಾರಣಿಗಳ ಭಾವಚಿತ್ರ­ಗಳಿದ್ದರೆ, ಅಂತಹ ಜಾಹೀರಾತು ಫಲಕ­ಗಳನ್ನು ಕೂಡಲೇ ತೆರವುಗೊಳಿಸಬೇಕು ಎಂಬ ಸೂಚನೆಯನ್ನು ವಾರ್ತಾ ಇಲಾಖೆಗೂ ನೀಡಲಾಗಿದೆ’ ಎಂದು ಹೇಳಿ­ದರು. ‘ಅಧಿಕಾರಿಗಳನ್ನು ಹೊರತು­ಪಡಿಸಿ ಬೇರೆ ಯಾರಿಗೂ ಸರ್ಕಾರಿ ವಾಹನ ಬಳಸಲು ಅವಕಾಶ ಇಲ್ಲ. ಧ್ವನಿವರ್ಧಕಗಳನ್ನು ರಾತ್ರಿ 10ರವರೆಗೆ ಮಾತ್ರ ಉಪಯೋಗಿಸಬೇಕು’ ಎಂದು ತಿಳಿಸಿದರು.



‘ಹೊಸ ಮತದಾರರ ನೋಂದಣಿಗೆ ವಿಶೇಷ ಒತ್ತು ನೀಡಲಾಗಿದ್ದು, ಮತ­ದಾನದಲ್ಲಿ ಪಾಲ್ಗೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಆಂದೋಲನ ನಡೆಸಲಾಗುತ್ತದೆ’ ಎಂದು ಅವರು ಹೇಳಿದರು. ‘ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ 58ರಷ್ಟು ಮತದಾನವಾಗಿತ್ತು. ಈ ಸಲ ಅದರ ಪ್ರಮಾಣವನ್ನು ಶೇ 75ಕ್ಕೆ ಹೆಚ್ಚಿಸುವ ಗುರಿ ಹೊಂದಿದ್ದೇವೆ. ಸರ್ಕಾರೇತರ ಸಂಸ್ಥೆಗಳ ನೆರವಿನಿಂದ ಜಾಗೃತಿ ಅಭಿಯಾನ ನಡೆಸಲಾಗುತ್ತದೆ’ ಎಂದು ವಿವರಿಸಿದರು.

ಹಿರಿಯ ಐಎಎಸ್‌ ಅಧಿಕಾರಿ ಕೆ.ಆರ್‌. ನಿರಂಜನ್, ‘ನಗರ ಜಿಲ್ಲೆ­ಯಲ್ಲಿ ಒಟ್ಟು 7,712 ಮತದಾನ ಕೇಂದ್ರ­ಗಳನ್ನು ತೆರೆಯಲಾಗುತ್ತದೆ. 45 ಸಾವಿರ ಸಿಬ್ಬಂದಿಯನ್ನು ಚುನಾವಣಾ ಪ್ರಕ್ರಿಯೆ ನಡೆಸಲು ಬಳಸಿಕೊಳ್ಳ­ಲಾಗುತ್ತದೆ’ ಎಂದು ಹೇಳಿದರು.



‘ಚುನಾವಣಾ ಆಯೋಗದ ಅನುಮತಿ ಇಲ್ಲದೆ ಯಾವುದೇ ಅಧಿಕಾರಿ­ಯನ್ನು ವರ್ಗಾವಣೆ ಮಾಡಲು ಆಸ್ಪದ ಇಲ್ಲ. ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ನಗರಕ್ಕೆ ಹಣ ಹಾಗೂ ಸಾರಾಯಿ ಹರಿದುಬರದಂತೆ ತಡೆಯಲು ಚೆಕ್‌ ಪೋಸ್ಟ್‌ಗಳನ್ನು ಹಾಕಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.